ಇಮಾಮ್ ಶಾಫಿಈ (ರ) ಅವರ ಕೆಲವು ಅಮೂಲ್ಯ ಹಿತನುಡಿಗಳು

Update: 2018-12-05 12:51 GMT

ಅಬೂ ಅಬ್ದುಲ್ಲಾಹ್ ಮುಹಮ್ಮದ್ ಇಬ್ನು ಇದ್ರೀಸ್ ಶಾಫಿಈ (ರ) ಅವರು ಇಸ್ಲಾಮ್ ಧರ್ಮ ಶಾಸ್ತ್ರದ ಮುಂಚೂಣಿಯ ವಿದ್ವಾಂಸರಲ್ಲೊಬ್ಬರು. ಅವರು ಮೂಲತಃ ಫೆಲೆಸ್ತೀನ್‌ನಲ್ಲಿದ್ದ ಅಸ್ಕಲಾನ್ (ಸದ್ಯ ದಕ್ಷಿಣ ಇಸ್ರೇಲ್‌ನಲ್ಲಿರುವ Ashkelon )ನಲ್ಲಿ ಕ್ರಿ.ಶ. 767ರಲ್ಲಿ ಜನಿಸಿ ಕ್ರಿ.ಶ. 820ರಲ್ಲಿ ನಿಧನರಾದರು. ಅವರೊಬ್ಬ ಶ್ರೇಷ್ಠ ಭಾಷಣಕಾರರೂ, ಬರಹಗಾರರೂ ಕವಿಯೂ ಆಗಿದ್ದರು.

ನಿಮ್ಮ ನಾಲಿಗೆಯು ನಿಮ್ಮ ಮನಸ್ಸಿನ ಹೊಲವಾಗಿರುತ್ತದೆ. ನೀವು ನಿಮ್ಮ ಮನದಲ್ಲಿ ಏನನ್ನು ಬೀಜವಾಗಿ ಬಿತ್ತುವಿರೋ ಅದರ ಫಲವೇ ಮಾತಿನ ರೂಪದಲ್ಲಿ ನಾಲಿಗೆಯ ಮೂಲಕ ಪ್ರಕಟವಾಗುತ್ತದೆ.

‘‘ಸಂಕಷ್ಟಗಳೆದುರು ಸಹನೆ ತೋರದವನಿಗೆ ಮರಣದ ಹೊರತು ಬೇರಾವುದರಿಂದಲೂ ಪ್ರಯೋಜನವಾಗುವುದಿಲ್ಲ.’’

ನಿಮ್ಮ ಮುಂದೆ ಇನ್ನೊಬ್ಬರನ್ನು ದೂಷಿಸುವವನು ಇನ್ನೊಬ್ಬರ ಮುಂದೆ ನಿಮ್ಮನ್ನು ದೂಷಿಸದೇ ಇರುವುದಿಲ್ಲ.

ನಿಮ್ಮ ಮಿತ್ರನಾಗಿದ್ದಾಗ ನಿಮ್ಮನ್ನು ಮೆಚ್ಚಿಸುವುದಕ್ಕಾಗಿ ನಿಮ್ಮ ಮುಂದೆ ನಿಮ್ಮಲ್ಲಿ ಇಲ್ಲದ ಗುಣಗಳನ್ನು ಪ್ರಸ್ತಾಪಿಸಿ ಹೊಗಳುವವನು. ನಿಮ್ಮ ಶತ್ರುವಾದಾಗ, ಇನ್ನೊಬ್ಬನನ್ನು ಸಂತೋಷ ಪಡಿಸಲಿಕ್ಕಾಗಿ ಅವನ ಮುಂದೆ, ನಿಮ್ಮಲ್ಲಿ ಇಲ್ಲದ ದೋಷಗಳನ್ನು ಪ್ರಸ್ತಾಪಿಸುವನು.

ಮೂರು ಕೆಲಸಗಳು ಕಠಿಣವಾಗಿವೆ: 1. ದಾರಿದ್ರವಿರುವಾಗ ಔದಾರ್ಯ ತೋರುವುದು, 2. ಏಕಾಂತದಲ್ಲಿ ಧರ್ಮ ನಿಷ್ಠನಾಗಿರುವುದು. 3. ಶಿಕ್ಷೆ ಅಥವಾ ಬಹುಮಾನ ಕೊಡಬಲ್ಲವರ ಮುಂದೆ ಸತ್ಯ ಹೇಳುವುದು.

ಎಂದೂ ಅನಗತ್ಯ ಮಾತನ್ನು ಆಡಬೇಡಿ. ನಿಮ್ಮ ಮಾತು ನಿಮ್ಮ ಮನದೊಳಗೆ ಇರುವ ತನಕ ನೀವು ಅದರ ಮಾಲಕರಾಗಿರುತ್ತೀರಿ. ನಿಮ್ಮ ಮಾತು ನಿಮ್ಮ ಬಾಯಿಂದ ಹೊರಗೆ ಬಂದು ಬಿಟ್ಟಿತೆಂದರೆ ಅದು ನಿಮ್ಮ ಮಾಲಕನಾಗಿ ಬಿಡುತ್ತದೆ.

ದೇವರು ತನಗೆ ಜ್ಞಾನದ ಜ್ಯೋತಿಯನ್ನು ದಯಪಾಲಿಸಬೇಕು ಎಂದು ಬಯಸುವವನು 1. ಸಾಧ್ಯವಾದಷ್ಟು ಏಕಾಂತದಲ್ಲಿರಲಿ, 2. ಆಹಾರ ಸೇವನೆಯ ಪ್ರಮಾಣವನ್ನು ಕಡಿಮೆಗೊಳಿಸಲಿ, 3. ಮೂರ್ಖರ ಸಂಘ ತೊರೆಯಲಿ, 4. ಅನ್ಯಾಯವೆಸಗುವ ವಿದ್ವಾಂಸರಿಂದ ದೂರ ಉಳಿಯಲಿ.

ನೀನು ಸತ್ಕರ್ಮವನ್ನು ಹಿಟ್ಟಾಗಿಸು ಮತ್ತು ಜ್ಞಾನವನ್ನು ಉಪ್ಪಾಗಿಸು (ಜ್ಞಾನಕ್ಕಿಂತ ಸತ್ಕರ್ಮದ ಪ್ರಮಾಣ ಹೆಚ್ಚಿರಲಿ) ಎಂದು ಇಮಾಮ್ ಮಾಲಿಕ್ (ರ) ಅವರು ನನಗೆ ಉಪದೇಶಿಸಿದ್ದರು.

ವಿದ್ವಾಂಸರು, ತಮ್ಮ ಒಡೆಯನಿಗೆ (ದೇವರಿಗೆ) ಮಾತ್ರ ತಿಳಿದಿರುವ ಹಲವು ಸತ್ಕರ್ಮಗಳನ್ನು ಮಾಡಿರಬೇಕು. ಎಲ್ಲ ಜನರ ಮುಂದೆ ಪ್ರಕಟವಾಗಿ ಬಿಟ್ಟಿರುವ ಜ್ಞಾನವಾಗಲಿ ಕರ್ಮವಾಗಲಿ ಪರಲೋಕದಲ್ಲಿ ಹೆಚ್ಚು ಉಪಯುಕ್ತವಾಗಿರುವುದಿಲ್ಲ.

ನಿಮ್ಮ ಚಿತ್ತವನ್ನು ನೀವು ಸದಾ ಸತ್ಯದಲ್ಲಿ ನಿರತವಾಗಿಡದಿದ್ದರೆ ಅದು ನಿಮ್ಮನ್ನು ಅಸತ್ಯದಲ್ಲಿ ನಿರತವಾಗಿಡುವುದು. ಮನುಷ್ಯನನ್ನು ನಿಯಂತ್ರಿಸುವುದು, ಪ್ರಾಣಿಗಳನ್ನು ನಿಯಂತ್ರಿಸುವುದಕ್ಕಿಂತ ತುಂಬಾ ಕಷ್ಟದ ಕೆಲಸ.

ಸದಾ ದ್ವೇಷಿಸುತ್ತಿರುವವನು ಮತ್ತು ಅಸೂಯೆ ಪಡುತ್ತಿರುವವನು ಎಂದೂ ಸುಖವಾಗಿರುವುದಿಲ್ಲ.

ಯಾರ ಬುದ್ಧಿಯು ಅವನನ್ನು ಕೆಟ್ಟ ಕಾರ್ಯಗಳಿಂದ ತಡೆದಿಡುತ್ತದೋ ಅವನೇ ನಿಜವಾದ ಬುದ್ಧಿವಂತ.

Writer - ಅನುವಾದ: ಸನದ್ ಪುತ್ತಿಗೆ

contributor

Editor - ಅನುವಾದ: ಸನದ್ ಪುತ್ತಿಗೆ

contributor

Similar News

ಗಾಂಧೀಜಿ