ಇಸ್ರೇಲ್ ಪ್ರಧಾನಿಗೆ ಭಾರೀ ಹಿನ್ನಡೆ: ನೆತನ್ಯಾಹು ವಿರುದ್ಧ ದೋಷಾರೋಪಕ್ಕೆ ಶಿಫಾರಸು

Update: 2018-12-02 16:53 GMT

ಜೆರುಸಲೇಂ,ಡಿ.2: ಲಂಚ ಮತ್ತಿತರ ಅಪರಾಧಗಳಿಗಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅವರ ಪತ್ನಿ ಸಾರಾ ವಿರುದ್ಧ ದೋಷಾ ರೋಪಣೆ ಹೊರಿಸುವಂತೆ ಇಸ್ರೇಲ್ ಪೊಲೀಸರು ರವಿವಾರ ಅಟಾರ್ನಿ ಜನರಲ್‌ಗೆ ಶಿಫಾರಸು ಮಾಡಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಇಸ್ರೇಲ್ ಪ್ರಧಾನಿ ವಿರುದ್ಧ ದೋಷಾರೋಪಣೆಗೆ ಪೊಲೀಸರು ಶಿಫಾರಸು ಮಾಡಿ ರುವುದು ಇದು ಮೂರನೆ ಸಲವಾಗಿದೆ.

 ಮಾಧ್ಯಮ ಸಂಸ್ಥೆಯೊಂದರಿಂದ ತನ್ನ ಬಗ್ಗೆ ಸಕಾರಾತ್ಮಕವಾದ ವರದಿಯನ್ನು ಪ್ರಕಟಿಸುವುದಕ್ಕೆ ಪ್ರತಿಯಾಗಿ ಬೆಝೆಕ್ ಟೆಲಿಕಮ್ಯುನಿಕೇಶನ್ಸ್ ಸಂಸ್ಥೆಗೆ ಕಾನೂನು ರಿಯಾಯಿತಿಗಳನ್ನು ಒದಗಿಸಿಕೊಟ್ಟ ಪ್ರಕರಣದಲ್ಲಿ ನೆತನ್ಯಾಹು ವಿರುದ್ಧ ದೋಷಾರೋಪಣೆ ಹೊರಿಸಬೇಕೇ ಎಂಬುದನ್ನು ಅಟಾರ್ನಿ ಜನರಲ್ ನಿರ್ಧರಿಸಲಿದ್ದಾರೆ.

 ನೆತನ್ಯಾಹು ವಿರುದ್ಧ ಇತರ ಎರಡು ಭ್ರಷ್ಟಾಚಾರ ಪ್ರಕರಣಗಳ ತನಿಖೆಯಲ್ಲಿ ದೋಷಾರೋಪಣೆ ಹೊರಿಸುವಂತೆ ಪೊಲೀಸರು ಕಳೆದ ಫೆಬ್ರವರಿಯಲ್ಲಿ ಶಿಫಾರಸು ಮಾಡಿದ್ದರು. ಈ ಮಧ್ಯೆ ತನ್ನ ಹಾಗೂ ತನ್ನ ಪತ್ನಿ ವಿರುದ್ಧ ಹೊರಿಸಲಾದ ಆರೋಪಗಳನ್ನು ನೆತನ್ಯಾಹು ತಿರಸ್ಕರಿಸಿದ್ದಾರೆ.‘‘ಪ್ರಕರಣದ ತನಿಖೆ ಆರಂಭಗೊಳ್ಳುವ ಮೊದಲೇ,ತನ್ನ ವಿರುದ್ಧ ದೋಷಾರೋಪವನ್ನು ಹೊರಿಸುಂತೆ ಶಿಫಾರಸು ಮಾಡಲು ನಿರ್ಧರಿಸಲಾಗಿತ್ತೆಂಬ ವಿಷಯ ಈಗಾಗಲೇ ಸೋರಿಕೆಯಾಗಿದೆ’’ ಎಂದು ನೆತನ್ಯಾಹು ತಿಳಿಸಿದ್ದಾರೆ.

 ಮೂರು ಪ್ರಕರಣಗಳಲ್ಲಿಯೂ ತನ್ನ ವಿರುದ್ಧ ಆರೋಪಗಳನ್ನು ಹೊರಿಸಿರುವುದು ತನ್ನನ್ನು ಅಧಿಕಾರದಿಂದ ಉಚ್ಚಾಟಿಸಲು ರಾಜಕೀಯ ಶತ್ರುಗಳು ನಡೆಸಿದ ಸಂಚಾಗಿದೆ ಎಂದವರು ಹೇಳಿದ್ದಾರೆ.

 ನೆತನ್ಯಾಹು ವಿರುದ್ಧ ಲಂಚ, ವಂಚನೆ, ವಿಶ್ವಾಸದೋಹ ಹಾಗೂ ಕಾನೂನುಬಾಹಿರವಾಗಿ ಹಣ ಸ್ವೀಕರಿಸಿದ ಆರೋಪಗಳನ್ನು ಹೊರಿಸಲು ತಮ್ಮ ಬಳಿ ಪುರಾವೆಯಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ನೆತನ್ಯಾಹು ಪತ್ನಿ ಸಾರಾ ವಿರುದ್ಧವೂಸ ಲಂಚ, ವಂಚನೆ,ನಂಬಿಕೆದ್ರೋಹ ಹಾಗೂ ಪುರಾವೆಗಳ ನಾಶ ಆರೋಪವನ್ನು ಹೊರಿಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News