ಗೋವಿಂದ ಪನ್ಸಾರೆ ಹತ್ಯೆ ಪ್ರಕರಣ: ಇನ್ನಿಬ್ಬರ ಬಂಧನ

Update: 2018-12-02 15:39 GMT

ಮುಂಬೈ,ಡಿ.2: ಕಮ್ಯುನಿಸ್ಟ್ ನಾಯಕ ಹಾಗೂ ಲೇಖಕ ಗೋವಿಂದ ಪನ್ಸಾರೆಯವರ ಹತ್ಯೆ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳನ್ನು ವಿಶೇಷ ತನಿಖಾ ತಂಡ(ಸಿಟ್)ವು ಶನಿವಾರ ಬಂಧಿಸಿದೆ.

ಆರೋಪಿಗಳಾದ ಭರತ ಕುರ್ನೆ ಮತ್ತು ವಾಸುದೇವ ಸೂರ್ಯವಂಶಿ ಅವರನ್ನು ಕೊಲ್ಲಾಪುರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು,ಡಿ.7ರವರೆಗೆ ಪೊಲೀಸ್ ಕಸ್ಟಡಿಯನ್ನು ವಿಧಿಸಲಾಗಿದೆ. ಇಬ್ಬರೂ ಕರ್ನಾಟಕದವರಾಗಿದ್ದು,ಕುರ್ನೆ ಖಾನಾಪುರದಲ್ಲಿರುವ ತನ್ನ ತೋಟದಲ್ಲಿ ಪನ್ಸಾರೆ ಹಂತಕರಿಗೆ ತರಬೇತಿಯನ್ನು ನೀಡಿದ್ದ ಮತ್ತು ಸೂರ್ಯವಂಶಿ ಪನ್ಸಾರೆ ಹತ್ಯೆಗೆ ಬಳಸಿದ್ದ ವಾಹನವನ್ನು ಒದಗಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕುರ್ನೆ ಬೆಳಗಾವಿ ನಿವಾಸಿಯಾಗಿದ್ದು,ರೆಸ್ಟೋರೆಂಟ್‌ವೊಂದನ್ನು ನಡೆಸುತ್ತಿದ್ದ. ಖಾನಾಪುರ ಪ್ರದೇಶದಲ್ಲಿ ಆತ ಮೂರು ಎಕರೆ ತೋಟವನ್ನು ಹೊಂದಿದ್ದು,ಅಲ್ಲಿ ಬಲಪಂಥೀಯ ಸಂಘಟನೆಗಳು ಹಲವಾರು ಶೂಟರ್‌ಗಳಿಗೆ ತರಬೇತಿಯನ್ನು ನೀಡಿದ್ದವು ಎನ್ನಲಾಗಿದೆ. ಸೂರ್ಯವಂಶಿ ಜಲಗಾಂವ್‌ನಲ್ಲಿ ಮೆಕ್ಯಾನಿಕ್ ಆಗಿದ್ದಾನೆ.

ಸಮೀರ್ ಗಾಯಕ್ವಾಡ್ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಮೊದಲ ಬಂಧಿತ ಆರೋಪಿಯಾಗಿದ್ದು,ಬಳೀಕ ವೀರೇಂದ್ರ ತಾವ್ಡೆಯನ್ನು ಬಂಧಿಸಲಾಗಿತ್ತು. ವಿಜಯ ಪವಾರ್ ಮತ್ತು ಸಾರಂಗ್ ಅಕೋಲ್ಕರ್ ಎನ್ನುವವರು ತಲೆಮರೆಸಿಕೊಂಡಿದ್ದಾರೆ. ಇತ್ತೀಚಿಗೆ ಕರ್ನಾಟಕ ಸಿಟ್ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅಮೋಲ್ ಕಾಳೆಯನ್ನು ಬಂಧಿಸಿತ್ತು. ಕುರ್ನೆ ಮತ್ತು ಸೂರ್ಯವಂಶಿ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಆರು ಮತ್ತು ಏಳನೇ ಆರೋಪಿಗಳಾಗಿದ್ದಾರೆ.

ಪನ್ಸಾರೆ ಹತ್ಯೆಗೆ ಬಳಕೆಯಾಗಿದ್ದ ಪಿಸ್ತೂಲು ಮತ್ತು ವಾಹನವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರ ವೈಫಲ್ಯದಿಂದಾಗಿ ತಾವ್ಡೆ ಮತ್ತು ಗಾಯಕ್ವಾಡ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.

ಹತ್ಯೆಗೆ ಬಳಸಿದ್ದೆಂದು ಶಂಕಿಸಲಾದ ಬೈಕ್‌ನ್ನು ಬಿಡಿಭಾಗಗಳನ್ನಾಗಿ ಕಳಚಿ ನಾಮಾವಶೇಷಗೊಳಿಸಿದ್ದ ಆರೋಪದಲ್ಲಿ ಸೂರ್ಯವಂಶಿಯನ್ನು ಮಹಾರಾಷ್ಟ್ರ ಎಟಿಎಸ್ ಈ ಹಿಂದೆ ಬಂಧಿಸಿತ್ತು.

ಕುರ್ನೆ ಗೌರಿ ಲಂಕೇಶ್ ಅವರಿಗೆ ಗುಂಡು ಹಾರಿಸಿದ್ದ ಎನ್ನಲಾಗಿರುವ ಪರಶುರಾಮ ವಾಗ್ಮೋರೆಗೂ ತನ್ನ ತೋಟದಲ್ಲಿ ಪಿಸ್ತೂಲು ತರಬೇತಿಗೆ ಅವಕಾಶವನ್ನು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೊಲೆಗಳ ಹಿಂದಿರುವ ಬಲಪಂಥೀಯ ಸಂಘಟನೆಯ ಎರಡನೇ ಹಿರಿಯ ನಾಯಕನಾಗಿರುವ ಕಾಳೆಯ ಡೈರಿಯಲ್ಲಿ ಇವರಿಬ್ಬರ ಹೆಸರುಗಳು ಉಲ್ಲೇಖಗೊಂಡಿವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News