ಭಾರತದೊಂದಿಗೆ ನಾಗರಿಕ ಸಂಬಂಧ ಬೆಳೆಸಲು ಸರಕಾರ, ಸೇನೆ ಉತ್ಸುಕ: ಇಮ್ರಾನ್ ಖಾನ್

Update: 2018-11-28 18:00 GMT

ಲಾಹೋರ್, ನ. 28: ಭಾರತದೊಂದಿಗೆ ‘ನಾಗರಿಕ ಸಂಬಂಧ’ವನ್ನು ಬೆಳೆಸಲು ನನ್ನ ಸರಕಾರ ಮತ್ತು ಸೇನೆ ಎರಡೂ ಉತ್ಸುಕವಾಗಿವೆ ಹಾಗೂ ಕಾಶ್ಮೀರ ವಿವಾದವನ್ನು ಮಾತುಕತೆ ಮತ್ತು ಮಾನವತೆಗೆ ನೀಡುವ ಗೌರವದ ಮೂಲಕ ಮಾತ್ರ ಪರಿಹರಿಸಬಹುದಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ಹೇಳಿದ್ದಾರೆ.

ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ದೇವ್‌ರ ಅಂತಿಮ ವಿಶ್ರಾಂತಿ ಸ್ಥಳವಾದ ಪಾಕಿಸ್ತಾನದ ಕರ್ತಾರ್‌ ಪುರವನ್ನು ಭಾರತದ ಪಂಜಾಬ್ ರಾಜ್ಯದಲ್ಲಿರುವ ಗುರುದಾಸ್‌ಪುರ ಜಿಲ್ಲೆಯಲ್ಲಿರುವ ದೇರಾ ಬಾಬಾ ನಾನಕ್ ದೇವಾಲಯಕ್ಕೆ ಸಂಪರ್ಕಿಸುವ ಕರ್ತಾರ್‌ಪುರ ಕಾರಿಡಾರ್‌ನ ಪಾಕಿಸ್ತಾನದ ಭಾಗಕ್ಕೆ ಅಡಿಗಲ್ಲು ಹಾಕಿ ಅವರು ಮಾತನಾಡುತ್ತಿದ್ದರು.

‘‘ನಾನು ಭಾರತಕ್ಕೆ ಹೋಗುವಾಗಲೆಲ್ಲ, ಪಾಕಿಸ್ತಾನಿ ಸೇನೆ ಶಾಂತಿಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಜನರು ನನಗೆ ಹೇಳುತ್ತಿದ್ದರು... ಪ್ರಧಾನಿಯಾಗಿರುವ ನಾನು, ನಮ್ಮ ಪಕ್ಷ, ಇತರ ರಾಜಕೀಯ ಪಕ್ಷಗಳು, ನಮ್ಮ ಸೇನೆ- ಎಲ್ಲರೂ ಭಾರತದ ಜೊತೆಗೆ ನಾಗರಿಕ ಸಂಬಂಧವನ್ನು ಬಯಸುತ್ತೇವೆ ಎನ್ನುವುದನ್ನು ಹೇಳಲು ನಾನು ಇಷ್ಟಪಡುತ್ತೇನೆ’’ ಎಂದು ಪಾಕ್ ಪ್ರಧಾನಿ ಹೇಳಿದರು.

ಎರಡು ದೇಶಗಳ ನಡುವೆ ಹಲವಾರು ವರ್ಷಗಳಿಂದ ವೈರತ್ವವಿದೆಯಾದರೂ, ಸಂಬಂಧಪಟ್ಟ ವ್ಯಕ್ತಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಶಾಂತಿ ಸ್ಥಾಪನೆಯಾಗಲು ಸಾಧ್ಯವಿದೆ ಎಂದರು.

‘‘70 ವರ್ಷಗಳ ಕಾಲ ನಾವು ಜಗಳವಾಡುತ್ತಿದ್ದೇವೆ. ಇದಕ್ಕೆ ಕಾರಣ ಭಾರತ ಎಂಬುದಾಗಿ ಪಾಕಿಸ್ತಾನ ಹೇಳುತ್ತಿದೆ ಹಾಗೂ ಭಾರತ ಪಾಕಿಸ್ತಾನದತ್ತ ಬೆಟ್ಟು ಮಾಡುತ್ತಿದೆ. ಎರಡು ಕಡೆಗಳಿಂದಲೂ ತಪ್ಪುಗಳು ನಡೆದಿವೆ. ಆದರೆ, ಎಷ್ಟು ಸಮಯ ಹೀಗೆಯೇ ನಾವು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಾ ಇರಲು ಸಾಧ್ಯ? ಒಂದು ಹೆಜ್ಜೆ ಮುಂದಿಡಲು ನಾವು ಪ್ರಯತ್ನಿಸಿದಾಗಲೆಲ್ಲ, ನಾವು ಎರಡು ಹೆಜ್ಜೆ ಹಿಂದೆ ಇರಿಸುವಂತೆ ಮಾಡುವ ಏನಾದರೂ ಘಟನೆ ಸಂಭವಿಸುತ್ತದೆ’’ ಎಂದು ಇಮ್ರಾನ್ ಹೇಳಿದರು.

ಈ ಕಾರಿಡಾರ್‌ನಲ್ಲಿ ಭರವಸೆ ಇದೆ: ಸಿಧು

‘‘ಈ ಕಾರಿಡಾರ್ ಎರಡು ದೇಶಗಳನ್ನು ಸನಿಹಕ್ಕೆ ತರುವ ಭರವಸೆಯನ್ನು ಹೊಂದಿದೆ’’ ಎಂದು ಪಂಜಾಬ್ ಸಚಿವ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ಕರ್ತಾರ್‌ಪುರ ಕಾರಿಡಾರ್‌ನ ಪಾಕಿಸ್ತಾನ ಭಾಗಕ್ಕೆ ಅಡಿಪಾಯ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘‘ರಕ್ತಪಾತ ನಿಲ್ಲಬೇಕು, ನೋವು ಕೊನೆಗೊಳ್ಳಬೇಕು, ಶಾಂತಿ ಮರಳಬೇಕು... ನಾವು ಇವುಗಳಿಗೆ ದೊಡ್ಡ ಬೆಲೆಯನ್ನು ತೆತ್ತಿದ್ದೇವೆ. ಈ ಬೆಂಕಿಯನ್ನು ಯಾರಾದರೂ ಆರಿಸಬೇಕು. ಈ ಕಾರಿಡಾರ್ ಸಂಪೂರ್ಣ ಭರವಸೆಯನ್ನು ಹೊಂದಿದೆ. ಇದು ಎರಡು ದೇಶಗಳನ್ನು ಹತ್ತಿರಕ್ಕೆ ತರುತ್ತದೆ’’ ಎಂದರು.

ಭಾರತ-ಪಾಕ್ ಯುದ್ಧವನ್ನು ಮೂರ್ಖರು ಮಾತ್ರ ನಿರೀಕ್ಷಿಸಲು ಸಾಧ್ಯ: ಸಿಧು

 ಭಾರತ ಮತ್ತು ಪಾಕಿಸ್ತಾನಗಳಂಥ ಪರಮಾಣು ಶಕ್ತ ದೇಶಗಳ ನಡುವೆ ಯುದ್ಧವನ್ನು ಮೂರ್ಖರು ಮಾತ್ರ ನಿರೀಕ್ಷಿಸಲು ಸಾಧ್ಯ ಎಂದು ನವಜೋತ್ ಸಿಂಗ್ ಸಿಧು ಹೇಳಿದರು.

‘‘ಪರಮಾಣು ಯುದ್ಧದಲ್ಲಿ ಪ್ರತಿಯೊಬ್ಬರೂ ಸೋಲುತ್ತಾರೆ. ದ್ವೇಷದಿಂದ ನಾವು ಏನನ್ನೂ ಸಾಧಿಸುವುದಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News