ಅಯೋಧ್ಯೆಯಲ್ಲಿ ನ.25ಕ್ಕೆ 1992ರ ಘಟನೆ ಮರುಕಳಿಸಬಹುದು ಎಂದ ಬಿಜೆಪಿ ಶಾಸಕ

Update: 2018-11-23 14:58 GMT

ಬಲಿಯಾ(ಉ.ಪ್ರ),ನ.23: ಅಯೋಧ್ಯೆಯಲ್ಲಿ ನ.25ರಂದು ನಡೆಯಲಿರುವ ‘ಧರ್ಮ ಸಭಾ’ ಸಂದರ್ಭದಲ್ಲಿ ಅಗತ್ಯವಾದರೆ 1992ರ ಘಟನೆ ಮರುಕಳಿಸಬಹುದು ಎಂದು ವಿವಾದಾತ್ಮಕ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.

ಧರ್ಮ ಸಭಾಕ್ಕಾಗಿ ಜನರನ್ನು ಕ್ರೋಡೀಕರಿಸಲು ಗುರುವಾರ ಇಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಡನೆ ಮಾತನಾಡುತ್ತ,ತನ್ನ ಮತಕ್ಷೇತ್ರವಾದ ಬರಿಯಾದಿಂದ 5,000 ಜನರು ಧರ್ಮಸಭಾದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಧರ್ಮ ಸಭಾದಲ್ಲಿ ಸಂಘ ಪರಿವಾರ ಸಂಘಟನೆಗಳು ರಾಮ ಮಂದಿರ ನಿರ್ಮಾಣದ ಕುರಿತು ಚರ್ಚಿಸಲಿವೆ.

ಶ್ರೀರಾಮನಿಗೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಲ್ಲ,ತಾನು ಅದರ ಕಾಳಜಿಯನ್ನು ವಹಿಸುವುದಾಗಿ ತಿಳಿಸಿದ ಸಿಂಗ್,ಅಗತ್ಯವಾದರೆ 1992ರಲ್ಲ್ಲಿ ಬಾಬರಿ ಮಸೀದಿ ಧ್ವಂಸಕ್ಕಾಗಿ ಮಾಡಿದ್ದಂತೆ ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುವುದಾಗಿ ಹೇಳಿದರು.

ನರೇಂದ್ರ ಮೋದಿ ಮತ್ತು ಯೋಗಿ ಅದಿತ್ಯನಾಥ ಅವರ ಸರಕಾರಗಳ ಅಡಿಯಲ್ಲೇ ರಾಮ ಮಂದಿರ ನಿರ್ಮಾಣಗೊಳ್ಳುತ್ತದೆ ಎಂದು ಅವರು ಒತ್ತಿ ಹೇಳಿದರು. ಕಳೆದ ಎಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಶೂರ್ಪನಖಿ ಎಂದು ಬಣ್ಣಿಸಿದ್ದಕ್ಕಾಗಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ್ನು ರಾವಣನಿಗೆ ಹೋಲಿಸಿದ್ದಕ್ಕಾಗಿ ಸಿಂಗ್ ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು.

 ಕಳೆದ ಜುಲೈನಲ್ಲಿ ಅತ್ಯಾಚಾರಗಳನ್ನು ತಡೆಯಲು ಶ್ರೀರಾಮನಿಗೂ ಸಾಧ್ಯವಿಲ್ಲ ಎಂದು ಸಿಂಗ್ ಹೇಳಿದ್ದು, ‘ಈತ ಓರ್ವ ಹುಚ್ಚ ಮತ್ತು ಹುಚ್ಚಾಸ್ಪತ್ರೆಗೆ ಸೇರಲು ಸೂಕ್ತ ವ್ಯಕ್ತಿ ’ ಎಂದು ಕಾಂಗ್ರೆಸ್ ಟೀಕಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News