ಮೊದಲ ತಡೆಯನ್ನು ದಾಟಿದ ಮೇಕೆದಾಟು!

Update: 2018-12-03 18:37 GMT

ಏನಿದು ಮೇಕೆದಾಟು?
ಮೇಕೆದಾಟು ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ಕನಕಪುರ ತಾಲೂಕಿನ ದಕ್ಷಿಣ ಭಾಗದಲ್ಲಿ ದಟ್ಟವಾದ ಅರಣ್ಯದ ನಡುವೆ ಕಾವೇರಿ ನದಿ ಪಾತ್ರದಲ್ಲಿರುವ ಒಂದು ಪ್ರೇಕ್ಷಣೀಯ ವಿಹಾರಸ್ಥಳ. ಬೆಂಗಳೂರಿನಿಂದ 90 ಕಿ. ಮೀ. ದೂರದಲ್ಲಿದೆ. ಬೆಂಗಳೂರಿನ ದಕ್ಷಿಣಕ್ಕೆ ಸಾತನೂರು ಮಾರ್ಗವಾಗಿ 113 ಕಿ.ಮೀ. ಕನಕಪುರದಿಂದ ಸಾತನೂರು, ಆಲಹಳ್ಳಿ, ಉಯ್ಯಂಬಳ್ಳಿಗಳ ಮಾರ್ಗವಾಗಿ ದಕ್ಷಿಣದಲ್ಲಿ ಸುಮಾರು 40 ಕಿ.ಮೀ. ದೂರದಲ್ಲಿದೆ. ಕನ್ನಡ ಭಾಷೆಯಲ್ಲಿ ಅದರ ಅರ್ಥ ಮೇಕೆ ಹಾರುವಷ್ಟು ಸ್ಥಳ. ಇಲ್ಲಿ ಕಾವೇರಿ ನದಿ, ಆಳವಾದ ಕಂದರಕ್ಕೆ ಧುಮುಕುತ್ತದೆ. ಅದರ ಅಗಲ ಅಷ್ಟೇನು ಹೆಚ್ಚಾಗಿಲ್ಲ. ಕೇವಲ ಮೇಕೆ ಹಾರಿ ದಾಟುವಷ್ಟು ಜಾಗಮಾತ್ರ ಇದೆ. ಈ ಹಿನ್ನೆಲೆಯಲ್ಲಿ ಈ ಸ್ಥಳವನ್ನು ಮೇಕೆದಾಟು ಎಂದು ಕರೆಯಲಾಗುತ್ತಿದೆ.

ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಪುದುಚೇರಿಗಳ ನಡುವೆ, ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಬಹಳ ಹಿಂದಿನಿಂದಲೂ ವಿವಾದ ನಡೆಯುತ್ತಲೇ ಇದೆ. ಅದರಲ್ಲೂ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಕಗ್ಗಂಟು ಬಿಗಡಾಯಿಸಿದ ಸ್ಥಿತಿಯಲ್ಲೇ ಇದೆ. ಕರ್ನಾಟಕ ಮತ್ತು ತಮಿಳುನಾಡು ನೀರು ಹಂಚಿಕೆ ವಿವಾದದಲ್ಲಿ ಮೇಕೆ ದಾಟು ಅಣೆಕಟ್ಟು ಯೋಜನೆ ವಿವಾದ ಕೂಡಾ ಒಂದು. ನ.27ರಂದು ಮೇಕೆ ದಾಟು ಯೋಜನೆಯ ಪೂರ್ವ ಕಾರ್ಯಸಾಧ್ಯತೆ ವರದಿಗೆ ಅನುಮೋದನೆ ನೀಡಿದ್ದು, ರಾಜ್ಯದ 5 ವರ್ಷದ ಕಾನೂನು ಹೋರಾಟಕ್ಕೆ ಗೆಲುವು ದೊರೆತಂತಾಗಿದೆ.
 ಆದರೆ, ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನದಿ ನೀರು ಪೂರೈಕೆಗೆ ಯಾವುದೇ ಅಡ್ಡಿಯುಂಟಾಗಬಾರದು ಎಂದು ಕೇಂದ್ರ ಜಲ ಆಯೋಗ ಸ್ಪಷ್ಟಪಡಿಸಿದೆ. ಮೇಕೆದಾಟು ಯೋಜನೆಗೆ ವಿವರವಾದ ಯೋಜನಾ ವರದಿಯನ್ನು ರೂಪಿಸುವಂತೆ ಆಯೋಗವು ರಾಜ್ಯ ಸರಕಾರಕ್ಕೆ ಸೂಚಿಸಿದೆ.
ನಿಗದಿತ ನೀರನ್ನು ನೆರೆ ರಾಜ್ಯ ತಮಿಳುನಾಡಿಗೆ ಬಿಟ್ಟ ಬಳಿಕ ಉಳಿಯುವ ನೀರನ್ನು ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಮತ್ತಿತರ ಕಾರಣಗಳಿಗಾಗಿ ಬಳಕೆ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ರಾಜ್ಯದಿಂದ ತಮಿಳುನಾಡಿಗೆ 192 ಟಿಎಂಸಿಗಿಂತ ಹೆಚ್ಚು ನೀರನ್ನು ಹರಿಸಲಾಗುತ್ತಿದೆ. ವಾಸ್ತವವಾಗಿ ಸರಾಸರಿ 60ರಿಂದ 70 ಟಿಎಂಸಿ ಕಾವೇರಿ ನೀರು ಹರಿದು ಸಮುದ್ರ ಸೇರುತ್ತದೆ. ಹೀಗೆ ಪೋಲಾಗುವ ಉಳಿಕೆ ನೀರನ್ನು ಮೇಕೆದಾಟುವಿನಲ್ಲಿ ಸಂಗ್ರಹಿಸಿ ಕುಡಿಯುವ ನೀರಿಗೂ, ವಿದ್ಯುತ್ ಉತ್ಪಾದನೆಗೂ ಬಳಕೆ ಮಾಡುವ ಉದ್ದೇಶ ಸರಕಾರದ್ದಾಗಿದೆ. ಇದರಿಂದ ಮಿತಿಮೀರಿ ಬೆಳೆಯುತ್ತಿರುವ ಬೆಂಗಳೂರು ನಗರದ ನೀರಿನ ದಾಹ ತಣಿಸಬಹುದಾಗಿದೆ. ಅಂದಾಜು 45ರಿಂದ 50 ಟಿಎಂಸಿ ಅಡಿ ನೀರನ್ನು ಇಲ್ಲಿ ಸಂಗ್ರಹಿಸಬಹುದು ಹಾಗೂ ಸುಮಾರು 500 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಬಹುದು.
2013ರ ಸೆಪ್ಟ್ಟಂಬರ್‌ನಲ್ಲಿ ಕರ್ನಾಟಕ ಸರಕಾರ ಮೊದಲು ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಇಂತಹ ಸಂದರ್ಭದಲ್ಲಿ ನೀರನ್ನು ಸಂಗ್ರಹಿಸಿ, ಮೈಸೂರು, ಬೆಂಗಳೂರು ನಗರಗಳಿಗೆ ಕುಡಿಯುವ ನೀರಿಗಾಗಿ ಉಪಯೋಗಿಸಿಕೊಳ್ಳುವುದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಈ ಯೋಜನೆಯು ಪೂರ್ಣಗೊಂಡಲ್ಲಿ ಸುಮಾರು 45ರಿಂದ 50 ಟಿಎಂಸಿ ಅಡಿ ನೀರು ಸಂಗ್ರಹಣೆ ಮಾಡಬಹುದಾಗಿದೆ.
  2013ರ ಸೆಪ್ಟಂಬರ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು, ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುವ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದರು. ಕಾವೇರಿ ಜಲಾನಯದ ಪ್ರದೇಶದಲ್ಲಿ ಅಣೆಕಟ್ಟು ಕಟ್ಟುವ ಮೂಲಕ ಕರ್ನಾಟಕ ಕಾವೇರಿ ಐತೀರ್ಪನ್ನು ಉಲ್ಲಂಘಿಸುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಎರಡೂ ರಾಜ್ಯಗಳ ಅನುಮತಿ ಪಡೆಯಬೇಕು.ಆದರೆ, ಕರ್ನಾಟಕ ತಮಿಳುನಾಡಿಗೆ ಯಾವುದೇ ಮಾಹಿತಿ ನೀಡದೆ ಮೇಕೆದಾಟು ಯೋಜನೆ ಆರಂಭಿಸುತ್ತಿದೆ ಎಂದು ಪ್ರಧಾನಿ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು.
ತಮಿಳುನಾಡಿಗೂ ಪ್ರಯೋಜನ: ಈ ಯೋಜನೆಯಿಂದ ತಮಿಳುನಾಡಿಗೂ ಲಾಭವಿದೆ. ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರನ್ನು ಕಾಲಕ್ಕೆ ತಕ್ಕಂತೆ ನೆರೆ ರಾಜ್ಯ ತಮಿಳುನಾಡಿಗೆ ಬಿಡಬಹುದು. ಒಂದು ವೇಳೆ ಜಲವಿದ್ಯುತ್ ಯೋಜನೆ ಕೈಗೆತ್ತಿಕೊಂಡರೆ ವಿದ್ಯುತ್ ಉತ್ಪಾದನೆ ಬಳಿಕ ನೀರು ಸಹಜವಾಗಿ ತಮಿಳುನಾಡಿಗೆ ಹರಿಯುತ್ತದೆ. ಹಾಗಾಗಿ ಹರಿಯುವ ನೀರಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಇದರಿಂದ ಯಥಾ ಪ್ರಕಾರ ತಮಿಳುನಾಡಿಗೆ 192 ಟಿಎಂಸಿಗಿಂತ ಹೆಚ್ಚು ನೀರು ಹರಿಯುತ್ತದೆ.
ಕರ್ನಾಟಕದ ಸ್ಪಷ್ಟನೆಗಳು: ಮೇಕೆದಾಟು ಯೋಜನೆ ಬಗ್ಗೆ 2014ರ ಎಪ್ರಿಲ್ನಲ್ಲಿ ಕರ್ನಾಟಕ ಸರಕಾರ ಸ್ಪಷ್ಟನೆ ನೀಡಿದ್ದು, ಕಾವೇರಿ ನ್ಯಾಯಮಂಡಳಿ ತೀರ್ಪಿನ ಪುಟ ಸಂಖ್ಯೆ 1 ಹಾಗೂ ಷೆಡ್ಯೂಲ್9ರಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಪ್ರತೀ ತಿಂಗಳು ತಮಿಳುನಾಡಿಗೆ ಇಂತಿಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ತಿಳಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ನೀರು ಹರಿದು ಹೋಗುತ್ತದೆ. ಇಂತಹ ಸಂದರ್ಭದಲ್ಲಿ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಿ, ಯೋಜನೆಗೆ ಬಳಸಿಕೊಳ್ಳಲಾಗುವುದು. ಇದರಿಂದಾಗಿ ಕಾವೇರಿ ತೀರ್ಪಿನ ಉಲ್ಲಂಘನೆ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿತ್ತು.
ಮೇಕೆ ದಾಟು ಅಣೆಕಟ್ಟು ಯೋಜನೆ ಮತ್ತು ವಿವಾದ
♦ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ಆದೇಶದಂತೆ ಕರ್ನಾಟಕ ನಿಗದಿತ ಪ್ರಮಾಣದ ನೀರನ್ನು ತಮಿಳು–ನಾಡಿಗೆ ಬಿಟ್ಟಿರುವುದಕ್ಕೆ ಅಂಕಿಅಂಶ, ಸಾಕ್ಷ್ಯಾಧಾರಗಳು ಲಭ್ಯವಿವೆ. ಆದರೂ ಈ ವಿಚಾರದಲ್ಲಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಲೇ ಇರುತ್ತದೆ.
♦ ಉತ್ತಮವಾಗಿ ಮಳೆಯಾದಂತಹ ವರ್ಷಗಳಲ್ಲೂ ನೀರಿನ ಪ್ರಮಾಣದ ಬಗ್ಗೆ ತಮಿಳುನಾಡು ಆಕ್ಷೇಪ ಎತ್ತುತ್ತದೆ. ಇದನ್ನು ತಡೆಗಟ್ಟಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆಂಬುದು ಕರ್ನಾಟಕದ ಬಯಕೆ.
♦ ನ್ಯಾಯಮಂಡಳಿ ತಗ್ಗು ಪ್ರದೇಶಗಳಿಗೆ ನಿಗದಿಪಡಿಸಿರುವ ನೀರಿನ ಪ್ರಮಾಣಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕರ್ನಾಟಕ ತನ್ನ ಸ್ವಂತ ನಿರ್ಧಾರದ ಮೇಲೆ ಜಲ ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ.
♦ 49.452 ಟಿಎಂಸಿ ಅಡಿ ಶೇಖರಣಾ ಸಾಮರ್ಥ್ಯ ಹೊಂದಿರುವ ಕೃಷ್ಣರಾಜ–ಸಾಗರವು ರಾಜ್ಯದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಏಕೈಕ ಜಲಾಶಯ. ಇದು ಕಾವೇರಿ ನದಿಯ ಮೇಲ್ಭಾಗದಲ್ಲಿದ್ದು, ಜಲಾಶಯದ ಕೆಳಭಾಗದಲ್ಲಿ ನದಿಯು ತಮಿಳುನಾಡನ್ನು ಸೇರುವವರೆಗೆ ಯಾವುದೇ ಶೇಖರಣಾ ವ್ಯವಸ್ಥೆ ಕರ್ನಾಟಕದಲ್ಲಿ ಇಲ್ಲ. ಹೀಗಾಗಿ ಕಾವೇರಿಯು ತಮಿಳುನಾಡನ್ನು ಸೇರುವ ಸುಮಾರು 189 ಕಿ.ಮೀ.ವರೆಗೆ ಅನಿಯಂತ್ರಿತವಾಗಿ ಹರಿಯುತ್ತದೆ.
ತಮಿಳುನಾಡು ವಾದ ಏನು?
ಕಾವೇರಿ ನ್ಯಾಯಾಧಿಕರಣದಲ್ಲಿ ನೀರು ಹಂಚಿಕೆ ವಿಚಾರಣೆ ನಡೆಯುವ ವೇಳೆ ಮೇಕೆದಾಟು ವಿಚಾರ ಪ್ರಸ್ತಾಪವಾಗಿಲ್ಲ. ಆದರೆ ಕರ್ನಾಟಕ ಸರಕಾರ ಈಗ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು ನ್ಯಾಯಮಂಡಳಿಯ ತೀರ್ಪನ್ನು ಉಲ್ಲಂಘಿಸಿದೆ. ತಮಿಳುನಾಡಿಗೆ ನೈಸರ್ಗಿಕವಾಗಿಯೇ ಮಳೆ ಮೂಲಕ ಹೆಚ್ಚುವರಿ ನೀರು ಹರಿದು ಬರುತ್ತದೆ. ಆದರೆ, ಈ ಅಣೆಕಟ್ಟು ನಿರ್ಮಿಸುವ ಮೂಲಕ ಕರ್ನಾಟಕ ತಮಿಳುನಾಡಿನ ರೈತರ ಕೃಷಿಗೆ ಅಡ್ಡಗಾಲು ಹಾಕುತ್ತಿದೆ.


ಕರ್ನಾಟಕದ ವಾದ ಏನು?
ಪ್ರತಿವರ್ಷ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವುದು ನಮ್ಮ ಹೊಣೆ. ಒಂದು ವೇಳೆ ನಾವು ಅಷ್ಟು ಪ್ರಮಾಣದ ನೀರನ್ನು ಬಿಡದಿದ್ದರೆ ತಮಿಳುನಾಡು ಪ್ರಶ್ನಿಸುವುದು ಸರಿ. 2018ರಲ್ಲಿ ಭಾರೀ ಮಳೆಯಾದ ಪರಿಣಾಮ ಈಗಾಗಲೇ ಕರ್ನಾಟಕದಿಂದ 310 ಟಿಎಂಸಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ತಮಿಳುನಾಡಿಗೆ ಹರಿದುಹೋಗಿದೆ. ಮೆಟ್ಟೂರಿನಲ್ಲಿ ಅಧಿಕ ನೀರಿನ ಸಂಗ್ರಹ ಸಾಮರ್ಥ್ಯ ಇಲ್ಲದೇ ಇರುವ ಕಾರಣ 100 ಟಿಎಂಸಿಗೂ ಹೆಚ್ಚು ನೀರು ಸಮುದ್ರಕ್ಕೆ ಹರಿದು ಹೋಗಿದೆ. ಮೇಕೆದಾಟಿನಲ್ಲಿ ಅಣೆಕಟ್ಟು ಇದ್ದಿದ್ದರೆ ಕನಿಷ್ಠ 60 ಟಿಎಂಸಿ ಹಿಡಿದಿಟ್ಟುಕೊಳ್ಳಬಹುದಾಗಿತ್ತು. ಒಂದು ಡ್ಯಾಂ ಇದ್ದಿದ್ದರೆ ತಮಿಳುನಾಡಿಗೆ ತಿಂಗಳವಾರು ಕೋಟಾದಂತೆ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೂ ಅನುಕೂಲವಾಗುತ್ತಿತ್ತು. ನಾವು ಕುಡಿಯುವ ನೀರಿಗಾಗಿ ಡ್ಯಾಂ ಕಟ್ಟುತ್ತೇವೆಯೇ ಹೊರತು ವಿದ್ಯುತ್ ಉತ್ಪಾದನೆಯೇ ನಮ್ಮ ಮೂಲ ಉದ್ದೇಶ ಅಲ್ಲ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕೆಂದು ಅಂತರ್‌ರಾಷ್ಟ್ರೀಯ ಜಲ ನೀತಿಯೇ ಹೇಳಿದೆ. ಹೀಗಾಗಿ ನಾವು ಎತ್ತಿಕೊಂಡ ಮೇಕೆದಾಟು ಯೋಜನೆ ನ್ಯಾಯ ಸಮ್ಮತವಾಗಿದೆ.
ಕರ್ನಾಟಕಕ್ಕೆ ಈ ಅಣೆಕಟ್ಟು ಯಾಕೆ ಅಗತ್ಯ?
ಬೆಂಗಳೂರು ನಗರಕ್ಕೆ ನೀರು ಬರುವುದು ಕೆಆರ್ಎಸ್ ಡ್ಯಾಂನಿಂದ. ಮಳೆಗಾಲದಲ್ಲಿ ಡ್ಯಾಂ ಭರ್ತಿಯಾದರೆ ಬೆಂಗಳೂರು ಜನತೆಗೆ ನೀರು ಭಾಗ್ಯ. ಬೆಂಗಳೂರು ನಗರಕ್ಕೆ ಪ್ರತಿದಿನ 1,400 ದಶಲಕ್ಷ ಲೀಟರ್ ನೀರಿನ ಅಗತ್ಯವಿದೆ. ಬೇಸಿಗೆ ಸಮಯದಲ್ಲಿ ನೀರಿನ ಬೇಡಿಕೆ ಶೇ.15ರಷ್ಟು ಹೆಚ್ಚಾಗುತ್ತದೆ. ತಿಪ್ಪಗೊಂಡನಹಳ್ಳಿ ಜಲಾಶಯದಿಂದ 2012ರಲ್ಲಿ ನೀರು ಪಂಪಿಂಗ್ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬೆಂಗಳೂರಿನ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಇಲ್ಲಿ ಸಂಗ್ರಹವಾದ ಡ್ಯಾಂ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ ಬಳಸುವ ಉದ್ದೇಶ ರಾಜ್ಯ ಸರಕಾರದ್ದು
2007ರ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್‌ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು(ನ್ಯಾಯಾಲಯಗಳು ನೀಡುವ ಅಂತಿಮ ಆದೇಶಕ್ಕೆ ತೀರ್ಪು ಎಂದು ಕರೆದರೆ ನ್ಯಾಯಾಧಿಕರಣಗಳು ನೀಡುವ ಅಂತಿಮ ಆದೇಶಕ್ಕೆ ಐತೀರ್ಪು ಎಂದು ಕರೆಯಲಾಗುತ್ತದೆ) ನೀಡಿತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10, ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಎಂದು ಟಿಎಂಸಿ ನೀರನ್ನು ಹಂಚಲಾಯಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶಿಸಿತು.
ಕಾವೇರಿಯಲ್ಲಿ ಯಾರಿಗೆ ಎಷ್ಟು ನೀರು?
ಕಾವೇರಿ ನ್ಯಾಯಾಧಿಕರಣ ನೀಡಿದ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ 2018ರ ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿತ್ತು. ಈ ತೀರ್ಪಿನ ಅನ್ವಯ ಕರ್ನಾಟಕಕ್ಕೆ 284 ಟಿಎಂಸಿ, ತಮಿಳುನಾಡು 177.25 ಟಿಎಂಸಿ, ಕೇರಳ 30 ಟಿಎಂಸಿ, ಪುದುಚೇರಿಗೆ 10 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ.
ಯಾವ ತಿಂಗಳು ಎಷ್ಟು ಟಿಎಂಸಿ ನೀರು ಬಿಡಬೇಕು?
ಜೂನ್ 9.19, ಜುಲೈ 31.24, ಆಗಸ್ಟ್ 45.95, ಸೆಪ್ಟ್ಟಂಬರ್ 36.76, ಅಕ್ಟೋಬರ್ 20.22, ನವೆಂಬರ್ 13.78, ಡಿಸೆಂಬರ್ 7.35, ಜನವರಿ 2.76 ಟಿಎಂಸಿ ಬಿಡಬೇಕು. ಫೆಬ್ರವರಿ, ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ತಲಾ 2.5 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು.
ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಕರ್ನಾಟಕ ನಿರ್ಮಿಸಿರುವ ಅಣೆಕಟ್ಟುಗಳು ಹಾರಂಗಿ (ಕೊಡಗು), ಕಬಿನಿ (ಮೈಸೂರು), ಹೇಮಾವತಿ (ಹಾಸನ), ಕೆಆರ್ಎಸ್ (ಮಂಡ್ಯ)ದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದೆ.

Writer - ಕಳಕೇಶ್ ಗೊರವರ, ರಾಜೂರು

contributor

Editor - ಕಳಕೇಶ್ ಗೊರವರ, ರಾಜೂರು

contributor

Similar News

ಜಗದಗಲ
ಜಗ ದಗಲ