ಜನವರಿ 1ರ ಬಳಿಕ ಮಾನ್ಯತೆ ಕಳೆದುಕೊಳ್ಳಲಿವೆ ಈ ಡೆಬಿಟ್, ಕ್ರೆಡಿಟ್ ಕಾರ್ಡ್ ಗಳು

Update: 2018-11-24 16:03 GMT

ಹೊಸದಿಲ್ಲಿ, ನ.24: ಮುಂದಿನ ವರ್ಷದ ಜನವರಿ 1ರಿಂದ ಕೆಲವು ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು ಸಿಂಧುತ್ವ ಕಳೆದುಕೊಳ್ಳಲಿವೆ ಎಂದು ಆರ್‌ಬಿಐ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಈ ಹಿಂದೆ ಆರ್‌ಬಿಐ ಹೊರಡಿಸಿರುವ ಸೂಚನೆ ಪ್ರಕಾರ ‘ಮ್ಯಾಗ್ನೆಟಿಕ್’(ಕಾಂತೀಯ) ಸ್ಟ್ರೈಪ್ ಕಾರ್ಡ್‌ಗಳನ್ನು ರದ್ದುಗೊಳಿಸಿ ಇಎಂವಿ ಚಿಪ್ ಹೊಂದಿರುವ, ಪಿನ್(ಪಿಐಎನ್) ನಂಬರ್ ಆಧಾರಿತ ಕಾರ್ಡ್‌ಗಳನ್ನು 2018ರ 31ರ ವೇಳೆಗೆ ಬಳಕೆಗೆ ತರಲಾಗುವುದು. ಆದ್ದರಿಂದ ತಮ್ಮ ಬಳಿಯಿರುವ ಹಳೆಯ ಕಾರ್ಡ್‌ಗಳನ್ನು ಹೊಸ ಕಾರ್ಡ್‌ಗೆ ಪರಿವರ್ತಿಸಲು ಬಳಕೆದಾರರು ಸಂಬಂಧಿತ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದು. ನೂತನ ಕಾರ್ಡ್‌ಗಳಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಇರುವ ಕಾರಣ ಈ ಕಾರ್ಡ್‌ಗಳ ಮೂಲಕ ವಂಚನೆ ಎಸಗುವುದು ಇನ್ನು ಕಷ್ಟವಾಗಲಿದೆ .

 2015ರ ಆಗಸ್ಟ್ 27ರಂದು ಈ ಬಗ್ಗೆ ಸೂಚನೆ ಹೊರಡಿಸಿದ್ದ ಆರ್‌ಬಿಐ ಬ್ಯಾಂಕ್‌ಗಳಿಗೆ ಕಾರ್ಡ್ ಪರಿವರ್ತನೆಗೆ ಮೂರು ವರ್ಷಕ್ಕೂ ಹೆಚ್ಚಿನ ಕಾಲಾವಧಿ ನೀಡಿತ್ತು. ಬ್ಯಾಂಕ್‌ನಿಂದ ಹೊಸದಾಗಿ ನೀಡಲಾಗುವ ಎಲ್ಲಾ ಕಾರ್ಡ್‌ಗಳು(ಡೆಬಿಟ್ ಅಥವಾ ಕ್ರೆಡಿಟ್, ದೇಶೀಯ ಅಥವಾ ಅಂತರಾಷ್ಟ್ರೀಯ) ಇಎಂವಿ ಚಿಪ್ ಹಾಗೂ ಪಿಐಎನ್ ಆಧಾರಿತವಾಗಿರುತ್ತದೆ ಎಂದು ಆರ್‌ಬಿಐ ತಿಳಿಸಿತ್ತು. ಬಳಿಕ ಕಾರ್ಡ್‌ಗಳನ್ನು ನವೀಕರಿಸುವಂತೆ ಬ್ಯಾಂಕ್‌ಗಳು ಗ್ರಾಹಕರಿಗೆ ನಿರಂತರ ಸಂದೇಶಗಳನ್ನು ಕಳುಹಿಸಿದೆ.

 ಇಎಂವಿ ಎಂದರೇನು:

ಇಎಂವಿ ಎಂಬುದು ‘ಯುರೋ ಪೇ, ಮಾಸ್ಟರ್‌ ಕಾರ್ಡ್ ಆ್ಯಂಡ್ ವೀಸಾ’ದ ಸಂಕ್ಷಿಪ್ತ ಪದ. ಇದರಲ್ಲಿರುವ ಸಣ್ಣ ಮೈಕ್ರೋಚಿಪ್ ವಂಚನೆಯ ವ್ಯವಹಾರಗಳಿಂದ ಗ್ರಾಹಕರಿಗೆ ರಕ್ಷಣೆ ನೀಡುತ್ತದೆ. ಇಎಂವಿ ಹೊಂದಿರುವ ಕಾರ್ಡ್‌ಗಳನ್ನು ಸುಲಭವಾಗಿ ಗುರುತಿಸಬಹುದು. ಹೆಚ್ಚಾಗಿ ಕಾರ್ಡ್‌ನ ಎದುರುಬದಿಯಲ್ಲಿ ಎಡಭಾಗದಲ್ಲಿ ಬಂಗಾರದ ಬಣ್ಣದ ಚಿಪ್ ಅಳವಡಿಸಿರುವುದನ್ನು ಕಾಣಬಹುದು.

 ಇಎಂವಿ ಚಿಪ್ ಹಾಗೂ ಪಿಐಎನ್(ಪರ್ಸನಲ್ ಐಡೆಂಟಿಫಿಕೇಶನ್ ನಂಬರ್- ವೈಯಕ್ತಿಕ ಗುರುತು ಸಂಖ್ಯೆ) ಹೊಂದಿರುವ ಕಾರ್ಡ್‌ಗಳನ್ನು ವಂಚನೆ ತಡೆಯುವಂತೆ ರೂಪಿಸಲಾಗಿದೆ. ಈ ಕಾರ್ಡ್‌ಗಳ ತದ್ರೂಪು ಸೃಷ್ಟಿಸುವುದು ಸುಲಭವಲ್ಲ. ಈ ಕಾರ್ಡ್‌ಗಳಲ್ಲಿ ಸೂಕ್ಷ್ಮವಾದ ಗೂಢಲಿಪೀಕರಣ ಇದ್ದು ಅನಧಿಕೃತ ಬಳಕೆಯನ್ನು ತಡೆಯುತ್ತದೆ. ನಕಲಿ ಕಾರ್ಡ್ ಬಳಕೆ ಅಥವಾ ಕಾರ್ಡ್ ಕದ್ದು ಬಳಸುವುದನ್ನೂ ಇದು ತಡೆಯುತ್ತದೆ.

 ಹಳೆಯ ‘ಮ್ಯಾಗ್ನೆಟಿಕ್’ ಸ್ಟ್ರೈಪ್ ಕಾರ್ಡ್‌ಗಳನ್ನು ಬದಲಾಯಿಸಲು ಎರಡು ವಿಧಾನಗಳಿವೆ. ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಅಲ್ಲಿ ಬದಲಾಯಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News