ನ್ಯಾಯಾಂಗದ ಖಾಲಿ ಹುದ್ದೆಗಳಿಗೆ ಭರ್ತಿ ಯಾವಾಗ?

Update: 2018-11-22 04:15 GMT

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ನಮ್ಮ ಸಂವಿಧಾನದ ಮೂರು ಮಹತ್ವದ ಆಧಾರ ಸ್ತಂಭಗಳು. ಪ್ರಜಾಪ್ರಭುತ್ವ ವ್ಯವಸ್ಥೆ ಸುಗಮವಾಗಿ ನಡೆದುಕೊಂಡು ಹೋಗಬೇಕೆಂದರೆ, ಈ ಮೂರು ಅಂಗಗಳ ನಡುವೆ ಪರಸ್ಪರ ಸಹಕಾರ, ಸಮನ್ವಯ ಅಗತ್ಯ. ಮೂರೂ ಅಂಗಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಇವುಗಳ ನಡುವೆ ಅಂಥ ಹೊಂದಾಣಿಕೆ ಕಾಣುತ್ತಿಲ್ಲ. ಇದು ನ್ಯಾಯಾಂಗದ ಅಸಮಾಧಾನಕ್ಕೂ ಕಾರಣವಾದ ಅಂಶವಾಗಿದೆ. ದೇಶದ ಅನೇಕ ಅಧೀನ ನ್ಯಾಯಾಲಯಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಉಳಿದಿವೆ. ಇದರಿಂದ ನ್ಯಾಯನೀಡಿಕೆಯಲ್ಲಿ ವಿಳಂಬವಾಗುತ್ತಿದೆ. ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸುಪ್ರೀಂಕೋರ್ಟ್ ಆಗಾಗ ಒತ್ತಾಯಿಸುತ್ತಲೇ ಬಂದಿದೆ. ಇತ್ತೀಚೆಗೆ ಅಂದರೆ ಕಳೆದ ವಾರ ಸುಪ್ರೀಂಕೋರ್ಟ್ ಮತ್ತೆ ಈ ಬಗ್ಗೆ ಅಸಹನೆ ವ್ಯಕ್ತಪಡಿಸಿದೆ.

ಈ ರೀತಿ ಸುಪ್ರೀಂಕೋರ್ಟ್ ಪದೇಪದೇ ಅಸಮಾಧಾನ ವ್ಯಕ್ತಪಡಿಸುವಂಥ ಬೆಳವಣಿಗೆ ಒಳ್ಳೆಯದಲ್ಲ. ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಉಳಿದ ನ್ಯಾಯಾಧೀಶರ ಹುದ್ದೆ ಭರ್ತಿಯಾಗಿಲ್ಲ. ಅಗತ್ಯ ಸಿಬ್ಬಂದಿಯ ನೇಮಕಾತಿಯಲ್ಲೂ ವಿಳಂಬವಾಗುತ್ತಿದೆ. ಈಗಿರುವ ಜನಸಂಖ್ಯೆ ಮತ್ತು ಬಾಕಿ ಉಳಿದ ಪ್ರಕರಣಗಳ ಇತ್ಯರ್ಥದ ದೃಷ್ಟಿಯಿಂದ ನ್ಯಾಯಾಲಯಗಳ ಕೊಠಡಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ. ನ್ಯಾಯಾಧೀಶರ ವಸತಿಗಳ ನಿರ್ಮಾಣ ತೀವ್ರ ವೇಗದಲ್ಲಿ ನಡೆಯಬೇಕಾಗಿದೆ. ಈ ಕುರಿತು ಸುಪ್ರೀಂಕೋರ್ಟ್ ಹೈಕೋರ್ಟ್ ಹಾಗೂ ರಾಜ್ಯ ಸರಕಾರಗಳಿಗೆ ಕಾಲಮಿತಿ ನಿಗದಿ ಪಡಿಸಿದೆ. ದಿಲ್ಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಮಣಿಪುರ, ಮೇಘಾಲಯ ಸರಕಾರಗಳ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕರ್ನಾಟಕದ ಸರದಿ ಡಿಸೆಂಬರ್ 5ರಂದು ಬರಲಿದೆ. ಕೇರಳ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್ ರಾಜ್ಯಗಳಲ್ಲೂ ಇದೇ ಸ್ಥಿತಿ. ದೇಶದಲ್ಲಿರುವ ಅಧೀನ ನ್ಯಾಯಾಲಯಗಳ ಒಟ್ಟು 2,20,836 ಹುದ್ದೆಗಳ ಪೈಕಿ 5,133 ಹುದ್ದೆಗಳು ಖಾಲಿ ಉಳಿದಿವೆ. ಈ ಕುರಿತು ಸುಪ್ರೀಂ ಕೋರ್ಟ್ ಈ ಹಿಂದೆಯೇ ರಾಜ್ಯಗಳ ಗಮನ ಸೆಳೆದಿದೆ. ಈ ಬಗ್ಗೆ ಕೈಗೊಂಡ ಕ್ರಮಗಳ ವಿವರ ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಿತ್ತು. ಆದರೆ ಪ್ರಯೋಜನವಾಗಿಲ್ಲ.

 ಸಂವಿಧಾನದ ಉಳಿದ ಆಧಾರ ಸ್ತಂಭಗಳಾದ ಶಾಸಕಾಂಗ ಹಾಗೂ ಕಾರ್ಯಾಂಗಕ್ಕೆ ಸಿಗುವ ಸೌಲಭ್ಯ ಹಾಗೂ ಸಂಪನ್ಮೂಲ ನ್ಯಾಯಾಂಗಕ್ಕೆ ದೊರೆಯುತ್ತಿಲ್ಲ. ಖಾಲಿ ಉಳಿದಿರುವ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿಮಾಡಲು ಸುಪ್ರೀಂಕೋರ್ಟ್ ಆಗಾಗ ಕೇಂದ್ರ ಸರಕಾರವನ್ನು ಅಂಗಲಾಚಿ ಬೇಡಿಕೊಳ್ಳುತ್ತಾ ಬಂದಿದೆ. ಕೆಲ ತಿಂಗಳ ಹಿಂದೆ ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಟಿ. ಎಸ್. ಠಾಕೂರ್ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲೇ ಕಣ್ಣೀರು ಹಾಕಿದ್ದರು. ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಸಂಗ ನಡೆದಿತ್ತು. ದೇಶದ ಜನಸಂಖ್ಯೆ ಈಗ ಹೆಚ್ಚಾಗಿದೆ. ವ್ಯಾಜ್ಯಗಳ ಸಂಖ್ಯೆಯೂ ಪ್ರತಿನಿತ್ಯ ಹೆಚ್ಚಾಗುತ್ತಿದೆೆ. ಭಾರೀ ಸಂಖ್ಯೆಯಲ್ಲಿ ಹಳೆಯ ಪ್ರಕರಣಗಳು ಬಾಕಿ ಉಳಿದಿವೆ. ನ್ಯಾಯಾಧೀಶರ ಸ್ಥಾನ ಖಾಲಿ ಉಳಿದಿರುವುದರಿಂದ ಇತ್ಯರ್ಥ ಮಾಡಲು ಆಗುತ್ತಿಲ್ಲ. ನ್ಯಾಯದಾನದಲ್ಲಿ ವಿಳಂಬ ಉಂಟಾಗುತ್ತಿರುವುದು ಸರಿಯಲ್ಲ.
ನ್ಯಾಯಾಧೀಶರ ಸಂಖ್ಯೆಯನ್ನು ಈಗಿರುವ 21,000ದಿಂದ 40,000ಕ್ಕೆ ಏರಿಸಬೇಕೆಂಬುದು ನ್ಯಾಯಾಂಗದ ಬೇಡಿಕೆಯಾಗಿದೆ. ಆದರೆ ಈ ನಿಟ್ಟಿನಲ್ಲಿ ಸರಕಾರ ಮುಖ್ಯವಾಗಿ ಕಾರ್ಯಾಂಗ ಸ್ಪಂದಿಸುತ್ತಿಲ್ಲ ಎಂಬುದು ವಿಷಾದದ ಸಂಗತಿಯಾಗಿದೆ. ಸರಕಾರದ ಈ ನಿರ್ಲಕ್ಷ್ಯದಿಂದಾಗಿ ವಿಚಾರಣೆಯಿಲ್ಲದೆ ಜೈಲುಗಳಲ್ಲಿ ಕೊಳೆಯುತ್ತಿರುವ ಸಾವಿರಾರು ಕೈದಿಗಳಿಗೆ ಅನ್ಯಾಯವಾಗುತ್ತಿದೆ. ಅವರ ಬದುಕು ನಾಶವಾಗಿ ಹೋಗುತ್ತಿದೆ. ಈ ಬಗ್ಗೆ ನ್ಯಾಯಮೂರ್ತಿ ಠಾಕೂರ್ ಕಣ್ಣೀರು ಹಾಕಿದಾಗ ಈ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರಲಿಲ್ಲ.

ದೇಶದಲ್ಲಿ ಹತ್ತು ಲಕ್ಷ ಮಂದಿಗೆ ಹತ್ತು ನ್ಯಾಯಾಧೀಶರಿದ್ದರು. ಈ ಅನುಪಾತವನ್ನು 50ಕ್ಕೆ ಹೆಚ್ಚಿಸುವಂತೆ ಭಾರತ ಕಾನೂನು ಆಯೋಗ 1987ರಲ್ಲೇ ಶಿಫಾರಸು ಮಾಡಿತ್ತು. 2002ರಲ್ಲಿ ಸುಪ್ರೀಂಕೋರ್ಟ್ ಈ ಶಿಫಾರಸಿಗೆ ಸಹಮತ ವ್ಯಕ್ತಪಡಿಸಿತ್ತು. ಸಂಸದೀಯ ಸಮಿತಿ ಕೂಡ ಇದನ್ನು ಅನುಮೋದಿಸಿತ್ತು. ಆದರೆ ಇಲ್ಲಿಯ ತನಕ ಇದು ಕಾರ್ಯಗತಗೊಂಡಿಲ್ಲ. ಈಗ ಹತ್ತು ಲಕ್ಷ ಜನರಿಗೆ ಲಭ್ಯವಿರುವ ನ್ಯಾಯಾಧೀಶರ ಸಂಖ್ಯೆ ಹದಿನೈದು ಮಾತ್ರ. 1987ರ ಜನಸಂಖ್ಯೆ ಪ್ರಕಾರ ನಲವತ್ತು ಸಾವಿರ ನ್ಯಾಯಾಧೀಶರ ಅಗತ್ಯವಿತ್ತು. ಆದರೆ ಈಗ ಜನಸಂಖ್ಯೆ ಇನ್ನೂ ಹೆಚ್ಚಾಗಿದೆ. ಅಧೀನ ನ್ಯಾಯಾಲಯಗಳಲ್ಲಿ 2.84ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಸೇರಿದರೆ ಈ ಸಂಖ್ಯೆ ಮೂರೂವರೆ ಕೋಟಿಯಷ್ಟಾಗುತ್ತದೆ. ಇದರಲ್ಲಿ ಐದು ವರ್ಷಗಳಿಗಿಂತಲೂ ಹೆಚ್ಚು ಕಾಲ ವಿಚಾರಣೆಗಾಗಿ ಕಾದಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ತಮ್ಮ ಪ್ರಕರಣಗಳು ಯಾವಾಗ ಇತ್ಯರ್ಥವಾಗುತ್ತವೊ ಎಂದು ಕಾಯುತ್ತಿರುವ ವಿಚಾರಣಾಧೀನ ಕೈದಿಗಳು ಸಾವಿರಾರು ಸಂಖ್ಯೆಯಲ್ಲಿ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಕಾರ್ಯಾಂಗದ ಜಡತೆ ಮತ್ತು ನಿರ್ಲಕ್ಷ್ಯ ಖಂಡನೀಯವಾಗಿದೆ. ನ್ಯಾಯಾಂಗದ ಬಗ್ಗೆ ನಿರ್ಲಕ್ಷ್ಯ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ಆದ್ದರಿಂದ ಕೇಂದ್ರ ಸರಕಾರ ಹಾಗೂ ಸಂಬಂಧಿಸಿದ ರಾಜ್ಯ ಸರಕಾರಗಳು ತಕ್ಷಣ ಇತ್ತ ಗಮನಹರಿಸಿ ನ್ಯಾಯಾಂಗದ ಬೇಡಿಕೆ ಈಡೇರಿಸಬೇಕು.

ಅಧೀನ ನ್ಯಾಯಾಲಯಗಳ ಖಾಲಿ ಉಳಿದ ನ್ಯಾಯಾಧೀಶರ ಸ್ಥಾನಗಳನ್ನು ಭರ್ತಿ ಮಾಡಬೇಕೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಪ್ರಧಾನಿಯವರ ಸಮ್ಮುಖದಲ್ಲಿ ಕಣ್ಣೀರು ಹಾಕುವಷ್ಟು ಪರಿಸ್ಥಿತಿ ಗಂಭಿರವಾಗಿದ್ದರೂ ಸರಕಾರ ಈ ವರೆಗೆ ಕ್ರಮಕೈಗೊಂಡಿಲ್ಲ ಅಂದರೆ, ಅದರ ಅರ್ಥವೇನು? ನ್ಯಾಯಾಂಗದ ಬಗ್ಗೆ ಈ ತಾತ್ಸಾರದ ಮನೋಭಾವವೇಕೆ? ಇದೇ ಪರಿಸ್ಥಿತಿ ಮುಂದುವರಿದರೆ ಇಡೀ ವ್ಯವಸ್ಥೆಯ ಮೇಲೆ ಅದರ ದುಷ್ಪರಿಣಾಮ ಉಂಟಾಗುತ್ತದೆ. ವಿಚಾರಣಾಧೀನ ಕೈದಿಗಳು ವಿಚಾರಣೆಯಿಲ್ಲದೇ ಜೈಲುಗಳಲ್ಲಿ ಕೊಳೆಯುವುದರಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ. ಸರಕಾರ ಈಗಲಾದರೂ ಎಚ್ಚೆತ್ತು ದೇಶದ ಅಧೀನ ನ್ಯಾಯಾಲಯಗಳಲ್ಲಿ ಹಾಗೂ ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ನ್ಯಾಯಾಧೀಶರ ಸ್ಥಾನಗಳನ್ನು ಭರ್ತಿ ಮಾಡಬೇಕು. ಆದ್ಯತೆಯ ಮೇಲೆ ಈ ಕೆಲಸ ಮಾಡಿದರೆ ಮುಂದೆ ಉಂಟಾಗಬಹುದಾದ ತೀವ್ರ ಸ್ವರೂಪದ ಬಿಕ್ಕಟ್ಟನ್ನು ತಪ್ಪಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News