ಉದ್ಯೋಗ, ಶಿಕ್ಷಣದಲ್ಲಿ ಒಬಿಸಿ ಮೀಸಲಾತಿಯ ಶೇ.97ರಷ್ಟು ಪಾಲು ಉಪಜಾತಿಗಳಿಗೆ

Update: 2018-12-07 14:09 GMT

ಹೊಸದಿಲ್ಲಿ, ಡಿ.7: ಒಟ್ಟು ಒಬಿಸಿ ಪ್ರಮಾಣದಲ್ಲಿ ಶೇ.25ರಷ್ಟಿರುವ ಒಬಿಸಿ ಉಪಜಾತಿಯ ಜನರು ಕೇಂದ್ರ ಸರಕಾರದ ಮಟ್ಟದಲ್ಲಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ನೀಡಲಾಗಿರುವ ಮೀಸಲಾತಿಯಲ್ಲಿ ಶೇ.97ರಷ್ಟು ಪಾಲನ್ನು ಪಡೆಯುತ್ತಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಜೊತೆಗೆ, ಒಟ್ಟು ಒಬಿಸಿ ಪ್ರಮಾಣದ ಶೇ.37ರಷ್ಟಿರುವ 938 ಒಬಿಸಿ ಉಪಜಾತಿಗೆ ಸೇರಿದವರಿಗೆ ಮೀಸಲಾತಿಯ ಪ್ರಯೋಜನ ದೊರಕಿಲ್ಲ ಎಂದು ಸುದ್ದಿಸಂಸ್ಥೆಯ ವರದಿ ತಿಳಿಸಿದೆ. ಒಬಿಸಿಯ ಉಪವರ್ಗೀಕರಣದ ಬಗ್ಗೆ ಆಯೋಗವು ನಡೆಸಿದ ಅಧ್ಯಯನ ವರದಿಯಲ್ಲಿ ಈ ಅಂಶದ ಮೇಲೆ ಬೆಳಕು ಚೆಲ್ಲಲಾಗಿದೆ ಎಂದು ಸುದ್ದಿಸಂಸ್ಥೆ ತಿಳಿಸಿದೆ.

ಯಾದವ್, ಕುರ್ಮಿ, ಜಾಟ್, ಸೈನಿ, ಥೇವರ್, ಈಳವ ಮತ್ತು ಒಕ್ಕಲಿಗ- ಇವು ಮೀಸಲಾತಿಯ ಪ್ರಯೋಜನ ಪಡೆಯುತ್ತಿರುವ ಉಪಜಾತಿಗಳಾಗಿವೆ. ಅಲ್ಲದೆ ಕಡಿಮೆ ಜನಸಂಖ್ಯೆಯಿರುವ ಕೆಲವು ರಾಜ್ಯಗಳು ಹೆಚ್ಚಿನ ಪ್ರಮಾಣದ ಮೀಸಲಾತಿ ಪಡೆದಿವೆ. 994 ಒಬಿಸಿ ಉಪಜಾತಿಗಳು ಒಟ್ಟು ಉದ್ಯೋಗ ನೇಮಕಾತಿ ಮತ್ತು ಪ್ರವೇಶದ ವಿಷಯದಲ್ಲಿ ಕೇವಲ ಶೇ.2.68ರಷ್ಟು ಪಾಲನ್ನು ಹೊಂದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಅಸಮತೆಯನ್ನು ನಿವಾರಿಸುವ ಕುರಿತೂ ಆಯೋಗವು ಸಲಹೆ ನೀಡಿದೆ. ಒಬಿಸಿಗಳಲ್ಲಿ ಹೊಸ ಶ್ರೇಣಿ ವ್ಯವಸ್ಥೆಯನ್ನು ರೂಪಿಸದೆ, ಎಲ್ಲಾ ವರ್ಗದವರಿಗೂ (ಹಿಂದುಳಿದಿರುವಿಕೆ ಹಾಗೂ ಪ್ರಾದೇಶಿಕ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು) ಅವಕಾಶ ಒದಗಿಸುವ ಯೋಜನೆಯನ್ನು ಸಿದ್ಧಪಡಿಸಬೇಕಿದೆ. ಆದರೆ ಹಾಲಿ ಫಲಾನುಭವಿಗಳನ್ನು ದೂರಮಾಡದೆ ಇದನ್ನು ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ರಾಜ್ಯದ ಒಬಿಸಿ ಆಯೋಗದ ಸದಸ್ಯರು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಒಬಿಸಿ ಕೋಟಾದಡಿ 1.3 ಲಕ್ಷ ಕೇಂದ್ರ ಸರಕಾರದ ಉದ್ಯೋಗ ಹಾಗೂ ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಪಡೆದಿರುವವರ ಕುರಿತು ಅಧ್ಯಯನ ನಡೆಸಲು 2017ರ ಅಕ್ಟೋಬರ್‌ನಲ್ಲಿ ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶೆ ಜಿ.ರೋಹಿಣಿಯ ನೇತೃತ್ವದಲ್ಲಿ ಆಯೋಗವನ್ನು ನೇಮಿಸಲಾಗಿದೆ. ಆಯೋಗದ ವರದಿಯನ್ನು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ರಾಜ್ಯಗಳ ಒಬಿಸಿ ಆಯೋಗಗಳಿಗೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News