ಖಶೋಗಿ ಹತ್ಯೆ ಬಳಿಕ ಸೌದಿ ಯುವರಾಜನ ವಿರುದ್ಧ ತಿರುಗಿಬಿದ್ದ ರಾಜ ಕುಟುಂಬ ?

Update: 2018-11-20 17:47 GMT

ಲಂಡನ್, ನ. 20: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಜಾಗತಿಕ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ, ಸೌದಿ ಯುವರಾಜ ಮುಹಮ್ಮದ್ ಬಿನ್ ಸುಲ್ತಾನ್ ರಾಜನಾಗುವುದನ್ನು ತಪ್ಪಿಸಲು ದೇಶದ ಆಡಳಿತಾರೂಢ ಕುಟುಂಬದ ಕೆಲವು ಸದಸ್ಯರು ಆಂದೋಲನದಲ್ಲಿ ತೊಡಗಿದ್ದಾರೆ ಎಂದು ರಾಜ ಕುಟುಂಬಕ್ಕೆ ನಿಕಟವಾಗಿರುವ ಮೂಲಗಳು ತಿಳಿಸಿವೆ.

ಅಲ್ ಸೌದ್ ಕುಟುಂಬದ ಪ್ರಭಾವಿ ಶಾಖೆಗಳ ಡಝನ್‌ಗಟ್ಟಳೆ ರಾಜಕುಮಾರರು ಮತ್ತು ಸೋದರ ಸಂಬಂಧಿಗಳು, ಉತ್ತರಾಧಿಕಾರಿ ಸರದಿಯಲ್ಲಿ ಬದಲಾವಣೆಯಾಗಬೇಕೆಂದು ಬಯಸುತ್ತಿದ್ದಾರೆ. ಆದರೆ, ಯುವರಾಜನ 82 ವರ್ಷದ ತಂದೆ ಹಾಗೂ ದೊರೆ ಸಲ್ಮಾನ್ ಬದುಕಿರುವವರೆಗೆ ಅವರು ಈ ನಿಟ್ಟಿನಲ್ಲಿ ಮುಂದುವರಿಯುವುದಿಲ್ಲ ಎಂದು ಮೂಲಗಳು ಹೇಳಿವೆ.

ದೊರೆ ತನ್ನ ನೆಚ್ಚಿನ ಪುತ್ರನ ವಿರುದ್ಧ ಹೋಗುವ ಸಾಧ್ಯತೆಯಿಲ್ಲ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.

ಬದಲಿಗೆ, ದೊರೆಯ ಮರಣಾನಂತರ, ಅವರ ಖಾಸಾ ತಮ್ಮ 76 ವರ್ಷದ ರಾಜಕುಮಾರ ಅಹ್ಮದ್ ಬಿನ್ ಅಬ್ದುಲಝೀಝ್ ಸಿಂಹಾಸನ ಏರುವ ಸಾಧ್ಯತೆ ಬಗ್ಗೆ ಅಸಂತುಷ್ಟ ರಾಜಕುಮಾರರು ಕುಟುಂಬದ ಇತರ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ದೊರೆ ಸಲ್ಮಾನ್‌ರ ಬದುಕುಳಿದಿರುವ ಏಕೈಕ ಖಾಸಾ ತಮ್ಮ ರಾಜಕುಮಾರ ಅಹ್ಮದ್, ಕುಟುಂಬ ಸದಸ್ಯರು, ಭದ್ರತಾ ವ್ಯವಸ್ಥೆ ಮತ್ತು ಕೆಲವು ಪ್ರಭಾವಿ ಪಾಶ್ಚಾತ್ಯ ದೇಶಗಳ ಬೆಂಬಲ ಹೊಂದಿದ್ದಾರೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಮಗನನ್ನು ಬೆಂಬಲಿಸಿದ ದೊರೆ ಸಲ್ಮಾನ್

ಜಮಾಲ್ ಖಶೋಗಿ ಹತ್ಯೆ ಬಳಿಕ ಮೊದಲ ಬಾರಿಗೆ ಸೋಮವಾರ ಸಾರ್ವಜನಿಕವಾಗಿ ಮಾತನಾಡಿರುವ ಸೌದಿ ಅರೇಬಿಯ ದೊರೆ ಸಲ್ಮಾನ್, ತನ್ನ ಮಗ ಹಾಗೂ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ಬೆಂಬಲಿಸಿದರು ಹಾಗೂ ನ್ಯಾಯಾಂಗವನ್ನು ಪ್ರಶಂಸಿಸಿದರು.

‘‘ಸೌದಿ ಅರೇಬಿಯವನ್ನು ನ್ಯಾಯ ಮತ್ತು ಸಮಾನತೆಯ ಇಸ್ಲಾಮಿಕ್ ತತ್ವಗಳ ಆಧಾರದಲ್ಲಿ ಸ್ಥಾಪಿಸಲಾಗಿದೆ. ನ್ಯಾಯಾಂಗ ಮತ್ತು ಪಬ್ಲಿಕ್ ಪ್ರಾಸಿಕ್ಯೂಶನ್ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ’’ ಎಂದು 82 ವರ್ಷದ ದೊರೆ ಹೇಳಿದರು.

ಸರಕಾರದ ಅತ್ಯುನ್ನತ ಸಲಹಾ ಮಂಡಳಿ ಶೂರಾ ಕೌನ್ಸಿಲ್‌ನ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ತನ್ನ ಮಗನ ಆರ್ಥಿಕ ಸುಧಾರಣೆ ಕಾರ್ಯಕ್ರಮಗಳನ್ನು ಅವರು ತನ್ನ ಭಾಷಣದಲ್ಲಿ ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News