ಸು.ಕೋ. ವಿಶ್ವಾಸಾರ್ಹತೆ ಕಳೆದುಕೊಳ್ಳದಿರಲಿ

Update: 2018-12-04 04:15 GMT

ಪ್ರಜಾಸತ್ತೆಯ ಅಳಿವು ಉಳಿವನ್ನು ಅಂತಿಮವಾಗಿ ನಿರ್ಧರಿಸುವುದು ಸುಪ್ರೀಂಕೋರ್ಟ್. ಶಾಸಕಾಂಗವಾಗಲಿ, ಕಾರ್ಯಾಂಗವಾಗಲಿ ಪ್ರಜಾಸತ್ತೆಗೆ, ಸಂವಿಧಾನಕ್ಕೆ ವಿರುದ್ಧವಾಗಿ ಹೆಜ್ಜೆಯಿಟ್ಟಾಗ ತಿದ್ದಬೇಕಾದುದು, ಎಚ್ಚರಿಕೆಯನ್ನು ನೀಡಬೇಕಾದುದು ಅವುಗಳನ್ನು ಸರಿದಾರಿಗೆ ತರಬೇಕಾದುದು ಸುಪ್ರೀಂಕೋರ್ಟ್‌ನ ಕೆಲಸ. ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕವಂತೂ ಜನರು ಸದಾ ಸುಪ್ರೀಂಕೋರ್ಟ್‌ನ ತೀರ್ಪುಗಳನ್ನೇ ನೆಚ್ಚುವಂತಹ ಸ್ಥಿತಿ ನಿರ್ಮಾಣವಾಗಿದೆ. ಚುನಾವಣಾ ಆಯೋಗದ ದುರ್ಬಳಕೆ, ಸಿಬಿಐಯಲ್ಲಿ ಹಸ್ತಕ್ಷೇಪ, ಸೇನೆಯಲ್ಲಿ ಹಸ್ತಕ್ಷೇಪ, ಗುಜರಾತ್‌ನಲ್ಲಿ ನಡೆದ ಸರಣಿ ನಕಲಿ ಎನ್‌ಕೌಂಟರ್‌ಗಳು, ಮೀಸಲಾತಿ....ಮೊದಲಾದ ಈ ದೇಶದ ಮುಂದಿನ ದಿನಗಳನ್ನು ನಿರ್ಧರಿಸಬಹುದಾದ ಮಹತ್ತರ ಪ್ರಕರಣಗಳು ಸುಪ್ರೀಂಕೋರ್ಟ್ ನಪದತಳದಲ್ಲಿವೆ. ಸರಕಾರದ ನಿರ್ಧಾರಗಳ ಕುರಿತಂತೆ ಶಂಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಪ್ರಕರಣಗಳು ಅಧಿಕವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ಕುರಿತಂತೆಯೂ ಜನರು ನಂಬಿಕೆಯನ್ನು ಕಳೆದುಕೊಳ್ಳುವಂತಾದರೆ ಈ ದೇಶದ ಪ್ರಜಾಸತ್ತೆಯನ್ನು ಉಳಿಸುವವರು ಯಾರು?

ಈ ಪ್ರಶ್ನೆಯನ್ನು ಇಂದು ಶ್ರೀಸಾಮಾನ್ಯ ಅಥವಾ ಸಾಮಾಜಿಕ ಕಾರ್ಯಕರ್ತರು ಮಾತ್ರ ಕೇಳುತ್ತಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಮಹತ್ತರ ಹುದ್ದೆಯನ್ನು ನಿರ್ವಹಿಸಿದ ನ್ಯಾಯಮೂರ್ತಿಯೇ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ‘ಧರೆಯೇ ಹತ್ತಿ ಉರಿದರೆ...’ ಎಂಬ ಆಕ್ರಂದನದಂತಿದೆ ಇತ್ತೀಚೆಗಷ್ಟೇ ತಮ್ಮ ಸ್ಥಾನದಿಂದ ನಿವೃತ್ತರಾಗಿರುವ ನ್ಯಾ. ಜೋಸೆಫ್ ಕುರಿಯನ್ ಮಾತುಗಳು. ‘‘ಸುಪ್ರೀಂಕೋರ್ಟ್ ಸಮರ್ಪಕ ದಾರಿಯಲ್ಲಿ ಸಾಗಿಲ್ಲ, ಆಗಿನ ಅದರ ಮುಖ್ಯ ನ್ಯಾ. ದೀಪಕ್ ಮಿಶ್ರಾ ಹೊರಗಿನ ಶಕ್ತಿಗಳ ನಿಯಂತ್ರಣಕ್ಕೊಳಗಾಗಿದ್ದರು. ಗಂಭೀರ ಪ್ರಕರಣಗಳ ವಿಚಾರಣೆಯ ಹಾದಿ ತಪ್ಪಿಸುತ್ತಿದ್ದರು’’ ಎಂದು ನ್ಯಾ. ಜೋಸೆಫ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ನಿವೃತ್ತರಾದ ಬಳಿಕ ಆ ಸಂಸ್ಥೆಯೊಳಗಿನ ಮುಖ್ಯಸ್ಥರ ವಿರುದ್ಧ ಆರೋಪ ಸಾಮಾನ್ಯ ಎಂದು ಕುರಿಯನ್ ಮಾತುಗಳನ್ನು ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಕುರಿಯನ್ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲೇ ಇದರ ವಿರುದ್ಧ ತನ್ನ ಸಹೋದ್ಯೋಗಿಗಳ ಜೊತೆಗೆ ಧ್ವನಿಯೆತ್ತಿದ್ದರು.

ದೀಪಕ್ ಮಿಶ್ರಾ ಅವರ ಕಾರ್ಯನಿರ್ವಹಣೆಯ ಕುರಿತಂತೆ ತಮ್ಮ ಸಹ ನ್ಯಾಯಮೂರ್ತಿಗಳ ಜೊತೆಗೆ ಪತ್ರಿಕಾಗೋಷ್ಠಿ ಕರೆದು ಅಸಮಾಧಾನವನ್ನು ಹಂಚಿಕೊಂಡಿದ್ದರು. ಇದು ನ್ಯಾಯಾಧೀಶರ ವೈಯಕ್ತಿಕ ತಿಕ್ಕಾಟವಾಗಿರಲಿಲ್ಲ. ದೀಪಕ್ ಮಿಶ್ರಾ ಅವರ ಕಾರ್ಯವೈಖರಿಯನ್ನು ನಾಲ್ವರು ನ್ಯಾಯಮೂರ್ತಿಗಳು ಮೊದಲೇ ಅವರ ಗಮನಕ್ಕೇ ತಂದಿದ್ದರು. ಅತ್ಯಂತ ಗಂಭೀರ ಪ್ರಕರಣಗಳನ್ನು ಅನುಭವ ರಹಿತ ನ್ಯಾಯಾಧೀಶರಿಗೆ ಮಿಶ್ರಾ ಉದ್ದೇಶ ಪೂರ್ವಕವಾಗಿ ಹಸ್ತಾಂತರಿಸುತ್ತಿದ್ದರು ಎನ್ನುವುದು ಅವರ ಮುಖ್ಯ ಆರೋಪವಾಗಿತ್ತು. ತಪ್ಪುಗಳ ಕುರಿತಂತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಬಳಿಕವೂ ಮಿಶ್ರಾ ತಿದ್ದಿಕೊಳ್ಳದೇ ಇದ್ದಾಗ, ಅನಿವಾರ್ಯವಾಗಿ ಅವರು ಪತ್ರಿಕಾಗೋಷ್ಠಿ ಕರೆದರು.ಸುಪ್ರೀಂಕೋರ್ಟ್‌ನಂತಹ ಅತ್ಯುನ್ನತ ಸ್ಥಾನದ ಘನತೆಯನ್ನು ಉಳಿಸುವುದಕ್ಕಾಗಿ ನಾಲ್ವರು ನ್ಯಾಯಾಧೀಶರು ಪತ್ರಿಕಾಗೋಷ್ಠಿ ಮಾಡಿರುವುದು ದೇಶದ ಇತಿಹಾಸದಲ್ಲೇ ಮೊದಲ ಬಾರಿಯಾಗಿತ್ತು. ರಾಜಕೀಯವಾಗಿಯೂ ಇದು ತಲ್ಲಣವನ್ನು ಸೃಷ್ಟಿಸಿತ್ತು. ಇದಾದ ಬಳಿಕ ಮಿಶ್ರಾ ಒಂದಿಷ್ಟು ತಿದ್ದಿಕೊಂಡು ಮುಂದುವರಿದರು ಎಂದು ಕುರಿಯನ್ ಹೇಳುತ್ತಾರೆ.

ಇದೀಗ ಕುರಿಯನ್ ಇನ್ನೊಂದು ಬಾಂಬ್ ಸ್ಫೋಟಿಸಿದ್ದಾರೆ. ದೀಪಕ್ ಮಿಶ್ರಾ ಅವರನ್ನು ಹೊರಗಿನ ಶಕ್ತಿಗಳು ನಿಯಂತ್ರಿಸುತ್ತಿದ್ದವು ಎನ್ನುವುದು ಅವರ ಪ್ರಮುಖ ಆರೋಪವಾಗಿದೆ. ಈ ಹೊರಗಿನ ಶಕ್ತಿಗಳು ಯಾರು ಎನ್ನುವುದನ್ನು ಹೇಳಲು ಕುರಿಯನ್ ಹಿಂಜರಿದರು. ಆದರೆ ಯಾರಿರಬಹುದು ಎನ್ನುವುದನ್ನು ಊಹಿಸುವುದು ಬಹಳ ಸುಲಭ. ರಾಜಕೀಯ ಶಕ್ತಿಗಳ ಒತ್ತಡಗಳಿಗೆ ದೀಪಕ್ ಮಿಶ್ರಾ ಮಣಿಯುತ್ತಿದ್ದರು ಎನ್ನುವುದು ಅವರ ಮೇಲಿದ್ದ ಬಹುದೊಡ್ಡ ಆರೋಪವಾಗಿತ್ತು. ಸುಪ್ರೀಂಕೋರ್ಟ್ ಶಾಸಕಾಂಗಕ್ಕೆ ಕಡಿವಾಣ ವಿಧಿಸುತ್ತದೆ ಎಂದು ಜನರು ನಂಬಿದ್ದರು. ಆದರೆ ದೀಪಕ್ ಮಿಶ್ರಾ ಮೂಲಕ ಸುಪ್ರೀಂಕೋರ್ಟ್ ಶಾಸಕಾಂಗದ ಮುಂದೆ ಮಂಡಿಯೂರುವಂತಾಯಿತು. ನರೇಂದ್ರ ಮೋದಿ ಸರಕಾರ ತನ್ನ ಸರ್ವಾಧಿಕಾರಿ ನಿಲುವುಗಳನ್ನು ಯಾವ ಅಂಜಿಕೆಯೂ ಇಲ್ಲದೆ ಅನುಷ್ಠಾನಗೊಳಿಸಲು ಮುಖ್ಯ ಕಾರಣವೇ ನ್ಯಾಯಾಂಗ ದುರ್ಬಲಗೊಂಡಿರುವುದು. ನ್ಯಾಯಾಂಗದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯೇ ಪ್ರಧಾನಿಯ ಮೂಗಿನ ನೇರಕ್ಕೆ ಕಾರ್ಯನಿರ್ವಹಿಸಿದರೆ ಸುಪ್ರೀಂಕೋರ್ಟ್‌ನಿಂದ ನ್ಯಾಯ ಸಿಗುವುದಾದರೂ ಹೇಗೆ?

ಪ್ರಜಾಸತ್ತೆಯ ವೇಷದಲ್ಲಿ ಸರ್ವಾಧಿಕಾರಿ ಆಡಳಿತವನ್ನು ನಡೆಸುವುದಕ್ಕೆ ಮೋದಿಗೆ ಸಾಧ್ಯವಾದುದು ಈ ಮೂಲಕ. ಬಹುಶಃ ಉಳಿದ ನ್ಯಾಯಮೂರ್ತಿಗಳು ಇದರ ವಿರುದ್ಧ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸದೇ ಇದ್ದಿದರೆ, ವರ್ತಮಾನ ಇನ್ನಷ್ಟು ಭೀಕರವಾಗಿರುತ್ತಿತ್ತು. ಕುರಿಯನ್ ಆರೋಪ ಭಾರತದ ಭವಿಷ್ಯದ ಸವಾಲುಗಳನ್ನು ತೆರೆದಿಟ್ಟಿದೆ. ದೇಶದಲ್ಲಿ ಸಂವಿಧಾನ ವಿರೋಧಿಗಳು ವಿಜೃಂಭಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಕೂಡ ಅವರ ಕೈವಶವಾದರೆ, ಮುಂದಿನ ದಿನಗಳಲ್ಲಿ ಸಂವಿಧಾನದ ವಿರುದ್ಧವೇ ಸುಪ್ರೀಂಕೋರ್ಟ್‌ನಿಂದ ತೀರ್ಪು ಹೊರಬೀಳುವ ಸಾಧ್ಯತೆಗಳಿವೆ. ನ್ಯಾಯಾಂಗವನ್ನು ಬಳಸಿಕೊಂಡೇ ಸಂವಿಧಾನದ ಜಾಗವನ್ನು ಮನುಸ್ಮತಿ ಆಕ್ರಮಿಸಬಹುದು.

ಈಗಾಗಲೇ ಪ್ರಧಾನಿಯ ಆಪ್ತನೆನಿಸಿಕೊಂಡ ವ್ಯಕ್ತಿಯ ನೆತ್ತಿಯ ಮೇಲೆ ನಕಲಿ ಎನ್‌ಕೌಂಟರ್ ಪ್ರಕರಣವೆಂಬ ಕತ್ತಿ ತೂಗುತ್ತಿದೆ. ಆದರೆ ಆತನಿಗೆ ಶಿಕ್ಷೆಯಾಗಬೇಕಾದರೆ ನ್ಯಾಯಾಂಗ ಸ್ವತಂತ್ರವಾಗಿ ತೀರ್ಪು ಹೇಳುವ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಪೊಲೀಸ್ ವೇಷದಲ್ಲಿರುವವರಿಂದ ಶ್ರೀಸಾಮಾನ್ಯನ ಕೊಲೆಗಳು ನಡೆದು, ನ್ಯಾಯಾಧೀಶರ ವೇಷದಲ್ಲಿರುವವರು ಆ ಕೊಲೆಗಾರರನ್ನು ಗೌರವಿಸುವ ಸನ್ನಿವೇಶ ನಿರ್ಮಾಣವಾಗಬಹುದು. ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ ಭಾರತದ ಪಾಲಿನ ಸೆರಗಿನ ಕೆಂಡವಾಗಿದೆ. ಸುಪ್ರೀಂಕೋರ್ಟ್ ಹೊರತು ಪಡಿಸಿ ಯಾರೂ ಈ ಪ್ರಕರಣದಲ್ಲಿ ನ್ಯಾಯ ನೀಡಲಾರರು. ಇಂತಹ ಹೊತ್ತಿನಲ್ಲೇ ಸುಪ್ರೀಂಕೋರ್ಟ್‌ನಬಗ್ಗೆ ಮಾಜಿ ನ್ಯಾಯಮೂರ್ತಿಯೊಬ್ಬರು ಅವಿಶ್ವಾಸವನ್ನು ವ್ಯಕ್ತಪಡಿಸಿರುವುದು ಆತಂಕಕಾರಿಯಾಗಿದೆ. ಈ ನಿಟ್ಟಿನಲ್ಲಿ ದೀಪಕ್ ಮಿಶ್ರಾ ಅವರನ್ನು ನಿಯಂತ್ರಿಸುತ್ತಿದ್ದ ಶಕ್ತಿಗಳ ಕುರಿತಂತೆ ಜನಜಾಗೃತಿಯನ್ನು ಹಬ್ಬಿಸುವುದು, ಸಂವಿಧಾನದ ಮಹತ್ವವನ್ನು ಇನ್ನಷ್ಟು ಗಟ್ಟಿ ಧ್ವನಿಯಲ್ಲಿ ಎತ್ತಿ ಹಿಡಿಯುವುದು ಪ್ರಜಾಸತ್ತೆಯ ಮೇಲೆ ನಂಬಿಕೆಯಿರುವ ಎಲ್ಲರ ಹೊಣೆಗಾರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News