ಹಣ ಇಲ್ಲದೆ ಇಲ್ಲಿ ಆಟ ನಡೆಯದು

Update: 2018-11-24 18:49 GMT

ಭಾರತದಲ್ಲಿ ನಡೆಯುವಷ್ಟು ಲೀಗ್‌ಗಳು ಬೇರೆ ದೇಶದಲ್ಲಿ ನಡೆಯುವುದಿಲ್ಲ. ಅದೇ ರೀತಿ ಬೇರೆ ದೇಶಗಳು ಒಲಿಂಪಿಕ್ಸ್‌ನಲ್ಲಿ ಗೆಲ್ಲುವಷ್ಟು ಪದಕಗಳನ್ನೂ ಭಾರತ ಗೆಲ್ಲುವುದಿಲ್ಲ. ಲೀಗ್‌ಗಳಿಂದ ಆದಾಯ ಬರುತ್ತದೆ. ಆರ್ಥಿಕ ವಹಿವಾಟು ಉತ್ತಮವಾಗಿ ನಡೆಯುತ್ತದೆ. ಅಂತಿಮವಾಗಿ ಹಣವೇ ಪ್ರಮುಖವಾಗುತ್ತದೆ. ಪ್ರತಿಷ್ಠೆ, ಗೌರವ ಇವೆಲ್ಲ ಹಣದಿಂದಲೇ ಗಳಿಸಬಹುದು ಎಂಬುದು ಸರಕಾರ ಹಾಗೂ ಸಂಘಟನೆಗಳ ಲೆಕ್ಕಾಚಾರ. ಇದರಿಂದ ಲೀಗ್‌ನಲ್ಲಿ ತೊಡಗಿಕೊಂಡ ಕ್ರೀಡೆಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲದಿದ್ದರೂ ಆದಾಯವನ್ನು ತಂದುಕೊಡುತ್ತಿವೆ.

1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಾಗ ಮರುದಿನ ಪೇಪರ್‌ಲ್ಲಿ ಸುದ್ದಿಯಾಯಿತೇ ವಿನಃ ಆ ಆಟಗಾರರನ್ನು ಗುರುತಿಸುವುದಾಗಲಿ, ಈಗ ನೀಡುವಷ್ಟು ಹಣವನ್ನು ನೀಡುವುದಾಗಲಿ ಇರಲಿಲ್ಲ. ಅದೇ ವಿರಾಟ್ ಕೊಹ್ಲಿ 19 ವರ್ಷ ವಯೋಮಿತಿಯ ವಿಶ್ವಕಪ್ ಗೆದ್ದಾಗ ಕೋಟ್ಯಂತರ ಹಣ ಚಿಕ್ಕ ಪ್ರಾಯದ ಆಟಗಾರರ ಬ್ಯಾಂಕ್ ಖಾತೆ ಸೇರಿತು. ಈಗ ಭಾರತದಲ್ಲಿ ಗಲ್ಲಿ ಕ್ರಿಕೆಟ್‌ಗೂ ಬೆಲೆ ಇದೆ. ಏಕೆಂದರೆ ಅಲ್ಲಿಯೂ ಹಣ ಹರಿಯುತ್ತದೆ. ಕೆಲವು ವರ್ಷಗಳ ಹಿಂದೆ ಕಬಡ್ಡಿ ಆಟಗಾರರನ್ನು ಮಾತನಾಡಿಸುವವರೇ ಇರಲಿಲ್ಲ. ಮಾವ ಹಾಗೂ ಅಳಿಯ ಸೇರಿಕೊಂಡು ಲೀಗ್ ಕಟ್ಟಿದರು. ಈಗ ಕಬಡ್ಡಿ ಆಟಗಾರರು ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ. ಮಹೀಂದ್ರಾ ಹಾಗೂ ಮಹೀಂದ್ರಾ ಗ್ರೂಪ್‌ನ ಮಾಲಕ ಆನಂದ್ ಮಹೀಂದ್ರ ಹಾಗೂ ಅವರ ಅಳಿಯ, ವೀಕ್ಷಕ ವಿವರಣೆಗಾರ ಚಾರು ಶರ್ಮಾ ಹುಟ್ಟುಹಾಕಿದ ಈ ಲೀಗ್‌ಗೆ ಈಗ ಹಣ ಹೊಳೆಯಂತೆ ಹರಿದುಬರುತ್ತಿದೆ. ಆನಂದ್ ಮಹೀಂದ್ರ ಹಣಕ್ಕಾಗಿ ಲೀಗ್ ಮಾಡುತ್ತಿಲ್ಲ. ಸಾಧ್ಯವಾದರೆ ಕೈ ಜೋಡಿಸಿ ಎಂದು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನ ಸಿಇಒ ಉದಯ್‌ಶಂಕರ್ ಅವರನ್ನು ಕೇಳಿಕೊಂಡಾಗ ಉದಯ್‌ಶಂಕರ್ ಅವರಿಗೂ ಅಚ್ಚರಿಯಾಗಿತ್ತು. ಆದರೆ ಚಾರು ಶರ್ಮಾ ಹಣ ಮಾಡುವ ಐಡಿಯಾವನ್ನು ಯಾರಿಗೂ ಬಿಟ್ಟುಕೊಡಲಿಲ್ಲ. ಅಂತಿಮವಾಗಿ ಲೀಗ್ ಆರಂಭಗೊಂಡಿತು. ಜಗತ್ತಿನ ಉತ್ತಮ ಲೀಗ್‌ಗಳಲ್ಲಿ ಪ್ರೊ ಕಬಡ್ಡಿ ಲೀಗ್ ಕೂಡ ಒಂದಾಯಿತು.
ಪ್ರೊ ಕಬಡ್ಡಿ ಲೀಗ್‌ನ ಈ ಕತೆ ಇಲ್ಲಿ ಯಾಕೆ ಅನಿವಾರ್ಯವಾಯಿತು ಎಂದರೆ ಭಾರತದಲ್ಲಿ ಕ್ರೀಡಾ ಸ್ಥಿತಿಯೇ ಹಾಗಾಗಿದೆ. ಹಣ ಇದ್ದರೆ ಮಾತ್ರ ಕ್ರೀಡಾಪಟುಗಳು, ಸಂಘಟಕರು, ಸಂಸ್ಥೆಗಳು ಚುರುಕಾಗಿರುತ್ತಾರೆ. ಹಣ ಹರಿದು ಬಂದಿಲ್ಲವೆಂದರೆ ಅದು ಒಂದು ರೀತಿಯಲ್ಲಿ ಶ್ರಮದಾನ ನಡೆಸಿದಂತಾಗುತ್ತದೆ.


 ಭಾರತದಲ್ಲಿ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಹಾಕಿ, ಬ್ಯಾಡ್ಮಿಂಟನ್, ಬಾಕ್ಸಿಂಗ್, ಕುಸ್ತಿ, ಫ್ರೀ ಕಿಕ್ ಬಾಕ್ಸಿಂಗ್, ಚೆಸ್ ಮೊದಲಾದ ಲೀಗ್‌ಗಳು ನಡೆಯುತ್ತಿವೆ. ಇದರ ಯಶಸ್ಸಿಗೆ ಮುಖ್ಯ ಕಾರಣ ಹಣ. ಅದೇ ಅಥ್ಲೆಟಿಕ್ಸ್, ಖೋ ಖೋ, ಈಜಿನಲ್ಲಿ ನಾವು ಹೆಚ್ಚು ಯಶಸ್ಸನ್ನು ಕಾಣುತ್ತಿಲ್ಲ. ಇತರರು ಕೂಡ ಆ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಏಕೆಂದರೆ ಅಲ್ಲಿ ಎಷ್ಟೇ ಓಡಿದರೂ, ಆಡಿದರೂ ಹಣ ಗಳಿಕೆಗೆ ಅವಕಾಶ ಇಲ್ಲ.
ವಿರಾಟ್ ಕೊಹ್ಲಿಯಂಥ ಆಟಗಾರ 19ವರ್ಷದೊಳಗೇ ಕೋಟ್ಯಧಿಪತಿ ಆದಾಗ ದೇಶದ ಯುವಕರು ಕ್ರಿಕೆಟ್ ಕಡೆಗೆ ಮುಖ ಮಾಡಿದರು. ಈಗ ಕೊಹ್ಲಿ ನೂರಾರು ಕೋಟಿ ರೂ.ಗಳ ಒಡೆಯ. ಈಗ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲೂ ಉತ್ತಮ ರೀತಿಯ ಸಂಭಾವನೆ ನೀಡಲಾಗುತ್ತಿದೆ. ಅಂದರೆ ಕ್ರಿಕೆಟ್ ಉಸಿರೇ ಹಣ. ಸೋಲು, ಗೆಲುವು, ಸಿಕ್ಸರ್, ಬೌಂಡರಿ. ವಿಕೆಟ್ ಇವೆಲ್ಲ ಹಣ ಗಳಿಕೆಯ ಅಸ್ತ್ರಗಳು. ಕ್ರಿಕೆಟ್ ಹೆಸರಿನಲ್ಲಿ ಅದೆಷ್ಟೋ ಆ್ಯಪ್‌ಗಳು ದಿನಕ್ಕೆ ನೂರಾರು ಕೋಟಿ ರೂ. ಗಳಿಸುತ್ತಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ ಹುಟ್ಟಿಕೊಂಡ ನಂತರ ಕ್ರಿಕೆಟ್ ಜಗತ್ತಿನಲ್ಲಿ ಇತರ ಲೀಗ್‌ಗಳು ಹುಟ್ಟಿಕೊಂಡವು. ಅಮೆರಿಕದಲ್ಲಿ ಬಾಸ್ಕೆಟ್‌ಬಾಲ್ ಲೀಗ್ ನೋಡಿದ ಲಲಿತ್ ಮೋದಿ ಇಲ್ಲಿ ಕ್ರಿಕೆಟ್ ಲೀಗ್ ಹುಟ್ಟು ಹಾಕಿ ಹಣದ ಹೊಳೆಯನ್ನೇ ಹರಿಸಿದರು.
 ಪ್ರಕಾಶ್ ಪಡುಕೋಣೆ ಆಲ್ ಇಂಗ್ಲೆಂಡ್ ಚಾಂಪಿಯನ್ ಪಟ್ಟ ಗೆದ್ದಾಗ ನಾವು ಅಷ್ಟು ಸುದ್ದಿ ಮಾಡಿರಲಿಲ್ಲ. ಆಗ ಕ್ರೀಡೆಗೆ ಪ್ರತಿಷ್ಠೆ ಇದ್ದಿತ್ತೇ ಹೊರತು ಹಣದ ವೌಲ್ಯ ಇರಲಿಲ್ಲ. ಅದೇ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧೂ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಾಗ ಸರಕಾರ ಹಣದ ಉಡುಗೊರೆ ನೀಡಿತು. ಬ್ಯಾಡ್ಮಿಂಟನ್ ಕ್ರೀಡೆ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿರುವುದನ್ನು ಗಮನಿಸಿದ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸ್ಥಾಪಿಸಿತು. ಇದರಿಂದ ದೇಶದಲ್ಲಿ ಆಟಗಾರರ ಸಂಖ್ಯೆ ಹೆಚ್ಚಾಯಿತು. ವಿದೇಶದ ಆಟಗಾರರು ಇಲ್ಲಿನ ಲೀಗ್‌ಗಳಲ್ಲಿ ಆಡಲಾರಂಭಿಸಿದರು. ಅದೇ ರೀತಿ ಬಾಕ್ಸಿಂಗ್ ಲೀಗ್ ಹಾಗೂ ಕುಸ್ತಿ ಲೀಗ್‌ಗಳು ಹುಟ್ಟಿಕೊಂಡು ಆಟಗಾರರಿಗೆ ಆರ್ಥಿಕ ಪ್ರಯೋಜನ ಸಿಕ್ಕಿತು.
ಈಗ ಭಾರತ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂಬುದರ ಬಗ್ಗೆ ಕ್ರೀಡಾ ಸಚಿವರು ಸೇರಿದಂತೆ ಇತರರು ಹೆಚ್ಚು ಯೋಚಿಸುವುದಿಲ್ಲ. ಏಕೆಂದರೆ ಹಣ ಹರಿದು ಬರುವ, ಪ್ರವಾಸೋದ್ಯಮ ಹಾಗೂ ಇತರ ವ್ಯವಹಾರ ಹೆಚ್ಚಿಸುವ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಲಿಂಪಿಕ್ಸ್ ನ ಮ್ಯಾರಥಾನ್‌ನಲ್ಲಿ ಪದಕ ಗೆಲ್ಲುವುದರ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುವುದಿಲ್ಲ, ಆದರೆ ಪ್ರೊಕ್ಯಾಮ್ ಕಂಪೆನಿ ಪ್ರತಿಯೊಂದು ನಗರದಲ್ಲೂ ನಡೆಸುವ 10ಕೆ ಮ್ಯಾರಥಾನ್ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತದೆ. ಸಿನೆಮಾ ನಟರಾದ ಪುನೀತ್ ರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ವಿಶ್ವ 10ಕೆ ಮ್ಯಾರಥಾನ್‌ಗೆ ಬ್ರಾಂಡ್ ರಾಯಭಾರಿಗಳಾಗುತ್ತಾರೆ, ಕ್ರಿಕೆಟ್ ಲೀಗ್‌ಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಆದರೆ ಒಂದು ದಿನವಾದರೂ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿರುವ ಅಥ್ಲೀಟ್‌ಗಳನ್ನು ಭೇಟಿ ಮಾಡಿ ಪ್ರೋತ್ಸಾಹದ ಮಾತನ್ನಾಡಿದ್ದಾರಾ?, ಇಲ್ಲ. ಏಕೆಂದರೆ ಅಥ್ಲೀಟ್‌ಗಳಿರುವಲ್ಲಿ ಜನ ಸೇರುವುದಿಲ್ಲ, ಅದು ಪ್ರಚಾರದ ಜಾಗ ಅಲ್ಲ ಎಂಬುದು ಸ್ಪಷ್ಟ.


 ಈಗ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ನಡೆಯುತ್ತಿದೆ. ಬೆಂಗಳೂರು ಫುಟ್ಬಾಲ್ ಕ್ಲಬ್ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿ ಅಗ್ರ ಸ್ಥಾನದಲ್ಲಿದೆ. ಈ ಕ್ಲಬ್ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣವನ್ನು ತನ್ನ ಮನೆಯನ್ನಾಗಿ ಮಾಡಿಕೊಂಡಿದೆ. ಅವರಿಗೆ ಅನುಕೂಲವಾಗುವ ರೀತಿಯಲ್ಲಿ ರಾಜ್ಯ ಸರಕಾರ ನಡೆದುಕೊಂಡಿದೆ. ಮಾತನಾಡಿದರೆ ನಮಗೆ ಬಾಡಿಗೆ ಬರುತ್ತದೆ ಎಂಬ ಉತ್ತರವನ್ನು ನೀಡುತ್ತಿದೆ. ಫುಟ್ಬಾಲ್ ಪಂದ್ಯಗಳು ನಡೆಯುವುದರಿಂದ ಇಲ್ಲಿ ನಿತ್ಯವೂ ಅಭ್ಯಾಸ ನಡೆಸುತ್ತಿರುವ ಅಥ್ಲೀಟ್‌ಗಳಿಗೆ ತೊಂದರೆಯಾಗಿದೆ. ಕ್ರೀಡಾ ಇಲಾಖೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ರಾಜ್ಯ ನ್ಯಾಯಾಲಯ ಕೂಡ ಅಥ್ಲೀಟ್‌ಗಳಿಗೆ ಅವಕಾಶ ಮಾಡಿಕೊಡಿ ಎಂದು ಕ್ರೀಡಾ ಇಲಾಖೆಗೆ ಆದೇಶ ನೀಡಿದೆ. ಜೆಎಸ್‌ಡಬ್ಲು ಅವರಂಥ ಕಾರ್ಪೊರೇಟ್ ವಲಯವನ್ನು ಎದುರುಹಾಕಿಕೊಳ್ಳುವುದು ಬೇಡ ಎಂದು ರಾಜ್ಯ ಸರಕಾರ ನ್ಯಾಯಾಲಯದ ಆದೇಶವನ್ನೂ ಕಡೆಗಣಿಸಿದೆ. ಈಗ ಅಥ್ಲೀಟ್‌ಗಳು ಅಂಗಣದ ಹೊರ ವಲಯದಲ್ಲೇ ಅಭ್ಯಾಸ ಮಾಡುವಂತಾಗಿದೆ. ಏಕೆಂದರೆ ಈ ಅಥ್ಲೀಟ್‌ಗಳ ಸಾಧನೆಯಿಂದ ರಾಜ್ಯ ಸರಕಾರಕ್ಕೆ ಯಾವುದೇ ಆದಾಯ ಇಲ್ಲ. ಬದಲಾಗಿ ಅವರು ಗೆದ್ದರೆ ಸರಕಾರವೇ ಹಣ ನೀಡಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫುಟ್ಬಾಲ್ ಬದಲಾಗಿ ಅಥ್ಲೀಟ್‌ಗಳಿಗೆ ಅವಕಾಶ ಮಾಡಿಕೊಡಿ ಎಂದು ಯಾರೂ ಧ್ವನಿ ಎತ್ತುವುದಿಲ್ಲ. ಏಕೆಂದರೆ ಈ ಧ್ವನಿಯಿಂದ ಆರ್ಥಿಕ ಲಾಭವಿಲ್ಲ.

ಭಾರತದಲ್ಲಿ ನಡೆಯುವಷ್ಟು ಲೀಗ್‌ಗಳು ಬೇರೆ ದೇಶದಲ್ಲಿ ನಡೆಯುವುದಿಲ್ಲ. ಅದೇ ರೀತಿ ಬೇರೆ ದೇಶಗಳು ಒಲಿಂಪಿಕ್ಸ್‌ನಲ್ಲಿ ಗೆಲ್ಲುವಷ್ಟು ಪದಕಗಳನ್ನು ಭಾರತ ಗೆಲ್ಲುವುದಿಲ್ಲ. ಲೀಗ್‌ಗಳಿಂದ ಆದಾಯ ಬರುತ್ತದೆ. ಆರ್ಥಿಕ ವಹಿವಾಟು ಉತ್ತಮವಾಗಿ ನಡೆಯುತ್ತದೆ. ಅಂತಿಮವಾಗಿ ಹಣವೇ ಪ್ರಮುಖವಾಗುತ್ತದೆ. ಪ್ರತಿಷ್ಠೆ, ಗೌರವ ಇವೆಲ್ಲ ಹಣದಿಂದಲೇ ಗಳಿಸಬಹುದು ಎಂಬುದು ಸರಕಾರ ಹಾಗೂ ಸಂಘಟನೆಗಳ ಲೆಕ್ಕಾಚಾರ. ಇದರಿಂದ ಲೀಗ್‌ನಲ್ಲಿ ತೊಡಗಿಕೊಂಡ ಕ್ರೀಡೆಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲದಿದ್ದರೂ ಆದಾಯವನ್ನು ತಂದುಕೊಡುತ್ತಿವೆ. ಆಟದೊಂದಿಗೆ ಹಣ ಗಳಿಸುವ ಕ್ರೀಡೆಗಳೇ ಮುಖ್ಯವೆನಿಸಿಕೊಳ್ಳುತ್ತಿವೆ, ಇತರ ಕ್ರೀಡೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News