‘ಕುದುರೆ ಮೊಟ್ಟೆ’ಯ ಕಾಮರೂಪಿ

Update: 2018-12-01 18:48 GMT

ಕತೆಗಾರ ‘ಕಾಮರೂಪಿ’ ಪತ್ರಕರ್ತ ಪ್ರಭಾಕರನಂತೆ ಪುಂಖಾನುಪುಂಖವಾಗಿ ಬರೆದವರಲ್ಲ. ಅವರ ಪತ್ರಿಕಾ ಬರವಣಿಗೆಗೆ ಹೋಲಿಸಿದರೆ ಸೃಜನಶೀಲ ಬರವಣಿಗೆ ಗಾತ್ರದಲ್ಲಿ ಕಡಿಮೆಯಾದರೂ ಗುಣದಲ್ಲಿ ಆಢ್ಯವಾದದ್ದು.ವೃತ್ತಿಯ ಒತ್ತಡವೂ ಅವರ ಪತ್ರಿಕಾ ಲೇಖನಗಳ ಬಾಹುಳ್ಯಕ್ಕೆ ಕಾರಣವಿದ್ದೀತು. ಈಶಾನ್ಯ ಭಾರತದ ಸಮಸ್ಯೆಗಳ ಬಗ್ಗೆ, ದಕ್ಷಿಣ ಆಫ್ರಿಕಾದ ಸಾಮಾಜಿಕ ಬದುಕು ಮತ್ತು ರಾಜಕೀಯ ಏಳುಬೀಳುಗಳ ಬಗ್ಗೆ ವಿಶೇಷವಾಗಿ, ವ್ಯಾಪಕ ವಿಸ್ತಾರದಲ್ಲಿ ಬರೆದಿರುವ ಅವರ ಲೇಖನಗಳು ಮಾನವಿಕ ಸಾಹಿತ್ಯದ ಮಹತ್ವ ಪಡೆದಿವೆ.


ಕನ್ನಡದಲ್ಲಿ, ಸೃಜನಶೀಲ ಸಾಹಿತ್ಯ ರಚನೆ ಮತ್ತು ಪತ್ರಿಕೋದ್ಯಮ ಎರಡರಲ್ಲೂ ಏಕಕಾಲದಲ್ಲಿ ತೊಡಿಗಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಸ್ವಾತಂತ್ರ್ಯಪೂರ್ವದಿಂದಲೇ ಇಂಥವರ ಯಾದಿ ಶುರುವಾಗುತ್ತದೆ. ಆದರೆ ಕನ್ನಡದಲ್ಲಿ ಸೃಜನಶೀಲ ಸಾಹಿತ್ಯ ರಚನೆ ಮಾಡುತ್ತಾ ಇಂಗ್ಲಿಷ್ ಮಾಧ್ಯಮದ ಪತ್ರಿಕಾ ವ್ಯವಸಾಯದಲ್ಲಿ ತೊಡಿಗಿಕೂಂಡವರು ವಿರಳ. ಇಂಥ ವಿರಳರಲ್ಲಿ ಅತಿಮುಖ್ಯರಾದವರು ಎಂ. ಎಸ್. ಪ್ರಭಾಕರ್.

 ಸೃಜನಶೀಲತೆ ಮತ್ತು ಘನವಾದ ವಿದ್ವತ್ತು ಇವರೆಡೂ ಮೇಳೈಸಿರುವ ಪತ್ರಕರ್ತರು ಭಾರತೀಯ ಪತ್ರಿಕೋದ್ಯಮದಲ್ಲಿ ವಿರಳ ಎನ್ನುವ ಮಾತೊಂದಿದೆ. ಇಂಥ ವಿರಳರಲ್ಲಿ ಒಬ್ಬರು ಎನ್ನುವುದು ಪ್ರಭಾಕರ್ ಅವರ ಇನ್ನೊಂದು ಹೆಚ್ಚುಗಾರಿಕೆ.ಕಾರ್ಯನಿರತ ಪತ್ರಕರ್ತರಾಗಿ ಅವರು, ಪ್ರಭಾಕರ್. ಆದರೆ ಸೃಜನಶೀಲ ಲೇಖಕರಾಗಿ ‘ಕಾಮರೂಪಿ’. ‘ಕಾಮರೂಪಿ’ ಪ್ರಭಾಕರ್ ಅವರ ಕಾವ್ಯನಾಮ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ‘ಕಾಮರೂಪಿ’ ಅವರು ಕರ್ನಾಟಕ ಸರಕಾರ ನೀಡುವ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಾತ್ರರಿಗೆ ಸಂದಿರುವ ಗೌರವವಿದು. ಬಹುಭಾಷಿಕತೆ ಪ್ರಭಾಕರ್ ಅವರ ವ್ಯಕ್ತಿತ್ವದ ಮುಖ್ಯ ಚಹರೆಗಳಲ್ಲಿ ಒಂದು. ಅವರು ಹುಟ್ಟಿದ್ದು(1936) ಆಂಧ್ರದ ಗಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆಯಲ್ಲಿ. ಹೀಗಾಗಿ ಅವರಿಗೆ ಮಾತೃಭಾಷೆ ಕನ್ನಡದೊಂದಿಗೇ ತೆಲುಗು ಸಹ ತೊಟ್ಟಿಲು ಭಾಷೆಯೇ ಸರಿ. ನಂತರ ಕಲಿತದ್ದು ಇಂಗ್ಲಿಷ್. ಭಾಷಾವಂಶವಾಹಿಯಾಗಿ ಸಂಸ್ಕೃತವೂ ಸೇರಿರಬೇಕು. ಗಡಿನಾಡ ಕನ್ನಡಿಗರಾದ ಪ್ರಭಾಕರ್ ಅವರ ಪೂರ್ವಿಕರ ಊರು ಮೋಟನಹಳ್ಳಿ. ಅವರು ಮೋಟನಹಳ್ಳಿ ಸೂರಪ್ಪ ಪ್ರಭಾಕರ್. ಉನ್ನತ ವ್ಯಾಸಂಗವೆಲ್ಲ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ.

ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೈಗೊಂಡ ವೃತ್ತಿ ಮಾಸ್ತರಿಕೆ. ಸ್ವಲ್ಪಕಾಲ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದ ಪ್ರಭಾಕರ ನಂತರ ಕಾಮರೂಪಕ್ಕೆ ಸ್ಥಳಾಂತರಗೊಂಡರು. ಪುರಾಣ ಕಾಲದ ಕಾಮರೂಪ ಇಂದಿನ ಅಸ್ಸಾಂ ರಾಜ್ಯ. (ಬಂಗಾಳದ ಪೂರ್ವ ಮತ್ತು ಅಸ್ಸಾಮಿನ ಪಶ್ಚಿಮದ ಪ್ರದೇಶವೇ ಕಾಮರೂಪ. ಈಗ ಇದನ್ನು ಅಸ್ಸಾಂ ಎಂದು ಕರೆಯಲಾಗುತ್ತದೆ.) ಅಸ್ಸಾಮಿನ ಗೌಹಾಟಿ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನೇಮಕಗೊಂಡ ಪ್ರಭಾಕರ್ ಅಧ್ಯಾಪನ ವೃತ್ತಿಯಿಂದ ಪತ್ರಿಕಾ ವ್ಯವಸಾಯಕ್ಕೆ ಹೊರಳಿದ್ದೂ ಒಂದು ಆಕಸ್ಮಿಕವೇ. 1975-ತುರ್ತುಪರಿಸ್ಥಿತಿಯಿಂದಾಗಿ ದೇಶದ ಬಾಯಿಕಟ್ಟಿಹೋಗಿತ್ತು. ಆ ವೇಳೆಯಲ್ಲಿ ಗೌಹಾಟಿ ವಿಶ್ವವಿದ್ಯಾನಿಲಯ, ಸರಕಾರದ ವಿರುದ್ಧ ಬುಡಮೇಲು ಕತ್ಯಗಳಲ್ಲಿ ತೊಡಗಿರುವ ತೀವ್ರಗಾಮಿಗಳ ಚಟುವಟಿಕಾ ಕೇಂದ್ರವೆಂಬ ಗುಮಾನಿಯಿಂದಾಗಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಬಂಧನ ತಪ್ಪಿಸಿಕೊಳ್ಳಲು ಪ್ರಭಾಕರ್ ಗೌಹಾಟಿಯಿಂದ ಮುಂಬೈಗೆ ಪರಾರಿಯಾದರು. ಅಲ್ಲಿ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳ ಅಧ್ಯಯನಕ್ಕೆ ಮೀಸಲಾದ ‘ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ ಸೇರಿ ಪತ್ರಿಕೋದ್ಯಮವನ್ನು ಪ್ರವೇಶಿಸಿದರು.

ಮುಂದಿನದೆಲ್ಲ ಪತ್ರಕರ್ತರಾಗಿ ಪ್ರಭಾಕರ್ ಅವರದು ಯಶೋಗಾಥೆಯೇ. ಸುಮಾರು ಏಳು ವರ್ಷಗಳ ಕಾಲ ‘ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ಕೆಲಸಮಾಡಿ ಸಮಾಜಮುಖಿಯಾದ ಧ್ಯೇಯನಿಷ್ಠ ಪತ್ರಿಕಾ ವ್ಯವಸಾಯದಲ್ಲಿ ಪಳಗಿದ ಪ್ರಭಾಕರ್ 1983ರಲ್ಲಿ ‘ದಿ ಹಿಂದೂ’ ಪತ್ರಿಕೆ ಸೇರಿದರು. ನೇಮಕದ ಶುರುವಿಗೇ ಅವರು ಅಸ್ಸಾಮಿನಲ್ಲಿ ವಿಶೇಷ ಬಾತ್ಮೀದಾರರಾದರು. ಅಸ್ಸಾಮಿನ ರಾಜಕಾರಣ, ಅಭಿವೃದ್ಧಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾನವೀಯ ದೃಷ್ಟಿಕೋನದ ವಿಶೇಷ ಮುತುವರ್ಜಿಯಿಂದ ವರದಿ ಮಾಡಿದರು. ಪತ್ರಿಕೆ ಅವರನ್ನು ಅಸ್ಸಾಮಿನಿಂದ ದಕ್ಷಿಣ ಆಫ್ರಿಕಾಕ್ಕೆ ವರ್ಗಮಾಡಿತು. ಅದು, ದಕ್ಷಿಣ ಆಫ್ರಿಕಾ ರಾಜಕೀಯ ತುಮುಲಗಳನ್ನು ಎದುರಿಸುತ್ತಿದ್ದ ಸಂದರ್ಭ. ಸುಮಾರು ಒಂದು ದಶಕದ ಕಾಲ ಪ್ರಭಾಕರ್ ದಕ್ಷಿಣ ಆಫ್ರಿಕಾದ ತಳಮಳದ ವಿದ್ಯಮಾನಗಳನ್ನು, ಅಲ್ಲಿನ ಜನಜೀವನದ ಏರಿಳಿತಗಳನ್ನು ಕುರಿತು ಐತಿಹಾಸಿಕ ದಾಖಲೆಯ ಮಹತ್ವದ ಲೇಖನಗಳನ್ನು ಬರೆದರು. ಮೋಟನಹಳ್ಳಿ ಸೂರಪ್ಪಪ್ರಭಾಕರ ಅವರ ‘ಕಾಮರೂಪಿ’ಗೂ ಅವರು ಕೆಲಸಮಾಡಿದ ಕಾಮರೂಪಕ್ಕೂ ಬಾದರಾಯಣ ಸಂಬಂಧವೇನಾದರೂ ಇದ್ದೀತೋ ತಿಳಿಯದು.

ಕೆಳಗಣ ಅಸ್ಸಾಮಿನ ಜನತೆ ಮೇಲಣ ಅಸ್ಸಾಮಿನ ಜನತೆಗಿಂತ ವಿಭಿನ್ನರು. ಕೆಳಗಣ ಅಸ್ಸಾಮಿನ ಜನರು ನಿಷ್ಕಪಟಿಗಳು, ಹೆಚ್ಚು ಸಂವೇದನಾಶೀಲರು ಎನ್ನುವ ಖ್ಯಾತಿಗೆ ಪಾತ್ರರಾದವರು.ತಾವು ಕೆಳಗಣ ಅಸ್ಸಾಮಿನ ಈ ಗುಣಗಳ ಪ್ರತಿರೂಪವಾದ ‘ಕಾಮರೂಪಿ’ ಎಂದು ಪ್ರಭಾಕರ್ ಸಂದರ್ಶನವೊಂದರಲ್ಲಿ ಹೇಳಿರುವುದೂ ಉಂಟು. ‘ಕಾಮರೂಪಿ’ ಕನ್ನಡದಲ್ಲಿ ನವ್ಯ ಚಳವಳಿ ರಭಸಗತಿಯಲ್ಲಿದ್ದ ಕಾಲಘಟ್ಟದಲ್ಲಿ ಬರೆಯಲಾರಂಭಿಸಿದರು.ಅಡಿಗರು, ರಾಮಾನುಜನ್, ಅನಂತಮೂರ್ತಿ, ಲಂಕೇಶ್ ಅವರಂತೆ ನವ್ಯ ಪ್ರಯೋಗಗಳಲ್ಲಿ ಹೆಚ್ಚಿನ ಆಸಕ್ತಿ ತೋರಿದ ಲೇಖಕರು ಎಂದು ಆ ಕಾಲದಲ್ಲೇ ವಿಮರ್ಶೆಯ ಗಮನ ಸೆಳೆದವರು.

ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇಂಗ್ಲಿಷ್ ಬೋಧಿಸುತ್ತಿದ್ದ ಪ್ರಭಾಕರ್ ಅವರು ಡಾಕ್ಟರೇಟ್ ಗಳಿಸಿದ್ದೂ ಇಂಗ್ಲಿಷ್ ಬರವಣಿಗೆಯಿಂದಲೇ. ಅವರು ಪಿಎಚ್. ಡಿ.ಗೆ ಆರಿಸಿಕೊಂಡದ್ದು ಜಾರ್ಜ್ ಆರ್ವೆಲ್ ಸಾಹಿತ್ಯವನ್ನು. ಈ ಅಧ್ಯಯನ ಗ್ರಂಥ ಇಂಗ್ಲಿಷ್‌ನಲ್ಲೇ ಪ್ರಕಟವಾಗಿದೆ. ಆದರೆ ಸೃಜನಶೀಲ ಬರವಣಿಗೆಗೆ ಅವರು ಆಯ್ಕೆಮಾಡಿಕೊಂಡದ್ದು ಕನ್ನಡ ಮಾಧ್ಯಮವನ್ನು. ವಿಶೇಷವಾಗಿ ಕಥನ ಪ್ರಕಾರದಲ್ಲಿ ಪ್ರಯೋಗಶೀಲರಾದವರು. ಕತೆಗಾರ ‘ಕಾಮರೂಪಿ’ ಪತ್ರಕರ್ತ ಪ್ರಭಾಕರನಂತೆ ಪುಂಖಾನುಪುಂಖವಾಗಿ ಬರೆದವರಲ್ಲ. ಅವರ ಪತ್ರಿಕಾ ಬರವಣಿಗೆಗೆ ಹೋಲಿಸಿದರೆ ಸೃಜನಶೀಲ ಬರವಣಿಗೆ ಗಾತ್ರದಲ್ಲಿ ಕಡಿಮೆಯಾದರೂ ಗುಣದಲ್ಲಿ ಆಢ್ಯವಾದದ್ದು.ವೃತ್ತಿಯ ಒತ್ತಡವೂ ಅವರ ಪತ್ರಿಕಾ ಲೇಖನಗಳ ಬಾಹುಳ್ಯಕ್ಕೆ ಕಾರಣವಿದ್ದೀತು. ಈಶಾನ್ಯ ಭಾರತದ ಸಮಸ್ಯೆಗಳ ಬಗ್ಗೆ, ದಕ್ಷಿಣ ಆಫ್ರಿಕಾದ ಸಾಮಾಜಿಕ ಬದುಕು ಮತ್ತು ರಾಜಕೀಯ ಏಳುಬೀಳುಗಳ ಬಗ್ಗೆ ವಿಶೇಷವಾಗಿ, ವ್ಯಾಪಕ ವಿಸ್ತಾರದಲ್ಲಿ ಬರೆದಿರುವ ಅವರ ಲೇಖನಗಳು ಮಾನವಿಕ ಸಾಹಿತ್ಯದ ಮಹತ್ವ ಪಡೆದಿವೆ. ‘ಲುಕಿಂಗ್ ಬ್ಯಾಕ್ ಇಂಟು ದ ಫ್ಯೂಚರ್: ಐಡೆಂಟಿಟಿ ಆ್ಯಂಡ್ ಇನ್ಸರ್ಜೆನ್ಸಿ ಇನ್ ನಾರ್ತ್‌ಈಸ್ಟ್ ಇಂಡಿಯಾ’-ಪತ್ರಕರ್ತ ಪ್ರಭಾಕರ ಅವರ ಈಶಾನ್ಯ ಭಾರತದ ಸಮಸ್ಯೆಗಳ ಅಧ್ಯಯನದ ಒಂದು ಉತ್ತಮ ಆಕರ ಗ್ರಂಥ. ‘ಕುದುರೆ ಮೊಟ್ಟೆ’(1974), ‘ಅಂಜಿಕಿನ್ಯಾತಕಯ್ಯಾ’(1981), ‘ಒಂದು ತೊಲ ಪುನುಗು ಮತ್ತು ಇತರ ಕಥೆಗಳು’(1969)-‘ಕಾಮ ರೂಪಿ’ಯವರ ಮಹತ್ವದ ಕೃತಿಗಳು. ‘ಕುದುರೆ ಮೊಟ್ಟೆ’, ‘ಅಂಜಿಕಿನ್ಯಾತಕಯ್ಯಾ’ ಕಾದಂಬರಿಗಳಾದರೆ, ‘ಒಂದು ತೊಲ ಪುನುಗು...’ ಕಥಾ ಸಂಕಲನ. ವಿಮರ್ಶಕರು ಗುರುತಿಸಿರುವಂತೆ, ಊಳಿಗಮಾನ್ಯ ಪದ್ಧತಿಯ ಸಮಾಜದ ಒಳಸ್ವರೂಪವನ್ನು ಅದರೆಲ್ಲ ಸಂಕೀರ್ಣತೆಯೊಂದಿಗೆ ಬಿಚ್ಚಿಡುವ ಕುದುರೆ ಮೊಟ್ಟೆ ಐದು ಭಾಗಗಳಲ್ಲಿ ಹರಡಿಕೊಂಡಿರುವ ಹಳ್ಳಿಯೊಂದರ ಎರಡು ಕುಟುಂಬಗಳ ಕಥೆ.

ಎರಡು ಕುಟುಂಬಗಳ ಕಥಾ ಹಂದರದಲ್ಲಿ ಜಮೀನ್ದಾರ-ಗೇಣಿದಾರರ ಸಂಬಂಧ, ಜಾತಿಜಾತಿಗಳ ನಡುವಣ ಸಂಬಂಧ ಮತ್ತು ಗಂಡು-ಹೆಣ್ಣುಗಳ ಸಂಬಂಧಗಳು ದಟ್ಟವಾಗಿ ಹೆಣೆದುಕೊಂಡು ಹೆಚ್ಚು ಸಂಕೀರ್ಣವಾದ ಗ್ರಾಮಜೀವನದ ಚಿತ್ರ ಕಣ್ಣಿಗೆ ಕಟ್ಟುವಂತೆ ರೂಪುಗೊಳ್ಳುತ್ತದೆ. ಪಾತ್ರಗಳು ಘಟನೆಗಳನ್ನು ತಮ್ಮ ತಮ್ಮ ದೃಷ್ಟಿಕೋನದಿಂದ ಹೇಳುವುದು ಲೇಖಕರು ಇಲ್ಲಿ ಅನುಸರಿಸಿರುವ ನಿರೂಪಣಾ ತಂತ್ರ. ಒಂದು ಪಾತ್ರ ಹೇಳುವುದನ್ನು ಮತ್ತೊಂದು ಪಾತ್ರ ಸುಳ್ಳೆಂದು ಸಾಧಿಸುತ್ತದೆ. ಹೀಗಾಗಿ ಕಾದಂಬರಿಯ ಪ್ರಮುಖ ಪಾತ್ರಗಳ ನಿರೂಪಣೆಯನ್ನು ಅಂತಿಮ ಸತ್ಯವೆಂದು ಭಾವಿಸುವಂತಿಲ್ಲ. ಸತ್ಯವೆಂಬುದು ಒಂದಲ್ಲ, ಅನೇಕ ಸುಳ್ಳನ್ನೇ ಸತ್ಯವೆಂದು ಸಾಧಿಸುವುದು ಹಾಗೂ ಭ್ರಮಿಸುವುದು ಎರಡೂ ಸಾಧ್ಯವೆಂಬಂಥ ಬದುಕಿನ ದ್ವಂದ್ವಗಳನ್ನು ಧ್ವನಿಸುವ ‘ಕುದುರೆ ಮೊಟ್ಟೆ’ ಒಂದು ಕುತೂಹಲಕಾರಿ ಪ್ರಯೋಗ.

ಕೊನೆಯ ಭಾಗದಲ್ಲಿ ಫಟಿಂಗರು ಕುದುರೆ ಮೊಟ್ಟ್ಟೆ ಇಟ್ಟಿದೆ ಎಂದು ಪೆದ್ದನೊಬ್ಬನನ್ನು ನಂಬಿಸುವುದು-ಸುಳ್ಳುಗಳ ಗೋಜಲಿನಲ್ಲಿ ಸಿಕ್ಕಿಬಿದ್ದ ಅರ್ಥೈಸಲಾಗದ ಬದುಕಿನ ವ್ಯಂಗ್ಯವನ್ನು ಸೂಚಿಸುತ್ತದೆ. ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳು ಬರುತ್ತಿದ್ದ ಕಾಲದಲ್ಲಿ ಹಿರಿಯ ನಿರ್ದೇಶಕ ಜಿ.ವಿ. ಅಯ್ಯರ್ ಅವರ ನಿರ್ದೇಶನದಲ್ಲಿ ‘ಕುದುರೆ ಮೊಟ್ಟೆ’ ಚಲನಚಿತ್ರವಾಗಿಯೂ ಗಮನ ಸೆಳೆದಿತ್ತು.

ಒಂದು ತೊಲ ಪುನುಗು ಮತ್ತು ಇತರ ಕಥೆಗಳಲ್ಲೂ ಕಾಮರೂಪಿಯವರು ಬದುಕಿನ ಸತ್ಯಗಳನ್ನು ಮಾನವ ಸಂಬಂಧಗಳ ನೆಲೆಯಲ್ಲಿ ಶೋಧಿಸುವ ಪರಿಯನ್ನು ನಾವು ಕಾಣುತ್ತೇವೆ. ವಿಶೇಷವಾಗಿ ‘ಉಪಪತ್ತಿಯೋಗ’ ಕಥೆಯಲ್ಲಿ ಆಧುನಿಕ ಕಾಲದಲ್ಲಿ ಮಾನವ ಸಂಬಂಧಗಳು, ರಕ್ತ ಸಂಬಂಧಗಳು ಹೇಗೆ ಕೃತ್ರಿಮವಾಗುತ್ತಿವೆ ಎಂಬುದರ ಪರಿಣಾಮಕಾರಿ ಚಿತ್ರಣವಿದೆ.
ಸತ್ಯ ಶೋಧ ಮತ್ತು ಮಾನವ ಸಂಬಂಧಗಳ ಷಡ್ಯಂತ್ರಗಳು ಮತ್ತು ಕೃತ್ರಿಮತೆಯಲ್ಲಿ ಅದು ಮರೀಚಿಕೆಯಾಗೇ ಉಳಿಯುವ ವ್ಯಂಗ್ಯ-ದುರಂತಗಳನ್ನು ಧ್ವನಿಸುವುದು ಕಾಮರೂಪಿಯವರ ಒಟ್ಟು ಬರವಣಿಗೆಯ ಪ್ರಬಂಧದನಿಯಾಗಿರುವಂತಿದೆ.

ಪತ್ರಕರ್ತರಾಗಿ, ಸಂವೇದನಾಶೀಲ ಸಾಹಿತಿಯಾಗಿ ಬದುಕಿನ ಪ್ರಾಯದ ದಿನಗಳನ್ನು ಮಾನವ ಬದುಕಿನ ವಿವಿಧ ನೆಲೆಗಳಲ್ಲಿ ಶೋಧಿಸುತ್ತಾ, ಕಣ್ಣಾರೆ ನೋಡಿ-ಅಧ್ಯಯನ ಮಾಡಿ ವಿಶ್ಲೇಷಿಸಿ ಬರೆಯತ್ತಾ ಈಶಾನ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಹತ್ತು ವರ್ಷಗಳನ್ನು ಈಶಾನ್ಯ ಭಾರತದ ವರದಿಗಾರಿಕೆಗೆ ಮರಳಿ ಬಂದರು. ಅಲ್ಲೇ ನಿವೃತ್ತಿ ಹೊಂದಿದರು. ‘ಕಾಮರೂಪಿ’ ಪ್ರಭಾಕರರು ಈಗ, ಎಂಬತ್ತೆರಡರ ಇಳಿ ಪ್ರಾಯದಲ್ಲಿ ಪೂರ್ವಜರ ಮನೆಯಲ್ಲಿ ಧ್ಯಾನಸ್ಥರಂತೆ ಇದ್ದಾರೆ. ಪ್ರಶಸ್ತಿ ಸಮಾರಂಭದಲ್ಲಿ ಅವರ ಅನುಪಸ್ಥಿತಿ ಅಭಿಮಾನಿಗಳಿಗೆ ನಿರಾಶೆಯನ್ನುಂಟುಮಾಡಿತು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News