ಅಶ್ವಿನ್ ಸ್ಪಿನ್ ಮೋಡಿಗೆ ಕಾಂಗರೂ ಪಡೆ ಕಂಗಾಲು

Update: 2018-12-07 18:36 GMT

ಅಡಿಲೇಡ್, ಡಿ.7: ಅಡಿಲೇಡ್ ಟೆಸ್ಟ್‌ನ ಎರಡನೇ ದಿನವಾದ ಶುಕ್ರವಾರ ಭಾರತದ ಆಫ್-ಸ್ಪಿನ್ನರ್ ಆರ್.ಅಶ್ವಿನ್ ಪ್ರತಿಭೆ ಹಾಗೂ ಆಸೀಸ್‌ನ ಟ್ರಾವಿಸ್ ಹೆಡ್ ಅವರ ತಾಳ್ಮೆಯ ಬ್ಯಾಟಿಂಗ್ ಹಳೆಯ ಟೆಸ್ಟ್ ಕ್ರಿಕೆಟ್‌ನ್ನು ನೆನಪಿಸಿತು.

ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ 250 ರನ್‌ಗೆ ನಿಯಂತ್ರಿಸಿದ ಆಸ್ಟ್ರೇಲಿಯ ತೀವ್ರ ಬ್ಯಾಟಿಂಗ್ ವೈಫಲ್ಯ ಕಂಡಿತು. ತಂಡದ ಅಗ್ರ ಕ್ರಮಾಂಕದ ಆಟಗಾರರು ಅಶ್ವಿನ್‌ರ ಸೊಗಸಾದ ಬೌಲಿಂಗ್‌ಗೆ ನಿರುತ್ತರರಾದರು. ಹೋರಾಟ ನೀಡದೆ ಬೇಗನೆ ಶಸ್ತ್ರತ್ಯಾಗ ಮಾಡಿದರು. ತವರು ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಹೆಡ್ 149 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ ಅಜೇಯ 61 ರನ್ ಗಳಿಸಿದರು. ಆಸ್ಟ್ರೇಲಿಯ 2ನೇ ದಿನದಾಟದಂತ್ಯಕ್ಕೆ 88 ಓವರ್‌ಗಳಲ್ಲಿ 7 ವಿಕೆಟ್‌ಗೆ 191 ರನ್ ಗಳಿಸಲು ನೆರವಾದರು.

ಪ್ಯಾಟ್ ಕಮಿನ್ಸ್(10) ಅವರೊಂದಿಗೆ 8ನೇ ವಿಕೆಟ್‌ಗೆ 50 ರನ್ ಜೊತೆಯಾಟ ನಡೆಸಿದ ಹೆಡ್ ತಂಡದ ಮರ್ಯಾದೆ ಕಾಪಾಡಿದರು.

ಮಿಚೆಲ್ ಸ್ಟಾರ್ಕ್(8) ಹಾಗೂ ಹೆಡ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆತಿಥೇಯರು ಭಾರತದ ಮೊದಲ ಇನಿಂಗ್ಸ್ ಮೊತ್ತಕ್ಕಿಂತ 59 ರನ್ ಹಿನ್ನಡೆಯಲ್ಲಿದ್ದಾರೆ.

ಆಸ್ಟ್ರೇಲಿಯದ ಆರಂಭ ಅತ್ಯಂತ ಕಳಪೆಯಾಗಿತ್ತು. ಇನಿಂಗ್ಸ್‌ನ ಮೂರನೇ ಎಸೆತದಲ್ಲಿ ಇಶಾಂತ್ ಶರ್ಮಾ ಅವರು ಆ್ಯರೊನ್ ಫಿಂಚ್(0) ವಿಕೆಟನ್ನು ಉಡಾಯಿಸಿ ಆಸೀಸ್‌ಗೆ ಆರಂಭದಲ್ಲೇ ಆಘಾತ ನೀಡಿದರು. ಉಸ್ಮಾನ್ ಖ್ವಾಜಾ(28) ಹಾಗೂ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಮಾರ್ಕಸ್ ಹ್ಯಾರಿಸ್(26)ಎರಡನೇ ವಿಕೆಟ್‌ಗೆ 45 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಇನಿಂಗ್ಸ್‌ನ 12ನೇ ಓವರ್‌ನಲ್ಲಿ ದಾಳಿಗೆ ಇಳಿದ ಅಶ್ವಿನ್ ಅವರು ಹ್ಯಾರಿಸ್ ವಿಕೆಟ್ ಉಡಾಯಿಸುವ ಮೂಲಕ ಎರಡನೇ ವಿಕೆಟ್ ಜೊತೆಯಾಟವನ್ನು ಬೇರ್ಪಡಿಸಿದರು. ಆಸ್ಟ್ರೇಲಿಯ 27ನೇ ಓವರ್ ಬಳಿಕ 50 ರನ್ ಗಡಿ ದಾಟಿತು. ಕಳಪೆ ಫಾರ್ಮ್ ಮುಂದುವರಿಸಿದ ಶಾನ್ ಮಾರ್ಷ್(2) ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಆಗ ಆಸ್ಟ್ರೇಲಿಯದ ಸ್ಕೋರ್ 3ಕ್ಕೆ 59. ಖ್ವಾಜಾ ಹಾಗೂ ಹ್ಯಾಂಡ್ಸ್ ಕಾಂಬ್ 4ನೇ ವಿಕೆಟ್‌ಗೆ 28 ರನ್ ಜೊತೆಯಾಟ ನಡೆಸಿದರು. 40ನೇ ಓವರ್‌ನಲ್ಲಿ ಖ್ವಾಜಾ ವಿಕೆಟನ್ನು ಉಡಾಯಿಸಿದ ಅಶ್ವಿನ್ ಆಸ್ಟ್ರೇಲಿಯಕ್ಕೆ ದೊಡ್ಡ ಶಾಕ್ ನೀಡಿದರು.

93 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 34 ರನ್ ಗಳಿಸಿದ ಪೀಟರ್ ಹ್ಯಾಂಡ್ಸ್‌ಕಾಂಬ್(34)ಹೆಡ್‌ರೊಂದಿಗೆ 5ನೇ ವಿಕೆಟ್‌ಗೆ 30 ರನ್ ಸೇರಿಸಿದರು. ಅಪಾಯಕಾರಿಯಾಗುವ ಭೀತಿ ಹುಟ್ಟಿಸಿದ್ದ ಪೀಟರ್‌ಗೆ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು.

ಹ್ಯಾಂಡ್ಸ್‌ಕಾಂಬ್ ವಿಕೆಟ್ ಬಿದ್ದ ಬೆನ್ನಿಗೆ ದಾಳಿಗಿಳಿದ ಇಶಾಂತ್ ಆಸ್ಟ್ರೇಲಿಯದ ನಾಯಕ ಟಿಮ್ ಪೈನ್(5) ವಿಕೆಟನ್ನು ಉಡಾಯಿಸಿದರು.

ಆಗ ಆಸ್ಟ್ರೇಲಿಯದ ಸ್ಕೋರ್ 6ಕ್ಕೆ 127. 8ನೇ ವಿಕೆಟ್‌ಗೆ ಅರ್ಧಶತಕ ಜೊತೆಯಾಟ ನಡೆಸಿದ ಹೆಡ್ ಹಾಗೂ ಕಮಿನ್ಸ್ ತಂಡವನ್ನು ಭಾರೀ ಕುಸಿತದಿಂದ ಪಾರು ಮಾಡಿದರು.

ಬಾಲಂಗೋಚಿಗಳು ಕ್ರೀಸ್‌ಗೆ ಬಂದ ಬಳಿಕ ಹೆಡ್ ಬಿರುಸಿನ ಬ್ಯಾಟಿಂಗ್‌ಗೆ ಮುಂದಾದರು. ತಾನಾಡಿದ 3ನೇ ಟೆಸ್ಟ್‌ನಲ್ಲಿ 103 ಎಸೆತಗಳಲ್ಲಿ ಎರಡನೇ ಅರ್ಧಶತಕ ಪೂರೈಸಿದರು. 33 ಓವರ್‌ಗಳಲ್ಲಿ 50 ರನ್‌ಗೆ 3 ವಿಕೆಟ್‌ಗಳನ್ನು ಕಬಳಿಸಿದ ಅಶ್ವಿನ್‌ಗೆ ವೇಗಿದ್ವಯರಾದ ಜಸ್‌ಪ್ರಿತ್ ಬುಮ್ರಾ(2-34) ಹಾಗೂ ಇಶಾಂತ್ ಶರ್ಮಾ(2-31)ಉತ್ತಮ ಸಾಥ್ ನೀಡಿದರು. 250 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಭಾರತ ನಿನ್ನೆಯ ಮೊತ್ತಕ್ಕೆ ಒಂದೂ ರನ್ ಸೇರಿಸದೇ ಆಲೌಟಾಯಿತು. ಆಸ್ಟ್ರೇಲಿಯದ ಪರ ಮಿಚೆಲ್ ಸ್ಟಾರ್ಕ್(2-63), ಪ್ಯಾಟ್ ಕಮಿನ್ಸ್(2-49) ಹಾಗೂ ನಥಾನ್ ಲಿಯೊನ್(2-83)ತಲಾ ಎರಡು ವಿಕೆಟ್ ಪಡೆದರು.

ಅಂಕಿ ಅಂಶ

►ಇಶಾಂತ್ ಶರ್ಮಾ ಆಸ್ಟ್ರೇಲಿಯ ವಿರುದ್ಧ 50 ವಿಕೆಟ್ ಪೂರೈಸಿದ ಭಾರತದ 3ನೇ ಬೌಲರ್.

►ಹೆಡ್ ಟೆಸ್ಟ್ ನಲ್ಲಿ 2ನೇ ಹಾಗೂ ಭಾರತ ವಿರುದ್ಧ ಮೊದಲ ಅರ್ಧಶತಕ ದಾಖಲಿಸಿದರು.

►ಅಡಿಲೇಡ್‌ನಲ್ಲಿ ಅರ್ಧಶತಕ ಸಿಡಿಸಿದ ಆಸ್ಟ್ರೇಲಿಯದ ಆರನೇ ಕ್ರಮಾಂಕದ 3ನೇ ಬ್ಯಾಟ್ಸ್ ಮನ್ ಹೆಡ್. ಸೈಮನ್ ಕಾಟಿಚ್(2003) ಹಾಗೂ ರಿಕಿ ಪಾಂಟಿಂಗ್(1999) ಈ ಸಾಧನೆ ಮಾಡಿದ್ದರು.

►ಹ್ಯಾಂಡ್ಸ್‌ಕಾಂಬ್ ಸತತ 7ನೇ ಬಾರಿ ಅರ್ಧಶತಕ ವಂಚಿತರಾದರು.

►ಶಾನ್ ಮಾರ್ಷ್ ಸತತ 6ನೇ ಬಾರಿ ಒಂದಂಕಿಗೆ ಔಟಾದರು. 1888ರ ಬಳಿಕ ಕಳಪೆ ಸಾಧನೆ ಮಾಡಿದ ಆಸ್ಟ್ರೇಲಿಯದ ಮೊದಲ ದಾಂಡಿಗ.

ಸ್ಕೋರ್ ವಿವರ

►ಭಾರತ: 88 ಓವರ್‌ಗಳಲ್ಲಿ 250 ರನ್‌ಗೆ ಆಲೌಟ್

ರಾಹುಲ್ ಸಿ ಫಿಂಚ್ ಬಿ ಹೆಝಲ್‌ವುಡ್ 02

ಎಂ.ವಿಜಯ್ ಸಿ ಪೈನ್ ಬಿ ಸ್ಟಾರ್ಕ್ 11

ಚೇತೇಶ್ವರ ಪೂಜಾರ ರನೌಟ್(ಕಮಿನ್ಸ್) 123

ವಿರಾಟ್ ಕೊಹ್ಲಿ ಸಿ ಖ್ವಾಜಾ ಬಿ ಕಮಿನ್ಸ್ಸ್ 03

ರಹಾನೆ ಸಿ ಹ್ಯಾಂಡ್ಸ್‌ಕಾಂಬ್ ಬಿ ಹೆಝಲ್‌ವುಡ್ 13

ರೋಹಿತ್ ಶರ್ಮಾ ಸಿ ಹ್ಯಾರಿಸ್ ಬಿ ಲಿಯೊನ್ 37

ರಿಷಭ್ ಪಂತ್ ಸಿ ಪೈನ್ ಬಿ ಲಿಯೊನ್ 25

ಆರ್.ಅಶ್ವಿನ್ ಸಿ ಹ್ಯಾಂಡ್ಸ್‌ಕಾಂಬ್ ಬಿ ಕಮಿನ್ಸ್ 25

ಇಶಾಂತ್ ಶರ್ಮಾ ಬಿ ಸ್ಟಾರ್ಕ್ 04

ಮುಹಮ್ಮದ್ ಶಮಿ ಸಿ ಪೈನ್ ಬಿ ಹೆಝಲ್‌ವುಡ್ 06

ಜಸ್‌ಪ್ರಿತ್ ಬುಮ್ರಾ ಔಟಾಗದೆ 00

ಇತರೆ 01

►ವಿಕೆಟ್ ಪತನ: 1-3, 2-15, 3-19, 4-41, 5-86, 6-127, 7-189, 8-210, 9-250, 10-250.

►ಬೌಲಿಂಗ್ ವಿವರ

ಮಿಚೆಲ್ ಸ್ಟಾರ್ಕ್ 19-4-63-2

ಹೆಝಲ್‌ವುಡ್ 20-3-52-3

ಕಮಿನ್ಸ್ 19-3-49-2

ಲಿಯೊನ್ 28-2-83-2

ಟಿಮ್ ಹೆಡ್ 2-1-2-0

►ಆಸ್ಟ್ರೇಲಿಯ ಮೊದಲ ಇನಿಂಗ್ಸ್:

88 ಓವರ್‌ಗಳಲ್ಲಿ 191/7

ಆ್ಯರೊನ್ ಫಿಂಚ್ ಬಿ ಇಶಾಂತ್00

ಹ್ಯಾರಿಸ್ ಸಿ ವಿಜಯ್ ಬಿ ಅಶ್ವಿನ್ 26

ಉಸ್ಮಾನ್ ಖ್ವಾಜಾ ಸಿ ಪಂತ್ ಬಿ ಅಶ್ವಿನ್ 28

ಮಿಚೆಲ್ ಮಾರ್ಷ್ ಬಿ ಅಶ್ವಿನ್ 02

ಹ್ಯಾಂಡ್ಸ್‌ಕಾಂಬ್ ಸಿ ಪಂತ್ ಬಿ ಬುಮ್ರಾ 34

ಟ್ರಾವಿಸ್ ಹೆಡ್ ಔಟಾಗದೆ 61

ಟಿಮ್ ಪೈನ್ ಸಿ ಪಂತ್ ಬಿ ಇಶಾಂತ್ 05

ಕಮಿನ್ಸ್ ಎಲ್ಬಿಡಬ್ಲು ಬುಮ್ರಾ 10

ಮಿಚೆಲ್ ಸ್ಟಾರ್ಕ್ ಔಟಾಗದೆ 08

ಇತರ 17

►ವಿಕೆಟ್ ಪತನ: 1-0, 2-45, 3-59, 4-87, 5-120, 6-127, 7-177.

►ಬೌಲಿಂಗ್ ವಿವರ

ಇಶಾಂತ್ ಶರ್ಮಾ 15-6-31-2

ಜಸ್‌ಪ್ರಿತ್ ಬುಮ್ರಾ 20-9-34-2

ಮುಹಮ್ಮದ್ ಶಮಿ 16-6-51-0

ಆರ್.ಅಶ್ವಿನ್ 33-9-50-3

ಮುರಳಿ ವಿಜಯ್ 4-1-10-0.

ವೈಯಕ್ತಿಕ ಮೆಲುಗಲು್ಲ ತಲುಪಿದ ಇಶಾಂತ್

ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ವೈಯಕ್ತಿಕ ಮೈಲುಗಲ್ಲು ಸ್ಥಾಪಿಸಿದರು.

2ನೇ ದಿನವಾದ ಶುಕ್ರವಾರ 31ಕ್ಕೆ2 ವಿಕೆಟ್ ಪಡೆದ ಇಶಾಂತ್ ಆಸ್ಟ್ರೇಲಿಯ ವಿರುದ್ಧ ಟೆಸ್ಟ್‌ನಲ್ಲಿ ಒಟ್ಟು 50 ವಿಕೆಟ್‌ಗಳನ್ನು ಪಡೆದ ಭಾರತದ 3ನೇ ವೇಗಿ ಎನಿಸಿಕೊಂಡರು. ಕಪಿಲ್‌ದೇವ್ ಹಾಗೂ ಝಹೀರ್ ಖಾನ್ ಈ ಸಾಧನೆ ಮಾಡಿದ್ದಾರೆ. ಇಶಾಂತ್ ಆಸ್ಟ್ರೇಲಿಯ ವಿರುದ್ಧ ಆಡಿದ ತನ್ನ 23ನೇ ಟೆಸ್ಟ್‌ನಲ್ಲಿ 50 ವಿಕೆಟ್ ಪೂರೈಸಿದರು. 2008-09ರಲ್ಲಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ರಿಕಿ ಪಾಂಟಿಂಗ್ ವಿರುದ್ಧ ತನ್ನ ಅಮೋಘ ಸ್ಪೆಲ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News