ಯಾವ ಸಮೀಕ್ಷೆಯಲ್ಲಿ ಯಾರಿಗೆ, ಎಲ್ಲಿ ಗೆಲುವು?: ಇಲ್ಲಿದೆ ವಿವರ

Update: 2018-12-07 16:11 GMT

ಹೊಸದಿಲ್ಲಿ,ಡಿ.6: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಇಂದು ಕೊನೆಗೊಂಡ ಬೆನ್ನಲ್ಲೇ ಶುಕ್ರವಾರ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು,ಮಧ್ಯಪ್ರದೇಶ ಹಾಗೂ ಚತ್ತೀಸ್‌ಗಢದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆಯಿದ್ದು, ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆಯೆಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆದರೆ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆಯೆಂದು ಅವು ಹೇಳಿವೆ. ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ರಾವ್ ನೇತೃತ್ವದ ಟಿಆರ್‌ಎಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್‌ನ ಕಟ್ಟ ಕಡೆಯ ಭದ್ರಕೋಟೆಯಾದ ಮಿಝೊರಾಂ ಈ ಬಾರಿ ಅದರ ಕೈತಪ್ಪಲಿದ್ದು, ಪ್ರತಿಪಕ್ಷ ಎಂಎನ್‌ಎಫ್ ಅಧಿಕಾರ ಹಿಡಿಯಲಿದೆಯೆಂದು ಸಮೀಕ್ಷೆಗಳು ತಿಳಿಸಿವೆ.

ಆ್ಯಕ್ಸಿಸ್ ಮೈ ಇಂಡಿಯಾ- ಇಂಡಿಯಾ ಟುಡೆ ಹಾಗೂ ಆಜ್‌ತಕ್ ಆಯೋಜಿಸಿದ ಸಮೀಕ್ಷೆಯ ಪ್ರಕಾರ ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ 102ರಿಂದ 120 ಸ್ಥಾನಗಳು ದೊರೆಯಲಿದೆ. ಪ್ರತಿಪಕ್ಷವಾದ ಕಾಂಗ್ರೆಸ್ 104ರಿಂದ 122 ಸ್ಥಾನಗಳು ದೊರೆಯಲಿದೆಯೆಂದು ಅದು ಭವಿಷ್ಯ ನುಡಿದಿದೆ. ಆದರೆ ಟೈಮ್ಸ್ ನೌ- ಸಿಎನ್‌ಎಕ್ಸ್ ಸಮೀಕ್ಷೆಯು ಬಿಜೆಪಿಗೆ 126 ಸೀಟುಗಳು ದೊರೆಯಲಿದ್ದು, ಸ್ಪಷ್ಟ ಬಹುಮತ ಪಡೆಯಲಿದೆಯೆಂದು ತಿಳಿಸಿದೆ. ಕಾಂಗ್ರೆಸ್ ಪಕ್ಷವು ಕಳೆದ ಬಾರಿಗಿಂತ ಉತ್ತಮ ಸಾಧನೆ ತೋರಲಿದ್ದು, ಅದಕ್ಕೆ 89 ಸ್ಥಾನಗಳು ದೊರೆಯಲಿದೆಯೆಂದು ಅದು ಅಂದಾಜಿಸಿದೆ.

  ಇಂಡಿಯಾ ಟಿವಿ ಸಮೀಕ್ಷೆಯು ಬಿಜೆಪಿಗೆ 120-130 ಸ್ಥಾನ, ಕಾಂಗ್ರೆಸ್‌ಗೆ 86-92 ಸ್ಥಾನಗನ್ನು ನೀಡಿದೆ. ರಿಪಬ್ಲಿಕ್-ಜನ್‌ ಕಿ ಬಾತ್ ಸಮೀಕ್ಷೆಯು ಬಿಜೆಪಿಗೆ 108-128 ಸ್ಥಾನಗಳು ಹಾಗೂ ಕಾಂಗ್ರೆಸ್‌ಗೆ 95-111 ಸ್ಥಾನಗಳನ್ನು ನೀಡಿದೆ. 2013ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 165 ಹಾಗೂ ಕಾಂಗ್ರೆಸ್ 58 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಹುಮತದ ಗಡಿ ದಾಟಲು 116 ಸ್ಥಾನಗಳ ಅಗತ್ಯವಿದೆ.

 ನೆರೆಯ ರಾಜ್ಯವಾದ ಚತ್ತೀಸ್‌ಗಡದಲ್ಲಿ ಬಹುತೇಕ ಸಮೀಕ್ಷೆಗಳು ತ್ರಿಶಂಕು ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ.

 ಟೈಮ್ಸ್‌ನೌ-ಸಿಎನ್‌ಎಕ್ಸ್ ಚುನಾವಣೋತ್ತರ ಸಮೀಕ್ಷೆಯು ಬಿಜೆಪಿಗೆ ಸ್ಪಷ್ಟ ಬಹುಮತವನ್ನು ನೀಡಿದೆ. ಅಲ್ಲಿ ಆಡಳಿತಾರೂಢ ಬಿಜೆಪಿಗೆ 46 ಸ್ಥಾನಗಳು ಹಾಗೂ ಕಾಂಗ್ರೆಸ್‌ಗೆ 35 ಸ್ಥಾನಗಳು ದೊರೆಯಲಿದೆ. ಆದರೆ ಮಾಜಿ ಕಾಂಗ್ರೆಸಿಗೆ ಅಜಿತ್ ಜೋಗಿ ಹಾಗೂ ಮಾಯಾವತಿ ಅವರ ಬಿಎಸ್ಪಿ ಕೇವಲ 7 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾದೀತೆಂದು ಅದು ಹೇಳಿದೆ. ಇಂಡಿಯಾ ಟಿವಿ ಸಮೀಕ್ಷೆಯು ಚತ್ತೀಸ್‌ಗಡದಲ್ಲಿ ಬಿಜೆಪಿಗೆ 42-50 ಸ್ಥಾನಗಳು, ಕಾಂಗ್ರೆಸ್‌ಗೆ 32-38 ಹಾಗೂ ಜೋಗಿ-ಬಿಎಸ್ಪಿ ಮೈತ್ರಿಕೂಟ 6ರಿಂದ 8 ಸ್ಥಾನಗಳನ್ನು ಪಡೆಯಲಿದೆಯೆಂದು ಹೇಳಿದೆ.

ಆದಾಗ್ಯೂ ಸಿವೋಟರ್-ರಿಪಬ್ಲಿಕ್ ಟಿವಿ ಸಮೀಕ್ಷೆಯು ಚತ್ತೀಸ್‌ಗಢದಲ್ಲಿ ಬಿಜೆಪಿ ಹಾಗೂ ಬಿಎಸ್ಪಿ ನಡುವೆ ನಿಕಟ ಹೋರಾಟ ನಡೆದಿರುವುದನ್ನು ತೋರಿಸಿದೆ. ಈ ಸಮೀಕ್ಷೆಯು ಬಿಜೆಪಿಗೆ 35-43 ಸ್ಥಾನ ಹಾಗೂ ಕಾಂಗ್ರೆಸ್‌ಗೆ 40-50 ಸ್ಥಾನಗಳು ಹಾಗೂ ಜೋಗಿ-ಬಿಎಸ್ಪಿ ಮೈತ್ರಿಕೂಟವು 3-7 ಸ್ಥಾನಗಳು ಪಡೆಯಲಿದೆಯೆಂದು ಭವಿಷ್ಯ ನುಡಿದಿದೆ. 90 ವಿಧಾನಸಭಾ ಸದಸ್ಯ ಬಲದ ಚತ್ತೀಸ್‌ಗಡದಲ್ಲಿ ಸರಳ ಬಹುಮತ ಪಡೆಯಲು 46 ಸ್ಥಾನಗಳು ಬೇಕಾಗಿವೆ.

  ಬಿಜೆಪಿ ಆಳ್ವಿಕೆಯಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆಯೆಂದು ಎರಡು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇಂಡಿಯಾ ಟುಡೇ - ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ರಾಜಸ್ಥಾನದಲ್ಲಿ ಕಾಂಗ್ರೆಸ್ 119ರಿಂದ 141 ಸ್ಥಾನಗಳು ಲಭಿಸಲಿದ್ದು, ಬಿಜೆಪಿಯ ವಸುಂಧರ ರಾಜೆ ಸರಕಾರವನ್ನು ಪದಚ್ಯುತಗೊಳಿಸಲಿದೆಯೆಂದು ಹೇಳಿದೆ. ಬಿಜೆಪಿಗೆ ಕೇವಲ 55-72 ಸ್ಥಾನಗಳು ಮಾತ್ರವೇ ದೊರೆಯಲಿದೆಯೆಂದು ಅದು ಹೇಳಿದೆ. 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತಕ್ಕೆ 101 ಸ್ಥಾನಗಳ ಅಗತ್ಯವಿದೆ. ಈ ಪೈಕಿ ಅಭ್ಯರ್ಥಿಯೊಬ್ಬರು ನಿಧನರಾದ ಹಿನ್ನೆಲೆಯಲ್ಲಿ ಒಂದು ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.

ಇನ್ನು ಟೈಮ್ಸ್‌ನೌ-ಸಿಎನ್‌ಎಕ್ಸ್ ಸಮೀಕ್ಷೆ ಕೂಡಾ ಕಾಂಗ್ರೆಸ್‌ಗೆ ರಾಜಸ್ಥಾನದಲ್ಲಿ 105 ಸ್ಥಾನಗಳು ದೊರೆಯಲಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆಯೆಂದು ಭವಿಷ್ಯ ನುಡಿದಿದೆ. ಆದಾಗ್ಯೂ ರಿಪಬ್ಲಿಕ್‌ ಟಿವಿ-ಜನತಾ ಕಿ ಬಾತ್ ಸಮೀಕ್ಷೆಯು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿರುವುದಾಗಿ ಹೇಳಿದೆ. ಬಿಜೆಪಿಗೆ 83-103 ಸ್ಥಾನಗಳನ್ನು ಅದು ನೀಡಿದ್ದು, ಪ್ರತಿಪಕ್ಷ ಕಾಂಗ್ರೆಸ್ ಗೆ 81-101 ಸ್ಥಾನಗಳು ಲಭಿಸುವುದಾಗಿ ಹೇಳಿದೆ.

   ಭಾರತದ ಅತ್ಯಂತ ನೂತನ ರಾಜ್ಯವಾದ ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷವಾದ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲಿದೆಯೆಂದು ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳು ಹೇಲಿವೆ. 119 ಸ್ಥಾನಗಳ ತೆಲಂಗಾಣ ವಿಧಾನಸಎಭೆಯಲ್ಲಿ ಟಿಆರ್‌ಎಸ್‌ಗೆ 66 ಸ್ಥಾನಗಳು ದೊರೆಯಲಿವೆಯೆಂದು ಟೈಮ್ಸ್‌ ನೌ-ಸಿಎನ್‌ಎಕ್ಸ್ ಸಮೀಕ್ಷೆ ತಿಳಿಸಿದೆ. ತೆಲಂಗಾಣ ವಿಧಾನಸಭೆಯಲ್ಲಿ ಸರಕಾರ ರಚನೆಗೆ 60 ಸ್ಥಾನಗಳ ಅಗತ್ಯವಿದೆ. ರಿಪಬ್ಲಿಕ್ ಟಿವಿ-ಜನತಾ ಕಿ ಬಾತ್ ಸಮೀಕ್ಷೆಯು ಕೂಡಾ ಟಿಆರ್‌ಎಸ್‌ಗೆ 52-65 ಸ್ಥಾನಳು ಹಾಗೂ ಕಾಂಗ್ರೆಸ್-ಟಿಡಿಪಿ ಮೈತ್ರಿಕೂಟಕ್ಕೆ 38-52 ಸ್ಥಾನಗಳನ್ನು ನೀಡಿದೆ.

 ಆ್ಯಕ್ಸಿಸ್ ಮೈ ಇಂಡಿಯಾ- ಇಂಡಿಯಾ ಟುಡೇ-ಆಜ್‌ ತಕ್ ಸಮೀಕ್ಷೆಯು ಟಿಆರ್‌ಎಸ್‌ಗೆ 79-91 ಸ್ಥಾನಗಳನ್ನು ಹಾಗೂ ಕಾಂಗ್ರೆಸ್-ಟಿಡಿಪಿಗೆ 21-33 ಸ್ಥಾನಗಳನ್ನು ನೀಡಿದೆ.

ಕಾಂಗ್ರೆಸ್‌ನ ಕಟ್ಟಕಡೆಯ ಭದ್ರಕೋಟೆಯೆಂದೇ ಪರಿಗಣಿಸಲಾದ ಈಶಾನ್ಯದ ರಾಜ್ಯವಾದ ಮಿಝೊರಾಂನಲ್ಲಿ ಈ ಸಲ ತ್ರಿಶಂಕು ವಿಧಾನಸಭೆ ಸೃಷ್ಟಿಯಾಗಲಿದೆಯೆಂದು ರಿಪಬ್ಲಿಕ್‌ಟಿವಿ-ಸಿವೋಟರ್ ಸಮೀಕ್ಷೆ ತೋರಿಸಿಕೊಟ್ಟಿದೆ. ಪ್ರತಿಪಕ್ಷ ಮಿಝೊ ನ್ಯಾಶನಲ್ ಫ್ರಂಟ್ (ಎಂಎನ್‌ಎಫ್) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆಯೆಂದು ಅದು ಹೇಳಿದೆ. 40 ಸ್ಥಾನಗಳ ಮಿಝೊರಾಂ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ.

ಕಳೆದ ತಿಂಗಳಿನಿಂದೀಚೆಗೆ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದಿತ್ತು. ಡಿಸೆಂಬರ್ 11ರಂದು ಮತಏಣಿಕೆ ನಡೆಯಲಿದೆ. ಇಂದು ರಾಜಸ್ಥಾನ ಹಾಗೂ ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News