ಪ್ರಧಾನಿ ಇಂಥ ಮಾತು ಆಡಬಾರದು

Update: 2018-11-27 05:03 GMT

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡ ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಪ್ರಚಾರ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆಲ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಭಾಷಣಗಳು ಅವರ ಘನತೆಗೆ ಶೋಭೆ ತರುವುದಿಲ್ಲ, ಕೆಲ ಅವಿವೇಕಿ ಕಾಂಗ್ರೆಸ್ ನಾಯಕರು ನರೇಂದ್ರ ಮೋದಿ ಅವರ ತಂದೆ ಯಾರೆಂದು ಕೇಳಿದ್ದು ಖಂಡನೀಯ, ಆದರೆ ಇಂಥ ಕೆಟ್ಟ ಭಾಷಣದ ಪರಿಪಾಠ ಮೊದಲು ಆರಂಭಿಸಿದವರು ಪ್ರಧಾನಿ ನರೇಂದ್ರ ಮೋದಿ. ಅವರು ಹಿಂದೊಮ್ಮೆ ಮಾಡಿದ ಬಹಿರಂಗ ಭಾಷಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ‘‘ಜರ್ಸಿ ಆಕಳು’’ ಎಂದು ಹೀಯಾಳಿಸಿದ್ದರು. ರಾಹುಲ್ ಗಾಂಧಿಯವರನ್ನು ಹೈಬ್ರೀಡ್ ತಳಿ ಎಂದಿದ್ದರು. ವಾಸ್ತವವಾಗಿ ಈಗ ಕಾಂಗ್ರೆಸ್‌ನ ಹಿರಿಯ ನಾಯಕರಾರೂ ಆ ಮಾತನ್ನು ಆಡಿಲ್ಲ. ಯಾರೋ ಸ್ಥಳೀಯ ನಾಯಕರು ಆಡಿದ ಮಾತಿಗೆ ಪ್ರಧಾನಿ ತೀರ ಕೆಳಗಿಳಿದು ಟೀಕಿಸುತ್ತಿದ್ದಾರೆ.

ಈ ದೇಶ ಪಂಡಿತ್ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಮನಮೋಹನ್ ಸಿಂಗ್‌ರ ವರೆಗೆ ಅನೇಕ ಪ್ರಧಾನಿಗಳನ್ನು ನೋಡಿದೆ. ಆದರೆ ಯಾರೂ ಎಂದೂ ವೈಯಕ್ತಿಕ ನಿಂದನೆಗೆ ಇಳಿದಿಲ್ಲ. ಸಭ್ಯತೆಯ ಲಕ್ಷ್ಮಣ ರೇಖೆ ದಾಟಿ ಹೋಗಿಲ್ಲ. ಮೋದಿಯವರ ಬಿಜೆಪಿ ಪಕ್ಷಕ್ಕೆ ಸೇರಿದ ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಎದುರಾಳಿಗಳನ್ನು ಅತ್ಯಂತ ಗೌರವದಿಂದ ಮಾತಾಡಿಸುತ್ತಿದ್ದರು. ಭಾಷಣದಲ್ಲಿ ಯಾರ ವಿರುದ್ಧವೂ ಏಕವಚನದಿಂದ ಟೀಕಿಸುತ್ತಿರಲಿಲ್ಲ. ಆಕಸ್ಮಿಕವಾಗಿ ಬಾಯಿತಪ್ಪಿಮಾತಾಡಿದರೂ ಅದಕ್ಕಾಗಿ ವಿಷಾದಿಸುತ್ತಿದ್ದರು. ಆದರೆ ನಮ್ಮ ಈಗಿನ ಪ್ರಧಾನಿಯವರಿಗೆ ಅಧ್ಯಯನದ ಕೊರತೆ ಹಾಗೂ ಶೂನ್ಯ ಸಾಧನೆಯ ಹಿನ್ನೆಲೆ ಇದೆ. ಹೀಗಾಗಿ ಮನ ಬಂದಂತೆ ಮಾತಾಡುತ್ತಾರೆ. ತಾನು ಪ್ರಧಾನಿ ಎಂಬುದನ್ನು ಮರೆತು ಒಬ್ಬ ಲೋಕಲ್ ನಾಯಕನಂತೆ ಕೆಟ್ಟ ಭಾಷೆಯಲ್ಲಿ ಎದುರಾಳಿಗಳನ್ನು ಟೀಕಿಸುತ್ತ, ವಿಚಿತ್ರ ಹಾವ ಭಾವ ತೋರಿಸುತ್ತಾ ಮಾತಾಡುತ್ತಾರೆ. ಅವರ ನಾಲಿಗೆ ನೈಜ ವಿಷಯಗಳನ್ನು ಬಿಟ್ಟು ಎತ್ತೆತ್ತಲೋ ಹರಿದಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ತಾನು ಏನು ಮಾತಾಡುತ್ತಿದ್ದೇನೆಂಬ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ. ರವಿವಾರ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತಾಡುತ್ತ ‘‘2019ರ ಚುನಾವಣೆಯ ಹಿನ್ನೆಲೆಯಲ್ಲಿ ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ತಡ ಮಾಡಬೇಕೆಂದು ಕಾಂಗ್ರೆಸ್ ನಾಯಕರು ಸುಪ್ರೀಂ ಕೋರ್ಟ್ ಮೇಲೆ ಒತ್ತಡ ತರುತ್ತಿದ್ದಾರೆ’’ ಎಂದು ಹೇಳಿದ್ದಾರೆ. ಒಬ್ಬ ಪ್ರಧಾನಿಯಿಂದ ಸುಪ್ರೀಂ ಕೋರ್ಟ್‌ನ ವಿಶ್ವಾಸಾರ್ಹತೆಗೆ ಚ್ಯುತಿ ತರುವ ಇಂಥ ಹೇಳಿಕೆ ಬರಬಾರದಿತ್ತು. ವಾಸ್ತವವಾಗಿ ಸುಪ್ರೀಂ ಕೋರ್ಟ್‌ನ ಮೇಲೆ ಒತ್ತಡ ತರುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಲೋಕಸಭೆಯಲ್ಲಿ ಕೇವಲ 44 ಸದಸ್ಯ ಬಲ ಹೊಂದಿದ ಪಕ್ಷ ಅದು. ವಾಸ್ತವವಾಗಿ ಈಗ ಬಹುಮತ ಪಡೆದು ಅಧಿಕಾರದಲ್ಲಿರುವುದು ಬಿಜೆಪಿ.

ನರೇಂದ್ರ ಮೋದಿಯವರಂತಹ ಐವತ್ತಾರು ಇಂಚಿನ ಎದೆಯ ಪ್ರಧಾನಿ ಅದಕ್ಕಿದ್ದಾರೆ. ನ್ಯಾಯಾಂಗದಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪಗಳೂ ಇವೆ. ಸುಪ್ರೀಂ ಕೋರ್ಟ್ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಅವರಿಗಿದೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸುಗ್ರೀವಾಜ್ಞೆ ಮೂಲಕ ಮಂದಿರ ನಿರ್ಮಾಣದ ಭರವಸೆ ಈಡೇರಿಸಬಹುದಿತ್ತು. ಅದಕ್ಕೆ ಯಾವ ಅಡ್ಡಿ ಆತಂಕಗಳೂ ಇರಲಿಲ್ಲ, ಆದರೆ ನಾಲ್ಕೂವರೆ ವರ್ಷ ಸುಮ್ಮನೆ ಕುಳಿತು ಲೋಕಸಭಾ ಚುನಾವಣೆಗೆ ಆರು ತಿಂಗಳಿರುವಾಗ ಅಯೋಧ್ಯೆಯಲ್ಲಿ ಧರ್ಮಸಂಸತ್ ನಡೆಸಿ ಹಿಂದೂಗಳನ್ನು ಪ್ರಚೋದಿಸಿ ಹಿಂದೂ ವೋಟ್ ಬ್ಯಾಂಕ್ ನಿರ್ಮಿಸುವ ಕೊಳಕು ರಾಜಕೀಯ ಮಾಡುವ ಅಗತ್ಯವಿರಲಿಲ್ಲ. ಕಳೆದ ನಾಲ್ಕೂವರೆ ವರ್ಷಗಳ ಮೋದಿ ನೇತೃತ್ವದ ಬಿಜೆಪಿ ಆಡಳಿತ ಈ ದೇಶದ ಪಾಲಿಗೆ ಅತ್ಯಂತ ಕೆಟ್ಟ ಆಡಳಿತ. ಜನತೆಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಲಿಲ್ಲ, ಯಾವ ಸಮಸ್ಯೆಗಳನ್ನೂ ಬಗೆಹರಿಸಲಿಲ್ಲ. ಕಳೆದ ಎಪ್ಪತ್ತು ವರ್ಷಗಳ ಕಾಲ ನಮ್ಮ ಹಿರಿಯ ಚೇತನಗಳು ಕಟ್ಟಿದ ದೇಶದ ಸಾಧನೆಗಳನ್ನು ಮಣ್ಣು ಗೂಡಿಸಿದ್ದೇ ಈ ಸರಕಾರದ ಸಾಧನೆ. ಜನತೆಗೆ ಭರವಸೆ ನೀಡಿದಂತೆ ವಿದೇಶದಿಂದ ಕಪ್ಪುಹಣ ಸ್ವದೇಶಕ್ಕೆ ಬರಲಿಲ್ಲ, ಜೀವನಾವಶ್ಯಕ ಪದಾರ್ಥಗಳ ಬೆಲೆ ನಿಯಂತ್ರಣಕ್ಕೆ ಬರಲಿಲ್ಲ.

2014ರಲ್ಲಿ 399ರೂಗೆ ಕೊಳ್ಳುತ್ತಿದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ ಈಗ 1000ರೂ. ಆಗಿದೆ. ಬ್ಯಾಂಕಿಂಗ್ ವ್ಯವಸ್ಥೆ ಹಾಳಾಗಿದೆ, ರಿಸರ್ವ್ ಬ್ಯಾಂಕ್ ಮತ್ತು ಹಣಕಾಸು ಸಚಿವಾಲಯದ ನಡುವಿನ ಕಿತ್ತಾಟ ಬೀದಿಗೆ ಬಂದಿದೆ. ದೇಶದ ಉನ್ನತ ತನಿಖಾಸಂಸ್ಥೆ ಸಿಬಿಐನಲ್ಲಿ ಆಂತರಿಕ ಕಿತ್ತಾಟ ನಡೆದಿದೆ, ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗವನ್ನು ಕಿತ್ತು ಬಿಸಾಡಲಾಗಿದೆ. ಯೋಜನಾ ಆಯೋಗಕ್ಕೆ ಎಂದೋ ಸಮಾಧಿ ಕಟ್ಟಲಾಗಿದೆ. ಕಾರ್ಪೊರೇಟ್ ಉದ್ಯಮಪತಿಗಳು ಸಾರ್ವಜನಿಕ ಬ್ಯಾಂಕುಗಳನ್ನು ದೋಚಿ ಕೋಟ್ಯಂತರ ರೂ. ಟೋಪಿ ಹಾಕಿ ವಿದೇಶಕ್ಕೆ ಹಾರಿ ಹೋಗಲು ಈ ಸರಕಾರ ಅವಕಾಶ ನೀಡಿದೆ, ಇನ್ನೊಂದೆಡೆ ಗೋರಕ್ಷಕರೆಂಬ ಗೂಂಡಾಗಳು ಹಾದಿ ಬೀದಿಯಲ್ಲಿ ಅಮಾಯಕರನ್ನು ಕೊಲ್ಲುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್‌ರಂಥ ಚಿಂತಕರ ಹತ್ಯೆ ನಡೆದಾಗಲೂ ಪ್ರಧಾನಿ ಮೌನ ಮುರಿಯಲಿಲ್ಲ. ಸ್ವಾಮಿ ಅಗ್ನಿವೇಶರ ಮೇಲೆ ಬೀದಿಯಲ್ಲಿ ಹಲ್ಲೆ ನಡೆದಾಗಲೂ ಮಾತಾಡಲಿಲ್ಲ. ಕರ್ನಾಟಕ ಶಾಸ್ತ್ರೀಯ ಸಂಗೀತಗಾರರ ಕಾರ್ಯಕ್ರಮ ನಡೆಯದಂತೆ ಮೋದಿ ಭಕ್ತಪಡೆ ಗೂಂಡಾಗಿರಿ ನಡೆಸಿದೆ.

ನೋಟು ಅಮಾನ್ಯೀಕರಣ, ಜಿಎಸ್‌ಟಿಗಳಂಥ ಅವಿವೇಕದ ಆತುರದ ಕ್ರಮಗಳಿಂದ ಜನರು ರೋಸಿ ಹೋಗಿದ್ದಾರೆ. ಹೀಗೆ ರೋಸಿ ಹೋದ ಜನರು ಬರುವ ಲೋಕಸಭಾ ಚುನಾವಣೆಯಲ್ಲಿ ತಿರುಗಿ ಬೀಳಬಾರದೆಂದು ಜನರನ್ನು ಕೋಮು ಆಧಾರದಲ್ಲಿ ವಿಭಜಿಸುವ ಯತ್ನ ನಡೆದಿದೆ, ಜನರ ಮುಂದೆ ಹೇಳಿಕೊಳ್ಳಲು ಯಾವ ಸಾಧನೆಯೂ ಇಲ್ಲದ ಪ್ರಧಾನಿ ಮೋದಿಯವರು ಪ್ರತಿಪಕ್ಷಗಳ ಅದರಲ್ಲೂ ಕಾಂಗ್ರೆಸ್‌ನ ತೇಜೋವಧೆಗೆ ಇಳಿದಿದ್ದಾರೆ. ಸಿಬಿಐ ಎಂಬ ಅಸ್ತ್ರ ಬಳಸಿ ಪ್ರತಿಪಕ್ಷ ನಾಯಕರ ಬಾಯಿ ಮುಚ್ಚಿಸುವ ಯತ್ನ ನಡೆದಿದೆ. ಪ್ರಧಾನಿ ಸ್ಥಾನದಲ್ಲಿರುವವರಿಗೆ ಇದು ಶೋಭೆ ತರುವುದಿಲ್ಲ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮುಖ್ಯ. ಅದಕ್ಕೆ ಅಪಚಾರವಾಗುವಂತೆ ಯಾರೂ ನಡೆದುಕೊಳ್ಳಬಾರದು.

 ನಮ್ಮ ಪಕ್ಕದ ಪಾಕಿಸ್ತಾನದಲ್ಲಿ ಮಿಲಿಟರಿ ನೆರಳಲ್ಲಿ ಜನತಂತ್ರ ಉಸಿರಾಡುತ್ತಿದೆ. ಇನ್ನು ಕೆಲ ದೇಶಗಳಲ್ಲಿ ಸೇನಾ ಸರ್ವಾಧಿಕಾರಿಗಳು ವಿಜೃಂಭಿಸಿ ಆ ದೇಶಗಳೇ ಹಾಳಾಗಿವೆ.ಆದರೆ ಭಾರತದ ಜನತೆ ಪ್ರಜಾಪ್ರಭುತ್ವವನ್ನು, ಜಾತ್ಯತೀತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಅದಕ್ಕೆ ರಕ್ಷಾಕವಚವಾಗಿ ಸಂವಿಧಾನವಿದೆ. ಇದನ್ನು ಕಾಪಾಡಿದರೆ ದೇಶ ಸುರಕ್ಷಿತವಾಗಿ ಸುಭದ್ರವಾಗಿ ಉಳಿಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News