ಹಾರಾಡುವ ಆಭರಣಪಾತರಗಿತ್ತಿಯ ಬೆನ್ನುಹತ್ತಿ...

Update: 2018-12-08 13:06 GMT

ಚಿತ್ರ-ಬರಹ: ನಝೀರ್ ಪೊಲ್ಯ

ಚಿಟ್ಟೆಯ ಕುರಿತ ಅಧ್ಯಯನ ಹಾಗೂ ಫೋಟೊಗ್ರಫಿ ಬಗೆಗಿನ ಆಸಕ್ತಿಯು ಆ ದಟ್ಟ ಅಡವಿಯತ್ತ ನನ್ನನ್ನು ಮತ್ತೆ ಮತ್ತೆ ಕರೆಯುತ್ತಿತ್ತು. ಎಷ್ಟೋ ಬಾರಿ ಆ ಕಾಡಿನೊಳಗೆ ಚಿಟ್ಟೆಯ ಬೆನ್ನತ್ತಿ ಒಬ್ಬನೆ ಅಲೆದಾಡಿದ್ದೇನೆ. ಪ್ರತಿ ಬಾರಿ ಹೋದಾಗ ಹೊಸ ಹೊಸ ಪ್ರಭೇದದ ಚಿಟ್ಟೆಗಳು ನನಗೆ ಚಿಟ್ಟೆ ಮೇಲೆ ಆಸಕ್ತಿ, ಪ್ರೀತಿಯನ್ನು ಇಮ್ಮಡಿಗೊಳಿಸುತ್ತಿದ್ದವು. ಕರ್ನಾಟಕ ರಾಜ್ಯದಲ್ಲಿ ಈವರೆಗೆ ಕಂಡುಬಂದಿರುವ ಸುಮಾರು 320 ಚಿಟ್ಟೆ ಪ್ರಭೇದಗಳ ಪೈಕಿ ಸುಮಾರು 250 ಚಿಟ್ಟೆಗಳನ್ನು ನಾನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದೇನೆ. ಇದರಲ್ಲಿ ಅಪರೂಪದಲ್ಲಿ ಅಪರೂಪದ ಚಿಟ್ಟೆಗಳು ಕೂಡ ಸೇರಿವೆ.

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಪಶ್ಚಿಮಘಟ್ಟದಲ್ಲಿರುವ ಸೋಮೇಶ್ವರ ವನ್ಯಜೀವಿ ಅಭಯಾರಣ್ಯವು ಅಪಾರ ಸಸ್ಯ ಸಂಪತ್ತು ಹೊಂದಿರುವ ದಟ್ಟ ಅಡವಿ. ಈ ಪ್ರದೇಶವನ್ನು ಹಾರಾಡುವ ಆಭರಣಗಳೆಂದೆ ಕರೆಯಲ್ಪಡುವ ಪಾತರಗಿತ್ತಿಯ ಸ್ವರ್ಗ ಎಂದೇ ವ್ಯಾಖ್ಯಾನಿಸಬಹುದು. ಚಿಟ್ಟೆಯ ಫೋಟೊಗ್ರಫಿಗಾಗಿ ಈ ಅಭಯಾರಣ್ಯದಲ್ಲಿರುವ ಕೂಡ್ಲು ಜಲಪಾತ ಪ್ರದೇಶದ ಕಾಡಿನೊಳಗೆ ಹಲವು ಬಾರಿ ಒಬ್ಬಂಟಿಯಾಗಿ, ಕೆಲವೊಮ್ಮೆ ಗೆಳೆಯರೊಂದಿಗೆ ಸುತ್ತಾಡಿದ್ದೇನೆ. ಕಳೆದ ನಾಲ್ಕೈದು ವರ್ಷಗಳಿಂದ ಚಿಟ್ಟೆ ಬಗೆಗಿನ ಆಸಕ್ತಿಯಿಂದ ಈ ಪ್ರದೇಶದಲ್ಲಿ ಸುತ್ತಾಡಿರುವ ನಾನು ಹಲವು ಸಾಮಾನ್ಯ ಹಾಗೂ ಅಪರೂಪ ಮತ್ತು ಅಪರೂಪದಲ್ಲಿ ಅಪರೂಪದ ಚಿಟ್ಟೆ ಪ್ರಭೇದಗಳನ್ನು ಇಲ್ಲಿ ಕಂಡಿದ್ದೇನೆ ಮತ್ತು ಕ್ಯಾಮರಾದಲ್ಲಿ ಸೆರೆಹಿಡಿದ್ದೇನೆ.

ಮಲಬಾರ್ ಬ್ಯಾಂಡೆಡ್ ಪಿಕಾಕ್

ಇದರಲ್ಲಿ ಮುಖ್ಯವಾಗಿ ಭಾರತದ ಚಿಟ್ಟೆ ಪ್ರಭೇದಗಳಲ್ಲಿಯೇ ಅತ್ಯಂತ ಸುಂದರಿ ಎಂದು ಎನಿಸಿಕೊಂಡಿರುವ ಮಲಬಾರ್ ಬ್ಯಾಂಡೆಡ್ ಪಿಕಾಕ್. ಅತ್ಯಂತ ಆಕರ್ಷಕ ಬಣ್ಣಗಳನ್ನು ಹೊಂದಿರುವ ಈ ಚಿಟ್ಟೆಯು ಪಶ್ಚಿಮಘಟ್ಟ (ದಕ್ಷಿಣ ಗೋವಾದಿಂದ ಉತ್ತರ ಕೇರಳದವರೆಗೆ)ಗಳಲ್ಲಿ ಮಾತ್ರ ಕಾಣ ಸಿಗುತ್ತದೆ. ಪ್ಯಾಪಿಲಿಯೋ ಬುದ್ದ ಇದರ ವೈಜ್ಞಾನಿಕ ಹೆಸರು. ಪ್ಯಾಪಿಲಿಯಾನಿಡಿ (ಸಾಮಾನ್ಯ ಹೆಸರು ಸ್ವಲೋಟೈಲ್ಸ್, ಕನ್ನಡದಲ್ಲಿ ಬಾಲವುಳ್ಳ ಚಿಟ್ಟೆಗಳು) ಎಂಬ ಕುಟುಂಬಕ್ಕೆ ಸೇರಿದ ಈ ಚಿಟ್ಟೆಯನ್ನು ಕನ್ನಡದಲ್ಲಿ ‘ಮಲೆ ನವಿಲು’ ಎಂದು ಹೆಸರಿಸಲಾಗಿದೆ.

ಝಂಥೋಕ್ಸಿಲಮ್ ರಹೀಟ ಎಂಬ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣ ಸಿಗುವ ಚಿಟ್ಟೆಯು ಮರದ ಎಲೆ ಹಾಗೂ ತೊಗಟೆಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಇದನ್ನು ಕನ್ನಡದಲ್ಲಿ ಗಾಮಟೆ ಮರ ಹಾಗೂ ತುಳುವಿನಲ್ಲಿ ಕಾವಂಟೆ ಮರ ಎಂದು ಕರೆಯಲಾಗುತ್ತದೆ. ರಥ ಹೂವಿನಲ್ಲಿ ಮೊಟ್ಟೆಯಿಂದ ಹೊರ ಬಂದ ಕಂಬಳಿ ಹುಳ ಅದೇ ಮರದ ಎಲೆಗಳನ್ನು ತಿಂದು ಹಸಿರು ಎಲೆಯ ಆಕಾರದ ಕೋಶವನ್ನು ರಚಿಸಿಕೊಳ್ಳುತ್ತದೆ. ಕೆಲವು ಸಮಯಗಳ ಬಳಿಕ ಕೋಶ ದೊಳಗೆ ಚಿಟ್ಟೆಯಾಗಿ ರೂಪಾಂತರಗೊಂಡು ಪೂರ್ಣ ಚಿಟ್ಟೆಯಾಗಿ ಹೊರ ಬರುತ್ತದೆ. ಇದು 90ರಿಂದ 100 ಮಿ.ಮೀಟರ್ ಅಗಲದ ರೆಕ್ಕೆ ಹೊಂದಿದೆ. ಹೊಳೆವ ಆಕರ್ಷಕ ರೆಕ್ಕೆಯಲ್ಲಿ ನೇರಳೆ ಮಿಶ್ರಿತ ಹಸಿರು ಬಣ್ಣದ ಉದ್ದ ಪಟ್ಟಿ, ಗಾಢ ಹಸಿರು ಬಣ್ಣ ಹಾಗೂ ಕಪ್ಪು ಬಣ್ಣದ ಬಾಲ ಇದೆ. ಸೂರ್ಯನ ಬೆಳಕು ಪ್ರಖರ ವಾಗಿರುವಾಗ ಹಾರಾಟ ನಡೆಸುವ ಈ ಚಿಟ್ಟೆಯು ಮಂದ ಬೆಳಕಿನ ಸಂದರ್ಭ ಎಲೆಯ ಮೇಲೆ ರೆಕ್ಕೆಯನ್ನು ಹರಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುತ್ತದೆ. ಹಲವು ಬಾರಿ ಸೋಮೇಶ್ವರ ಅಭಯಾರಣ್ಯದೊಳಗೆ ಅಲ್ಲಲ್ಲಿ ಕಾಣ ಸಿಗುವ ರಥ ಹೂವಿ ನಲ್ಲಿ ಮಕರಂದ ಹೀರುತ್ತಿದ್ದ ಈ ಚಿಟ್ಟೆಯ ವಿವಿಧ ಭಂಗಿಯ ಫೋಟೊಗಳು ನನ್ನ ಕ್ಯಾಮರಾದಲ್ಲಿ ಸೆರೆಯಾಗಿವೆ.

      

ಕ್ರೂಝರ್

ಕೂಡ್ಲು ಜಲಪಾತದ ದಾರಿಯಲ್ಲಿ ಮುಂದೆ ಸಾಗಿದಾಗ ನೀರು ಹರಿದು ಹೋಗುವ ಜಾಗದಲ್ಲಿ ಹಳದಿ ಬಣ್ಣದ ‘ಕ್ರೂಸರ್’ ಚಿಟ್ಟೆಗಳು ನೆಲದ ಮೇಲೆ ಕುಳಿತಿರುವುದು ಕಣ್ಣಿಗೆ ಬಿದ್ದವು. ಆಕರ್ಷಕವಾಗಿ ಕಂಡುಬರುತ್ತಿದ್ದ ಎರಡು ಚಿಟ್ಟೆಗಳು ಪ್ರಾಣಿಯ ಮಲದ ಮೇಲೆ ಕುಳಿತು ಅದರಲ್ಲಿದ್ದ ದ್ರವವನ್ನು ಹೀರುತ್ತಿದ್ದವು. ಇವು ನನ್ನ ಕ್ಯಾಮರಾಕ್ಕೆ ಒಳ್ಳೆಯ ಫೋಸ್‌ಗಳನ್ನು ನೀಡಿ, ಫೋಟೊ ಆಕರ್ಷಕವಾಗಿ ಬರುವಂತೆ ಮಾಡಿವೆೆ. ಈ ಚಿಟ್ಟೆಯು ಹೆಚ್ಚಾಗಿ ತೇವಾಂಶ ಇರುವ ನೆಲದ ಮೇಲೆ ಕುಳಿತು ಅದರಲ್ಲಿರುವ ಪೋಷಕಾಂಶ ಮತ್ತು ಲವಣಾಂಶವನ್ನು ಪಡೆಯುತ್ತವೆ. ಇದನ್ನು ಮಡ್ ಪಡ್ಲಿಂಗ್ ಎಂದು ಕರೆಯಲಾಗುತ್ತದೆ. ಬಹುತೇಕ ಗಂಡು ಚಿಟ್ಟೆಗಳು ಮಾತ್ರ ಈ ರೀತಿ ಮಣ್ಣಿನಲ್ಲಿರುವ ಲವಣಾಂಶವನ್ನು ಹೀರಿ ಮಿಲನದ ಸಂದರ್ಭದಲ್ಲಿ ಹೆಣ್ಣು ಚಿಟ್ಟೆಗೆ ವರ್ಗಾಯಿಸುತ್ತವೆೆ ಎನ್ನುತ್ತಾರೆ ಚಿಟ್ಟೆ ತಜ್ಞರು. ಇದು ನಿಂಫ್ಯಾಲಿಡೀ(ಸಾಮಾನ್ಯ ಹೆಸರು -ಬ್ರೂಶ್ ಫೂಟೆಡ್ ಬಟರ್‌ಪ್ಲೈಸ್ ಕನ್ನಡದಲ್ಲಿ ಕುಚ್ಚುಪಾದದ ಚಿಟ್ಟೆಗಳು) ಕುಟುಂಬಕ್ಕೆ ಸೇರಿದ ಚಿಟ್ಟೆ. ಗಂಡು ಚಿಟ್ಟೆಗಳು ಹಳದಿ ಮಿಶ್ರಿತ ಬಣ್ಣ ಹೊಂದಿದ್ದರೆ ಹೆಣ್ಣು ಚಿಟ್ಟೆಗಳು ನೀಲಿ ಮಿಶ್ರಿತ ಹಸಿರು ಬಣ್ಣದಿಂದ ಕೂಡಿರುತ್ತದೆ. ಈ ಚಿಟ್ಟೆಯ ರೆಕ್ಕೆಯ ಅಳತೆ 72-110 ಮಿ.ಮೀ. ಕಾಡು ತೊಂಡೆ/ಕೆಂಪು ಚೆಂಡು ಹಣ್ಣಿನ ಬಳ್ಳಿಯ(ಅಡೆನಿಯಾ ಹೊಂಡಾಲ) ಎಲೆಯಲ್ಲಿ ಮೊಟ್ಟೆಗಳನ್ನು ಇಡುತ್ತವೆ.

         

ಆಟಮ್ ಲೀಫ್

ಸುಮಾರು ನಾಲ್ಕೈದು ವರ್ಷಗಳ ಹಿಂದೆ ಮನೆ ಸಮೀಪದ ರೈಲು ಹಳಿಯ ಮೇಲೆ ಚಿಟ್ಟೆಗಳನ್ನು ಹುಡುಕುತ್ತ ಹೊರಟಾಗ ನನಗೆ ಇನ್ನಂಜೆ ರೈಲು ನಿಲ್ದಾಣದ ಸಮೀಪ ರೈಲ್ವೆಗೆ ಭೂಸ್ವಾಧೀನ ಮಾಡಿಕೊಂಡ ಜಾಗದಲ್ಲಿ ಇರಂಥೆಮಮ್ ಮಲಬಾರಿಕುಮ್(ಕನ್ನಡ- ಬಿಳಿ ಗೋರಂಟೆ, ತುಳು- ಬೊಳ್ದು ಗೋರಂಟಿ) ಗಿಡದ ಎಲೆಗಳನ್ನು ತಿನ್ನುತ್ತಿರುವ ಕಂಬಳಿ ಹುಳವೊಂದನ್ನು ನೋಡಿದೆ. ತಕ್ಷಣವೇ ಅಲ್ಲಿಗೆ ಹಾರಿ ಬಂದ ಒಣಗಿದ ಎಲೆಯಂತೆ ಕಾಣುವ ಚಿಟ್ಟೆಯೊಂದು ಆ ಗಿಡದ ಎಲೆಯ ಅಡಿ ಭಾಗದಲ್ಲಿ ಮೊಟ್ಟೆಗಳನ್ನು ಇಡಲು ಆರಂಭಿಸಿತು. ಇದನ್ನೆಲ್ಲ ನನ್ನ ಕ್ಯಾಮರಾದಲ್ಲಿ ದಾಖಲಿಸಿಕೊಂಡೆ. ಇದು ದಕ್ಷಿಣ ಭಾರತದಲ್ಲಿ ಅಪರೂಪ ಎನಿಸಿರುವ ಅಟಮ್ ಲೀಫ್ ಚಿಟ್ಟೆಯಾಗಿತ್ತು. ಮೊಟ್ಟೆ ಇಟ್ಟ ಈ ಗಿಡವನ್ನು ಬುಡ ಸಮೇತ ಕಿತ್ತು ಮನೆಗೆ ಒಯ್ದು ಹಳೆಯ ಮಡಕೆ ಒಳಗೆ ನೆಟ್ಟಿದೆ. ನಾಲ್ಕೈದು ದಿನಗಳಲ್ಲಿ ಮೊಟ್ಟೆ ಒಡೆದು ಹುಳಗಳು ಹೊರಗಡೆ ಬಂದವು. ಆ ಹುಳಗಳು ಅದೇ ತನ್ನ ಆಹಾರ ಸಸ್ಯವಾಗಿರುವ ಆ ಗಿಡದ ಎಲೆಗಳನ್ನು ತಿಂದು ಎಳೆಂಟು ದಿನಗಳಲ್ಲಿ ಕೋಶಾವಸ್ಥೆಗೆ ಮರಳಿತು. ಸುಮಾರು 10 ದಿನಗಳ ನಂತರ ಕೋಶದ ಒಳಗೆ ರೂಪಾಂತರಗೊಂಡ ಪ್ರೌಢ ಚಿಟ್ಟೆಗಳು ಹೊರಗಡೆ ಬಂದು ಹಾರಾಟ ಆರಂಭಿಸಿತು. ಇದು ನಿಂಫ್ಯಾಲಿಡೀ (ಸಾಮಾನ್ಯ ಹೆಸರು -ಬ್ರೂಶ್ ಫೂಟೆಡ್ ಬಟರ್‌ಪ್ಲೈಸ್ ಕನ್ನಡದಲ್ಲಿ ಕುಚ್ಚುಪಾದದ ಚಿಟ್ಟೆಗಳು) ಕುಟುಂಬಕ್ಕೆ ಸೇರಿದ ಚಿಟ್ಟೆ. ಈ ಚಿಟ್ಟೆ ಬಿಳಿ ಗೋರಂಟೆ ಗಿಡದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಈ ಚಿಟ್ಟೆಯ ರೆಕ್ಕೆಯ ಅಗಲ 75-85 ಮಿ.ಮೀ. ಈ ಚಿಟ್ಟೆಗಳು ಕರ್ನಾಟಕದ ಪಶ್ಚಿಮಘಟ್ಟದಲ್ಲಿ ಹೇರಳವಾಗಿ ಕಂಡುಬರುತ್ತವೆ. ಇವುಗಳ ನಾಲ್ಕು ರೆಕ್ಕೆಗಳ ಪೈಕಿ ಕೆಳ ಮೈ ಕಂದು ಮಿಶ್ರಿತ ಕಂದು ಬಣ್ಣ ಹಾಗೂ ಮೇಲ್ಮೈ ಗಾಢ ಕೇಸರಿ ಬಣ್ಣದಿಂದ ಕೂಡಿದೆ. ಇದರಲ್ಲಿ ಕಪ್ಪು ಗೆರೆ ಕಂಡುಬರುತ್ತದೆ.

   
   
  

ವೆಸ್ಟರ್ನ್ ಸೆಂಟಾರ್ ಓಕ್‌ಬ್ಲೂ

ಉಡುಪಿಯ ಪ್ರೆಸ್‌ಕ್ಲಬ್ ಸಮೀಪದಲ್ಲಿರುವ ಹೊಳೆ ದಾಸವಾಳ ಮರದಲ್ಲಿ ಹುಳವೊಂದನ್ನು ಕೆಂಪಿರುವೆಗಳು ಮುತ್ತಿಕ್ಕಿರುವುದು ನೋಡಿ ಫೋಟೊ ಕ್ಲಿಕ್ಕಿಸಿದೆ. ನಂತರ ಅದರ ಬಗ್ಗೆ ಅಧ್ಯಯನ ಮಾಡಿದಾಗ ಅದು ವೆಸ್ಟರ್ನ್ ಓಕ್‌ಬ್ಲೂ ಚಿಟ್ಟೆಯ ಕಂಬಳಿ ಹುಳ ಎಂಬುದು ತಿಳಿಯಿತು. ಇದರ ಕಂಬಳಿಹುಳಗಳು ಇರುವೆಗಳೊಂದಿಗೆ ಸ್ನೇಹ ಬೆಳಸಿಕೊಂಡು ವೈರಿಗಳಿಂದ ರಕ್ಷಣೆ ಪಡೆಯುತ್ತವೆ. ಈ ಹುಳಗಳು ಹೊರ ಸೂಸುವ ಸಿಹಿಯಾದ ದ್ರವ(ಹನಿ ಡ್ರಿವ್)ವನ್ನು ಇರುವೆ ಗಳು ಸೇವಿಸಿ ಹುಳಗಳಿಗೆ ರಕ್ಷಣೆಯನ್ನು ನೀಡುತ್ತದೆ. ಈ ರೀತಿಯ ಸಹಬಾಳ್ವೆ ಯನ್ನು ಇರುವೆ ಹಾಗೂ ಈ ಕಂಬಳಿಹುಳಗಳು ನಡೆಸುತ್ತವೆ. ಲೈಸೀನಿಡೀ(ಸಾಮಾನ್ಯ ಹೆಸರು -ಬ್ಲೂಸ್, ಕನ್ನಡದಲ್ಲಿ ನೀಲಿ ಚಿಟ್ಟೆಗಳು) ಕುಟುಂಬಕ್ಕೆ ಸೇರಿದ ಚಿಟ್ಟೆಯ ರೆಕ್ಕೆಗಳ ಮೇಲ್ಮೈಯಲ್ಲಿ ಹೊಳೆಯುವ ನೇರಳೆ ಬಣ್ಣ ಹಾಗೂ ಕೆಳಮೈಯು ಬೂದು ಬಣ್ಣದಿಂದ ಕೂಡಿದೆ. ಇದರಲ್ಲಿ ಕಂದು ಬಣ್ಣದ ಕೆಲವು ಮಚ್ಚೆಗಳಿರುತ್ತವೆ. ಅಲ್ಲದೆ ಹಿಂದಿನ ರೆಕ್ಕೆಗಳ ಕೆಳತುದಿಯಲ್ಲಿ ಚಿಕ್ಕ ಬಾಲಗಳಿವೆ. ಇವು ಹೆಚ್ಚಾಗಿ ತನ್ನ ರೆಕ್ಕೆಗಳನ್ನು ಮಡಚಿಯೇ ಕುಳಿತುಕೊಳ್ಳುವು ದರಿಂದ ರೆಕ್ಕೆಗಳ ಕೆಳಮೈಯಲ್ಲಿರುವ ಬೂದು ಬಣ್ಣ ಮಾತ್ರ ಗೋಚರಿಸುತ್ತವೆ. ಈ ಚಿಟ್ಟೆಯ ರೆಕ್ಕೆಯ ಅಳತೆ 53-62 ಮಿ.ಮೀ. ಇದು ಸಾಮಾನ್ಯವಾಗಿ ಕಂಡು ಬರುವ ಚಿಟ್ಟೆ ಅಲ್ಲ. ಕನ್ನಡದಲ್ಲಿ ಇದನ್ನು ಪಡುವಣ ಓಕ್ ನೀಲಿ ಎಂದು ಕರೆಯಲಾಗಿದೆ. ಇದು ಹೊನಗಲು, ಕರ್ಮರ (ಹೊಪಿಯೊ ಪೊಂಗ)ಮರದ ಎಲೆಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಚಿಟ್ಟೆ ತಜ್ಞರಲ್ಲಿ ವಿಚಾರಿಸಿದಂತೆ ಮೊದಲ ಬಾರಿಗೆ ದಾಖಲೆ ಎಂಬಂತೆ ಈ ಚಿಟ್ಟೆಯು ಹೊಳೆ ದಾಸವಾಳ ಮರದ ಎಲೆಯಲ್ಲಿ ಮೊಟ್ಟೆಗಳನ್ನು ಇಟ್ಟಿರುವುದನ್ನು ನಾನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದೇನೆ.

  
   

Writer - ಚಿತ್ರ-ಬರಹ: ನಝೀರ್ ಪೊಲ್ಯ

contributor

Editor - ಚಿತ್ರ-ಬರಹ: ನಝೀರ್ ಪೊಲ್ಯ

contributor

Similar News

ಗಾಂಧೀಜಿ