ಪ್ರತ್ಯೇಕ ರಾಜ್ಯ: ವಾಸ್ತವ ಮತ್ತು ಅವಾಸ್ತವಗಳು

Update: 2018-12-08 05:46 GMT

ಬಂಜಗೆರೆ ಜಯಪ್ರಕಾಶ್

ಮೈಸೂರು ಮಹಾರಾಜಾ ಕಾಲೇಜಿನಿಂದ ಪತ್ರಿಕೋದ್ಯಮ ಪದವಿಯನ್ನು, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎಸ್.ಡಬ್ಲ್ಯೂ. ಪದವಿಯನ್ನು, ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಆಫ್ ಲಿಟರೇಚರ್ ಪದವಿಯನ್ನು ಪಡೆದವರು ಬಂಜಗೆರೆ. ಜನರನ್ನು ಸಂಘಟಿಸಿ, ಜಾಗೃತಿಗೊಳಿಸಿ ನೀರಾವರಿ ಹೋರಾಟಗಳನ್ನು ಕಟ್ಟಿದರು. ವಸಂತ ಮೇಘಗರ್ಜನೆ (ಅನುವಾದ ಹಾಗೂ ಸಂಪಾದನೆ), ಲಾಲ್ ಬನೋ ಗುಲಾಮಿ ಛೋಡೋ ಬೋಲೊ ವಂದೇ ಮಾತರಮ್ (ಎನ್ಕೆ ಕವನಗಳ ಅನುವಾದ), ಮತ್ತೊಂದು ಪ್ರಸ್ಥಾನ (ಶ್ರೀ ಶ್ರೀ ಇವರ ತೆಲುಗು ಕವಿತೆಗಳ ಅನುವಾದ), ಸಮುದ್ರ ಮತ್ತು ಇತರ ಕವಿತೆಗಳು (ವರವರರಾವ್ ಇವರ ತೆಲುಗು ಕವಿತೆಗಳ ಅನುವಾದ), ತಲೆಮಾರು (ಅಲೆಕ್ಸ್ ಹೀಲಿಯ ’ರೂಟ್ಸ್’ ಕಾದಂಬರಿಯ ಸಂಗ್ರಹಾನುವಾದ), ದೇಗುಲದಲ್ಲಿ ದೆವ್ವ (ಗೂಗಿ ವಾ ಥಿಯಾಂಗೋನ ಡೆವಿಲ್ ಆನ್ ದ ಕ್ರಾಸ್ ಕಾದಂಬರಿಯ ಅನುವಾದ) ಸಹಿತ ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ಮಹತ್ವದ ವಿಮರ್ಶಾ ಕೃತಿಗಳನ್ನು ನೀಡಿದವರು. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು.

ಕಳೆದ 25-30 ವರ್ಷಗಳಿಂದ ಹೈದರಾಬಾದ್ ಕರ್ನಾಟಕದ ಕೆಲವು ಭಾಗಗಳಲ್ಲಿ ಕೆಲವು ರಾಜಕೀಯ ಮುಖಂಡರು ಹಾಗೂ ಸಂಘ ಸಂಸ್ಥೆಗಳು ಈ ಬೇಡಿಕೆಯನ್ನು ಆಗಾಗ ಎತ್ತುತ್ತಿದ್ದುದು ಜನರ ಗಮನದಲ್ಲಿದೆ. ಹಿರಿಯ ಮುಖಂಡರಾದ ವೈಜನಾಥ ಪಾಟೀಲರ ನೇತೃತ್ವದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆ ಎನ್ನುವ ವೇದಿಕೆಯು ಆ ಸಮಯದಲ್ಲಿ ಕ್ರಿಯಾಶೀಲವಾಗಿತ್ತು. ಕಡೆಗೊಮ್ಮೆ ವೈಜನಾಥ ಪಾಟೀಲರು ತಮ್ಮ ಪ್ರಾಂತದ ಅಭಿವೃದ್ಧಿಯ ಬೇಡಿಕೆಗಳು ಈಡೇರಿಸಲ್ಪಡುತ್ತಿಲ್ಲವೆಂಬ ಬೇಸರದಲ್ಲಿ, ಕನ್ನಡ ರಾಜ್ಯೋತ್ಸವದಂದೇ ಪ್ರತ್ಯೇಕ ಹೈದರಾಬಾದ್ ಕರ್ನಾಟಕ ರಾಜ್ಯದ ಭಾವುಟವನ್ನು ಹಾರಿಸಿ ರಾಜ್ಯೋತ್ಸವವನ್ನು ವಿರೋಧಿಸಿದ್ದರು. ಆಗ ಸಾಕಷ್ಟು ವಿವಾದ ಚರ್ಚೆಗಳು ನಡೆದವು.

ಕರ್ನಾಟಕ ಏಕೀಕರಣ ರೂವಾರಿಗಳು (ಎಡದಿಂದ ಬಲಕ್ಕೆ): ನಾಡಿಗರ್, ಜಿ.ಬಿ. ಜೋಶಿ,
ಕೆ.ವಿ. ಅಯ್ಯರ್, ಆಲೂರು ವೆಂಕಟರಾವ್, ವಿ.ಬಿ. ನಾಯಕ್, ಕರ್ಣ

ಪ್ರತ್ಯೇಕ ರಾಜ್ಯದ ಧ್ವಜವನ್ನು ಹಾರಿಸಿದ ಕ್ರಮವನ್ನು ತೀವ್ರವಾಗಿ ವಿರೋಧಿಸಲಾಯಿತು. ಕನ್ನಡಪರ ಸಂಘಟನೆಗಳು ವೈಜನಾಥ ಪಾಟೀಲರನ್ನು ತೀವ್ರವಾಗಿ ಟೀಕೆಗೊಳಪಡಿಸಿದವು. ಆ ಸಮಯದಲ್ಲಿ ಹೈದರಾಬಾದ್-ಕರ್ನಾಟಕದ ನೆರೆಯ ಪ್ರದೇಶವಾಗಿದ್ದ ಆಂಧ್ರಪ್ರದೇಶದ ತೆಲಂಗಾಣದಲ್ಲೂ ಇದೇ ಬಗೆಯ ಬೇಡಿಕೆಯನ್ನು ಮುಂದಿಟ್ಟುಕೊಂಡು ಹಲವು ವೇದಿಕೆಗಳು ಹೋರಾಟ ನಡೆಸಿದ್ದವು. ಕಾಲಾಂತರದಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ಬೇಡಿಕೆ ಸಾಕಾರಗೊಂಡದ್ದೂ ಆಯಿತು. ಹೈದರಾಬಾದ್-ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆಗೆ ಒಂದು ನ್ಯಾಯಯುತವಾದ ವಾಸ್ತವ ಸ್ಥಿತಿ ಕಾರಣವಾಗಿತ್ತು. ಕರ್ನಾಟಕಕ್ಕೆ ವಿಲೀನಗೊಂಡಾಗಿನಿಂದ ಆ ಭಾಗದ ಅಭಿವೃದ್ಧಿ ನಿರ್ಲಕ್ಷ್ಯಕ್ಕೊಳಪಟ್ಟಿತ್ತು. ಕರ್ನಾಟಕ ಏಕೀಕರಣಗೊಂಡ ನಂತರ ಕನ್ನಡಿಗರೆಲ್ಲರೂ ಕೂಡಿ ಸುವರ್ಣ ಕರ್ನಾಟಕವೊಂದನ್ನು ನಿರ್ಮಿಸಿಕೊಳ್ಳುತ್ತೇವೆ ಎಂಬುದು ಜನರ ಮನದಾಳದ ಬಯಕೆಯಾಗಿತ್ತು. ಹಾಗೆ ನೋಡಿದರೆ ಕರ್ನಾಟಕ ಏಕೀಕರಣದ ಕೂಗು ಮೊದಲು ಕೇಳಿ ಬಂದದ್ದೇ ಹೈದರಾಬಾದ್-ಕರ್ನಾಟಕ ಜಿಲ್ಲೆಗಳಲ್ಲಿ ಎಂಬುದನ್ನು ನಾವಿಲ್ಲಿ ಮರೆಯಬಾರದು. ತದನಂತರದಲ್ಲಿ ಮಹಾರಾಷ್ಟ್ರಕ್ಕೆ ಗಡಿಭಾಗದಲ್ಲಿರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಏಕೀಕರಣದ ಕೂಗು ಮತ್ತು ಹೋರಾಟ ಪ್ರಬಲಗೊಂಡಿತು.

ಆ ಸನ್ನಿವೇಶದಲ್ಲಿ ರಾಷ್ಟ್ರಕವಿ ಕುವೆಂಪು, ದಿ. ಶಾಂತವೇರಿ ಗೋಪಾಲಗೌಡ ಇಂತಹವರನ್ನು ಹೊರತುಪಡಿಸಿದರೆ ಹಳೇ ಮೈಸೂರು ಪ್ರಾಂತದ ಯಾವ ಪ್ರಭಾವಿ ನಾಯಕರೂ ಕರ್ನಾಟಕ ಏಕೀಕರಣಕ್ಕಾಗಿ ದನಿಯೆತ್ತಲಿಲ್ಲ. ಈ ಭಾಗದಲ್ಲಿ ಆ ಸಂಬಂಧವಾಗಿ ನಡೆದ ಹೋರಾಟವೂ ಕೂಡ ಹೋಲಿಕೆಯ ರೀತಿಯಲ್ಲಿ ಹೇಳುವುದಾದರೆ ಬಲವಾಗಿರಲಿಲ್ಲ. ಇದಕ್ಕೆ ಕಾರಣ ಮೈಸೂರು ಸಂಸ್ಥಾನ ಒಡೆಯರ್ ರಾಜವಂಶದ ಆಡಳಿತದಲ್ಲಿ, ಅದರಲ್ಲೂ ಮುಖ್ಯವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲಾವಧಿಯಲ್ಲಿ ಸಾಕಷ್ಟು ಶೈಕ್ಷಣಿಕ, ಆರ್ಥಿಕ ಬೆಳವಣಿಗೆಗಳನ್ನು ರೂಪಿಸಿಕೊಂಡಿತ್ತು. ಕೃಷ್ಣರಾಜಸಾಗರ ಯೋಜನೆ ಪೂರ್ಣಗೊಂಡು ಮೈಸೂರು ಸಂಸ್ಥಾನದ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಬಹಳಷ್ಟು ಭಾಗಗಳು ನೀರಾವರಿ ಕೃಷಿ ಆರಂಭಿಸಿದ್ದವು. ಯಾವ ನೀರಾವರಿ ಯೋಜನೆಗಳೂ ಇರದಿದ್ದ, ಶೈಕ್ಷಣಿಕವಾಗಿ, ಆರ್ಥಿಕವಾಗಿ ತೀರಾ ದುಃಸ್ಥಿತಿಯಲ್ಲಿದ್ದ ಹೈದರಾಬಾದ್-ಕರ್ನಾಟಕದ ಜಿಲ್ಲೆಗಳು, ಪದೇಪದೇ ಬರಗಾಲಕ್ಕೆ ಈಡಾಗುತ್ತಿದ್ದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಮೈಸೂರು ಸಂಸ್ಥಾನಕ್ಕೆ ಬಂದು ಸೇರಿಕೊಂಡರೆ ರಾಜ್ಯದ ಬೊಕ್ಕಸಕ್ಕೆ ಅಗತ್ಯವಾಗಿ ಅಭಿವೃದ್ಧಿ ವೆಚ್ಚದ ಬಿಕ್ಕಟ್ಟು ಉಂಟಾಗುತ್ತದೆ. ಇದರಿಂದ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದ ಮೈಸೂರು ಸಂಸ್ಥಾನದ ಬೆಳವಣಿಗೆ ಕುಂಠಿತಗೊಳ್ಳಬಹುದು ಎನ್ನುವ ಭಾವನೆ ಕೆಲವರದಾಗಿದ್ದರೆ, ಹೈದರಾಬಾದ್-ಕರ್ನಾಟಕ ಮತ್ತು ಉತ್ತರ ಕರ್ನಾಟಕ ಸೇರುವುದರಿಂದ ಏಕೀಕೃತ ಕರ್ನಾಟಕದಲ್ಲಿ ಮೈಸೂರು ಸಂಸ್ಥಾನದಲ್ಲಿದ್ದ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಜನಸಂಖ್ಯೆಯ ಕಾರಣಕ್ಕೆ ಎರಡನೆಯ ಸ್ಥಾನಕ್ಕೆ ಇಳಿದು ಲಿಂಗಾಯತ ಸಮುದಾಯದ ಪ್ರಾಬಲ್ಯ ಏರ್ಪಡುತ್ತದೆ ಎಂಬುದು ಕೂಡ ಒಂದು ಸಾಮಾಜಿಕವಾದ ಹಿಂಜರಿಕೆಯಾಗಿತ್ತು. ಇದೆಲ್ಲದರ ನಡುವೆ ಜನಸಾಮಾನ್ಯರ ಆಕಾಂಕ್ಷೆ, ಸಾಹಿತಿಗಳು, ಕನ್ನಡಪರ ಹೋರಾಟಗಾರರ ಅವಿರತ ಹೋರಾಟ, ಹಿರಿಯ ಪತ್ರಕರ್ತರ ಬೆಂಬಲ ಎಲ್ಲವೂ ಸೇರಿ ಕರ್ನಾಟಕ ಏಕೀಕರಣವಾಯಿತು. ಆದರೆ ಏಕೀಕರಣಗೊಂಡು ಮೂರು ದಶಕಗಳು ಕಳೆದರೂ ಹೈದರಾಬಾದ್-ಕರ್ನಾಟಕದಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಲಿಲ್ಲ. ಬೆಂಗಳೂರು ನಗರಕೇಂದ್ರಿತ ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿ ಚಟುವಟಿಕೆಗಳು ಮಾತ್ರ ತೀವ್ರವಾಗಿ ನಡೆದವು. ಸಾರ್ವಜನಿಕ ವಲಯದ ಕೈಗಾರಿಕೆಗಳು, ವ್ಯಾಪಾರೋದ್ಯಮ, ಸಾರಿಗೆ ಸಂಪರ್ಕವ್ಯವಸ್ಥೆ ಎಲ್ಲವೂ ರಾಜಧಾನಿ ಕೇಂದ್ರಿತವಾಗಿತ್ತೇ ಹೊರತು ದೂರದ ಹೈದರಾಬಾದ್-ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಯಾವುದೇ ಬಗೆಯ ಅಭಿವೃದ್ಧಿಯನ್ನು, ಉದ್ಯೋಗ ಸೃಷ್ಟಿಯನ್ನು, ಶೈಕ್ಷಣಿಕ ಪ್ರಗತಿಯನ್ನು ಕಾಣದೇ ಉಳಿದುಕೊಂಡವು.

ಇಂತಹ ಸನ್ನಿವೇಶದಲ್ಲಿ ವಿವಿಧ ರಾಜಕೀಯ ನಾಯಕರು ಸರಕಾರದ ಮುಂದೆ ಬೇಡಿಕೆ ಮಂಡಿಸಿ, ಶಾಸನ ಸಭೆಯಲ್ಲಿ ವಾದೋಪವಾದ ಮಾಡಿದರೂ ಪರಿಣಾಮ ಕಾಣದೆ ಸಿಟ್ಟಿಗೆದ್ದು ಹೈದರಾಬಾದ್-ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಡಲಾಯಿತು. ಅಂತಹ ಬೇಡಿಕೆಯೊಂದು ಬಹಿರಂಗವಾಗಿ ಅಭಿವ್ಯಕ್ತಿಗೊಂಡಾಗ ಕರ್ನಾಟಕದ ಸರಕಾರ, ರಾಜಕೀಯ ಪಕ್ಷಗಳು, ಕನ್ನಡ ಸಂಘಸಂಸ್ಥೆಗಳು, ಸಾಹಿತಿ-ಬುದ್ಧಿಜೀವಿ, ಪತ್ರಕರ್ತರು ತೀವ್ರ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿತ್ತು. ಹಾಗೆ ನೋಡಿದರೆ ಹೈದರಾಬಾದ್-ಕರ್ನಾಟಕದಲ್ಲಿ ಪ್ರಮುಖ ಸಾಹಿತಿಗಳಾಗಲೀ, ಗಣ್ಯ ಪತ್ರಕರ್ತರಾಗಲೀ, ಪ್ರಬಲ ರಾಜಕೀಯ ಮುಖಂಡರಾಗಲೀ, ಬಲಿಷ್ಠ ಸಂಘಸಂಸ್ಥೆಗಳಾಗಲೀ ಇರಲಿಲ್ಲ.

ಅಂತಹ ಸನ್ನಿವೇಶದಲ್ಲಿ ಸಹೋದರರ ಪರಿಸ್ಥಿತಿಯನ್ನು ಸಹಾನುಭೂತಿಯಿಂದ ಗಮನಿಸಿ, ಆಸಕ್ತಿವಹಿಸಿ ಅಭಿವೃದ್ಧಿ ಯೋಜನೆಗಳ ಮಂಜೂರಾತಿಗೆ ಹಾಗೂ ಅನುಷ್ಠಾನಕ್ಕೆ ದನಿ ಎತ್ತಬೇಕಾಗಿತ್ತು. ಆದರೆ ಅದೇನೂ ಸಂಭವಿಸಲಿಲ್ಲ. ಆ ಸಂದರ್ಭದಲ್ಲಿ ಕರ್ನಾಟಕ ವಿಮೋಚನಾರಂಗ ಹಾಗೂ ಕೇವಲ ಕೆಲವೇ ಕನ್ನಡಪರ ಸಂಘಟನೆಗಳು ಮಾತ್ರ ಒಂದಷ್ಟು ಗಮನ ಹರಿಸಿ ಹೈದರಾಬಾದ್-ಕರ್ನಾಟಕದ ಜನರ ನೋವಿಗೆ ಸ್ಪಂದಿಸಿದ್ದವು. ಈ ಹಿನ್ನೆಲೆಯಲ್ಲಿ ಹೈದರಾಬಾದ್-ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಹಾಗೂ ಪ್ರತ್ಯೇಕ ಧ್ವಜದ ಧ್ವಜಾರೋಹಣ ನಡೆದಿದ್ದವು. ಹೈದರಾಬಾದ್-ಕರ್ನಾಟಕ ವಿಮೋಚನಾ ವೇದಿಕೆಯೂ ಸೇರಿದಂತೆ ಈ ಬಗೆಯ ಬೇಡಿಕೆಯನ್ನು ಮುಂದಿಟ್ಟಿದ್ದ ಬಹುಪಾಲು ಹೋರಾಟಗಾರರ ವೈಯಕ್ತಿಕ ಪರಿಚಯ ಹಾಗೂ ನಿಕಟ ಸಂಪರ್ಕ ಆಗ ಕರ್ನಾಟಕ ವಿಮೋಚನಾ ರಂಗದ ಅಧ್ಯಕ್ಷನಾಗಿದ್ದ ನನಗಿದ್ದವು. ಸಾಲದ್ದಕ್ಕೆ ನಮ್ಮ ಸಂಘಟನೆಯ ಪ್ರಮುಖ ಹೋರಾಟಗಳ ಭೂಮಿಕೆ ಕೂಡ ಬೀದರ್, ರಾಯಚೂರು, ಗುಲ್ಬರ್ಗ ಮುಂತಾದ ಕಡೆಯಲ್ಲೇ ಇತ್ತು. ನನಗೆ ನಿಚ್ಚಳವಾಗಿ ಗೊತ್ತಿರುವಂತೆ ಪ್ರತ್ಯೇಕ ಹೈದರಾಬಾದ್-ಕರ್ನಾಟಕದ ಬೇಡಿಕೆ ಮುಂದಿಟ್ಟಿದ್ದ ಯಾರಿಗೂ ನಿಜವಾಗಿ ಕರ್ನಾಟಕದಿಂದ ಬೇರ್ಪಡಬೇಕೆಂಬ ತೀವ್ರ ಬಯಕೆ, ಗುರಿ ಇರಲಿಲ್ಲ. ಕಟ್ಟಕಡೆಯ ಸಾಧನವಾಗಿ ತಮ್ಮ ಅಸಮಾಧಾನ ಪ್ರಕಟಿಸುವ ವಿಧಾನವಾಗಿ ಆ ಬಗೆಯ ಬೇಡಿಕೆಯನ್ನು ಇಟ್ಟಿದ್ದರು. ಅವರಿಗೆ ನಿಜವಾಗಿ ಬೇಕಾಗಿದ್ದದ್ದು ಕರ್ನಾಟಕದಲ್ಲೇ ಇದ್ದು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕೆಂಬುದು ಮಾತ್ರ. ಇದೊಂದು ಹಿನ್ನೆಲೆಯ ಅವಲೋಕನ. ಈಚೆಗೆ ಕೆಲವು ಬಿಜೆಪಿ ರಾಜಕಾರಣಿಗಳು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಎಂಬ ಬೇಡಿಕೆಯನ್ನು ಮುಂದಿಟ್ಟರು. ಯಾವುದೇ ಪ್ರದೇಶದ ಜನ ಪ್ರತ್ಯೇಕ ರಾಜ್ಯದ ಬೇಡಿಕೆ ಮಂಡಿಸಿದಾಗ, ಅಂತಹದೊಂದು ಅಭಿಪ್ರಾಯವನ್ನು ಬಹಿರಂಗಪಡಿಸಿದಾಗ ತಕ್ಷಣ ಅವರನ್ನು ಕರ್ನಾಟಕದ ವಿರೋಧಿಗಳಂತೆ, ಖಳನಾಯಕರಂತೆ ಭಾವಿಸಿ ಆಲೋಚಿಸುವುದು ಅಗತ್ಯವಿಲ್ಲವೆಂಬುದು ನನ್ನ ವೈಯಕ್ತಿಕ ನಿಲುವು.

ಅದರ ಬದಲಾಗಿ ಅಂತಹದೊಂದು ಬೇಡಿಕೆ ಯಾವುದಾದರೊಂದು ಭಾಗದಿಂದ ವ್ಯಕ್ತಗೊಂಡೊಡನೆ ನಾವು ಆ ಪ್ರದೇಶದ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ವಸ್ತುಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಬೇಕು. ಬೇಡಿಕೆಯನ್ನು ಮುಂದಿಡುತ್ತಿರುವವರು ಯಾವ ನೆಲೆಗಟ್ಟಿನಿಂದ ಹಾಗೂ ಯಾವ ಕಾರಣದಿಂದ ಇಂತಹ ನಿಲುವನ್ನು ಪ್ರಕಟಿಸಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಈ ಬಗೆಯದೊಂದು ಆಲೋಚನಾ ಕ್ರಮದಿಂದ ಪ್ರತ್ಯೇಕ ಉತ್ತರ ಕರ್ನಾಟಕ ಬೇಡಿಕೆಯನ್ನು ಪರಿಶೀಲನೆ ಮಾಡಿ ನೋಡಿದರೆ ಅದು ಸಂಪೂರ್ಣವಾಗಿ ಅಸಾಧುವಾದುದು. ಕೇವಲ ಒಂದು ರಾಜಕೀಯ ಪಕ್ಷದ ಹಿತಾಸಕ್ತಿಯನ್ನು ಈಡೇರಿಸುವ ಗುಪ್ತ ಗುರಿಯನ್ನು ಹೊಂದಿದೆ ಎಂಬುದು ತಿಳಿಯುತ್ತದೆ. ಕರ್ನಾಟಕ ಏಕೀಕರಣಗೊಂಡ ನಂತರ ಅತ್ಯಂತ ಹೆಚ್ಚು ಸಲ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಆಳಿದವರು, ಅತ್ಯಂತ ಹೆಚ್ಚು ಕಾಲ ಆಳಿದವರು ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳೇ ಆಗಿದ್ದಾರೆ. ಎಸ್. ನಿಜಲಿಂಗಪ್ಪನವರು ಉತ್ತರ ಕರ್ನಾಟಕದವರಲ್ಲವಾದರೂ ಅವರ ಬೆಂಬಲದ ನೆಲೆಗಟ್ಟು ಹಾಗೂ ಅವರ ಆಸ್ಥೆಗಳೆಲ್ಲವೂ ಉತ್ತರ ಕರ್ನಾಟಕಕೇಂದ್ರಿತವಾಗಿತ್ತು ಎಂದು ಹೇಳಲು ಸಾಕಷ್ಟು ಕಾರಣಗಳು ಸಿಗುತ್ತವೆ. ಇತಿಹಾಸದಲ್ಲೂ ಇದಕ್ಕೆ ಪೂರಕವಾದ ಬೇಕಾದಷ್ಟು ನಿದರ್ಶನಗಳಿವೆ.

ಹಾಗೆಂದ ಮಾತ್ರಕ್ಕೆ ಅವರು ಪಕ್ಷಪಾತದ ಆಳ್ವಿಕೆ ನಡೆಸಿದರು ಎಂದು ನಾನು ಹೇಳುತ್ತಿಲ್ಲ. ಅಭಿವೃದ್ಧಿಯ ವಿಷಯಕ್ಕೆ ಬಂದರೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮುಂತಾದ ಜಿಲ್ಲೆಗಳು ಸಾಕಷ್ಟು ಅಭಿವೃದ್ಧಿಯನ್ನು ಹಲವು ಕ್ಷೇತ್ರಗಳಲ್ಲಿ ಕಂಡಿವೆ. ಶೈಕ್ಷಣಿಕವಾಗಿ, ಕೈಗಾರಿಕಾಭಿವೃದ್ಧಿಯ ದೃಷ್ಟಿಯಿಂದ, ಕೃಷಿಯ ದೃಷ್ಟಿಯಿಂದ ಕೂಡ ಅವು ಹೈದರಾಬಾದ್-ಕರ್ನಾಟಕದ ಹೋಲಿಕೆಗೆ ನಿಲ್ಲುವಂತಹವುಗಳಲ್ಲ. ರಾಜ್ಯದ ಹಲವು ಪ್ರಭಾವಿ ಮುಖಂಡರು ಆ ಭಾಗದಿಂದ ಬಂದವರೇ ಆಗಿದ್ದಾರೆ. ಮೈಸೂರು-ಬೆಂಗಳೂರನ್ನು ಹೊರತುಪಡಿಸಿದರೆ ಪ್ರತಿಷ್ಠಿತವಾದ, ಮಾನ್ಯರಾದ ಅತಿ ಹೆಚ್ಚು ಸಾಹಿತಿ-ಬುದ್ಧಿಜೀವಿಗಳು, ಪತ್ರಕರ್ತರು ಹುಬ್ಬಳ್ಳಿ- ಧಾರವಾಡದಿಂದ ಮೂಡಿಬಂದವರೆಂಬ ಹೆಮ್ಮೆ ಅವರಿಗಿದೆ. ಕನ್ನಡ ಭಾಷೆಯ ಜೊತೆಗೆ ಗಡಿಪ್ರದೇಶಗಳಲ್ಲಿ ಮರಾಠಿ ಭಾಷಿಕರ ಪೈಪೋಟಿ ಹಾಗೂ ಒಂದು ಪ್ರಮಾಣದ ಸಂಘರ್ಷ ಇದೆಯೆನ್ನುವುದನ್ನು ಹೊರತುಪಡಿಸಿದರೆ ಪ್ರತ್ಯೇಕ ರಾಜ್ಯ ಬೇಡಿಕೆ ಎತ್ತುವುದಕ್ಕೆ ಸಮರ್ಪಕವಾದ ವಸ್ತುಸ್ಥಿತಿಯ ಕಾರಣಗಳೇ ಕಂಡುಬರುವುದಿಲ್ಲ. 2018ರ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗಳಿಸಿ, ಕುದುರೆ ವ್ಯಾಪಾರದ ಭರವಸೆಯೊಂದಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾಯಿತು. ಆದರೆ ಚುನಾವಣೆಯ ಮಾರನೇ ದಿನವೇ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಗೆ ಕಾಂಗ್ರೆಸ್ ಬೆಂಬಲ ನೀಡಿದ್ದರಿಂದ, ಕುದುರೆ ವ್ಯಾಪಾರ ನಡೆಯದಂತೆ ಹದ್ದಿನ ಕಣ್ಣಿನ ಕಾವಲು ಇರಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಎಂಎಲ್‌ಎಗಳನ್ನು ಕಾಪಾಡಿಕೊಂಡಿದ್ದರಿಂದ ಸದನದಲ್ಲಿ ಬಹುಮತ ಸಾಬೀತಿಗೆ ಅವಕಾಶವಾಗದೆ ಯಡಿಯೂರಪ್ಪ ಸ್ವಯಂ ರಾಜೀನಾಮೆ ಘೋಷಿಸಿದರು. ಇದರಿಂದ ಬಿಜೆಪಿಗೆ ತೀವ್ರ ಮುಖಭಂಗವಾಯಿತು. 2019ರ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲಿಸಿಕೊಳ್ಳಲು ರಾಜ್ಯ ಸರಕಾರ ತಮ್ಮ ಕೈಯಲ್ಲಿದ್ದರೆ ಸೂಕ್ತ ಎಂದು ಯೋಜನೆ ಹಾಕಿಕೊಂಡಿದ್ದ ಬಿಜೆಪಿ ಇದರಿಂದ ಹತಾಶಗೊಂಡಿತು.

ಸಂಘಟನಾತ್ಮಕವಾಗಿ ಹಾಗೂ ಮತದಾರರ ಬೆಂಬಲ ದೃಷ್ಟಿಯಿಂದ ಉತ್ತರ ಕರ್ನಾಟಕ ಹಾಗೂ ಒಂದು ಮಟ್ಟಿಗೆ ಹೈದರಾಬಾದ್-ಕರ್ನಾಟಕಗಳೇ ಬಿಜೆಪಿಯ ಪ್ರಮುಖ ಕಾರ್ಯಕ್ಷೇತ್ರಗಳು. ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಸಂಸ್ಥಾನವನ್ನು ಬೇರ್ಪಡಿಸಿದರೆ ತಮ್ಮ ಮತದಾರ ಬೆಂಬಲಿಗರು, ಅದರಲ್ಲೂ ಲಿಂಗಾಯತ ಸಮುದಾಯದ ಪ್ರಾಬಲ್ಯ ಹಾಗೂ ಮಠಮಾನ್ಯಗಳ ಬಿಗಿಯಾದ ಹಿಡಿತ ಹೊಂದಿರುವ ಉತ್ತರ ಕರ್ನಾಟಕದಲ್ಲಿ ಬಿಜೆಪಿಯೇ ಅಬಾಧಿತವಾಗಿ ರಾಜ್ಯಭಾರ ಮಾಡಬಹುದೆಂಬ ರಾಜಕಾರಣದ ತಂತ್ರದೊಂದಿಗೆ, ಮುಖ್ಯಮಂತ್ರಿ ಪಟ್ಟ ಯಡಿಯೂರಪ್ಪ ಅವರ ಕೈ ತಪ್ಪಲು ಕಾರಣರಾದ ಒಕ್ಕಲಿಗ ಸಮುದಾಯದ ಮುಖ್ಯ ಬೆಂಬಲ ಹೊಂದಿರುವ ಪಕ್ಷವೆಂಬಂತಿರುವ ಜೆಡಿಎಸ್ ಮೇಲಿನ ಕೋಪದಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಎಂಬ ಘೋಷಣೆಯನ್ನು ಮೊಳಗಿಸಲಾಯಿತು. ಒಂದು ರಾಜಕೀಯ ಪಕ್ಷ ತನ್ನ ಆಳ್ವಿಕೆಗೆ ಸುಲಭವಾಗುತ್ತದೆ ಎಂಬ ಆಲೋಚನೆಯಿಂದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಏಕೀಕೃತ ಕರ್ನಾಟಕದಲ್ಲಿ ಪರಸ್ಪರ ಸಹಬಾಳ್ವೆ, ವಿಶ್ವಾಸ, ಸಹಕಾರ, ನಾವು ಒಂದೆಂಬ ಅಭಿಮಾನದಿಂದ ಬಾಳುತ್ತಿರುವ ಜನತೆಯನ್ನು ಜಾತಿ ರಾಜಕಾರಣದ ತಂತ್ರದೊಂದಿಗೆ ಒಡೆಯಬೇಕೆಂದು ಬಯಸಿದ್ದು ಕನ್ನಡ ನಾಡಿಗೆ, ಅದರ ಪರಂಪರೆಗೆ ಎಸಗಿದ ಅಪಚಾರವಾಗಿದೆ. ಕನ್ನಡಿಗರು ಭಾವನಾತ್ಮಕವಾಗಿ ಜಾತಿ-ಧರ್ಮಗಳನ್ನು ಮೀರಿ ಒಂದುಗೂಡಿದ್ದಾರೆ. ಕರ್ನಾಟಕವೆಂಬುದೊಂದು ಸರ್ವ ಜಾತಿ, ಧರ್ಮ, ಪಂಗಡ, ಸಂಸ್ಕೃತಿಗಳ, ಆರಾಧನಾ ಪಂಥಗಳ, ಧಾರ್ಮಿಕ ದರ್ಶನಗಳ ಒಕ್ಕೂಟವಾಗಿ ಇರುವ ಭಾಷಾರಾಷ್ಟ್ರೀಯತೆ.

ಇಲ್ಲಿ ಧರ್ಮ ಪ್ರಧಾನ, ಜಾತಿ ಪ್ರಧಾನ, ಪ್ರದೇಶ ಪ್ರಧಾನ ವಾದಗಳಿಗಿಂತ ನುಡಿಯ ಹಿರಿಮೆ-ಗರಿಮೆಗಳೇ, ಭಾಷೆ ಬೆಸೆದಿರುವ ಸಹೋದರ ಬಾಂಧವ್ಯಗಳೇ ನಿರ್ಣಾಯಕ. ಕನ್ನಡ ಭಾಷೆಯನ್ನಾಡುವ ಜನ ಕರ್ನಾಟಕದವರು ಎಂಬ ನೆಲೆಗಟ್ಟು ಪ್ರಧಾನವಾಗಿ ಜನರ ಮನಸ್ಸಿನಲ್ಲಿರುವವರೆಗೆ ಇಲ್ಲಿ ಜಾತಿ ಧರ್ಮಗಳೆಲ್ಲ ಖಾಸಗಿ ವಿಷಯಗಳಾಗಿಬಿಡುತ್ತವೆ. ಆಹಾರ ವಿಹಾರಗಳೆಲ್ಲ ವ್ಯಕ್ತಿಗಳಿಗೆ ಸಂಬಂಧಿಸಿದ ಅಂಶಗಳಾಗಿ ನಿಲ್ಲುತ್ತವೆ. ಆದ್ದರಿಂದಲೇ ಬಿಜೆಪಿಯಂತಹ ಧರ್ಮದ ಹೆಸರಿನ ರಾಜಕಾರಣ ಮಾಡುವ ಜನಸಮುದಾಯಗಳನ್ನು ವಿಂಗಡಿಸಿ ಪರಸ್ಪರ ಎದುರಾಬದುರಾ ನಿಲ್ಲಿಸುವ ಹಾಗೂ ವೈಷಮ್ಯ ಬೆಳೆಸುವ ಹಾದಿಗೆ ಒಂದು ಭಾಷಾ ರಾಷ್ಟ್ರೀಯತೆ ಎಂದಿದ್ದರೂ ಅಡ್ಡಗಾಲು ಹಾಕುವಂಥಾದ್ದೇ. ಬಿಜೆಪಿ ಸಂವಿಧಾನ ಹಾಗೂ ಮನಃಸ್ಥಿತಿಗೆ ಕನ್ನಡ ಭಾಷೆ ನೆಪ ಮಾತ್ರ. ಅವರಿಗೆ ದೇವ ಭಾಷೆ ಸಂಸ್ಕೃತ, ರಾಷ್ಟ್ರಭಾಷೆ ಎಂದು ಆರೋಪಿಸಲ್ಪಡುವ ಹಿಂದಿ ಬಹಳ ಮುಖ್ಯ. ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ, ತೆಲಂಗಾಣ ಎಂಬ ದಕ್ಷಿಣ ಭಾರತೀಯ ರಾಜ್ಯಗಳು ತಮ್ಮ ಭಾಷಾ ಸಹೋದರತೆಯ ಮುಖಾಂತರ ನೆಲೆಗೊಂಡಿರುವುದು ಹಾಗೂ ಪ್ರಾದೇಶಿಕ ಹಿತಾಸಕ್ತಿಗಳ ಪ್ರಧಾನ ನೆಲೆಗಟ್ಟನ್ನು ಹೊಂದಿರುವುದು ಜಾತಿ-ಮತ-ಪಂಥಗಳ ನಡುವೆ ಸಾಮರಸ್ಯದ ಪರಂಪರೆಯನ್ನು ರೂಢಿಸಿಕೊಂಡು ಬಂದಿರುವುದು ಬಿಜೆಪಿ ಬಯಸುವ ಏಕಾಕೃತಿ, ಏಕಭಾಷೆ, ಏಕಧರ್ಮ, ಏಕಸಂಸ್ಕೃತಿ ಎನ್ನುವಂತಹ ನಿಲುವುಗಳಿಗೆ ಬಹಳ ಭಿನ್ನವಾದುದು.

►ಏಕೀಕರಣಕ್ಕೂ ಮೊದಲು ಚದುರಿ ಹೋಗಿದ್ದ ಕರ್ನಾಟಕ

ದಕ್ಷಿಣ ಭಾರತೀಯ ರಾಜ್ಯಗಳ ಈ ಸಂರಚನೆಯ ನೆಲೆಗಟ್ಟು ಬಿಜೆಪಿಗೆ ಆಂತರಂಗಿಕವಾಗಿ ಕಣ್ಣುಕಿಸುರಿನ ವಿಷಯ. ಅದು 2018ರ ಚುನಾವಣೆಯ ನಂತರ ಬಹಿರಂಗವಾಗಿ ಕರ್ನಾಟಕದಲ್ಲಿ ಅದರ ಕೆಲವು ನಾಯಕರಿಂದಲೇ ಪ್ರಕಟಗೊಂಡಿತು. ಹೀಗೆಂದ ಮಾತ್ರಕ್ಕೆ ಕರ್ನಾಟಕದ ಬಿಜೆಪಿಯ ಎಲ್ಲ ನಾಯಕರೂ ಇದರೊಂದಿಗೆ ಸಹಮತ ಹೊಂದಿದ್ದಾರೆಂದು ಹೇಳಲು ಆಧಾರಗಳಿಲ್ಲ. ಸ್ವತಃ ಯಡಿಯೂರಪ್ಪ, ಕೆ ಎಸ್ ಈಶ್ವರಪ್ಪ, ಆರ್. ಅಶೋಕ್, ಸದಾನಂದಗೌಡ ಮುಂತಾದವರೂ ಕೂಡ ಈ ಬಗೆಯ ನಿಲುವಿಗೆ ಬೆಂಬಲಿಸಿದ್ದಾರೆಂದು ಹೇಳಲು ಆಧಾರಗಳಿಲ್ಲ. ಇದೇನೇ ಇರಲಿ ಅವಾಸ್ತವಿಕ ನೆಲೆಗಟ್ಟಿನಿಂದ ಕೇವಲ ರಾಜಕೀಯ ಪಕ್ಷವೊಂದರ ಹಿತಾಸಕ್ತಿಯ ದೃಷ್ಟಿಯಿಂದ ಕರ್ನಾಟಕವನ್ನು ಜಾತಿ ಸಮುದಾಯಗಳ ಪ್ರಾಬಲ್ಯದ ಆಧಾರದಲ್ಲಿ ಅಥವಾ ಕೋಮುಭಾವನೆಗಳ ಆಧಾರದಲ್ಲಿ ಒಡೆಯಬೇಕೆಂದು ಅಪೇಕ್ಷಿಸುವುದು, ಅದಕ್ಕಾಗಿ ಪ್ರತ್ಯೇಕ ರಾಜ್ಯ ಬೇಕೆಂದು ಬೇಡಿಕೆಯನ್ನಿಡುವುದು ನಮ್ಮ ಪರಂಪರೆಯ ದೃಷ್ಟಿಯಿಂದ, ಕರ್ನಾಟಕದ ಒಟ್ಟಾರೆ ದೃಷ್ಟಿಯಿಂದ ಇಲ್ಲಿನ ಜನತೆಯ ಸಾಮರಸ್ಯ ಹಾಗೂ ಸಹಬಾಳ್ವೆಗಳ ದೃಷ್ಟಿಯಿಂದ ಅಪಾಯಕಾರಿಯಾದುದು. ಆಲೋಚನೆಗೆ, ಅವಲೋಕನಕ್ಕೆ ಅರ್ಹವಲ್ಲದ್ದು. ಆದ್ದರಿಂದ ಇಂತಹ ಭಾವನೆಗಳನ್ನು, ಕಾರ್ಯಯೋಜನೆಗಳನ್ನು ಜನತೆಯ ನಡುವೆ ಹರಡುವುದು ಖಂಡಿತವಾಗಿ ಬೆಂಬಲಕ್ಕೆ ಅರ್ಹವಲ್ಲ. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶಗಳನ್ನೂ ಒಳಗೊಂಡಂತೆ ಎಂಬ ಹೇಳಿಕೆಯನ್ನು ನೀಡಲಾಗಿತ್ತು. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಗಾಗಿ ಉತ್ತರ ಕರ್ನಾಟಕ ಬಂದ್‌ಗೂ ಕರೆಕೊಡಲಾಗಿತ್ತು. ಆದರೆ ಈ ಬೇಡಿಕೆಗೆ ಹೈದರಾಬಾದ್-ಕರ್ನಾಟಕದ ಯಾವ ಜಿಲ್ಲೆಯಲ್ಲೂ ನೆಪಮಾತ್ರದ ಬೆಂಬಲವೂ ದೊರೆಯಲಿಲ್ಲ. ಹೈದರಾಬಾದ್ ಕರ್ನಾಟಕದ ಪ್ರಮುಖ ನಾಯಕರೊಬ್ಬರು ನನ್ನ ಜೊತೆ ಖಾಸಗಿಯಾಗಿ ಮಾತನಾಡುವಾಗ ಹೇಳಿದಂತೆ ‘ಹೈದರಾಬಾದ್-ಕರ್ನಾಟಕದ ಪ್ರಗತಿಗೆ ಸಂವಿಧಾನದ 371 ಜೆ ಕಲಮು ಒಂದು ಆಶಾಕಿರಣವಾಗಿದೆ. ಅದರಿಂದ ನಮ್ಮ ಸಂಕ್ಷೇಮ ಸಾಧಿತವಾಗುತ್ತದೆ ಎಂಬ ಪೂರ್ಣ ನಂಬಿಕೆಯೊಂದಿಗೆ ನಾವಿದ್ದೇವೆ. ನಾವು ಏನಿದ್ದರೂ ಏಕೀಕೃತ ಕರ್ನಾಟಕದ ಜೊತೆಗಿರುವವರೇ ಹೊರತು ಪ್ರತ್ಯೇಕ ಉತ್ತರ ಕರ್ನಾಟಕ ಎಂದು ಹೇಳುವವರ ಜೊತೆ ಹೋಗುವವರಲ್ಲ.

ನಮಗೆ ಕರ್ನಾಟಕ ಏಕೀಕರಣದ ಬೆಲೆ ಏನೆಂಬುದು ಗೊತ್ತಿದೆ. ನಮ್ಮ ಅಳಲು ಏನಿದ್ದರೂ ಅಭಿವೃದ್ಧಿಗಾಗಿ ಮಾತ್ರ. ಕನ್ನಡಿಗರನ್ನು ಬೇರ್ಪಡಿಸುವುದು ನಮ್ಮ ಆಲೋಚನೆಗಳಲ್ಲಿ ಬರಲು ಸಾಧ್ಯವಿಲ್ಲ. ಸಾಲದ್ದಕ್ಕೆ ಉತ್ತರ ಕರ್ನಾಟಕದವರು ಎಲ್ಲಾ ವಿಧಗಳಲ್ಲೂ ನಮಗಿಂತ ಬಹಳ ಬಲಿಷ್ಠರು. ಅವರ ಜೊತೆ ಹೋದರೆ ನಮ್ಮನ್ನು ನುಂಗಿ ಹಾಕುತ್ತಾರಷ್ಟೆ. ನಮಗಿದು ಗೊತ್ತಿದೆ’. ಈ ಮಾತುಗಳು ಏನನ್ನು ಪ್ರತಿಬಿಂಬಿಸುತ್ತಿವೆ? ಕರ್ನಾಟಕದ ಬಗ್ಗೆ ಹೈದರಾಬಾದ್-ಕರ್ನಾಟಕ ಜನರಿಗಿರುವ ಭಾವನಾತ್ಮಕ ಸ್ಪಂದನ ಈ ಬಗೆಯದಾಗಿ�

Writer - ಬಂಜಗೆರೆ ಜಯಪ್ರಕಾಶ್

contributor

Editor - ಬಂಜಗೆರೆ ಜಯಪ್ರಕಾಶ್

contributor

Similar News

ಗಾಂಧೀಜಿ