ಮೊದಲ ಹಂತದಲ್ಲಿಯೇ ಪತ್ತೆ ಹಚ್ಚಿದರೆ ಕ್ಯಾನ್ಸರ್ ಖಂಡಿತ ಮಾರಣಾಂತಿಕವಲ್ಲ

Update: 2018-11-30 10:58 GMT

ಕ್ಯಾನ್ಸರ್ ಚಿಕಿತ್ಸೆಗೆ ಸುದೀರ್ಘ ಸಮಯ,ಪ್ರಯತ್ನದ ಜೊತೆಗೆ ಬಹಳಷ್ಟು ಹಣವೂ ಬೇಕಾಗುತ್ತದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದರೆ ಆರಂಭದ ಹಂತದಲ್ಲಿಯೇ ಕ್ಯಾನ್ಸರ್‌ನ್ನು ಪತ್ತೆ ಹಚ್ಚಿದರೆ ರೋಗದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆರಂಭದ ಹಂತದಲ್ಲಿ ಕ್ಯಾನ್ಸರ್‌ನ್ನು ಪತ್ತೆ ಹಚ್ಚಲು ನಿಯಮಿತವಾಗಿ ತಪಾಸಣೆಗಳು ಮತ್ತು ಸ್ಕ್ರೀನಿಂಗ್ ಟೆಸ್ಟ್‌ಗಳನ್ನು ಮಾಡಿಸಿಕೊಳ್ಳುವುದು ಏಕೆ ಮುಖ್ಯ ಎನ್ನುವುದಕ್ಕೆ ಕಾರಣಗಳಿಲ್ಲಿವೆ......

►ಕರುಳಿನ ಕ್ಯಾನ್ಸರ್: ಕರುಳಿನ ಕ್ಯಾನ್ಸರ್‌ನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿದರೆ ಅದು ರೋಗಿಯು ಐದು ವರ್ಷಕ್ಕೂ ಹೆಚ್ಚಿನ ಕಾಲ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

►ಸ್ತನ ಕ್ಯಾನ್ಸರ್ ಮತ್ತು ಅಂಡಾಶಯ ಕ್ಯಾನ್ಸರ್: ಆರಂಭದ ಹಂತದಲ್ಲಿಯೇ ಸ್ತನ ಕ್ಯಾನ್ಸರ್ ಅಥವಾ ಅಂಡಾಶಯ ಕ್ಯಾನ್ಸರ್ ಪತ್ತೆಯಾದ ಮಹಿಳೆಯರ ಪೈಕಿ ಶೇ.90ಕ್ಕೂ ಅಧಿಕ ರೋಗಿಗಳು ನಂತರದ ಹಂತಗಳಲ್ಲಿ ಈ ರೋಗಗಳು ಪತ್ತೆಯಾದವರಿಗೆ ಹೋಲಿಸಿದರೆ ಕನಿಷ್ಠ ಐದು ವರ್ಷ ಹೆಚ್ಚು ಬದುಕುತ್ತಾರೆ.

►ಶ್ವಾಸಕೋಶ ಕ್ಯಾನ್ಸರ್: ಆರಂಭದ ಹಂತದಲ್ಲಿಯೇ ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾದ ರೋಗಿಗಳ ಪೈಕಿ ಹೆಚ್ಚಿನವರು ನಂತರದ ಹಂತಗಳಲ್ಲಿ ರೋಗ ಪತ್ತೆಯಾದವರಿಗಿಂತ ಒಂದು ವರ್ಷ ಹೆಚ್ಚಿಗೆ ಬದುಕುತ್ತಾರೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಆರಂಭದ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಹಚ್ಚುವುದರಿಂದ ರೋಗಿಗಳು ಬದುಕುಳಿಯುವ ಸಾಧ್ಯತೆಗಳು ಹೆಚ್ಚುವುದು ಮಾತ್ರವಲ್ಲ,ಅದು ರೋಗಿಗೆ ಸೂಕ್ತವಾದ ಅತ್ಯುತ್ತಮ ಚಿಕಿತ್ಸೆಯನ್ನು ನಿರ್ಧರಿಸಲು ಸಾಕಷ್ಟು ಸಮಯಾವಕಾಶವನ್ನೂ ನೀಡುತ್ತದೆ.

ಕ್ಯಾನ್ಸರ್ ತಡೆಗೆ ಮುನ್ನೆಚ್ಚರಿಕೆ ಕ್ರಮಗಳು

ಧೂಮ್ರಪಾನವನ್ನು ಮತ್ತು ಮದ್ಯಪಾನದ ಚಟಗಳನ್ನು ಹೊಂದಿದವರು ಅವುಗಳನ್ನು ತ್ಯಜಿಸಿದರೆ ಶ್ವಾಸಕೋಶ,ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಅಪಾಯಗಳಿಂದ ದೂರವಿರಬಹುದಾಗಿದೆ.

ಸ್ತನ,ಪ್ರಾಸ್ಟೇಟ್ ಗ್ರಂಥಿ ಮತ್ತು ದೊಡ್ಡಕರುಳಿನ ಕ್ಯಾನ್ಸರ್‌ಗಳನ್ನು ತಡೆಯಲು ಅತಿಯಾದ ಕೊಬ್ಬು ಇರುವ ಆಹಾರಗಳನ್ನು ವರ್ಜಿಸಿ ಇಡಿಯ ಧಾನ್ಯಗಳು, ಹಣ್ಣುಗಳು ಮತ್ತು ತಾಜಾ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು.

ನಿಯಮಿತವಾದ ವ್ಯಾಯಾಮವು ನಮ್ಮ ಶರೀರವನ್ನು ಆರೋಗ್ಯಯುತವಾಗಿರಿಸು ತ್ತದೆ.

ಮನೆಯಲ್ಲಿ ಬಳಸುವ ನೆಲ ಒರೆಸುವ ರಾಸಾಯನಿಕಗಳು,ಸ್ವಚ್ಛಗೊಳಿಸಲು ಬಳಸುವ ದ್ರವಗಳು,ಬಣ್ಣಗಳಿಗೆ ಬಳಸುವ ಥಿನ್ನರ್‌ಗಳು,ಕೀಟನಾಶಕಗಳು,ಶಿಲೀಂಧ್ರ ನಾಶಕಗಳು ಮತ್ತು ಇತರ ರಾಸಾಯನಿಕಗಳಿಗೆ ತೆರೆದುಕೊಳ್ಳದಂತೆ ಜಾಗ್ರತೆ ವಹಿಸಿದರೆ ಶ್ವಾಸಕೋಶ ಕ್ಯಾನ್ಸರ್‌ನ ಅಪಾಯದಿಂದ ಪಾರಾಗಬಹುದು.

ಸೂರ್ಯನ ಬಿಸಲಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ನಿವಾರಿಸುವುದರಿಂದ ಚರ್ಮದ ಕ್ಯಾನ್ಸರ್‌ನ ಅಪಾಯ ದೂರವಾಗುತ್ತದೆ.

ಪೂರಕ ಮುಂಜಾಗ್ರತೆ ಕ್ರಮಗಳಾಗಿ ಪಾಪ್ ಸ್ಮಿಯರ್ಸ್,ಮ್ಯಾಮೊಗ್ರಾಂ,ಪ್ರಾಸ್ಟೇಟ್ ಸ್ಪೆಸಿಫಿಕ್ ಆ್ಯಂಟಿಜೆನ್(ಪಿಎಸ್‌ಎ) ಮತ್ತು ಡಿಜಿಟಲ್ ರೆಕ್ಟಲ್ ಎಕ್ಸಾಮಿನೇಷನ್ (ಡಿಆರ್‌ಇ)ಗಳಂತಹ ಸ್ಕ್ರೀನಿಂಗ್ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುತ್ತಿರಬೇಕು.

ಶೀಘ್ರ ರೋಗ ಪತ್ತೆಗೆ ಕ್ರಮಗಳು

ಪ್ರತಿಯೋರ್ವ ವ್ಯಕ್ತಿಯು ತಿಂಗಳಿಗೊಮ್ಮೆ ಶರೀರದಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ ಎನ್ನುವುದನ್ನು ಸ್ವಯಂ ಪರೀಕ್ಷಿಸಿಕೊಳ್ಳುತ್ತಿರಬೇಕು. ಯಾವುದೇ ಅನಾರೋಗ್ಯದಿಂದಾಗಿ ವೈದ್ಯರನ್ನು ಭೇಟಿಯಾದ ಸಂದರ್ಭ ಕ್ಯಾನ್ಸರ್ ಪರೀಕ್ಷೆಯನ್ನೂ ಮಾಡಿಸಿಕೊಳ್ಳಬೇಕು. ವರ್ಷಕ್ಕೊಮ್ಮೆಯಾದರೂ ಕ್ಯಾನ್ಸರ್ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಶಂಕಿತ ಕ್ಯಾನ್ಸರ ಪ್ರಕರಣಗಳ ಸಂದರ್ಭಗಳಲ್ಲಿ ತಕ್ಷಣವೇ ತಪಾಸಣೆಗೊಳಗಾಗಿ ಅದು ಕ್ಯಾನ್ಸರ್ ಹೌದೇ ಅಲ್ಲವೇ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News