ಕೃಷ್ಣ ಹಾಡಿದರು...

Update: 2018-11-24 18:47 GMT

ಗಾಯಕ ಕೃಷ್ಣ ಅವರು ಈ ಕೆಲವು ಆಯಾಮಗಳಿಂದಾಗಿ ಈಚಿನ ದಿನಗಳಲ್ಲಿ ದೇಶದ ರಾಜಕೀಯ ಮತ್ತು ಕಲಾ ವಲಯಗಳು ಹುಬ್ಬೇರಿಸುವಂತೆ ಮಾಡಿದವರು. ತಮ್ಮದೊಂದು ಕಛೇರಿಯನ್ನು ಕ್ರಿಶ್ಚಿಯನ್ ಹಾಡುಗಳ ಗಾಯನಕ್ಕೆ ಮುಡಿಪಿಡುವುದಾಗಿ ಹೇಳಿ ಕೆಲವು ದಿನಗಳ ಹಿಂದೆ ಅವರು ಬಿರುಗಾಳಿ ಎಬ್ಬಿಸಿದ್ದರು. ಈ ಒಂದು ಮಾತಿನಿಂದ ಹಿಂದುತ್ವವಾದಿಗಳ ಅಸಹನೆಯ ದಾಳಿಯ ಝಂಝವಾತಕ್ಕೆ ಸಿಲುಕಿ ಸುದ್ದಿಯಲ್ಲಿದ್ದರು. ಈಗ ಅದೇ ಹಿಂದುತ್ವದ ಪಟಾಲಂನ ಧೂರ್ತ ಅಸಹನೆಯಿಂದಾಗಿ ಮತ್ತೆ ಸುದ್ದಿಬಿಂದುವಾಗಿದ್ದಾರೆ.


ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ,
ಹಾಡುವುದು ಅನಿವಾರ್ಯ ಕರ್ಮ ಎನಗೆ
ಕೇಳುವವರಿಹರೆಂದು ನಾಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ
         ***

ಕವಿ ಜಿ. ಎಸ್. ಶಿವರುದ್ರಪ್ಪನವರ ಈ ಹಾಡು ಸೂರ್ಯರಶ್ಮಿಯಷ್ಟು ನಿತ್ಯನೂತನ. ಈ ಚರಣಗಳು ಈಚಿನ ದಿನಗಳಲ್ಲಿ ಮತ್ತೆಮತ್ತೆ ನನ್ನ ಮನದಲ್ಲಿ ಅನುರಣಿಸಿ ಕಾಡುತ್ತಿರುವುದಕ್ಕೆ ಕಾರಣ: ಇಂಥ ಒಬ್ಬ ಹಾಡುಗಾರ.ಅವರ ಹೆಸರು ಟಿ.ಎಂ.ಕೃಷ್ಣ. ಕರ್ನಾಟಕ ಸಂಗೀತದ ಸುಪ್ರಸಿದ್ಧ ಗಾಯಕರಾದ ಕೃಷ್ಣ ಸಂಗೀತ ಕಲೆಯಲ್ಲಿ ಪ್ರಗತಿಶೀಲರು, ಸಂಪ್ರದಾಯ ಮೀರುವ ಪ್ರಯೋಗಶೀಲರು. ಸನಾತನವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವ ‘ರೆಡ್‌ಐಯ್ಡಿ ಬಾಯ್’ ಎನ್ನಬಹುದೇನೋ! ಕೃಷ್ಣ ಸಂಗೀತಗಾರರಷ್ಟೇ ಅಲ್ಲ, ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಕ್ರಿಯಾವಾದಿಗಳು, ಒಳ್ಳೆಯ ವಾಗ್ಮಿಗಳು ಮತ್ತು ಲೇಖಕರು. ನರೇಂದ್ರ ಮೋದಿಯವರ ಸರಕಾರದ ನೀತಿಗಳ, ಬಿಜೆಪಿಯ ಮತ್ತು ಹಿಂದುತ್ವ ಸಿದ್ಧಾಂತಗಳ ನಿರ್ದಾಕ್ಷಿಣ್ಯ ಟೀಕಾಕಾರರು. ಗಾಯಕ ಕೃಷ್ಣ ಅವರು ಈ ಕೆಲವು ಆಯಾಮಗಳಿಂದಾಗಿ ಈಚಿನ ದಿನಗಳಲ್ಲಿ ದೇಶದ ರಾಜಕೀಯ ಮತ್ತು ಕಲಾ ವಲಯಗಳು ಹುಬ್ಬೇರಿಸುವಂತೆ ಮಾಡಿದವರು. ತಮ್ಮದೊಂದು ಕಛೇರಿಯನ್ನು ಕ್ರಿಶ್ಚಿಯನ್ ಹಾಡುಗಳ ಗಾಯನಕ್ಕೆ ಮುಡಿಪಿಡುವುದಾಗಿ ಹೇಳಿ ಕೆಲವು ದಿನಗಳ ಹಿಂದೆ ಅವರು ಬಿರುಗಾಳಿ ಎಬ್ಬಿಸಿದ್ದರು. ಈ ಒಂದು ಮಾತಿನಿಂದ ಹಿಂದುತ್ವವಾದಿಗಳ ಅಸಹನೆಯ ದಾಳಿಯ ಝಂಝವಾತಕ್ಕೆ ಸಿಲುಕಿ ಸುದ್ದಿಯಲ್ಲಿದ್ದರು. ಈಗ ಅದೇ ಹಿಂದುತ್ವದ ಪಟಾಲಂನ ಧೂರ್ತ ಅಸಹನೆಯಿಂದಾಗಿ ಮತ್ತೆ ಸುದ್ದಿಬಿಂದುವಾಗಿದ್ದಾರೆ.

ನವೆಂಬರ್ 17ರಂದು ಸ್ಪಿಕ್ ಮ್ಯಾಕೆ ಪ್ರತಿಷ್ಠಾನ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಏರ್‌ಪೋರ್ಟ್ ಆಥಾರಿಟಿ ಆಫ್ ಇಂಡಿಯಾ-ಎ.ಎ.ಐ) ಹೊಸದಿಲ್ಲಿಯಲ್ಲಿ ಕೃಷ್ಣನ್ ಅವರ ಕಛೇರಿಯೊಂದನ್ನು ಏರ್ಪಡಿಸಿತ್ತು. ಆದರೆ ಎ.ಎ.ಐ. ಕೊನೆಗಳಿಗೆಯಲ್ಲಿ ಕೃಷ್ಣನ್ ಅವರ ಸಂಗೀತದ ಪ್ರಾಯೋಜಕತ್ವದಿಂದ ಹಿಂದೆ ಸರಿದದ್ದರಿಂದ ಕಛೇರಿಯನ್ನು ರದ್ದುಗೊಳಿಸುವಂಥ ಪರಿಸ್ಥಿತಿ ಸೃಷ್ಟಿಯಾಯಿತು. ಕೇಂದ್ರ ಸರಕಾರದ ಉದ್ಯಮವಾದ ಎ.ಎ.ಐ. ಕೊನೆಗಳಿಗೆಯಲ್ಲಿ ಹಿಂದೆ ಸರಿಯಲು ನೀಡಿದ ಕಾರಣ-ಕೆಲವೊಂದು ತುರ್ತು ಕೆಲಸಕಾರ್ಯಗಳು. ಈ ತುರ್ತು ಕೆಲಸಕಾರ್ಯಗಳೇನು ಎಂಬುದನ್ನು ಎ.ಎ.ಐ. ವಿವರಿಸಿಲ್ಲ. ಈ ನೆಪವನ್ನು ಒಪ್ಪುವವರು ಯಾರೂ ಇರಲಾರರರು. ಕಛೇರಿ ರದ್ದಿಗೆ ತುರ್ತು ಕೆಲಸ ಕಾರ್ಯಗಳೇ ನಿಜವಾದ ಕಾರಣವಾಗಿದ್ದಲ್ಲಿ ಕಛೇರಿಯನ್ನು ರದ್ದುಪಡಿಸುವ ಬದಲು ಮುಂದೂಡಬಹುದಿತ್ತು. ಎ.ಎ.ಐ.ನ ಈ ಕುಂಟು ನೆಪ ಅದು ಬೇರೆ ಯಾವುದೋ ಒತ್ತಡಕ್ಕೆ ಮಣಿದಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಮೋದಿ ಸರಕಾರದ ನೀತಿಗಳು ಮತ್ತು ಬಿಜೆಪಿಯ ಹಿಂದುತ್ವ ಸಿದ್ಧಾಂತಗಳ ಉಗ್ರ ಟೀಕಾಕಾರರಾಗಿ ಕೃಷ್ಣ ವ್ಯಾಪಕ ನಿಂದನೆ ಮತ್ತು ಖಂಡನೆಗಳಿಗೆ ಈಡಾದವರು. ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದುತ್ವವಾದಿಗಳು ಕೃಷ್ಣ ಅವರ ರಕ್ತಬಸಿಯುವ ಕೋಪಾವೇಶದಿಂದ ತೇಜೋವಧೆಯ ಖಡ್ಗ ಬೀಸುತ್ತಿರುವುದು ವರದಿಯಾಗಿದೆ. ಸಾಮಾಜಿಕ ಮಾಧ್ಯಮಗಳಿಂದ ಬಂದ ಒತ್ತಡಕ್ಕೆ ಮಣಿದು ಎ.ಎ.ಐ. ಕಛೇರಿಯನ್ನು ರದ್ದುಪಡಿಸಿದೆ ಎಂಬುದರಲ್ಲಿ ಸಂಶಯವಿಲ್ಲ.

ಕೃಷ್ಣ ಅವರು ಮುಕ್ತ ಚಿಂತಕರಾಗಿ, ಸರಕಾರದ, ಆಳುವ ಪಕ್ಷದ ನೀತಿರೀತಿಗಳನ್ನು ಟೀಕಿಸುತ್ತಿದ್ದರೂ ಅದೊಂದೇ ಸಾಮಾಜಿಕ ಮಾಧ್ಯಮದ ಕಡುಕೋಪಕ್ಕೆ ಕಾರಣವಿರಲಾರದು. ಗಾಯಕರಾಗಿ ಅವರ ಪ್ರಯೋಗಶೀಲತೆ ಸಂಪ್ರದಾಯವಾದಿಗಳು ಮತ್ತು ಸನಾತನವಾದಿಗಳಿಗೆ ಪ್ರಿಯವಾಗಿರಲಿಲ್ಲ. ಸಂಪ್ರದಾಯಬದ್ಧ ಸಂಗೀತದ ರಾಗ, ತಾಳಗಳ ರಾಚನಿಕ ವಿನ್ಯಾಸಗಳನ್ನು ಮುರಿದು ಹೊಸಹೊಸ ರಚನೆಗಳಲ್ಲಿ ಪ್ರಯೋಗನಿರತರಾದವರು ಕೃಷ್ಣ. ಪ್ರಯೋಗಶೀಲರು ಎಂದರೆ, ಶಾಸ್ತ್ರೀಯ ಸಂಗೀತದ ರಾಗ, ತಾಳಗಳ ವ್ಯಾಕರಣವನ್ನು ಕಿತ್ತೊಗೆಯುವ ಮೂರ್ತಿಭಂಜಕರೇನಲ್ಲ. ನನ್ನ ಕಲೆಗೆ ಸೌಂದರ್ಯಾಭಿಜ್ಞತೆ, ರಸಾಭಿಜ್ಞತೆ ಮತ್ತು ಸದಭಿರುಚಿಯ ಒಂದು ಸೂತ್ರವಿದೆ. ಇದು ರಾಗ, ತಾಳ ಮತ್ತು ಪಠ್ಯವನ್ನೊಳಗೊಂಡ ಸೂತ್ರ. ಇದರಾಚೆಗೆ ನಾನು ಮಾಡುವುದೆಲ್ಲ ಸಾಮಾಜಿಕ ಸ್ವರೂಪದ್ದಾಗಿದ್ದು ಅವು ನಿಯಮಾತೀತವಾದುವು ಎನ್ನುವ ಕೃಷ್ಣ, ಶಾಸ್ತ್ರೀಯ ಸಂಗೀತ ಕ್ರಮದಲ್ಲಿದ್ದ ಕಂದಾಚಾರಗಳನ್ನು, ನೇಮನಿಷ್ಠೆಗಳನ್ನು ಮೀರಿ ನಿಂತರು. ಮ್ಯಾಗ್ಸೇಸೆ ಪ್ರಶಸ್ತಿ ವಿಜೇತರಾದ ಕೃಷ್ಣ ಗಾಯಕರಾಗಿ ಸಂಗೀತದ ನೆಲೆಯನ್ನು ಹೆಚ್ಚುಹೆಚ್ಚಾಗಿ ಸಮಾಜೀಕರಣಗೊಳಿಸುವ, ಜನಸಾಮಾನ್ಯರಿಗೆ ಎಟುಕುವಂತೆ ಪ್ರಜಾಪ್ರಭುತ್ವೀಕರಿಸುವ ನಿಟ್ಟಿನಲ್ಲಿ ಕಾರ್ಯಮಗ್ನರಾದರು.

ಇತ್ತೀಚೆಗೆ ಕ್ರಿಶ್ಚಿಯನ್ ಕೀರ್ತನೆಗಳನ್ನು ಹಾಡಿದ ಕೆಲವು ಕರ್ನಾಟಕ ಸಂಗೀತಗಾರರ ವಿರುದ್ಧ ಸಾಮಾಜಿಕ ಮಾಧ್ಯಮಗಳು ವಾಗ್ದಾಳಿ ನಡೆಸಿ, ಕರ್ನಾಟಕ ಸಂಗೀತದಲ್ಲಿ ಕ್ರಿಶ್ಚಿಯನ್ ಹಾಡುಗಳನ್ನು ಹಾಡಬಾರದೆಂದು ‘ಫರ್ಮಾನು’ ಹೊರಡಿಸಿದಾಗ, ಇಂಥ ಹುಕುಂಗಳಿಗೆ ತಾವು ಮಣಿಯುವುದಿಲ್ಲವೆಂದು ಸಡ್ಡುಹೊಡೆದು ನಿಂತರು. ತಮ್ಮ ಒಂದು ಕಛೇರಿಯನ್ನು ಪೂರ್ತಿಯಾಗಿ ಕ್ರೈಸ್ತ ಗೀತೆಗಳ ಗಾಯನಕ್ಕೆ ಮುಡುಪಿಡುವುದಾಗಿಯೂ ಹಿಂದುತ್ವವಾದಿಗಳಿಗೆ ತಿರುಗೇಟುಕೊಟ್ಟರು. ಗಾಯಕರಾಗಿ ಕೃಷ್ಣ ಸಂಗೀತದ ಶಾಸ್ತ್ರೀಯ ಚೌಕಟ್ಟುಗಳನ್ನು ಮುರಿದು, ಸಂಗೀತವನ್ನು ಗಾಯನ ಸಮಾಜಗಳ ಭವ್ಯಸಭಾಂಗಣಗಳ ಬೂರ್ಜ್ವಾ ಶೃಂಖಲೆಗಳಿಂದ ಮುಕ್ತಗೊಳಿಸಿ ಜನಸಾಮಾನ್ಯರ ಗುಡಿಸಲುಗುಡಾರಗಳ ಬಾಗಿಲಗೆ ಒಯ್ಯುವ ಪ್ರಯತ್ನ ಮಾಡಿದರು. ಕ್ರೈಸ್ತ-ಇಸ್ಲಾಂ ಧರ್ಮದ ಕುರಿತ ಗೀತೆಗಳು, ಗಾಂಧಿ, ಕಬೀರ, ತುಕಾರಾಂ ರಚನೆಗಳನ್ನು ಜನಸಾಮಾನ್ಯ ರಿಗಾಗಿ ಹಾಡಲುಪಕ್ರಮಿಸಿದರು. ಸಂಗೀತದ ವಿಶ್ವಾತ್ಮಕತೆಯನ್ನು ತೋರಿಸಲು ಪೆರುಮಾಳ್ ಮುರುಗನ್ ಮೊದಲಾದ ದಲಿತ ಕವಿಗಳ ಕವನಗಳನ್ನು ಹಾಡಲಾರಂಭಿಸಿದರು. ಕಲೆಯನ್ನು ತಮ್ಮದೇ ರೀತಿಯಲ್ಲಿ ಪ್ರಜಾಕರಣಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಲೇಖನಗಳು ಮತ್ತು ಭಾಷಣಗಳಲ್ಲಿ, ದೇಶದಲ್ಲಿ ತಲೆಎತ್ತುತ್ತಿರುವ ಮೂಲಭೂತವಾದದ ಅಪಾಯಗಳ ಬಗ್ಗೆ ಜನತೆಯ ಗಮನಸೆಳೆಯುವ ಪ್ರಯತ್ನ ಮಾಡಿದರು.

ಕೃಷ್ಣರ ಪ್ರಯೋಗಶೀಲತೆ, ಕಲೆ ಮತ್ತು ಸಮಾಜ- ಸಮುದಾಯಗಳ ನಡುವಣ ಸಂಬಂಧ ಕುರಿತ ನವೀನ ದೃಷ್ಟಿ ಹಾಗೂ ನಿರ್ಭೀತ ನಿಲುವು, ಸನಾತನವಾದಿಗಳು ಮತ್ತು ಬಿಜೆಪಿಬೆಂಬಲಿತ ಹಿಂದುತ್ವವಾದಿಗಳನ್ನು ಕೆರಳಿಸಿದ್ದಲ್ಲಿ ಆಶ್ಚರ್ಯವೇನಿಲ್ಲ. ಆದರೆ ಕರ್ನಾಟಕ ಸಂಗೀತದ ರಾಗಗಳಲ್ಲಿ ಕ್ರೈಸ್ತ ಗೀತೆಗಳನ್ನು ಹಾಡುವುದರಿಂದ ಮತಾಂತರಿಗಳನ್ನು ಪ್ರೋತ್ಸಾಹಿಸಿ ಮತಾಂತರಕ್ಕೆ ಸಹಾಯವಾಗುವುದು ಎನ್ನುವ ವಾದ ಹುರುಳಿಲ್ಲದ್ದು. ಚರ್ಚುಗಳಲ್ಲಿ ಕರ್ನಾಟಕ ಸಂಗೀತ ಪದ್ಧತಿಯನ್ನು ಅಳವಡಿಸಿಕೊಂಡು ಕ್ರೈಸ್ತ ಗೀತೆಗಳನ್ನು ಹಾಡುವುದು ತ್ಯಾಗರಾಜರ ಕಾಲದಲ್ಲೇ ಇತ್ತು ಎನ್ನುತ್ತಾರೆ ಕರ್ನಾಟಕ ಸಂಗೀತದ ಇತಿಹಾಸಕಾರರೂ ಚೆನ್ನೈ ಮ್ಯೂಸಿಕ್ ಅಕಾಡಮಿಯ ಕಾರ್ಯದರ್ಶಿಗಳೂ ಆಗಿರುವ ವಿ. ಶ್ರೀರಾಂ ಅವರು. ತ್ಯಾಗರಾಜರ ಸಮಕಾಲೀನರಾದ ವೇದನಾಯಗಂ ಶಾಸ್ತ್ರಿಗಳು ಎಂಬವರು ಕರ್ನಾಟಕ ಸಂಗೀತದ ಶೈಲಿಯಲ್ಲಿ ‘ಬೆತ್ಲೆಹೆಂ ಕೊರವಂಜಿ’ ಮೊದಲಾದ ನೃತ್ಯರೂಪಕಗಳನ್ನೂ ಕ್ರಿಸ್ತಕಥಾ ಕಾಲಕ್ಷೇಪಗಳನ್ನೂ ರಚಿಸಿದ್ದು ಅವು ಚರ್ಚುಗಳಲ್ಲಿ ನಿಯತವಾಗಿ ನಡೆಯುತ್ತಿದ್ದವಂತೆ. ಶಾಸ್ತ್ರಿಗಳ ಈ ರಚನೆಗಳಿಂದ ಪ್ರಭಾವಿತರಾಗಿ ಕ್ರೈಸ್ತ ಸಮುದಾಯದ ಅನೇಕರು ಕರ್ನಾಟಕ ಸಂಗೀತ ಪದ್ಧತಿಯನ್ನು ಅನುಸರಿಸಿ ಕ್ರೈಸ್ತ ಗೀತೆಗಳನ್ನು ರಚಿಸಿರುವ ದಾಖಲೆಗಳಿವೆ.

ರಾವ್ ಸಾಹೇಬ್ ಅಬ್ರಹಾಂ ಪಂಡಿತರ್ ಎಂಬವರು 1912ರಲ್ಲಿ, ತಂಜಾವೂರಿನಲ್ಲಿ ಕರ್ನಾಟಕ ಸಂಗೀತ ಸಮ್ಮೇಳನ ಏರ್ಪಡಿಸಿದರೆ, ಅವರ ಪುತ್ರ ಎ.ಜೆ.ಪಾಂಡ್ಯನ್ ಕ್ರಿಸ್ಮಸ್ ಸ್ತೋತ್ರಗೀತೆಗಳಿಗೆ ಕರ್ನಾಟಕ ಸಂಗಿತವನ್ನು ಅಳವಡಿಸಿದ್ದರೆಂದು ಶ್ರೀರಾಂ ಬರೆಯುತ್ತಾರೆ. ಈ ಕ್ರಿಸ್ಮಸ್ ಸ್ತೋತ್ರಗೀತೆಗಳು ಕಲ್ಕಿ ಕೃಷ್ಣ ಮೂರ್ತಿಯವರ ಗಮನಸೆಳೆದು, 1935 ಮತ್ತು 1937ರ ಮದ್ರಾಸ್ ಸಂಗೀತೋತ್ಸವಗಳಲ್ಲಿ ಅವುಗಳ ಗಾಯನ ಮಾಡುವಂತೆ ಪಾಂಡ್ಯನ್ ಅವರನ್ನು ಆಹ್ವಾನಿಸಲಾಗಿತ್ತಂತೆ. ಪಟ್ನಂ ಸುಬ್ರಹ್ಮಣ್ಯ ಅಯ್ಯರ್ ಅವರಂಥ ಘನವಿದ್ವಾಂಸರು ಕ್ರೈಸ್ತ ಗೀತೆಗಳಿಗೆ ಕರ್ನಾಟಕ ಸಂಗೀತದಲ್ಲಿ ರಾಗ ಸಂಯೋಜನೆ ಮಾಡಿದ ನಿದರ್ಶನಗಳಿವೆ. ಇನ್ನು ತಮಿಳು ಸಿನೆಮಾಗಳಲ್ಲಿ ಪಾಪನಾಶಿನಿ ಶಿವಂ(ಜ್ಞಾನ ಸುಂದರಿ), ಎಂ.ಎಲ್.ವಸಂತಕುಮಾರಿ(ಮಿಸ್ಸಮ್ಮ)ಮೊದಲಾದವರು ಕರ್ನಾಟಕ ಸಂಗೀತದ ರಾಗ ಸಂಯೋಜನೆಯಲ್ಲಿ ಕ್ರೈಸ್ತ ಗೀತೆಗಳನ್ನು ಹಾಡಿದ ನಿದರ್ಶನಗಳಿವೆ. ಈ ಐತಿಹಾಸಿಕ ಹಿನ್ನೆಲೆಯನ್ನು ಗಮನಿಸಿದಾಗ ಕ್ರಿಸ್ತ ಗೀತೆಗಳನ್ನು ಕರ್ನಾಟಕ ಸಂಗೀತದಲ್ಲಿ ಹಾಡುವುದರಿಂದ ಮತಾಂತರವನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂಬ ಹಿಂದುತ್ವವಾದಿಗಳ ಹೆದರಿಕೆ ನಿರಾಧಾರವಾದುದು ಎಂಬುದರಲ್ಲಿ ಸಂಶಯವಿಲ್ಲ. ತಮ್ಮ ಮೂಗಿನ ನೇರಕ್ಕೇ ಚರಿತ್ರೆಯನ್ನು ಅರ್ಥೈಸುವ ಅಥವಾ ಪರಿಷ್ಕರಿಸಲಿಚ್ಛಿಸುವ ಅಂಧಾಭಿಮಾನಿಗಳಿಗೆ ಇದಾವುದೂ ಮನವರಿಕೆಯಾಗುವುದಿಲ್ಲ. ಕೃಷ್ಣ ಅವರಂಥ ಸಂಗೀತ ಕಲಾವಿದರ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ದಾಳಿ ಮುಂದುವರಿದಿದೆ.

ಕರ್ನಾಟಕ ಸಂಗೀತದಲ್ಲಿ ಅನ್ಯಧರ್ಮಗಳ ಗೀತೆಗಳನ್ನು ಹಾಡುವವರಿಗೆ ಕೊಟ್ಟಿರುವ ಪ್ರಶಸ್ತಿಗಳನ್ನು ಹಿಂಪಡೆಯಬೇಕು, ಅವರಿಗೆ ಕಛೇರಿ ನಡೆಸಲು ಅವಕಾಶ ನೀಡಬಾರದು ಇತ್ಯಾದಿ ನಿಂದನೆ-ಬೆದರಿಕೆಗಳ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇವೆ. ಇಂಥ ಬೆದರಿಕೆಗಳಿಗೆ ಮಣಿದು ಎ.ಎ.ಐ. ಹೊಸದಿಲ್ಲಿಯಲ್ಲಿ ಏರ್ಪಡಿಸಿದ್ದ ಕೃಷ್ಣರ ಸಂಗೀತ ಕಛೇರಿಯನ್ನು ರದ್ದುಗೊಳಿಸಿದಾಗ ದಿಲ್ಲಿ ಸರಕಾರ ಅದೇ ದಿನ ಬೇರೊಂದು ಕಡೆ ಅವರ ಕಛೇರಿ ವ್ಯವಸ್ಥೆ ಮಾಡಿದ್ದು ಒಂದು ಸ್ತುತ್ಯಾರ್ಹ ಕಾರ್ಯ. ಕೇಜ್ರಿವಾಲ್ ಅವರ ಸರಕಾರ ಕೃಷ್ಣ ಅವರ ಕಛೇರಿಯನ್ನು ಏರ್ಪಡಿಸುವ ಮೂಲಕ ಪ್ರಜಾಸತ್ತಾತ್ಮಕ ನಡೆಯನ್ನು ಪ್ರದರ್ಶಿಸಿದೆ. ಹಿಂದುತ್ವವಾದಿಗಳ ಬೆದರಿಕೆಗೆ ಮಣಿಯದೆ ಕಲಾವಿದರ ಪ್ರಜಾಸತ್ತಾತ್ಮಕ ಹಕ್ಕನ್ನು ಸಮರ್ಥಿಸುವ ಕ್ರಮವಾಗಿ ನವೆಂಬರ್ 17ರ ಈ ಸಂಗೀತ ಕಛೇರಿ ಒಂದು ವಿಶಿಷ್ಟ ನಡೆ. ಅಂತೆಯೇ ಕೃಷ್ಣ ಅವರ ಅಂದಿನ ಹಾಡುಗಾರಿಕೆಯೂ. ಅಂದು ಅವರು ಪ್ರಸ್ತುತ ಪಡಿಸಿದ ರಚನೆಗಳಿಂದಾಗಿ ಈ ಕಾರ್ಯಕ್ರಮ ವಿಶೇಷವೆನ್ನಿಸಿಕೊಂಡಿತು. ಸಾಬರಮತಿ ಆಶ್ರಮದಲ್ಲಿ ನಿತ್ಯ ಪ್ರಾರ್ಥನೆಯಾಗಿದ್ದ ‘ಓಂ ತತ್ ಸತ್...’ನಿಂದ ಕಚೇೀರಿ ಆರಂಭಿಸಿದ ಕೃಷ್ಣ,ವೈಷ್ಣವ ಜನತೋ, ತುಕಾರಾಮ, ಬಸವಣ್ಣ, ಕಬೀರ, ಕನಕದಾಸರ ರಚನೆಗಳನ್ನೂ ಕ್ರೈಸ್ತ-ಇಸ್ಲಾಂ ಧರ್ಮದ ಗೀತೆಗಳನ್ನೂ ಪ್ರಸ್ತುತ ಪಡಿಸಿ, ‘ರಘುಪತಿರಾಘವ ರಾಜಾರಾಂ’ನೊಂದಿಗೆ ಮಂಗಳಹಾಡುವ ಮೂಲಕ ಭಾರತದ ಸಾಂಸ್ಕೃತಿಕ ಬಹುತ್ವದ ಸಂದೇಶವನ್ನು ಸಾರಿದ್ದು ಮತ್ತೊಂದು ವಿಶೇಷವಾಗಿತ್ತು.

ತಮ್ಮ 17ರ ದಿಲ್ಲಿ ಕಛೇರಿಯನ್ನು ‘ಪ್ರಜಾಪ್ರಭುತ್ವದ ಸಂಭ್ರಮ’ ಎಂದು ಕರೆದಿರುವ ಕೃಷ್ಣ ಹಿಂಸೆಯಾಗಿ ಸ್ಫೋಟಿಸಬಹುದಾದಂಥ ಕೋಪದ ಬಗ್ಗೆ ಆತಂಕವ್ಯಕ್ತಪಡಿಸಿರುವುದು ಕಳವಳಕರವಾದುದು.ಕೃಷ್ಣರ ಕಛೇರಿಯನ್ನು ರದ್ದುಗೊಳಿಸಿದ ಎ.ಎ.ಐ. ಕ್ರಮ ಕಲಾವಿದನೊಬ್ಬನ ದನಿಯನ್ನು ಹತ್ತಿಕ್ಕುವ ಕ್ರಮವಷ್ಟೇ ಅಗಿರಲಿಲ್ಲ. ಅದು ಪ್ರಜಾಪ್ರಭುತ್ವದ ಆಧಾರವಾದ ಭಿನ್ನಮತದ ಕೊರಳು ಹಿಚುಕುವ ಕ್ರಮವಾಗಿ ಪ್ರಜಾಕಂಟಕವಾಗಿತ್ತು. ಸಾಮಾಜಿಕ ಮಾಧ್ಯಮಗಳು ಮತ್ತಿತರ ಮಾರ್ಗಗಳ ಮೂಲಕ ಇಂದು ಬರುತ್ತಿರುವ ಹೆದರಿಕೆ ಬೆದರಿಕೆಗಳ ಬಗ್ಗೆ ಕೃಷ್ಣ ಆಡಿರುವ ಮಾತುಗಳು ಮನನೀಯವಾದುದು: ‘‘ಅಧಿಕಾರದ ಉನ್ನತ ಸ್ಥಾನದಲ್ಲಿರುವ ನಾಯಕರು ಮೌನಮುರಿದು ಬುದ್ಧಿವಾದ ಹೇಳಿದರೆ ಹಿಂಬಾಲಕರು ಸರಿಹೋಗುತ್ತಾರೆ. ಆದರೆ, ಅವರ ಮೌನದಿಂದಾಗಿ ಪುಂಡಾಟಿಕೆಯಲ್ಲಿ ತೊಡಗುವವರ ಸಂಖ್ಯೆ ಹೆಚ್ಚುತ್ತದೆ.ಇದು ದುರದೃಷ್ಟಕರ.

ಇಂಥ ಮೌನವು ಗೂಂಡಾ ಪ್ರವೃತ್ತಿಯನ್ನು ಉತ್ತೇಜಿಸುವ ಅಪಾಯವಿದೆ. ಮೋದಿಯವರಿಗೆ ಈ ಮಾತುಗಳು ಕೇಳಿಸಿರಬಹುದೇ? ಅವರು ಈ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅವರ ಬೆಂಬಲಿಗರೆನ್ನಲಾದವರು ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುತ್ತಿರುವ ಅಸಹನೆ, ಭಿನ್ನಮತ ನಿಂದನೆಯ ಸಾಧನಗಳು ‘ಕುಲಕ್ಕೆ ಮೃತ್ಯು ಕೊಡಲಿ ಕಾವು’ ಎಂಬ ಗಾದೆ ಮಾತಿನಂತೆ ತಿರುಗುಬಾಣವಾಗುವ ದಿನಗಳು ದೂರವಿರಲಾರವು. ಕೃಷ್ಣ ರಾಜಧಾನಿ ಹೊಸದಿಲ್ಲಿಯಲ್ಲಿ ಗೊತ್ತಾದ ದಿನ, ನವೆಂಬರ್17ರಂದು ಹಾಡಿದರು. ಹಾಡಿ, ರಾಷ್ಟ್ರದ ಕೋಟ್ಯಂತರ ಜನರ ಸ್ವಾತಂತ್ರ್ಯದ ಆಶೋತ್ತರಗಳಿಗೆ ದನಿಯಾದರು. ಹಾಡುವುದು ಅವರಿಗೆ ಅನಿವಾರ್ಯ ಕರ್ಮವಾದರೂ, ‘‘ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ’’ಎನ್ನುವ ಪೈಕಿಯ ಕಲಾವಿದರಲ್ಲ ಅವರು. ಕಲಾವಿದರು ದೇಶದ-ಸಮಾಜದ ಬಿಕ್ಕಟ್ಟುಗಳಿಗೆ ಸ್ಪಂದಿಸಬೇಕು, ಕಲೆ ಜೀವಪರವಾಗಬೇಕು, ಜನಪರವಾಗಬೇಕು ಎನ್ನುವ ಕಳಕಳಿಯ ದನಿಯ ಅವರು ಹಾಡುತ್ತಲೇ ಇರಲಿ...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News