ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ಸ್ಥಗಿತ?

Update: 2018-11-23 07:41 GMT

ಬಂಟ್ವಾಳ, ನ. 22: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್- ಅಡ್ಡಹೊಳೆ ನಡುವಿನ ರಸ್ತೆ ಕಾಮಗಾರಿಯು ಅರ್ಧಕ್ಕೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ಕಾಂಕ್ರೀಟ್ ರಸ್ತೆಯ ಕಾಮಗಾರಿಯನ್ನು ವಹಿಸಿಕೊಂಡಿದ್ದ ಎಲ್‌ಆ್ಯಂಡ್‌ಟಿ(ಲಾರ್ಸೆನ್ ಆ್ಯಂಡ್ ಟುಬ್ರೊ) ಕಂಪೆನಿಯು ಎನ್‌ಎಚ್‌ಎಐ ಒಪ್ಪಂದದಿಂದ ಹೊರ ನಡೆಯುವ ನಿರ್ಧಾರ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಎಲ್ ಆ್ಯಂಡ್ ಟಿ ಕಂಪೆನಿಯು ರಸ್ತೆ ಕಾಮಗಾರಿಯನ್ನು ವಹಿಸಿಕೊಂಡ ಬಳಿಕ ಬಿ.ಸಿ.ರೋಡಿನ ಪಾಣೆಮಂಗಳೂರು ನೂತನ ಸೇತುವೆಯ ಸನಿಹ ಇರುವ ಖಾಸಗಿ ಜಮೀನನ್ನು ಬಾಡಿಗೆ ಪಡೆದುಕೊಂಡು ಸಾಮಗ್ರಿಗಳನ್ನು ಸಂಗ್ರಹ ಮಾಡಿತ್ತು. ಈಗಾಗಲೇ ಪಾಣೆಮಂಗಳೂರು ಸೇತುವೆಗೆ ತಾಗಿಕೊಂಡು ನೂತನ ಸೇತುವೆ ಕಾಮಗಾರಿಯನ್ನು ಪ್ರಾರಂಭ ಮಾಡಿದ ಕಂಪೆನಿಯು ನೇತ್ರಾವತಿ ನದಿಗೆ ಮಣ್ಣು ಹಾಕಿ ಪಿಲ್ಲರ್ ನಿರ್ಮಾಣ ಕಾಮಗಾರಿ ಕೂಡ ಆರಂಭಿಸಿತ್ತು

ಅಡ್ಡಹೊಳೆ ಯೋಜನೆಯಲ್ಲಿ ಏನೇನಿದೆ?

ಬಿ.ಸಿ.ರೋಡ್‌ನಿಂದ ಅಡ್ಡಹೊಳೆವರೆಗೆ 821 ಕೋಟಿ ರೂ. ವೆಚ್ಚದಲ್ಲಿ 63ಕಿ.ಮೀ. ಉದ್ದದಲ್ಲಿ ದ.ಕ.ಜಿಲ್ಲೆಯ ಪ್ರಥಮ ಸುಸಜ್ಜಿತ ಚತುಷ್ಪಥ ಕಾಂಕ್ರೀಟ್ ರಸ್ತೆಗೆ 2016ರ ಮಾ.28ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಶಿಲಾನ್ಯಾಸ ನೆರವೇರಿಸಿದ್ದರು. ಎಲ್ ಆ್ಯಂಡ್ ಟಿ ಸಂಸ್ಥೆಗೆ ಗುತ್ತಿಗೆ ವಹಿಸಲಾಗಿತ್ತು. 2017ರ ಮಾರ್ಚ್ 28ಕ್ಕೆ ಕಾಮಗಾರಿ ಪ್ರಾರಂಭಿಸಿದ್ದು, ಕೆಲಸ ಪೂರ್ಣಗೊಳಿಸಲು ಎರಡೂವರೆ ವರ್ಷ ಅವಧಿ ನೀಡಲಾಗಿತ್ತು. ಈ ರಸ್ತೆಯ ನಿರ್ಮಾಣದ ಜೊತೆ 14.5 ಕಿ.ಮೀ. ಸರ್ವೀಸ್ ರಸ್ತೆ, 2 ಮೇಲ್ಸೇತುವೆ, 2 ದೊಡ್ಡ ಸೇತುವೆ, 14 ಸಣ್ಣ ಸೇತುವೆ, 9 ಅಂಡರ್ ಪಾಸ್, 1 ಟೋಲ್ ಗೇಟ್ ನಿರ್ಮಾಣಕ್ಕೆ ಟೆಂಡರ್ ವಹಿಸಿದ್ದರು. ಬಿ.ಸಿ.ರೋಡ್‌ನಿಂದ ಅಡ್ಡಹೊಳೆವರೆಗೆ 270.65 ಹೆಕ್ಟೇರ್ ಜಮೀನಿನ ಆವಶ್ಯಕತೆ ಇದ್ದು, 251.54 ಹೆಕ್ಟೇರ್ ಜಾಗ ಭೂಸ್ವಾದೀನವಾಗಿದೆ. 15.02 ಜಮೀನಿನ ಭೂಸ್ವಾಧೀನ ಬಾಕಿಯುದ್ದು, ಈವರೆಗೆ 122 ಕೋಟಿ ರೂ. ಜಮೀನು ಭೂಸ್ವಾಧೀನ ಪಡೆದ ಬಳಿಕ ಪರಿಹಾರ ನೀಡಲಾಗಿದೆ ಎಂದು ತಿಳಿದುಬಂದಿದೆ. ಪುತ್ತೂರು, ಉಪ್ಪಿನಂಗಡಿ ಪುತ್ತೂರು, ಬಂಟ್ವಾಳ, ಅರಣ್ಯ ವಲಯದಿಂದ 10,196 ಮರಕಡಿಯಲು ಅನುಮತಿ ಸಿಕ್ಕಿದೆ. ಗುತ್ತಿಗೆದಾರರು ಇದೀಗಲೇ ಸುಮಾರು 7ಸಾವಿರ ಮರಗಳನ್ನು ಕಡಿದು 45 ಕಿ.ಮೀ.ಗಳಷ್ಟು ಜಾಗದಲ್ಲಿ ಕೆಲಸ ಪ್ರಾರಂಭಿಸಲಾಗಿದೆ.

ಯಾಕೆ ಈ ನಿರ್ಧಾರ?

ಆರಂಭದಲ್ಲಿ ನೀಡಿದ ಟೆಂಡರ್‌ನಲ್ಲಿ ಕೆಲವೊಂದು ಬದಲಾವಣೆ ತರಲಾಗಿದೆ. ಗುತ್ತಿಗೆ ವಹಿಸಿಕೊಂಡ ಮೊತ್ತಕ್ಕಿಂತ ಬದಲಾದ ಕಾಮಗಾರಿಯಿಂದ ಸುಮಾರು 145 ಕೋಟಿ ರೂ. ನಷ್ಟ ಸಂಭವಿಸುವ ಸಾಧ್ಯತೆ ಇದೆ. ಆದುದರಿಂದ ಹೊರ ನಡೆಯುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಇಲ್ಲಿನ ಗುತ್ತಿಗೆದಾರರೊಬ್ಬರು ಮಾಹಿತಿ ನೀಡಿದ್ದಾರೆ.

ಕಲ್ಲಡ್ಕದಲ್ಲಿ ಬೈಪಾಸ್ ಅಥವಾ ಮೇಲ್ಸೇತುವೆ ನಿರ್ಮಾಣದ ಗೊಂದಲ ಇರುವುದರಿಂದ 1.2 ಕಿ.ಮೀ. ರಸ್ತೆಯನ್ನು ಎನ್‌ಎಚ್‌ಎಐ ಒಪ್ಪಂದದ ಬಳಿಕ ಕಡಿತಗೊಳಿಸಿದೆ. ಗುಡ್ಡ ಪ್ರದೇಶಗಳಲ್ಲಿ ರಸ್ತೆಯನ್ನು ಅಗಲಗೊಳಿಸುವ ಸಂದರ್ಭ ಗುಡ್ಡಗಳು ಜರಿದು ಕಾಮಗಾರಿಗೆ ತೊಂದರೆಯಾಗುತ್ತಿದೆ. ಇಲ್ಲಿ ಹೆಚ್ಚಾಗಿ ಪಟ್ಟ ಭೂಮಿ ಇರುವುದರಿಂದ ಜಾಗದ ಸಮಸ್ಯೆ ಕೂಡ ಎದುರಾಗಿದೆ. ಹಾಗಾಗಿ ಹೆಚ್ಚಿನ ಜಮೀನನ್ನು ಸ್ವಾಧೀನಪಡಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿ.ಸಿ.ರೋಡ್ ಮೇಲ್ಸೇತುವೆ ಕಾಮಗಾರಿ ಸ್ಥಗಿತ

 ಮಳೆಗಾಲದ ಮೊದಲು ಬಿ.ಸಿ.ರೋಡ್-ಅಡ್ಡಹೊಳೆ ಕಾಮಗಾರಿಯು ಚುರುಕುಗೊಂಡಿತ್ತು. ಆದರೆ, ಇದೀಗ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿದ್ದಾರೆ. ಉಪ್ಪಿನಂಗಡಿ, ಬಿ.ಸಿ.ರೋಡ್‌ನಲ್ಲಿ ಸೇತುವೆಗೆ ಕಾಮಗಾರಿ ನಡೆಯುತ್ತಿದ್ದು, ಅದು ಕೂಡ ಸದ್ಯ ಸ್ಥಗಿತಗೊಂಡಿದೆ. ಬಿ.ಸಿ.ರೋಡ್ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ನೇತ್ರಾವತಿ ನದಿಗೆ ಮುಕ್ಕಾಲು ಭಾಗ ಮಣ್ಣು ಹಾಕಿ ಪಿಲ್ಲರ್ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಮಳೆಗಾಲದಲ್ಲಿ ಮಣ್ಣು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಇದೀಗ ಎರಡು ಪಿಲ್ಲರ್‌ಗಳಿಗೆ ಕೊರೆದ ರಂಧ್ರಳಿದ್ದು, ಕಾಮಗಾರಿ ಸ್ಥಗಿತಗೊಂಡಿದೆ.

Writer - lಅಬ್ದುಲ್ ರಹಿಮಾನ್, ತಲಪಾಡಿ

contributor

Editor - lಅಬ್ದುಲ್ ರಹಿಮಾನ್, ತಲಪಾಡಿ

contributor

Similar News