ಕೋಳಿಗಳನ್ನು ದಪ್ಪಗಾಗಿಸಲು ಉಪಯೋಗಿಸುವ ಔಷಧಿ ನಿಷೇಧಿಸಲು ಸರಕಾರದ ಚಿಂತನೆ

Update: 2018-12-05 08:45 GMT

ಹೊಸದಿಲ್ಲಿ, ಡಿ.5: ದೇಶದ ಹೈನುಗಾರಿಕೆ ಉದ್ಯಮದಲ್ಲಿ ಕೋಳಿಗಳನ್ನು ದಪ್ಪಗಾಗಿಸಲು ಹಾಗೂ ವೇಗವಾಗಿ ಬೆಳೆಯಲು ಅನುವು ಮಾಡಿಕೊಡುವ ಆ್ಯಂಟಿಬಯೋಟಿಕ್ ಕೊಲಿಸ್ಟಿನ್ ಅನ್ನು ನಿಷೇಧಿಸುವ ಪ್ರಸ್ತಾಪ ಕೇಂದ್ರ ಸರಕಾರದ ಮುಂದಿದೆ. ಹೈನುಗಾರಿಕೆಯಲ್ಲಿ ಉಪಯೋಗಿಸುವ ಕೊಲಿಸ್ಟಿನ್ ಪ್ರಭಾವದಿಂದಲೇ ಮಾನವರಲ್ಲಿ ಆ್ಯಂಟಿಬಯೋಟಿಕ್ ರೆಸಿಸ್ಟೆನ್ಸ್ ಕಂಡು ಬರುತ್ತದೆ ಎಂದು ತಿಳಿಯಲಾಗಿದೆ. ಸಾಮಾನ್ಯವಾಗಿ ಮನುಷ್ಯರಲ್ಲಿ ಆ್ಯಂಟಿ ಬಯೋಟಿಕ್ ಔಷಧಿಗಳು ಕೆಲಸ ಮಾಡದೇ ಇದ್ದಾಗ ಕೊನೆಯ ಯತ್ನವಾಗಿ ಕೊಲಿಸ್ಟಿನ್ ನೀಡಲಾಗುತ್ತದೆ.

ಲಂಡನ್ ಮೂಲದ ಬ್ಯುರೋ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ ಈ ಹಿಂದೆ ನಡೆಸಿದ ತನಿಖೆಯಲ್ಲಿ ಭಾರತದಲ್ಲಿ ಕೋಳಿಗಳಿಗೆ ಅತ್ಯಂತ ಹೆಚ್ಚು ಪರಿಣಾಮ ಬೀರುವ ಆ್ಯಂಟಿ ಬಯೋಟಿಕ್ ಔಷಧಿಗಳನ್ನು ನೀಡಲಾಗುತ್ತಿದೆ ಎಂದು ಪತ್ತೆ ಹಚ್ಚಿತ್ತು.

 ಪಶುವೈದ್ಯಕೀಯ ಇಲಾಖೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ,  ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಭಾರತದ ಡ್ರಗ್ಸ್ ಕಂಟ್ರೋಲರ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು  ಕೊಲಿಸ್ಟಿನ್ ಉಪಯೋಗಿಸುವ ಹಾಗಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಪ್ರಾಣಿಗಳಲ್ಲಿ ಈ ಔಷಧ ಉಪಯೋಗಿಸುವುದನ್ನು ನಿಲ್ಲಿಸಬೇಕು ಎಂದು ಭಾರತದ ಔಷಧಿ ತಾಂತ್ರಿಕ ಸಲಹಾ ಮಂಡಳಿ ನವೆಂಬರ್ 29ರಂದು ನಡೆದ ಸಭೆಯಲ್ಲಿ ತೀರ್ಮಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News