ವಿಶ್ವದಲ್ಲೇ ಗರಿಷ್ಠ ಉತ್ಪಾದನೆ: ಸಕ್ಕರೆ ಉದ್ಯಮದಿಂದ ಸಿಹಿ ಸುದ್ದಿ ?

Update: 2018-11-22 04:48 GMT

ಹೊಸದಿಲ್ಲಿ, ನ. 22: ವಿಶ್ವದಲ್ಲೇ ಗರಿಷ್ಠ ಸಕ್ಕರೆ ಉತ್ಪಾದಿಸುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಭಾರತ ಸಜ್ಜಾಗಿದೆ. ಪ್ರಸಕ್ತ ವರ್ಷ ಭಾರತದ ಸಕ್ಕರೆ ಉತ್ಪಾದನೆ 35.9 ದಶಲಕ್ಷ ಟನ್ ತಲುಪುವ ನಿರೀಕ್ಷೆ ಇದ್ದು, ಹದಿನೈದು ವರ್ಷಗಳ ಬಳಿಕ 2018-19ನೇ ವರ್ಷದಲ್ಲಿ ಬ್ರೆಝಿಲ್ ದೇಶವನ್ನು ಎರಡನೇ ಸ್ಥಾನಕ್ಕೆ ತಳ್ಳಲಿದೆ.

ಕಳೆದ ವರ್ಷದ ಸಕ್ಕರೆ ಉತ್ಪಾದನೆ ಪ್ರಮಾಣಕ್ಕೆ ಹೋಲಿಸಿದರೆ ಈ ಬಾರಿ ಶೇಕಡ 5.2ರಷ್ಟು ಹೆಚ್ಚುವರಿ ಸಕ್ಕರೆ ಉತ್ಪಾದನೆಯಾಗಲಿದೆ ಎಂದು ಅಮೆರಿಕದ ಕೃಷಿ ಇಲಾಖೆಯ ಇತ್ತೀಚಿನ ವರದಿ ಅಂದಾಜಿಸಿದೆ.

ಅಮೆರಿಕದ ಕೃಷಿ ಇಲಾಖೆಯ ವಿದೇಶಿ ಕೃಷಿ ಸೇವಾ ವಿಭಾಗ ಮಂಗಳವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಬ್ರೆಝಿಲ್‌ನಲ್ಲಿ ಸಕ್ಕರೆ ಉತ್ಪಾದನೆ 8.3 ದಶಲಕ್ಷ ಟನ್ ಕುಸಿಯಲಿದ್ದು, ಒಟ್ಟು ಉತ್ಪಾದನೆ 30.6 ಟನ್ ಆಗಲಿದೆ. ಬ್ರೆಝಿಲ್‌ನಲ್ಲಿ ಉತ್ಪಾದನೆ ಕುಸಿತಕ್ಕೆ ಕಬ್ಬಿನ ಇಳುವರಿ ಕಡಿಮೆಯಾಗಿರುವುದು ಪ್ರಮುಖ ಕಾರಣವಾಗಿದೆ. ಜಾಗತಿಕ ಮಟ್ಟದಲ್ಲಿ ಅಧಿಕ ಸಕ್ಕರೆ ಪೂರೈಕೆ ಕಾರಣದಿಂದ ಬೆಲೆ ಕುಸಿದಿದ್ದು, ಇದರ ಪರಿಣಾಮವಾಗಿ ಎಥೆನಾಲ್ ಉತ್ಪಾದನೆಗೆ ಕಬ್ಬನ್ನು ನೀಡುತ್ತಿರುವುದು ಕೂಡಾ ಸಕ್ಕರೆ ಉದ್ಯಮಕ್ಕೆ ಹೊಡೆತ ನೀಡಿದೆ ಎಂದು ವರದಿ ವಿವರಿಸಿದೆ.

ಜಾಗತಿಕ ಮಟ್ಟದಲ್ಲಿ ಸಕ್ಕರೆ ಉತ್ಪಾದನೆ 185.9 ದಶಲಕ್ಷ ಟನ್‌ಗೆ ಕುಸಿಯುವ ಸಾಧ್ಯತೆ ಇದ್ದು, ಇದು ಕಳೆದ ವರ್ಷಕ್ಕಿಂತ 9 ದಶಲಕ್ಷ ಟನ್‌ನಷ್ಟು ಕಡಿಮೆ. ಬ್ರೆಝಿಲ್‌ನ ಸಕ್ಕರೆ ಉತ್ಪಾದನೆ ಕುಸಿತ ಇದಕ್ಕೆ ಮುಖ್ಯ ಕಾರಣ ಎಂದು ಹೇಳಿದೆ.

ಭಾರತದಲ್ಲಿ ಅಧಿಕ ಪ್ರದೇಶದಲ್ಲಿ ಕಬ್ಬು ಬೆಳೆದಿರುವುದು ಮತ್ತು ಇಳುವರಿ ಹೆಚ್ಚಳ, ದೇಶದ ಸಕ್ಕರೆ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರದಿಂದ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ದೇಶದಲ್ಲಿ ಸಕ್ಕರೆ ಬೇಡಿಕೆ ಕೂಡಾ 27.5 ದಶಲಕ್ಷ ಟನ್‌ಗೆ ಏರುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News