ಬೃಹದೇಶ್ವರ ದೇವಸ್ಥಾನದಲ್ಲಿ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಕ್ಕೆ ನ್ಯಾಯಾಲಯದ ತಡೆ

Update: 2018-12-07 13:47 GMT

ಹೊಸದಿಲ್ಲಿ,ಡಿ.7: ತಮಿಳುನಾಡಿನ ತಂಜಾವೂರಿನಲ್ಲಿರುವ ಬೃಹದೇಶ್ವರ ದೇವಸ್ಥಾನದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ರವಿ ಶಂಕರ್ ಅವರ ಆರ್ಟ್ ಆಫ್ ಲಿವಿಂಗ್‌ನ ಎರಡು ದಿನಗಳ ಕಾರ್ಯಕ್ರಮಕ್ಕೆ ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠ ತಡೆ ಹೇರಿದೆ.

ಈ ದೇವಸ್ಥಾನವು ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಯಲ್ಲಿದ್ದು ಇಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.

 ಶುಕ್ರವಾರ ಆರಂಭವಾಗಬೇಕಿದ್ದ ಎರಡು ದಿನಗಳ ಕಾರ್ಯಕ್ರಮಕ್ಕೆ ಆರಂಭದಲ್ಲಿ ಪುರಾತತ್ವ ಇಲಾಖೆ ಅನುಮತಿ ನೀಡಿದ್ದ ಕಾರಣ ವಿವಾದ ಉಂಟಾಗಿತ್ತು. ಅನಂತದ ಅನಾವರಣ ಹೆಸರಿನ ಈ ಕಾರ್ಯಕ್ರಮದಲ್ಲಿ 2,000 ಅನುಯಾಯಿಗಳು ಭಾಗವಹಿಸುವ ನಿರೀಕ್ಷೆಯಿದ್ದು ದೇವಸ್ಥಾನದ ಒಳಗೆ ಕಬ್ಬಿಣದ ರಾಡ್‌ಗಳಿಂದ ನಿರ್ಮಿಸಲಾದ ತಾತ್ಕಾಲಿಕ ಪೆಂಡಾಲ್‌ಗಳಲ್ಲಿ ಅವರಿಗೆ ತಂಗಲು ವ್ಯವಸ್ಥೆ ಮಾಡಲಾಗಿತ್ತು.

2016ರ ಮಾರ್ಚ್‌ನಲ್ಲಿ ಯಮುನಾ ನದಿದಡದಲ್ಲಿ ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ ವಿಶ್ವ ಸಾಂಸ್ಕೃತಿಕ ಹಬ್ಬಕ್ಕೆ ಪರಿಸರವಾದಿಗಳು ಮತ್ತು ರಾಷ್ಟ್ರೀಯ ಹಸಿರು ಪ್ರಾಧಿಕಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಸುಮಾರು 35 ಲಕ್ಷ ಜನರು ಭಾಗವಹಿಸಿದ್ದ ಈ ಕಾರ್ಯಕ್ರಮದಿಂದ ನದಿಯ ಮುಖಜಭೂಮಿಯು ಗಂಭೀರ ಸ್ವರೂಪದಲ್ಲಿ ಮಲಿನಗೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News