ಪಾಕಿಸ್ತಾನದ ಈ ಗ್ರಾಮದಲ್ಲಿ ಗುಹೆಗಳೇ ಮನೆಗಳು!

Update: 2018-11-22 10:37 GMT

ನಂಬಿದರೆ ನಂಬಿ... ಬಿಟ್ಟರೆ ಬಿಡಿ, ಈ 21ನೇ ಶತಮಾನದಲ್ಲಿಯೂ ಪಾಕಿಸ್ತಾನದ ಈ ಗ್ರಾಮದಲ್ಲಿ ಜನರು ಗುಹೆಗಳಲ್ಲಿ ವಾಸವಾಗಿದ್ದಾರೆ. ಅಂದ ಹಾಗೆ ಇವರೇನೂ ಆದಿವಾಸಿಗಳಲ್ಲಿ,ನಮ್ಮ ನಿಮ್ಮ ಹಾಗೆಯೇ ನಾಗರಿಕ ಸಮಾಜದ ಜನರೇ ಆಗಿದ್ದಾರೆ. ಇವರು ವಾಸವಾಗಿರುವ ಗುಹಾಮನೆಗಳು ಬಾಂಬ್ ಮತ್ತು ಭೂಕಂಪ ನಿರೋಧಕವಾಗಿರುವ ಜೊತೆಗೆ ಅಗ್ಗದ್ದೂ ಆಗಿವೆ. ರಾಷ್ಟ್ರವ್ಯಾಪಿ ವಸತಿ ಕೊರತೆಯಿರುವ ಪಾಕಿಸ್ತಾನದಲ್ಲಿ ಈ ಜನರಿಗೆ ಗುಹೆಗಳಲ್ಲಿ ವಾಸ ಅನಿವಾರ್ಯವಾಗಿದೆ.

 ರಾಜಧಾನಿ ಇಸ್ಲಾಮಾಬಾದ್‌ನ ವಾಯುವ್ಯಕ್ಕೆ 60 ಕಿ.ಮೀ.ದೂರದಲ್ಲಿರುವ ಹಸನ್ ಅಬ್ದಾಲ್ ಗ್ರಾಮದಲ್ಲಿಯ ಗುಹೆಗಳಲ್ಲಿ ಸುಮಾರು 3,000 ಜನರು ಬದುಕುತ್ತಿದ್ದಾರೆ ಎನ್ನುತ್ತಾರೆ ಕೌನ್ಸಿಲರ್ ಹಾಜಿ ಅಬ್ದುಲ್ ರಶೀದ್. ಅವರೂ ಸ್ವತಃ ಇಂತಹ ಗುಹೆಯಲ್ಲಿ ವಾಸವಿದ್ದಾರೆ.

ಈ ಗುಹೆಗಳನ್ನು ಸ್ಥಳೀಯ ಭಾಷೆಯಲ್ಲಿ ‘ಬುರೇ’ಎಂದು ಕರೆಯಲಾಗುತ್ತದೆ. ಇವು ಕನಿಷ್ಠ ಅನುಕೂಲತೆಗಳಿರುವ ಕೆಲವು ಕೋಣೆಗಳ ಜೊತೆಗೆ ಚೆನ್ನಾಗಿ ಗಾಳಿಯಾಡುವ ವರಾಂಡಾ ಹೊಂದಿರುತ್ತವೆ. ಗುಡ್ಡಗಳಲ್ಲಿ ಕೈಗಳಿಂದ ಕೊರೆದು ಈ ಗುಹೆಗಳನ್ನು ನಿರ್ಮಿಸಲಾಗುತ್ತದೆ ಮತ್ತು ಒಳಗಿನ ಗೋಡೆಗಳಿಗೆ ಆವೆಮಣ್ಣಿನ ಪ್ಲಾಸ್ಟರ್ ಮಾಡಲಾಗುತ್ತದೆ. ಇದು ಭೂಕುಸಿತಗಳಿಂದ ರಕ್ಷಣೆ ನೀಡುತ್ತದೆ ಎನ್ನಲಾಗಿದೆ.

ಮುಘಲ್ ಬುಡಕಟ್ಟೊಂದು ಈ ಪ್ರದೇಶದಲ್ಲಿ ನೆಲೆಗೊಂಡಾಗಿನಿಂದಲೂ ಕನಿಷ್ಠ ಐದು ಶತಮಾನಗಳಿಂದ ಸ್ಥಳೀಯ ಜನರು ಗುಹೆಗಳಲ್ಲಿ ವಾಸಿಸುತ್ತಿದ್ದಾರೆ. ಇತರೆಡೆಗಳಲ್ಲಿ ಮನೆಗಳ ಬೆಲೆ ಹೆಚ್ಚತೊಡಗಿದಂತೆ ಗುಹಾಮನೆಗಳಲ್ಲಿ ವಾಸವಾಗುವವರ ಸಂಖ್ಯೆ ಹೆಚ್ಚತೊಡಗಿದೆ. ಈ ಮನೆಗಳು ನಗರ ಪ್ರದೇಶಗಳಲ್ಲಿಯ ಮನೆಗಳಿಗೆ ಹೋಲಿಸಿದರೆ ತುಂಬ ಅಗ್ಗವಾಗಿರುವುದು ಇದಕ್ಕೆ ಕಾರಣವಾಗಿದೆ.

ಈ ಗುಹಾಮನೆಗಳಲ್ಲಿ ವಾಸವಾಗಿರುವವರ ಅನುಭವದಂತೆ ಇವು ಪಾಕಿಸ್ತಾನದ ಹವಾಮಾನಕ್ಕೆ ಸೂಕ್ತವಾಗಿವೆ. ಬೇಸಿಗೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಶಿಯಸ್‌ಗೇರಿದಾಗಲೂ ಈ ಮನೆಗಳಲ್ಲಿ ತಂಪಿನ ವಾತಾವರಣವಿರುತ್ತದೆ ಮತ್ತು ಚಳಿಗಾಲದಲ್ಲಿ ಬೆಚ್ಚನೆಯ ವಾತಾವರಣವಿರುತ್ತದೆ.

 ಆದರೆ ಇಂತಹ ಗುಹಾಮನೆಗಳಲ್ಲಿ ಬದುಕು ಅಂದುಕೊಂಡಂತೆ ಸುಲಭವಲ್ಲ. ಸಾಕಷ್ಟು ನೈಸರ್ಗಿಕ ಬೆಳಕಿನ ಕೊರತೆಯಿರುವುದರಿಂದ ನಿವಾಸಿಗಳು ವಿದ್ಯುತ್ ಬೆಳಕನ್ನೇ ಅವಲಂಬಿಸಬೇಕಿದೆ. ಅವರು ಹೊರಗಡೆಯಿಂದ ಕೇಬಲ್ ಮೂಲಕ ವಿದ್ಯುತ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಒಳಾಂಗಣ ಪ್ಲಂಬಿಂಗ್ ವ್ಯವಸ್ಥೆಯು ಇಲ್ಲಿ ಅಪರೂಪದ ಐಷಾರಾಮಿ ಸೌಲಭ್ಯವಾಗಿದೆ ಎನ್ನಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ 2.50 ಲ.ರೂ.ಗಳಿಂದ ಬೆಲೆ ಆರಂಭಗೊಳ್ಳುವ ಇಟ್ಟಿಗೆಯಿಂದ ನಿರ್ಮಿತ ಮನೆಗಳಿಗೆ ಹೋಲಿಸಿದರೆ ಸುಮಾರು 40,000 ರೂ.ಗಳಲ್ಲಿ ಗುಹಾಮನೆ ಸಿದ್ಧಗೊಳ್ಳುವುದರಿಂದ ಇತರ ಗ್ರಾಮೀಣ ಪರ್ಯಾಯಗಳಿಗೆ ಹೋಲಿಸಿದರೆ ಇವು ತುಂಬ ಅಗ್ಗವಾಗುತ್ತವೆ ಎನ್ನುತ್ತಾರೆ ಸ್ಥಳೀಯರು. ಮನೆ ನಿರ್ಮಾಣದ ವೆಚ್ಚ ಕಡಿಮೆಯಾಗಿರುವದರಿಂದ ಇತರ ಸೌಲಭ್ಯ ನಿರ್ಮಾಣ ಉದ್ದೇಶಗಳಿಗಾಗಿ ಹಣವನ್ನು ವ್ಯಯಿಸಲು ಅವರಿಗೆ ಸಾಧ್ಯವಾಗಿದೆ. ಸ್ಥಳೀಯ ‘ದೇವಮಾನವ’ನೋರ್ವನಂತೂ ಧಾರ್ಮಿಕ ಉತ್ಸವಗಳಿಗಾಗಿ ಈ ಪ್ರದೇಶಕ್ಕೆ ಆಗಮಿಸುವ ನೂರಾರು ಭಕ್ತರಿಗೆ ವಸತಿಯನ್ನೊದಗಿಸಲು ಬೃಹತ್ ಗುಹಾನಿವಾಸವನ್ನೇ ನಿರ್ಮಿಸಿಕೊಂಡಿದ್ದಾನೆ.

ಪಾಕಿಸ್ತಾನದ ಜನಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದರಿಂದ ಕೈಗೆಟಕುವ ಬೆಲೆಗಳಲ್ಲಿ ಮನೆಗಳು ಸುಲಭವಾಗಿ ದೊರೆಯುತ್ತಿಲ್ಲ. ಹೀಗಾಗಿ ಗುಹಾಮನೆಗಳಿಗೂ ಬೇಡಿಕೆ ಹೆಚ್ಚತೊಡಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News