ತುಳಸೀರಾಂ ಪ್ರಜಾಪತಿ ನಕಲಿ ಎನ್‍ಕೌಂಟರ್: ಅಮಿತ್ ಶಾ, 3 ಐಪಿಎಸ್ ಅಧಿಕಾರಿಗಳು ಪ್ರಮುಖ ಸಂಚುಕೋರರು

Update: 2018-11-22 07:14 GMT

ಮುಂಬೈ, ನ.22: ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಐಪಿಎಸ್ ಅಧಿಕಾರಿಗಳಾದ ದಿನೇಶ್ ಎಂ ಎನ್. ರಾಜಕುಮಾರ್ ಪಾಂಡಿಯನ್ ಹಾಗೂ ಡಿ.ಜಿ. ವಂಝಾರ ಅವರು ಗುಜರಾತ್‍ನಲ್ಲಿ 2006ರಲ್ಲಿ ನಡೆದ ತುಳಸೀರಾಂ ಪ್ರಜಾಪತಿ `ನಕಲಿ ಎನ್‍ಕೌಂಟರ್' ಘಟನೆಯ ಮುಖ್ಯ ಸಂಚುಕೋರರು ಎಂದು ಪ್ರಕರಣದ ಮುಖ್ಯ ತನಿಖಾಧಿಕಾರಿಯೊಬ್ಬರು ಬುಧವಾರ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ `ರಾಜಕಾರಣಿಗಳ ಹಾಗೂ ಕ್ರಿಮಿನಲ್'ಗಳ ಶಾಮೀಲಾತಿಯಿತ್ತು ಎಂದು ಎಪ್ರಿಲ್ 2012ರಿಂದ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿದ್ದ ಸಂದೀಪ್ ತಾಮ್ಗಡ್ಗೆ ಎಂಬವರು ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಶಾಮಿಲಾಗಿದ್ದರೆನ್ನಲಾದ ರಾಜಕಾರಣಿಗಳನ್ನು ಅಮಿತ್ ಶಾ ಹಾಗೂ ರಾಜಸ್ಥಾನದ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ಎಂದು ಅವರು ಹೆಸರಿಸಿದರಲ್ಲದೆ, ಅವರುಗಳು 2016ರಲ್ಲಿ ಪಾಪ್ಯುಲರ್ ಬಿಲ್ಡರ್ಸ್ ಕಚೇರಿ ಮೇಲೆ 2004ರಲ್ಲಿ ದಾಳಿ ನಡೆಸಲು  `ಕ್ರಿಮಿನಲ್'ಗಳಾದ ಸೊಹ್ರಾಬುದ್ದೀನ್ ಶೇಖ್, ತುಳಸೀರಾಂ ಹಾಗೂ ಆಝಂ ಖಾನ್ ಅವರನ್ನು ಬಳಸಿಕೊಂಡಿದ್ದರು ಎಂದು ದೂರಿದ್ದಾರೆ.

ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲ್ಪಟ್ಟಿದ್ದ ಅಮಿತ್ ಶಾ, ಕಟಾರಿಯಾ, ದಿನೇಶ್ ಎಂ ಎನ್ ಅವರನ್ನೆಲ್ಲಾ ವಿಚಾರಣಾ ನ್ಯಾಯಾಲಯವು 2014ರಿಂದ 2017ರ ಅವಧಿಯಲ್ಲಿ ಖುಲಾಸೆಗೊಳಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

ಆರೋಪಿಗಳ ಕರೆ ಮಾಹಿತಿ ವಿವರಗಳು ಅವರು ಸಂಚು ಹೂಡಿದ್ದನ್ನು ದೃಢ ಪಡಿಸುತ್ತದೆ ಎಂದೂ ತಾಮ್ಗಡ್ಗೆ ಹೇಳಿಕೊಂಡರು. ಒಂದು ನಿರ್ದಿಷ್ಟ ಸಮಯದಲ್ಲಿ ಒಬ್ಬ ವ್ಯಕ್ತಿ ಎಲ್ಲಿದ್ದನೆಂಬುದನ್ನು ಪತ್ತೆ ಹಚ್ಚಲು ಕರೆ ಮಾಹಿತಿ ವಿವರಗಳು ಉತ್ತಮ ಸಾಕ್ಷ್ಯವಾಗಿದೆ ಎಂದು ಪಾಟೀ ಸವಾಲಿನ ವೇಳೆ ಅವರು ಒಪ್ಪಿಕೊಂಡರು.

ತನಿಖೆ ವೇಳೆ ಸಂಗ್ರಹಿಸಲಾದ ಕರೆ ಮಾಹಿತಿ ವಿವರಗಳು ಸಂಚನ್ನು ದೃಢೀಕರಿಸಿವೆಯೇ ಎಂದು ಕೇಳಿದಾಗ ತಾಮ್ಗಡ್ಗೆ ಸಕಾರಾತ್ಮಕವಾಗಿ ಉತ್ತರಿಸಿದರು. ಕರೆ ಮಾಹಿತಿ ವಿವರಗಳು ಯಾರ ಸಂಚನ್ನು ಪುಷ್ಠೀಕರಿಸಿವೆ ಎಂದು ಪ್ರತಿವಾದಿ ವಕೀಲರು ಪ್ರಶ್ನಿಸಿದಾಗ ತಾಮ್ಗಡ್ಗೆ ಅವರು ಅಮಿತ್ ಶಾ, ದಿನೇಶ್, ವಂಝಾರ, ಪಾಂಡಿಯನ್, ವಿಪುಲ್ ಅಗರ್ವಾಲ್, ಆಶಿಷ್ ಪಾಂಡ್ಯ, ಎನ್ ಎಚ್ ದಾಭಿ ಹಾಗೂ ಜಿ ಎಸ್ ರಾವ್ ಹೆಸರುಗಳನ್ನು ಉಲ್ಲೇಖಿಸಿದರು. ಇವರಲ್ಲಿ ಪಾಂಡ್ಯ, ದಾಭಿ ಮತ್ತು ರಾವ್ ಮಾತ್ರ ಸದ್ಯ ವಿಚಾರಣೆಯೆದುರಿಸುತ್ತಿದ್ದು ಉಳಿದವರು ಖುಲಾಸೆಗೊಂಡಿದ್ದಾರೆ.

ತಾವು ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಟಾರಿಯಾ ಹಾಗೂ ರಾಜಸ್ಥಾನದ ಮಾರ್ಬಲ್ ಉದ್ಯಮಿ ವಿಮಲ್ ಪತ್ನಿ ಹೇಳಿಕೆಗಳನ್ನು ತನಿಖೆಯ ಭಾಗವಾಗಿ ದಾಖಲಿಸಿಕೊಂಡಿದ್ದರೂ ಅವುಗಳು ದಾಖಲೆಗಳ ಭಾಗವಾಗಿಲ್ಲ ಎಂದು ನ್ಯಾಯಾಲಯ ಹೇಳಿತ್ತು ಎಂದು ತಾಮ್ಗಡ್ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News