ಬುಲಂದ್‍ಶಹರ್: ಹತ್ಯೆಯಾದ ಅಧಿಕಾರಿ ಹಿಂದೂ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುತ್ತಿದ್ದರು ಎಂದ ಬಿಜೆಪಿ ನಾಯಕ

Update: 2018-12-07 07:25 GMT

ಮೀರತ್, ಡಿ.7: ಬುಲಂದ್‍ಶಹರ್‍ನಲ್ಲಿ ಸೋಮವಾರ ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ಗುಂಡಿಕ್ಕಿ ಹತ್ಯೆಗೈಯ್ಯಲ್ಪಟ್ಟ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರು ``ಹಿಂದೂ ಧಾರ್ಮಿಕ ಸಮಾರಂಭಗಳಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆ, ಇದರಿಂದ ಹಿಂದು ಸಮಾಜದಲ್ಲಿ ಆಕ್ರೋಶ ಮೂಡಿದೆ, ಅವರನ್ನು (ಸಿಂಗ್) ಮತ್ತು ಇತರ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ವರ್ಗಾಯಿಸಬೇಕು ಹಾಗೂ ಇಲಾಖಾ ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿ ಸ್ಥಳೀಯ  ಬಿಜೆಪಿ ನಾಯಕರು ಮೂರು ತಿಂಗಳ ಹಿಂದೆಯೇ ಬುಲಂದ್‍ಶಹರ್ ಸಂಸದರಿಗೆ ಪತ್ರ ಬರೆದಿದ್ದರೆಂದು ತಿಳಿದು ಬಂದಿದೆ. ಇದು ಎಲ್ಲಾ ಸ್ಥಳೀಯ ಬಿಜೆಪಿ ನಾಯಕರ ಬೇಡಿಕೆಯಾಗಿದೆ ಎಂದೂ ಪತ್ರದಲ್ಲಿ ಹೇಳಲಾಗಿತ್ತು.

ಈ ನಿರ್ದಿಷ್ಟ ಪತ್ರವನ್ನು ಬಿಜೆಪಿ ಪದಾಧಿಕಾರಿಗಳೇ ಬರೆದಿದ್ದು ಎಂದು ದೃಢೀಕರಿಸಿರುವ ಬುಲಂದ್‍ಶಹರ್ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜಯ್ ಶ್ರೋತಿಯಾ ``ಅವರ ಹಾಗೂ ನಮ್ಮ ನಡುವೆ ಸಂಘರ್ಷದ ಹಲವಾರು ಉದಾಹರಣೆಗಳಿವೆ. ಹೆಲ್ಮೆಟ್ ಧರಿಸಿದೆ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸಬಾರದು, ನಗರದ ರಸ್ತೆಗಳಲ್ಲಿ ಹೆಲ್ಮೆಟ್ ಅಗತ್ಯವಿಲ್ಲ, ಹೆದ್ದಾರಿಗಳಲ್ಲಿ ಹಾಗೂ ನಗರದ ಹೊರವಲಯಗಳಲ್ಲಿ ಹೆಲ್ಮೆಟ್ ಧರಿಸದೇ ಇರುವವರಿಗೆ  ದಂಡ ವಿಧಿಸಬೇಕು ಎಂದು  ನಾವು ಅವರಿಗೆ ಮನವಿ ಮಾಡಿದ್ದೆವು. ಆದರೆ ಅವರು ನಮ್ಮ ಮಾತನ್ನು ಕೇಳಿಲ್ಲ'' ಎಂದಿದ್ದಾರೆ. ``ಎಲ್ಲದ್ದಕ್ಕಿಂತ ಹೆಚ್ಚಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಯುಂಟು ಮಾಡುತ್ತಿದ್ದರು. ಇದೇ ಕಾರಣಕ್ಕೆ ಸೆಪ್ಟೆಂಬರ್ 1ರಂದು ಸಂಸದರಿಗೆ ಪತ್ರ ಬರೆದಿದ್ದೆವು,'' ಎಂದು ಅವರು ಹೇಳಿದರು.

ಈ ಪತ್ರಕ್ಕೆ ಸಹಿ ಹಾಕಿದವರಲ್ಲೊಬ್ಬರಾಗಿರುವ ಮಾಜಿ ಬಿಜೆಪಿ ಕಾರ್ಪೊರೇಟರ್ ಮನೋಜ್ ತ್ಯಾಗಿ ಮಾತನಾಡಿ ``ಅವರ ಉದ್ಧಟತನದ ವರ್ತನೆಯಿಂದಾಗಿ ಅವರನ್ನು ವರ್ಗಾಯಿಸಬೇಕೆಂದು ಕೋರಿದ್ದೆವು, ಎಲ್ಲಾ ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಈ ಪತ್ರವನ್ನು ಸಂಸದರಿಗೆ ಜಂಟಿಯಾಗಿ ಕಳುಹಿಸಿದ್ದರು'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News