ಈ ರಾಜ್ಯದ ಮುಖ್ಯಮಂತ್ರಿಗಿಂತ ಅವರ 3 ವರ್ಷದ ಮೊಮ್ಮಗನೇ ಶ್ರೀಮಂತ!

Update: 2018-11-22 06:52 GMT

ಹೈದರಾಬಾದ್, ನ.22: ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಮೊಮ್ಮಗ ಅವರಿಗಿಂತಲೂ ಆರು ಪಟ್ಟು ಅಧಿಕ ಮೌಲ್ಯದ ಸಂಪತ್ತಿನ ಒಡೆಯನಾಗಿದ್ದಾನೆ. ಇದು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಬುಧವಾರ ಬಹಿರಂಗ ಪಡಿಸಿದ ಆಸ್ತಿ ವಿವರಗಳಿಂದ ತಿಳಿದು ಬರುತ್ತದೆ.

ಅವರ ಕುಟುಂಬದ ಒಟ್ಟು ಸಂಪತ್ತು ಒಂದು ವರ್ಷದ ಅವಧಿಯಲ್ಲಿ 12.55 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ. ಕಳೆದ ವರ್ಷ ನಾಯ್ಡು ಕುಟುಂಬದ ಒಟ್ಟು ಸಂಪತ್ತಿನ ಮೌಲ್ಯ ರೂ 69.28 ಕೋಟಿ ಆಗಿದ್ದರೆ ಈ ಬಾರಿ ಅದು ರೂ 81.83  ಕೋಟಿಗೆ ತಲುಪಿದೆ. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ಕಳೆದ ಎಂಟು ವರ್ಷಗಳಿಂದ ಪ್ರತಿ ವರ್ಷ ನಾಯ್ಡು ತಮ್ಮ ಕುಟುಂಬದ ಸಂಪತ್ತಿನ ವಿವರಗಳನ್ನು ಸ್ವಯಂಪ್ರೇರಿತರಾಗಿ ಬಹಿರಂಗ ಪಡಿಸುತ್ತಾ ಬಂದಿದ್ದಾರೆ.

ಅಚ್ಚರಿಯೆಂದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ನಾಯ್ಡು ಹಾಗೂ ಅವರ ಪುತ್ರನ ಸಂಪತ್ತು ಏರಿಕೆಯಾಗಿದ್ದರೂ ಅವರ ಕುಟುಂಬದಲ್ಲಿ ಅವರ ಮೊಮ್ಮಗನ, ಅಂದರೆ ನಾರಾ ಲೋಕೇಶ್ ಅವರ ಮೂರು ವರ್ಷದ ಪುತ್ರ ದೇವಾಂಶ್ ಒಡೆತನದ ಸಂಪತ್ತಿನ ಮೌಲ್ಯ ಅತ್ಯಂತ ಹೆಚ್ಚು ಏರಿಕೆ ಕಂಡಿದೆ.

ನಾಯ್ಡು ಒಡೆತನದ ಸಂಪತ್ತು ಒಂದು ವರ್ಷ ಅವಧಿಯಲ್ಲಿ ರೂ 2.53 ಕೋಟಿಯಿಂದ ರೂ 3 ಕೋಟಿಯಷ್ಟು ಏರಿಕೆ ಕಂಡಿದ್ದರೆ, ಅವರ ಪತ್ನಿಯ ಸಂಪತ್ತು ರೂ. 25 ಕೋಟಿಯಿಂದ ರೂ. 31 ಕೋಟಿಯಷ್ಟು ಏರಿಕೆ ಕಂಡಿದೆ. ರಾಜ್ಯದ ಮಾಹಿತಿ ಸಚಿವರೂ ಆಗಿರುವ ನಾರಾ ಲೋಕೇಶ್ ಅವರ ಆಸ್ತಿ ಮೌಲ್ಯ ಕಳೆದ ವರ್ಷ ರೂ 15.21 ಕೋಟಿಯಷ್ಟಿದ್ದರೆ ಈಗ ರೂ 21.40 ಕೋಟಿಯಾಗಿದೆ. ಅಂತೆಯೇ ಲೋಕೇಶ್ ಪುತ್ರ ದೇವಾಂಶ್ ಸಂಪತ್ತಿನ ಮೌಲ್ಯ ಕಳೆದ ವರ್ಷ ರೂ 11.54 ಕೋಟಿಯಾಗಿದ್ದರೆ, ಈ ಬಾರಿ ಅದು ರೂ 18.71ಗೆ ಏರಿಕೆಯಾಗಿದೆ. ಆದರೆ ಲೋಕೇಶ್ ಅವರ ಪತ್ನಿ ಬ್ರಾಹ್ಮಣಿ ಅವರ ಒಡೆತನದ ಸಂಪತ್ತಿನ ಮೌಲ್ಯ ಮಾತ್ರ ಇಳಿಕೆ ಕಂಡಿದೆ. ಕಳೆದ ವರ್ಷ ಆಕೆಯ ಸಂಪತ್ತಿನ ಮೌಲ್ಯ ರೂ 15.01 ಕೋಟಿಯಾಗಿದ್ದರೆ ಈ ಬಾರಿ ಅದು ರೂ 7.72 ಕೋಟಿಗೆ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News