ಕಲ್ಲಿದ್ದಲು ಹಗರಣ: ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಗುಪ್ತಾಗೆ 3 ವರ್ಷ ಜೈಲು ಶಿಕ್ಷೆ

Update: 2018-12-05 13:53 GMT

ಹೊಸದಿಲ್ಲಿ, ಡಿ.5: ಈ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ನಡೆದಿದ್ದ ಕಲ್ಲಿದ್ದಲು ವಿಭಾಗಗಳ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಎಚ್.ಸಿ. ಗುಪ್ತಾ ಹಾಗೂ ಇತರ ಇಬ್ಬರು ಅಧಿಕಾರಿಗಳಿಗೆ ದಿಲ್ಲಿ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

 ಬಳಿಕ, 1 ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಜಾಮೀನು ಮುಚ್ಚಳಿಕೆ ಒದಗಿಸುವಂತೆ ತಿಳಿಸಿ ಮೂವರಿಗೂ ಪಟಿಯಾಲಾ ಹೌಸ್‌ಕೋರ್ಟ್ ಜಾಮೀನು ಮಂಜೂರುಗೊಳಿಸಿದೆ. ಈ ಪ್ರಕರಣದ ಇತರ ದೋಷಿಗಳಾದ ವಿಕಾಸ್ ಮೆಟಲಸ್ ಆ್ಯಂಡ್ ಪವರ್(ವಿಎಂಪಿಎಲ್) ಸಂಸ್ಥೆಯ ಆಡಳಿತ ನಿರ್ದೇಶಕ ವಿಕಾಸ್ ಪಾಟ್ನಿ ಹಾಗೂ ಆತನ ಅಧಿಕೃತ ಪ್ರತಿನಿಧಿ ಆನಂದ್ ಮಲಿಕ್‌ಗೆ 4 ವರ್ಷದ ಜೈಲು ಶಿಕ್ಷೆ ಒದಗಿಸಲಾಗಿದೆ. ಸಂಸ್ಥೆಯ ಮೇಲೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ.

 ಐವರು ಅಪರಾಧಿಗಳಿಗೆ ಕನಿಷ್ಠ 7 ವರ್ಷದ ಜೈಲುಶಿಕ್ಷೆ ಮತ್ತು ಖಾಸಗಿ ಸಂಸ್ಥೆಯ ಮೇಲೆ ಭಾರೀ ಮೊತ್ತದ ದಂಡ ವಿಧಿಸುವಂತೆ ಸಿಬಿಐ ಕೋರಿತ್ತು. ಪಶ್ಚಿಮ ಬಂಗಾಳದ ಮೊಯ್‌ರ ಮತ್ತು ಮಧುಜೊರೆ ಕಲ್ಲಿದ್ದಲು ಬ್ಲಾಕ್‌ಗಳನ್ನು ವಿಎಂಪಿಎಲ್ ಸಂಸ್ಥೆಗೆ ಹಂಚಿಕೆ ಮಾಡಿರುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ 2012ರ ಸೆಪ್ಟೆಂಬರ್‌ನಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News