×
Ad

ರಶ್ಯ ವಿರುದ್ಧ ಪೂರ್ಣ ಪ್ರಮಾಣದ ಯುದ್ಧದ ಅಪಾಯ: ಯುಕ್ರೇನ್ ಅಧ್ಯಕ್ಷ ಎಚ್ಚರಿಕೆ

Update: 2018-11-28 23:21 IST

ಕೀವ್ (ಯುಕ್ರೇನ್), ನ. 28: ರಶ್ಯ ಮತ್ತು ಯುಕ್ರೇನ್‌ಗಳ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವಂತೆಯೇ, ಪೂರ್ಣ ಪ್ರಮಾಣದ ಯುದ್ಧದ ಬೆದರಿಕೆ ಎದುರಾಗಿದೆ ಎಂಬ ಎಚ್ಚರಿಕೆಯನ್ನು ಯುಕ್ರೇನ್ ಅಧ್ಯಕ್ಷ ಪೆಟ್ರೊ ಪೊರೊಶೆಂಕೊ ಮಂಗಳವಾರ ನೀಡಿದ್ದಾರೆ.

ಗಡಿಯಲ್ಲಿ ರಶ್ಯವು ತನ್ನ ಸೇನಾ ಉಪಸ್ಥಿತಿಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ.

ಯುಕ್ರೇನ್ ಮತ್ತು ರಶ್ಯ ಸೇನೆಗಳ ನಡುವಿನ ಉದ್ವಿಗ್ನತೆ ಈಗಾಗಲೇ ಗರಿಷ್ಠ ಮಟ್ಟದಲ್ಲಿರುವಾಗ, ಸಮುದ್ರದಲ್ಲಿನ ಸಂಘರ್ಷವು ತೀವ್ರ ಬೆಳವಣಿಗೆಗಳಿಗೆ ಕಾರಣವಾಗಬಹುದು ಎಂದು ಪೊರೊಶೆಂಕೊ ಅಭಿಪ್ರಾಯಪಟ್ಟಿದ್ದಾರೆ.

 ‘‘ಇದು ತಮಾಷೆ ಹಾಗೂ ಕ್ರೀಡೆ ಎಂಬುದಾಗಿ ಯಾರಾದರೂ ಭಾವಿಸುವುದನ್ನು ನಾನು ಇಷ್ಟಪಡುವುದಿಲ್ಲ. ರಶ್ಯದೊಂದಿಗೆ ಪೂರ್ಣ ಪ್ರಮಾಣದ ಯುದ್ಧದ ಬೆದರಿಕೆಯನ್ನು ಯುಕ್ರೇನ್ ಎದುರಿಸುತ್ತಿದೆ’’ ಎಂದು ರಾಷ್ಟ್ರೀಯ ಟೆಲಿವಿಶನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.

ರವಿವಾರ ಕ್ರೈಮಿಯ ರಾಜ್ಯದ ಸಮುದ್ರದಲ್ಲಿ ರಶ್ಯದ ನೌಕಾ ಪಡೆಯು ಯುಕ್ರೇನ್‌ನ ಮೂರು ನೌಕಾಪಡೆ ಹಡಗುಗಳನ್ನು ವಶಪಡಿಸಿಕೊಂಡಿರುವುದನ್ನು ಹಾಗೂ 24 ನಾವಿಕರನ್ನು ಸೆರೆಹಿಡಿರುವುದನ್ನು ಸ್ಮರಿಸಬಹುದಾಗಿದೆ.

ಕ್ರೈಮಿಯ ಪ್ರದೇಶವು ಮೊದಲು ಯುಕ್ರೇನ್‌ಗೆ ಸೇರಿತ್ತು. ಅದನ್ನು 2014ರ ಮಾರ್ಚ್‌ನಲ್ಲಿ ರಶ್ಯವು ಜನಮತಗಣನೆಯ ಮೂಲಕ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

ಯುಕ್ರೇನ್ ನಾವಿಕರಿಗೆ 2 ತಿಂಗಳ ಬಂಧನ

ಕ್ರೈಮಿಯದ ಪ್ರಮುಖ ನಗರ ಸಿಮ್‌ಫೆರೊಪೊಲ್‌ನ ನ್ಯಾಯಾಲಯವೊಂದು ಮಂಗಳವಾರ ಯುಕ್ರೇನ್‌ನ 12 ನಾವಿಕರನ್ನು 2 ತಿಂಗಳ ವಿಚಾರಣಾಪೂರ್ವ ಬಂಧನಕ್ಕೆ ಕಳುಹಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ನಾವಿಕರನ್ನೂ ಬಂಧಿಸಲಾಗಿದೆ. ಉಳಿದವರನ್ನು ಬುಧವಾರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News