543 ಸಂಸತ್ ಕ್ಷೇತ್ರಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ

Update: 2018-11-22 16:53 GMT

ನ್ಯೂಯಾರ್ಕ್, ನ.22: ಮುಂದಿನ ವರ್ಷದ ಮಾರ್ಚ್ ಒಳಗೆ ಎಲ್ಲಾ 543 ಸಂಸತ್ ಕ್ಷೇತ್ರಗಳಲ್ಲೂ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ವಿದೇಶ ವ್ಯವಹಾರ ಇಲಾಖೆಯ ಸಹಾಯಕ ಸಚಿವ ವಿ.ಕೆ.ಸಿಂಗ್ ತಿಳಿಸಿದ್ದಾರೆ. ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರಳ ಹಾಗೂ ಸುಲಭಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಸಿಂಗ್ ಹೇಳಿದ್ದಾರೆ.

ನ್ಯೂಯಾರ್ಕ್‌ನ ಭಾರತೀಯ ದೂತಾವಾಸದಲ್ಲಿ ‘ಪಾಸ್‌ಪೋರ್ಟ್ ಸೇವಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮವು ಪಾಸ್‌ಪೋರ್ಟ್ ನೀಡುವಿಕೆ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ತಂದಿದೆ ಎಂದು ಸಿಂಗ್ ತಿಳಿಸಿದರು. ದೇಶದ ಪ್ರತಿಯೊಂದು ಪ್ರಧಾನ ಅಂಚೆಕಚೇರಿಯಲ್ಲೂ ಪಾಸ್‌ಪೋರ್ಟ್ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ನಾಗರಿಕರು ಪಾಸ್‌ಪೋರ್ಟ್ ಪಡೆಯಲು 50-60 ಕಿ.ಮೀ. ದೂರ ಪ್ರಯಾಣಿಸುವ ತೊಂದರೆ ದೂರವಾಗುತ್ತದೆ . 2017ರಲ್ಲಿ ಪಾಸ್‌ಪೋರ್ಟ್ ಸಂಬಂಧಿತ ಕಾರ್ಯಗಳಲ್ಲಿ ಶೇ.19ರಷ್ಟು ಬೆಳವಣಿಗೆಯಾಗಿದೆ.

ದೇಶದಲ್ಲಿ ಒಂದು ತಿಂಗಳಿನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಇದೇ ಪ್ರಥಮ ಬಾರಿಗೆ ಒಂದು ಮಿಲಿಯನ್ ದಾಟಿದೆ. ಪಾಸ್‌ಪೋರ್ಟ್ ಸೇವಾ ವ್ಯವಸ್ಥೆಯ ಮೂಲಕ 6 ಕೋಟಿಗೂ ಹೆಚ್ಚಿನ ಪಾಸ್‌ಪೋಟ್‌ಗಳನ್ನು ನೀಡಲಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News