ವಲಸಿಗರಿಗೆ ಆಶ್ರಯ ನಿರಾಕರಿಸುವ ಟ್ರಂಪ್ ಆದೇಶಕ್ಕೆ ತಡೆಯಾಜ್ಞೆ

Update: 2018-11-20 17:31 GMT

ವಾಶಿಂಗ್ಟನ್, ನ. 20: ಮೆಕ್ಸಿಕೊದಿಂದ ಅಕ್ರಮವಾಗಿ ಅಮೆರಿಕವನ್ನು ಪ್ರವೇಶಿಸುವ ವಲಸಿಗರಿಗೆ ಆಶ್ರಯ ನಿರಾಕರಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶಕ್ಕೆ ಅಮೆರಿಕದ ನ್ಯಾಯಾಧೀಶರೊಬ್ಬರು ಸೋಮವಾರ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ.

ಇದರೊಂದಿಗೆ ವಲಸೆ ನೀತಿಯ ವಿಷಯದಲ್ಲಿ ಟ್ರಂಪ್ ಇನ್ನೊಂದು ಕಾನೂನು ಹಿನ್ನಡೆ ಅನುಭವಿಸಿದಂತಾಗಿದೆ.

ಸಾನ್‌ ಫ್ರಾನ್ಸಿಸ್ಕೊದ ಜಿಲ್ಲಾ ನ್ಯಾಯಾಧೀಶ ಜಾನ್ ಟಿಗರ್ ಟ್ರಂಪ್ ಸರಕಾರದ ಆಶ್ರಯ ನೀತಿಗಳಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದರು.

ಈ ತೀರ್ಪು ತಕ್ಷಣದಿಂದ ರಾಷ್ಟ್ರಾದ್ಯಂತ ಜಾರಿಗೆ ಬರಲಿದೆ ಹಾಗೂ ಕನಿಷ್ಠ ಡಿಸೆಂಬರ್ 19ರವರೆಗೆ ಚಾಲ್ತಿಯಲ್ಲಿರುತ್ತದೆ. ವಲಸೆ ನೀತಿಗಳಿಗೆ ದೀರ್ಘಕಾಲೀನ ತಡೆಯಾಜ್ಞೆ ನೀಡುವ ಬಗ್ಗೆ ಪರಿಶೀಲಿಸಲು ಅಂದು ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಅಧಿಕೃತ ಪ್ರವೇಶ ದ್ವಾರದಲ್ಲಿ ಸ್ವತಃ ಹಾಜರಿರುವ ವಲಸಿಗರ ಆಶ್ರಯ ಬೇಡಿಕೆಗಳನ್ನು ಮಾತ್ರ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ ಎಂಬ ಆದೇಶವನ್ನು ಟ್ರಂಪ್ ಹೊರಡಿಸಿರುವುದನ್ನು ಸ್ಮರಿಸಬಹುದಾಗಿದೆ.

ಟ್ರಂಪ್‌ರ ನವೆಂಬರ್ 9ರ ಆದೇಶವು ಆಡಳಿತಾತ್ಮಕ ಮತ್ತು ವಲಸೆ ಕಾನೂನನ್ನು ಉಲ್ಲಂಘಿಸಿದೆ ಎಂದು ಬಣ್ಣಿಸಿರುವ ನಾಗರಿಕ ಹಕ್ಕುಗಳ ಗುಂಪುಗಳು, ಇದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದವು.

ಕಾಂಗ್ರೆಸ್ ನೀತಿಯನ್ನು ಉಲ್ಲೇಖಿಸಿದ ನ್ಯಾಯಾಧೀಶ

ವಲಸಿಗರು ಹೇಗೆ ಅಮೆರಿಕವನ್ನು ಪ್ರವೇಶಿಸಿದರೂ ಅವರು ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂಬುದನ್ನು ಸಂಸತ್ತು ಕಾಂಗ್ರೆಸ್ ಸ್ಪಷ್ಟವಾಗಿ ಹೇಳಿದೆ ಎಂಬುದಾಗಿ ನ್ಯಾಯಾಧೀಶ ಟಿಗರ್ ತನ್ನ ತೀರ್ಪಿನಲ್ಲಿ ಹೇಳಿದರು.

ಹೊಸ ನೀತಿಗಳು ಹಿಂದಿನ ಸಂಪ್ರದಾಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News