ಶೇ 2.5ರಷ್ಟು ಪಂಚಾಯತ್ ಗಳಿಗೂ ಬ್ರಾಡ್ ಬ್ಯಾಂಡ್ ಇಲ್ಲ: ಡಿಜಿಟಲ್ ಇಂಡಿಯಾ ಸಂಪೂರ್ಣ ವಿಫಲ

Update: 2018-11-23 17:17 GMT

ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾ ಅಂದರೆ ಭಾರತ್ ನೆಟ್ ಯೋಜನೆ ನಾಲ್ಕು ವರ್ಷಗಳಲ್ಲಿ ಎಷ್ಟು ಯಶಸ್ವಿಯಾಗಿದೆ?...

ಯೋಜನೆಗೆ ಇದುವರೆಗೆ 11 ಸಾವಿರ ಕೋಟಿ ರೂಪಾಯಿ ಸುರಿಯಲಾಗಿದೆ. ಆದರೆ ಯೋಜನೆಯ ಗುರಿಯಾದ ಇಂಟರ್ ನೆಟ್ ಕಾರ್ಯನಿರ್ವಹಣೆ ಇನ್ನೂ ದೂರದ ಕನಸಾಗಿಯೇ ಉಳಿದಿದೆ. ಸರ್ಕಾರದ ಆಂತರಿಕ ಅಂಕಿ ಅಂಶಗಳ ಪ್ರಕಾರ, ಭಾರತದ 2.5 ಲಕ್ಷ ಗ್ರಾಮಪಂಚಾಯ್ತಿಗಳ ಪೈಕಿ ಶೇಕಡ 2.5ಕ್ಕಿಂತಲೂ ಕಡಿಮೆ ಪಂಚಾಯ್ತಿಗಳಿಗೆ ಮಾತ್ರ ವಾಣಿಜ್ಯ ಬ್ರಾಡ್ ಬ್ಯಾಂಡ್ ಸಂಪರ್ಕವಿದೆ.

ಎನ್ ಡಿಎ ಸರ್ಕಾರದ ಸಚಿವ ಸಂಪುಟ 2014ರ ಆಗಸ್ಟ್ ನಲ್ಲಿ ಅನುಮೋದನೆ ನೀಡಿರುವ ಡಿಜಿಟಲ್ ಇಂಡಿಯಾ ಯೋಜನೆಯಡಿ 2016ರ ಡಿಸೆಂಬರ್ ಅಂತ್ಯದ ಒಳಗಾಗಿ ಎಲ್ಲ 2.5 ಲಕ್ಷ ಗ್ರಾಮಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಒದಗಿಸಲು ಉದ್ದೇಶಿಸಲಾಗಿತ್ತು.

"ರಾಷ್ಟ್ರೀಯ ಆಪ್ಟಿಕಲ್ ಫೈಬರ್ ಜಾಲ (ಎನ್‍ಒಎಫ್‍ಎನ್) ಯೋಜನೆಯಡಿ 2016ರ ಡಿಸೆಂಬರ್ ಒಳಗಾಗಿ 2.5 ಲಕ್ಷ ಪಂಚಾಯ್ತಿಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಯೋಜನೆಗೆ ದೂರ ಸಂಪರ್ಕ ಇಲಾಖೆ ನೋಡೆಲ್ ಇಲಾಖೆಯಾಗಿರುತ್ತದೆ" ಎಂದು ಡಿಜಿಟಲ್ ಇಂಡಿಯಾ ವೆಬ್‍ಸೈಟ್ ಹೇಳುತ್ತದೆ.

ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಬ್ರಾಡ್ ಬ್ಯಾಂಡ್ ಒದಗಿಸುವುದು ಡಿಜಿಟಲ್ ಇಂಡಿಯಾ ಯೋಜನೆಯ ಅವಿಭಾಜ್ಯ ಭಾಗವಾಗಿದೆ. ಯೋಜನೆಯ "ಒಂಬತ್ತು ಆಧಾರಸ್ತಂಭ"ಗಳ ಪೈಕಿ ಇದು ಮೊದಲನೆಯದು.

2018ರ ಫೆಬ್ರವರಿಯಲ್ಲಿ 1.1 ಲಕ್ಷ ಗ್ರಾಮ ಪಂಚಾಯ್ತಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಆದಾಗ್ಯೂ 2018ರ ಅಕ್ಟೋಬರ್ 31ರವರೆಗೆ 5010 ಗ್ರಾಮ ಪಂಚಾಯ್ತಿಗಳು ಮಾತ್ರ ವಾಸ್ತವವಾಗಿ ವಾಣಿಜ್ಯ ಬ್ರಾಡ್ ಬ್ಯಾಂಡ್ ಸಂಪರ್ಕ ಹೊಂದಿವೆ ಎಂದು ದೂರಸಂಪರ್ಕ ಇಲಾಖೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಇದಲ್ಲದೇ ದೂರಸಂಪರ್ಕ ಇಲಾಖೆ ಮೂಲಗಳು ಹೇಳುವಂತೆ, ಕೇವಲ 660 ಎಂಬಿ ಡಾಟಾವನ್ನು ಮಾತ್ರ ಪ್ರತಿ ಸಂಪರ್ಕಗಳಿಗೆ ಭಾರತ್ ನೆಟ್ ಪರಿಣಾಮವಾಗಿ ನೀಡಲು ಸಾಧ್ಯವಾಗಿದೆ. ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಸಾವಿರಾರು ಮನೆಗಳು ಇರುತ್ತವೆ.

ಪ್ರತಿ ಸಂಪರ್ಕಗಳು ಬಳಸುತ್ತಿರುವ ಡಾಟಾ ಪ್ರಮಾಣ ಕೂಡಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಸಂಪರ್ಕದಾರರು ಈ ಡಾಟವನ್ನು ಸರ್ಕಾರದ ಡಿಜಿಟಲ್ ಹೆಲ್ತ್ ಅಥವಾ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಬಳಸುತ್ತಿದ್ದಾರೆಯೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

ಪರೀಕ್ಷಾರ್ಥ ಸಂಪರ್ಕವನ್ನು ಹೊಂದಿರುವ ಗ್ರಾಮ ಪಂಚಾಯ್ತಿಗಳ ಸಂಖ್ಯೆ ಅಧಿಕ ಅಂದರೆ 56,700 ಇದೆ. ಆದರೆ ಈ ಉಚಿತ ಸಂಪರ್ಕವನ್ನು ಕೇವಲ ಆರು ತಿಂಗಳ ಅವಧಿಗೆ ಮಾತ್ರ ನೀಡಲಾಗುತ್ತದೆ.

"ಫೈಬರ್ ಅಳವಡಿಸುವುದು ಮತ್ತು ಪರೀಕ್ಷಾರ್ಥ ಸಂಪರ್ಕವನ್ನು ಕಲ್ಪಿಸುವುದರಲ್ಲಿ ಅರ್ಥವಿಲ್ಲ. ಎಷ್ಟು ಮಂದಿ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಬಳಸುತ್ತಿದ್ದಾರೆ ಎನ್ನುವುದು ಮತ್ತು ಬ್ರಾಡ್ ಬ್ಯಾಂಡ್ ಮೂಲಕ ಯಾವ ಸೇವೆಗಳನ್ನು ಪಡೆಯುತ್ತಿದ್ದಾರೆ ಎನ್ನುವುದು ಮುಖ್ಯ" ಎಂದು ಸೆಂಟರ್ ಫಾರ್ ಡೆವಲಪ್‍ಮೆಂಟ್ ಆಫ್ ಟೆಲೆಮ್ಯಾಟಿಕ್ಸ್ (ಸಿ-ಡಾಟ್) ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್.ಗುಪ್ತಾ ಹೇಳುತ್ತಾರೆ.

ಗ್ರಾಮಗಳಿಗೆ ನೀರು ಪೂರೈಸಲು ನೀರಿನ ಪೈಪ್‍ಲೈನ್ ಅಳವಡಿಸುವುದಕ್ಕೆ ಅವರು ಇದನ್ನು ಹೋಲಿಕೆ ಮಾಡುತ್ತಾರೆ.  "ನೀವು ಒಂದು ಗ್ರಾಮಕ್ಕೆ ನೀರಿನ ಪೈಪ್ ಅಳವಡಿಸಿದ್ದೀರಿ. ಆದರೆ ನೀರು ಅದರ ಮೂಲಕ ಹರಿಯುತ್ತಿಲ್ಲ. ಒಣ ಪೈಪ್ ಗಳಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅದು ತುಕ್ಕು ಹಿಡಿಯುತ್ತದೆ"

ಕೇಬಲ್ ಬಳಕೆ ಮಾಡದೇ ಇರುವ ಕಾರಣದಿಂದ ಭಾರತ್‍ ನೆಟ್ ಯೋಜನೆಯ ಆಪ್ಟಿಕಲ್ ಫೈಬರ್ ಕೇಬಲ್‍ಗಳು ಹಾಳಾಗುತ್ತಿವೆ ಎಂದು ದೂರಸಂಪರ್ಕ ಇಲಾಖೆಗೆ ಬಿಎಸ್‍ಎಲ್‍ಎಲ್ ಇತ್ತೀಚೆಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಿದೆ.

ಕಳೆದ ಎರಡು ವರ್ಷಗಳಲ್ಲಿ, ಈ ಗುರಿಯನ್ನು ತಲುಪುವುದು ಕಷ್ಟಸಾಧ್ಯ ಎನ್ನುವುದು ಸರ್ಕಾರಕ್ಕೆ ಮನವರಿಕೆಯಾಗಿದೆ. ಆದ್ದರಿಂದ ಅದು ತನ್ನ ಗುರಿಯನ್ನು ಅರ್ಧದಷ್ಟು ಕಡಿಮೆ ಮಾಡಿ, 1,00,000 ಪಂಚಾಯ್ತಿಗಳಿಗೆ ಸೀಮಿತಗೊಳಿಸಿದೆ. ಉಳಿದ 1.5 ಲಕ್ಷ ಗ್ರಾಮಪಂಚಾಯ್ತಿಗಳ ಹೊರೆಯನ್ನು ರಾಜ್ಯ ಸರ್ಕಾರಗಳಿಗೆ ಹೊರಿಸಿದೆ.

ಡಿಜಿಟಲ್ ಸಂಪರ್ಕ ತಜ್ಞ ಒಸಾಮಾ ಮಂಝಾರ್ ಈ ವರ್ಷದ ಆರಂಭದಲ್ಲಿ ಹೇಳಿದಂತೆ, "ಕೇಬಲ್‍ಗಳನ್ನು ಅಳವಡಿಸಲಾಗಿದೆ... ಆದರೆ ವಾಸ್ತವವಾಗಿ ಆಗಬೇಕಾದ ಇಂಟರ್‍ ನೆಟ್ ಸಂಪರ್ಕ, ಕಾರ್ಯನಿರ್ವಹಣೆ ಮತ್ತು ಹಂಚಿಕೆಯ ಅಂಶವನ್ನು ಕಡೆಗಣಿಸಲಾಗಿದೆ"

ಹೈಸ್ಪೀಡ್ ಇಂಟರ್‍ ನೆಟ್ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಗ್ರಾಮೀಣ ಭಾರತಕ್ಕೆ ಒದಗಿಸುವುದು ಯುಪಿಎ-2 ಸರ್ಕಾರದ ಕಾರ್ಯಸೂಚಿಯೂ ಆಗಿತ್ತು. ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಹೊಸದಾಗಿ ಅನುದಾನವನ್ನು ನೀಡಲಾಯಿತು ಮತ್ತು ಇದರ ಹೆಸರನ್ನು ರಾಷ್ಟ್ರೀಯ ಆಪ್ಟಿಕಲ್ ಫೈಬರ್ ನೆಟ್‍ವರ್ಕ್ (ಎನ್‍ಓಎಫ್‍ಎನ್)ನಿಂದ ಭಾರತ್ ನೆಟ್ ಎಂದು ಮರುನಾಮಕರಣ ಮಾಡಲಾಯಿತು.

ಸರ್ಕಾರಕ್ಕೆ ಮುಜುಗರ

ಈ ಯೋಜನೆಗೆ 11 ಸಾವಿರ ಕೋಟಿಗಿಂತಲೂ ಅಧಿಕ ಮೊತ್ತವನ್ನು ವ್ಯಯಿಸಿದರೂ, ಕಂಡುಬರುವ ಫಲಿತಾಂಶ ಮಾತ್ರ ತೀರಾ ನಗಣ್ಯ. ಪ್ರಧಾನಿ ಕಚೇರಿಯೇ ಈ ಬಗ್ಗೆ ಮುಜುಗರಕ್ಕೀಡಾಗಿದೆ ಎನ್ನುವುದು ಹಲವರ ಅಭಿಪ್ರಾಯ.

ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಕಳೆದ ಎರಡು ತಿಂಗಳುಗಳಿಂದ ನಿಯತವಾಗಿ ಸಭೆಗಳನ್ನು ದೂರಸಂಪರ್ಕ ಇಲಾಖೆ ಮತ್ತು ಯುಎಸ್‍ಓಎಫ್ (ಯುನಿವರ್ಸೆಲ್ ಸರ್ವೀಸ್ ಆಬ್ಲಿಗೇಶನ್ ಫಂಡ್ ) ಅಧಿಕಾರಿಗಳ ಜತೆ ನಡೆಸುತ್ತಿದ್ದಾರೆ. "ತೆರಿಗೆ ಪಾವತಿದಾರರ ಹಣವನ್ನು ಚರಂಡಿಗೆ ಸುರಿದ ಹಿನ್ನೆಲೆಯಲ್ಲಿ ಇದು ದೊಡ್ಡ ಹಗರಣವಾಗುವ ಸಾಧ್ಯತೆ ಇದೆ" ಎಂದು ಗುಪ್ತಾ ಹೇಳುತ್ತಾರೆ.

ದೂರಸಂಪರ್ಕ ಉದ್ಯಮ ವಲಯದಲ್ಲಿ ಕೂಡಾ, ಕೊನೆಯ ಪ್ರದೇಶಕ್ಕೆ ಕೂಡಾ ಇಂಟರ್‍ ನೆಟ್ ಸಂಪರ್ಕ ಕಲ್ಪಿಸುವ ಭಾರತ್‍ ನೆಟ್ ಯೋಜನೆ ಸರ್ಕಾರಕ್ಕೆ ಮುಜುಗರ ತಂದಿದೆ. ತಮ್ಮ ಮೊಟ್ಟಮೊದಲ ಸ್ವಾತಂತ್ರ್ಯ ದಿನ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಡಿಜಿಟಲ್ ಇಂಡಿಯಾ ಮಹತ್ವವನ್ನು ಬಣ್ಣಿಸಿದ್ದರು.

"ಭಾರತದ ಎಲ್ಲ ಗ್ರಾಮಗಳಿಗೆ ಬ್ರಾಡ್‍ಬ್ಯಾಂಡ್ ಸಂಪರ್ಕ ಕಲ್ಪಿಸಿದರೆ ಮತ್ತು ದೂರಸಂಪರ್ಕ ಶಿಕ್ಷಣವನ್ನು ಪ್ರತಿ ಗ್ರಾಮಗಳಿಗೆ ನೀಡಿದಲ್ಲಿ ಆ ಗ್ರಾಮಗಳ ಮಕ್ಕಳಿಗೆ ಎಷ್ಟರಮಟ್ಟಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬಹುದು ಎನ್ನುವುದನ್ನು ನೀವು ಕಲ್ಪಿಸಿಕೊಳ್ಳಬಹುದು. ನಾವು ವೈದ್ಯರ ಕೊರತೆ ಇರುವ ಕಡೆಗಳಲ್ಲಿ ಟೆಲಿಮೆಡಿಸಿನ್ ಜಾಲವನ್ನು ಸೃಷ್ಟಿಸಿದರೆ, ಬಡವರಿಗೆ ಯಾವ ಬಗೆಯ ಆರೋಗ್ಯ ಸೌಲಭ್ಯವನ್ನು ಕಲ್ಪಿಸಬೇಕು ಎಂಬ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಯನ್ನು ನೀಡಬಹುದು" ಎಂದಿದ್ದರು.

ಯುಎಸ್‍ಒಎಫ್ ಏನು ಮಾಡುತ್ತಿದೆ?

ಭಾರತ್‍ ನೆಟ್ ಯೋಜನೆಯ ಹೃದಯಭಾಗದಲ್ಲಿ ಸಾರ್ವತ್ರಿಕ ಸೇವಾ ಬದ್ಧತೆ ನಿಧಿ (ಯುಎಎಸ್‍ಓಎಫ್) ಎಂಬ ಸರ್ಕಾರಿ ನಿಯಂತ್ರಿತ ನಿಧಿ ಇದೆ. ಇದನ್ನು ಗ್ರಾಮೀಣ ಸಂಪರ್ಕ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬೇಕಿದೆ. ದೂರಸಂಪರ್ಕ ಸಚಿವಾಲಯದ ಕಾರ್ಯದರ್ಶಿಯಾಗಿ ಅರುಣಾ ಸುಂದರರಾಜನ್ ಅವರನ್ನು ಮತ್ತೆ ಸರ್ಕಾರ 2018ರಲ್ಲಿ ನೇಮಕ ಮಾಡಲು ಪ್ರಮುಖ ಕಾರಣವೆಂದರೆ, 2014ರಲ್ಲಿ ಯುಎಸ್‍ಓಎಫ್ ನಿಧಿಯ ಆಡಳಿತಾಧಿಕಾರಿಯಾಗಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು.

ನಾಲ್ಕು ವರ್ಷಗಳ ಹಿಂದೆ ಅವರು ಆರಂಭಿಸಿದ ಯೋಜನೆಗಳು ಮಾತ್ರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನುವುದು ದೂರಸಂಪರ್ಕ ಇಲಾಖೆ ಮೂಲಗಳ ಹೇಳಿಕೆ. ಅದಾಗ್ಯೂ ಇದೀಗ ಸುಂದರರಾಜನ್ ಅವರ ಕೈ ಕಟ್ಟಿಹಾಕಿದಂತಾಗಿದೆ. ಏಕೆಂದರೆ ಯುಎಸ್‍ಒಎಫ್‍ ನ ಬಹುತೇಕ ಮಂದಿ ಅಧಿಕಾರಿಗಳು, ಪ್ರಮುಖ ಯೋಜನೆಗಳನ್ನು ತಡೆಹಿಡಿದಿದ್ದಾರೆ. ಒಂದು ಮೂಲದ ಪ್ರಕಾರ, ಕೆಲ ಅಧಿಕಾರಿಗಳು ಉದ್ದೇಶಪೂರ್ವಕವಾಗಿ, ಟೆಂಡರ್ ಕರೆಯುವಾಗ ನಿರ್ಬಂಧಾತ್ಮಕ ಷರತ್ತುಗಳನ್ನು ವಿಧಿಸಿದ್ದು, ಇದರಿಂದಾಗಿ ಯಾವ ಬಿಡ್ಡರ್‍ಗಳು ಕೂಡಾ ಮುಂದೆ ಬರುತ್ತಿಲ್ಲ.

"ಸುಲಭವಾದ ಕೆಲಸವೆಂದರೆ, ಸ್ಪಷ್ಟನೆಗಳನ್ನು ಪದೇ ಪದೇ ಕೇಳುವ ಮೂಲಕ ಯೋಜನೆ ವಿಳಂಬವಾಗುವಂತೆ ನೋಡಿಕೊಳ್ಳುವುದು" ಎಂದು ದೂರಸಂಪರ್ಕ ಆಯೋಗದ ಮಾಜಿ ಸದಸ್ಯರೊಬ್ಬರು ಹೇಳುತ್ತಾರೆ.

ಒಬ್ಬ ಹಿರಿಯ ಯುಎಸ್‍ಒಎಫ್ ಅಧಿಕಾರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಪ್ರಧಾನಿ ಕಚೇರಿ ಕೂಡಾ ಯುಎಸ್‍ಓಎಫ್‍ನ ನಿಧಾನ ಪ್ರಗತಿಯನ್ನು ಪ್ರಶ್ನಿಸುತ್ತಿಲ್ಲ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.

ಮೊಬೈಲ್ ಸಂಪರ್ಕದ ಸಾರ್ವತ್ರಿಕ ಲಭ್ಯತೆ

ಡಿಜಿಟಲ್ ಇಂಡಿಯಾದ ಮತ್ತೊಂದು ಪ್ರಮುಖ ಆಯಾಮವೆಂದರೆ ಮೊಬೈಲ್ ಸಂಪರ್ಕ.

"ದೇಶದಲ್ಲಿ 55619 ಗ್ರಾಮಗಳು ಇಂದಿಗೂ ಮೊಬೈಲ್ ಕವರೇಜ್ ಹೊಂದಿಲ್ಲ. ಈಶಾನ್ಯ ರಾಜ್ಯಗಳ ಸಮಗ್ರ ಅಭಿವೃದ್ಧಿಯ ಭಾಗವಾಗಿ, ಕವರೇಜ್ ಇಲ್ಲದ ಗ್ರಾಮಗಳಿಗೆ ಮೊಬೈಲ್ ಸಂಪರ್ಕ ಕಲ್ಪಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಉಳಿದ ಗ್ರಾಮಗಳಿಗೆ ಹಂತ ಹಂತವಾಗಿ ಮೊಬೈಲ್ ಸಂಪರ್ಕ ಕಲ್ಪಿಸಲಾಗುತ್ತದೆ" ಎಂದು ಡಿಜಿಟಲ್ ಇಂಡಿಯಾ ವೆಬ್ ಸೈಟ್ ಹೇಳುತ್ತದೆ.

ಯುಎಸ್ಒಎಫ್ ಅಡಿಯಲ್ಲೇ ಬರುವ ಮೊಬೈಲ್ ಸಂಪರ್ಕ ಯೋಜನೆಗಳು, ಕಳೆದ ನಾಲ್ಕು ವರ್ಷಗಳಲ್ಲಿ ಎಷ್ಟು ಸಾಧನೆ ಮಾಡಿವೆ? ಇದರ ಪರಾಮರ್ಶೆ ನಡೆಸಿದಾಗ, ಸಮರ್ಪಕ ಪ್ರಗತಿಯಾಗಿಲ್ಲ ಎಂಬ ಅಂಶ ಸ್ಪಷ್ಟವಾಗುತ್ತದೆ.

ಎಲ್‍ಡಬ್ಲ್ಯುಇ 2 & ಮೇಘಾಲಯ: ಯುಎಸ್‍ಎಫ್‍ಓಒ ಲೆಫ್ಟ್‍ ವಿಂಗ್ ಎಕ್ಸ್‍ಸ್ಟ್ರಿಮಿಸ್ಟ್ ಯೋಜನೆಯ 2ನೇ ಹಂತದ ಅನುಷ್ಠಾನದಲ್ಲಿ ವಿಳಂಬ ಮಾಡುತ್ತಿದೆ. 6245 ಟವರ್‍ಗಳನ್ನು ನಕ್ಸಲ್‍ ಪೀಡಿತ ಪ್ರದೇಶಗಳಲ್ಲಿ ಮತ್ತು ಮೇಘಾಲಯದಲ್ಲಿ ಅಳವಡಿಸುವ ಯೋಜನೆ ಇದಾಗಿದೆ. ಆದರೆ ಬಿಎಸ್‍ಎನ್‍ಎಲ್ ಹಾಗೂ ಯುಎಸ್‍ಓಎಫ್ ನೀಡಿರುವ ಅಂದಾಜು ವೆಚ್ಚದಲ್ಲಿ ದೊಡ್ಡ ಪ್ರಮಾಣದ ಭಿನ್ನತೆ ಇರುವ ಹಿನ್ನೆಲೆಯಲ್ಲಿ ಯೋಜನೆ ನನೆಗುದಿಗೆ ಬಿದ್ದಿದೆ. ಯುಎಸ್‍ಓಎಫ್ ಇದಕ್ಕೆ 11,241 ಕೋಟಿ ರೂಪಾಯಿ ಅಂದಾಜು ವೆಚ್ಚ ನೀಡಿದ್ದರೆ, ಬಿಎಸ್‍ಎನ್‍ಎಲ್ ಕೇವಲ 5,312 ಕೋಟಿಗಳಿಗೆ ಪೂರೈಸುವುದಾಗಿ ಹೇಳಿದೆ. ಪ್ರಭಾಷ್ ಸಿಂಗ್ ನೇತೃತ್ವದ ಉನ್ನತ ಮಟ್ಟದ ತಾಂತ್ರಿಕ ಸಮಿತಿ  ಬಿಎಸ್‍ಎನ್‍ಎಲ್ ಪ್ರಸ್ತಾವನೆಯನ್ನು ಆಂಗೀಕರಿಸಿದೆ. ಇದೀಗ ಯುಎಸ್‍ಓಎಫ್ ಈ ವಿಚಾರದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಒಂದಲ್ಲ ಒಂದು ನೆಪ ನೀಡಿ ಯೋಜನೆ ವಿಳಂಬಕ್ಕೆ ಕಾರಣವಾಗುತ್ತಿದೆ.

ಈಶಾನ್ಯ 1: ಈಶಾನ್ಯ ರಾಜ್ಯಗಳಲ್ಲಿ 2817 ಮೊಬೈಲ್ ಟವರ್ ಗಳನ್ನು ನಿರ್ಮಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ 2014ರ ಸೆಪ್ಟೆಂಬರ್‍ನಲ್ಲಿ ಅನುಮೋದನೆ ನೀಡಿತ್ತು. ಆದರೆ ಈ ಯೋಜನೆಯೂ ಆರಂಭವಾಗಿಲ್ಲ. ಟೆಂಡರ್ ತೆರೆದ ಬಳಿಕ ಕೂಡಾ ಯುಎಸ್‍ಓಎಫ್ ಅಧಿಕಾರಿಗಳು ಹೊಸ ಹೊಸ ಷರತ್ತುಗಳನ್ನು ವಿಧಿಸುತ್ತಿರುವುದು ಇದಕ್ಕೆ ಕಾರಣ. ಬಿಎಸ್‍ಎಲ್‍ಎಲ್ ಈ ಷರತ್ತುಗಳನ್ನು ಒಪ್ಪಿಕೊಂಡ ಬಳಿಕವೂ ಯುಎಸ್‍ಓಎಫ್ ಅಧಿಕಾರಿಗಳು ಯೋಜನೆ ಆರಂಭಕ್ಕೆ ಹಣ ಪವತಿಸಲು ನಿರಾಕರಿಸಿದ್ದಾರೆ.

ಈಶಾನ್ಯ 2: ಈಶಾನ್ಯ ರಾಜ್ಯ ಪ್ರದೇಶದಲ್ಲಿ 1001 ಮೊಬೈಲ್ ಟವರ್ ನಿರ್ಮಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪು 2014ರ ಸೆಪ್ಟೆಂಬರ್‍ನಲ್ಲಿ ಅನುಮೋದನೆ ನೀಡಿತ್ತು. 826 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಯೋಜನೆ ಕೂಡಾ ಕಾರ್ಯಾರಂಭ ಮಾಡಿಲ್ಲ.

ಆಕಾಂಕ್ಷಿ ಗ್ರಾಮಗಳು: ಈ ಯೋಜನೆಯಡಿ ಒಟ್ಟು 4000 ಗ್ರಾಮಗಳು ಸೇರುತ್ತವೆ. ಈ ಪೈಕಿ ಬಹುತೇಕ ಗ್ರಾಮಗಳು ನಕ್ಸಲ್‍ಪೀಡಿತ ಪ್ರದೇಶಗಳಲ್ಲಿವೆ. ಇದು ಕೂಡಾ ಆರಂಭವಾಗಿಲ್ಲ.

ಕವರೇಜ್ ಇಲ್ಲದ ಗ್ರಾಮಗಳು: 20 ಸಾವಿರ ಗ್ರಾಮಗಳನ್ನು ಈ ಯೋಜನೆಯಡಿ ಸೇರಿಸಲಾಗಿದೆ. ಈ ಯೋಜನೆಯೂ ಆರಂಭವಾಗಿಲ್ಲ.

Writer - ಮನೋಜ್ ಗೈರೋಲಾ, thewire.in

contributor

Editor - ಮನೋಜ್ ಗೈರೋಲಾ, thewire.in

contributor

Similar News