‘ಬ್ರೆಕ್ಸಿಟ್’ ಒಪ್ಪಂದಕ್ಕೆ ಐರೋಪ್ಯ ಒಕ್ಕೂಟ ಅನುಮೋದನೆ
Update: 2018-11-25 23:16 IST
ಬ್ರಸೆಲ್ಸ್ (ಬೆಲ್ಜಿಯಂ), ನ. 25: ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನಲ್ಲಿ ರವಿವಾರ ನಡೆದ ಶೃಂಗ ಸಮ್ಮೇಳನದಲ್ಲಿ, ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಹೋಗುವ ‘ಬ್ರೆಕ್ಸಿಟ್’ ಪ್ರಸ್ತಾಪಕ್ಕೆ ಐರೋಪ್ಯ ಒಕ್ಕೂಟದ ನಾಯಕರು ಔಪಚಾರಿಕವಾಗಿ ಅನುಮೋದನೆ ನೀಡಿದರು.
ಬ್ರಿಟನ್ ಪ್ರಧಾನಿ ತೆರೇಸಾ ಮೇಯವರ ಬ್ರೆಕ್ಸಿಟ್ ಒಪ್ಪಂದವನ್ನು ಬೆಂಬಲಿಸುವಂತೆ ಐರೋಪ್ಯ ಒಕ್ಕೂಟದ ನಾಯಕರು ಬ್ರಿಟನಿಗರನ್ನು ಒತ್ತಾಯಿಸಿದರು.
ಮಾರ್ಚ್ 29ರಂದು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ನಿರ್ಗಮಿಸುವುದಕ್ಕೆ ಶರತ್ತುಗಳನ್ನು ವಿಧಿಸುವ 600 ಪುಟಗಳ ಒಪ್ಪಂದಕ್ಕೆ 27 ಐರೋಪ್ಯ ಒಕ್ಕೂಟ ನಾಯಕರು ಕೇವಲ ಅರ್ಧ ಗಂಟೆಯಲ್ಲಿ ಅಂಕಿತ ಹಾಕಿದರು.
ಇದೇ ಸಂದರ್ಭದಲ್ಲಿ ಭವಿಷ್ಯದ ಮುಕ್ತ ವ್ಯಾಪಾರ ನಿಯಮಾವಳಿಗಳನ್ನೊಳಗೊಂಡ 26 ಪುಟಗಳ ಘೋಷಣೆಗೂ ಅವರು ಅಂಕಿತ ಹಾಕಿದರು.