ಗೌರಿ ಲಂಕೇಶ್ ಹತ್ಯೆ ಸನಾತನ ಸಂಸ್ಥಾಗೆ ಸೇರಿದ ಮಂದಿ ನಡೆಸಿದ ‘ಸಂಘಟಿತ ಅಪರಾಧ’

Update: 2018-11-24 08:03 GMT

ಬೆಂಗಳೂರು, ನ.24: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಸನಾತನ ಸಂಸ್ಥಾಗೆ ಸೇರಿದ ಮಂದಿ ನಡೆಸಿದ ‘ಸಂಘಟಿತ ಅಪರಾಧ'ವಾಗಿದೆ ಎಂದು ವಿಶೇಷ ತನಿಖಾ ತಂಡ ಶುಕ್ರವಾರ 18 ಮಂದಿ ಆರೋಪಿಗಳನ್ನು ಹೆಸರಿಸಿ ಸಲ್ಲಿಸಿದ 9,235 ಪುಟಗಳ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.

ಸನಾತನ ಸಂಸ್ಥಾ ಸಹ ಸಂಘಟನೆಯಾದ ಹಿಂದೂ ಜನ ಜಾಗೃತಿ ಸಮಿತಿಯ ಪುಣೆ ಘಟಕದ ಮಾಜಿ ಸಂಚಾಲಕ ಅಮೋಲ್ ಕಾಳೆಯನ್ನು ಕೊಲೆ ಸಂಚಿನ ಮುಖ್ಯ ಆರೋಪಿಯನ್ನಾಗಿ ಚಾರ್ಜ್ ಶೀಟಿನಲ್ಲಿ ಹೆಸರಿಸಲಾಗಿದೆ. ಗೌರಿ ಹತ್ಯೆಯನ್ನು  ಶ್ರೀ ರಾಮ ಸೇನೆ ಸದಸ್ಯ ಪರಶುರಾಮ್ ವಾಗ್ಮೋರೆ ನಡೆಸಿದ್ದು ಆತನಿಗೆ ಸಂಸ್ಥಾ ಜತೆ ನಂಟು ಹೊಂದಿದ ರಹಸ್ಯ ಗುಂಪೊಂದರ ಸಹಾಯದಿಂದ ಹಾಗೂ ಕಾಳೆ ನೀಡಿದ ಹಣಕಾಸು ಸಹಾಯ ಉಪಯೋಗಿಸಿ ತರಬೇತಿ ನೀಡಲಾಗಿತ್ತು ಎಂದೂ ಚಾರ್ಜ್ ಶೀಟಿನಲ್ಲಿ ಉಲ್ಲೇಖಿಸಲಾಗಿದೆ.

ವಿಶೇಷ ತನಿಖಾ ತಂಡ ತನ್ನ ಮೊದಲ ಚಾರ್ಜ್ ಶೀಟ್ ಮೇ 30ರಂದು ಸಲ್ಲಿಸಿತ್ತಲ್ಲದೆ ಅದರಲ್ಲಿ  ಮಾರ್ಚ್ 2ರಂದು ಬಂಧಿತನಾಗಿದ್ದ ಕೆ ಟಿ ನವೀನ್ ಕುಮಾರ್‍ನನ್ನು  ಆರೋಪಿಯೆಂದು  ಉಲ್ಲೇಖಿಸಲಾಗಿತ್ತು.

ಎರಡನೇ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಗೊಂಡ 18 ಮಂದಿಯ ವಿರುದ್ಧದ ಆರೋಪಗಳನ್ನು ಫೊರೆನ್ಸಿಕ್ ವರದಿ, ಡಿಎನ್‍ಎ ಮತ್ತು ಬ್ಯಾಲಿಸ್ಟಿಕ್ಸ್ ವರದಿಗಳ ಆಧಾರದಲ್ಲಿ ಹಾಗೂ ಸೀಸಿಟಿವಿ ದೃಶ್ಯಗಳ ಆಧಾರದಲ್ಲಿ ಹೊರಿಸಲಾಗಿದೆ. ಬಂಧಿತ ಹಲವರಿಂದ ತಪ್ಪೊಪ್ಪಿಗೆ ಹೇಳಿಕೆಗಳನ್ನೂ ವಿಶೇಷ ತನಿಖಾ ತಂಡ ಪಡೆದಿದೆ. ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ 2005 ಅನ್ವಯ ಇವುಗಳು ಸಾಕ್ಷ್ಯಗಳಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News