×
Ad

ಪ್ರಧಾನಿಯಾಗಿ ಕಾರ್ಯನಿರ್ವಹಿಸದಂತೆ ರಾಜಪಕ್ಸಗೆ ನ್ಯಾಯಾಲಯ ಆದೇಶ

Update: 2018-12-03 21:31 IST

ಕೊಲಂಬೊ, ಡಿ. 3: ಮಹಿಂದ ರಾಜಪಕ್ಸ ಶ್ರೀಲಂಕಾದ ಪ್ರಧಾನಿಯಾಗಿ ಕಾರ್ಯನಿರ್ವಹಿಸುವುದರಿಂದ ದೇಶದ ನ್ಯಾಯಾಲಯವೊಂದು ಸೋಮವಾರ ಅವರನ್ನು ನಿಷೇಧಿಸಿದೆ.

ಇದು ದೇಶದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರಿಗೆ ದೊಡ್ಡ ಹಿನ್ನಡೆಯಾಗಿದೆ. ಅವರು ಅಕ್ಟೋಬರ್‌ನಲ್ಲಿ ಅಂದಿನ ಪ್ರಧಾನಿ ರನಿಲ್ ವಿಕ್ರಮೆಸಿಂಘೆಯನ್ನು ವಜಾಗೊಳಿಸಿ ಅವರ ಸ್ಥಾನದಲ್ಲಿ ಮಾಜಿ ಅಧ್ಯಕ್ಷ ರಾಜಪಕ್ಸರನ್ನು ನೇಮಿಸಿದ್ದರು.

 ರಾಜಪಕ್ಸ ಪ್ರಧಾನಿಯಾಗಿ ಕಾರ್ಯನಿರ್ವಹಿಸುವಂತಿಲ್ಲ ಹಾಗೂ ಅವರ ಸಚಿವರು ತಮ್ಮ ಅಧಿಕಾರವನ್ನು ನಿಭಾಯಿಸುವಂತಿಲ್ಲ ಎಂಬುದಾಗಿ ಮೇಲ್ಮನವಿ ನ್ಯಾಯಾಲಯವೊಂದು ಮಧ್ಯಂತರ ಆದೇಶ ನೀಡಿದೆ ಎಂದು ‘ಕೊಲಂಬೊ ಗಝೆಟ್’ ವರದಿ ಮಾಡಿದೆ.

ರಾಜಪಕ್ಸ ಮತ್ತು ಅವರ ಸರಕಾರದ ವಿರುದ್ಧ 122 ಸಂಸದರು ಸಲ್ಲಿಸಿದ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.

ಅಧ್ಯಕ್ಷರು ಅಕ್ಟೋಬರ್ 26ರಂದು ತೆಗೆದುಕೊಂಡ ಅತ್ಯಂತ ವಿವಾದಾಸ್ಪದ ನಿರ್ಧಾರದ ಬಳಿಕ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರದಲ್ಲಿ ಅಭೂತಪೂರ್ವ ಸಾಂವಿಧಾನಿಕ ಬಿಕ್ಕಟ್ಟು ನೆಲೆಸಿದೆ.

ವಿಕ್ರಮಸಿಂಘೆ ಪಕ್ಷವು ರಾಜಪಕ್ಸ ಸರಕಾರದ ವಿರುದ್ಧ ಸಂಸತ್ತಿನಲ್ಲಿ ಮೂರು ಬಾರಿ ಯಶಸ್ವಿಯಾಗಿ ಅವಿಶ್ವಾಸ ನಿರ್ಣಯವನ್ನು ಮಂಡಿಸಿದರೂ, ರಾಜಪಕ್ಸ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News