ರಕ್ತದಲ್ಲಿ ಸಕ್ಕರೆ ಮಟ್ಟವನ್ನು ತಿಳಿಯಲು ಗ್ಲುಕೋಮೀಟರ್ ಬಳಸುತ್ತಿದ್ದೀರಾ?

Update: 2018-11-27 11:02 GMT

ಮಧುಮೇಹಿಗಳು ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಿಳಿದುಕೊಳ್ಳಲು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ. ನಿಮ್ಮ ಆಹಾರ ಕ್ರಮ,ವ್ಯಾಯಾಮ ಮತು ಔಷಧಿಗಳಿಗೆ ಸಂಬಂಧಿಸಿದಂತೆ ರಕ್ತದಲ್ಲಿ ಸಕ್ಕರೆಯ ಮಟ್ಟವು ಯಾವ ಪ್ರಮಾಣದಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಲು ಅದು ನೆರವಾಗುತ್ತದೆ. ಮಧುಮೇಹಿಗಳು ಆಗಾಗ್ಗೆ ರಕ್ತಪರೀಕ್ಷೆಗಾಗಿ ಲ್ಯಾಬ್‌ಗಳಿಗೆ ತೆರಳುವುದು ಅನಾನುಕೂಲವೇ ಸೈ,ಹೀಗಾಗಿ ಮನೆಯಲ್ಲಿಯೇ ಗ್ಲುಕೋಮೀಟರ್ ಎಂಬ ಪುಟ್ಟ ಸಾಧನವನ್ನು ಬಳಸಿ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ಕಂಡುಕೊಳ್ಳುವುದು ಸರಳವಾದ ವಿಧಾನವಾಗಿದೆ.

  ಆದರೆ ಕೆಲವೊಮ್ಮೆ ಗ್ಲುಕೋಮೀಟರ್ ಬಳಸಿದಾಗ ಫಲಿತಾಂಶಗಳಲ್ಲಿ ಏರುಪೇರುಗಳು ಕಂಡುಬರುವುದೂ ಇದೆ. ಅಂತಹ ಸಂದರ್ಭಗಳಲ್ಲಿ ರೋಗಿಗಳು ಗ್ಲುಕೋಮೀಟರೇ ಸರಿಯಿಲ್ಲ ಎಂದು ಬೈದುಕೊಳ್ಳುವುದೂ ಇದೆ. ಆದರೆ ಇಲ್ಲಿ ತಪ್ಪು ಯಾವಾಗಲೂ ಗ್ಲುಕೋಮೀಟರ್‌ನದ್ದೇ ಆಗಿರಬೇಕು ಎಂದೇನಿಲ್ಲ,ವಿಶೇಷವಾಗಿ ನೀವು ಅದನ್ನು ಕ್ಯಾಲಿಬ್ರೇಟ್ ಮಾಡಿಸಿದ್ದರೆ ಮತ್ತು ನಿಗದಿತ ಮಾರ್ಗಸೂಚಿಗಳನ್ನು ಬಳಸುತ್ತಿದ್ದರೆ. ನೀವು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಅಳೆಯುತ್ತಿರುವಾಗ ಮಾಡುವ ಕೆಲವು ಸಣ್ಣತಪ್ಪುಗಳೂ ಫಲಿತಾಂಶಗಳಲ್ಲಿ ವ್ಯತ್ಯಯಗಳನ್ನುಂಟು ಮಾಡುತ್ತವೆ. ಅಂತಹ ಕೆಲವು ತಪ್ಪುಗಳು ಇಲ್ಲಿವೆ.....

►ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳದಿರುವುದು

ಗ್ಲುಕೋಮೀಟರ್ ಬಳಸುವ ಮುನ್ನ ನಿಮ್ಮ ಕೈಗಳು ಕೊಳಕಾಗಿರದಿದ್ದರೂ ಅವುಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು ಮುಖ್ಯವಾಗಿದೆ. ಹೀಗೆ ಮಾಡದಿದ್ದರೆ ಫಲಿತಾಂಶವು ಹೆಚ್ಚಿನ ಸಕ್ಕರೆ ಮಟ್ಟವನ್ನು ತೋರಿಸಬಹುದು. ಪರೀಕ್ಷೆಗೆ ಮುನ್ನ ನೀವು ಯಾವುದಾದರೂ ಹಣ್ಣನ್ನು ಮುಟ್ಟಿದ್ದರೂ ತಪ್ಪು ಫಲಿತಾಂಶ ಬರಬಹುದು. ಹೀಗಾಗಿ ಕೈಗಳನ್ನು ತೊಳೆದುಕೊಳ್ಳುವುದು ಅಗತ್ಯವಾಗಿದೆ. ನಿಮಗೆ ಕೈಗಳನ್ನು ತೊಳೆಯಲು ಸಾಧ್ಯವಿಲ್ಲದಿದ್ದರೆ ಮತ್ತು ನೀವು ಸಕ್ಕರೆ ಅಂಶವಿರುವ ಯಾವುದೇ ಹಣ್ಣನ್ನು ಮುಟ್ಟಿರದಿದ್ದರೆ ಮೊದಲ ರಕ್ತದ ಹನಿಯ ಪರೀಕ್ಷೆಯ ಬಳಿಕ ಮೀಟರ್‌ನ್ನು ಚೆನ್ನಾಗಿ ಒರೆಸಿ ಎರಡನೇ ಹನಿಯನ್ನು ಪರೀಕ್ಷೆಗೊಳಪಡಿಸಬಹುದು.

►ಊಟವಾದ ಕೂಡಲೇ ಪರೀಕ್ಷೆ ಮಾಡುವುದು

ಹೆಚ್ಚಿನವರು ಊಟವಾದ ಅರ್ಧ ಗಂಟೆಯಿಂದ ಒಂದು ಗಂಟೆಯ ಒಳಗೆ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಪರೀಕ್ಷಿಸುತ್ತಾರೆ. ಆದರೆ ಹೀಗೆ ಮಾಡುವದರಿಂದ ಸಕ್ಕರೆಯ ಮಟ್ಟ ಅಧಿಕವಾಗಿದೆ ಎಂಬ ಫಲಿತಾಂಶವನ್ನು ಗ್ಲುಕೋಮೀಟರ್ ತೋರಿಸುತ್ತದೆ. ಅತ್ಯುತ್ತಮ ಫಲಿತಾಂಶಕ್ಕಾಗಿ ಆಹಾರ ಸೇವನೆಯ ಬಳಿಕ ಕನಿಷ್ಠ ಎರಡು ಗಂಟೆಗಳಾದರೂ ಕಾಯಬೇಕು. ಅಲ್ಲದೆ ಊಟಕ್ಕೆ ಮೊದಲೂ ಸಕ್ಕರೆ ಪರೀಕ್ಷೆಯನ್ನು ಮಾಡಿಕೊಳ್ಳುವುದೂ ಒಳ್ಳೆಯದೇ.

►ಟೆಸ್ ಸ್ಟ್ರಿಪ್ ಮತ್ತು ಲಾನ್ಸೆಟ್‌ಗಳ ತಪ್ಪು ಬಳಕೆ

 ಸರಿಯಾದ ಫಲಿತಾಂಶ ಪಡೆಯಲು ಮತ್ತು ಹೆಚ್ಚು ನೋವಿನ ಅನುಭವವಾಗದಿರಲು ಸರಿಯಾದ ಲಾನ್ಸೆಟ್ ಅಂದರೆ ಸೂಜಿಯ ಮೂಲಕ ರಕ್ತದ ಹನಿಯನ್ನು ಹೊರತೆಗೆಯುವ ಸಾಧನ ಮತ್ತು ಟೆಸ್ಟಿಂಗ್ ಸ್ಟ್ರಿಪ್ ಅಥವಾ ಪರೀಕ್ಷಾ ಪಟ್ಟಿಗಳನ್ನು ಬಳಸುವುದು ಮುಖ್ಯವಾಗುತ್ತದೆ. ಅವಧಿ ಮುಗಿದ ಅಥವಾ ಸರಿಯಾಗಿ ದಾಸ್ತಾನಿರಿಸದ ಪಟ್ಟಿಗಳನ್ನು ಬಲಸಿದರೆ ಸರಿಯಾದ ಫಲಿತಾಂಶಗಳು ದೊರೆಯುವುದಿಲ್ಲ. ಅಲ್ಲದೆ ಲಾನ್ಸೆಟ್‌ಗಳನ್ನು ಮರುಬಳಕೆ ಮಾಡಿದರೂ ಫಲಿತಾಂಶವು ಬದಲಾಗುತ್ತದೆ. ಹೀಗಾಗಿ ಪ್ರತಿಸಲ ಪರೀಕ್ಷೆ ಮಾಡಿಕೊಳ್ಳುವಾಗ ಹೊಸ ಲಾನ್ಸೆಟ್‌ನ್ನೇ ಬಳಸಬೇಕು. ಪರೀಕ್ಷಾ ಪಟ್ಟಿಗಳನ್ನು ನೇರ ಬಿಸಿ ಅಥವಾ ತೇವದ ಸ್ಪರ್ಶವಾಗದಂತೆ ಮುಚ್ಚಿದ ಪೆಟ್ಟಿಗೆಯಲ್ಲಿಡಬೇಕು. ಈ ಪಟ್ಟಿಗಳನ್ನು ಬಳಸುವಾಗ ಅವುಗಳ ಎಕ್ಸಪೈರಿ ದಿನಾಂಕವನ್ನು ಪರಿಶೀಲಿಸಿ.

►ರಕ್ತವನ್ನು ಪಡೆಯಲು ಬೆರಳನ್ನು ಹಿಂಡುವುದು

  ಕೆಲವು ಪ್ರಕರಣಗಳಲ್ಲಿ ತಣ್ಣನೆಯ ಕೈಗಳನ್ನು ಅಥವಾ ಕಳಪೆ ರಕ್ತಪರಿಚಲನೆ ಹೊಂದಿರುವವರು ಪರೀಕ್ಷೆಗೆ ಸಾಕಷ್ಟು ರಕ್ತವನ್ನು ಪಡೆಯಲು ಬೆರಳನ್ನು ಒತ್ತಿ ಹಿಡಿಯುತ್ತಾರೆ. ಆದರೆ ಹೀಗೆ ಮಾಡುವುದರಿಂದ ಫಲಿತಾಂಶ ಸರಿಯಿರುವುದಿಲ್ಲ. ಬೆರಳನ್ನು ಒತ್ತುವುದರಿಂದ ರಕ್ತದ ಬದಲು ಇಂಟರ್‌ಸ್ಟಿಷಿಯಲ್ ಫ್ಲುಯಿಡ್ ಎಂಬ ದ್ರವವು ಹೊರಬರುತ್ತದೆ ಮತ್ತು ಇದು ಫಲಿತಾಂಶದಲ್ಲಿ ವ್ಯತ್ಯಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಪರೀಕ್ಷೆಗೆ ಮುನ್ನ ಕೈಗಳನ್ನು ಕೊಂಚ ಬೆಚ್ಚಗೆ ಮಾಡಿಕೊಂಡರೆ ಅವಾ ಪರಸ್ಪರ ಉಜ್ಜುವುದರಿಂದ ರಕ್ತವು ಸುಲಭವಾಗಿ ಹೊರಗೆ ಬರುತ್ತದೆ.

►ಸಾಕಷ್ಟು ನೀರು ಕುಡಿಯದಿರುವುದು

 ನಿರ್ಜಲೀಕರಣವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಬದಲಾವಣೆಗಳಾಗದಂತೆ ಗ್ಲುಕೋಮೀಟರ್‌ನಿಂದ ರಕ್ತದ ಪರೀಕ್ಷೆಯನ್ನು ಮಾಡಿಕೊಳ್ಳುವವರು ಆಗಾಗ್ಗೆ ಸಾಕಷ್ಟು ನೀರು ಕುಡಿಯುತ್ತಿರುವುದು ಮುಖ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News