ಹೆಸರು ಬದಲಾಯಿಸುವ ಹುನ್ನಾರ

Update: 2018-12-08 18:37 GMT

ಪರಂಪರೆಯನ್ನು ಯಾರೂ ಅಲ್ಲಗಳೆಯಲಾಗದು. ಆದರೆ ಪರಂಪರೆಯಲ್ಲಿರುವುದೆಲ್ಲವೂ ಪರಮ ಪೂಜ್ಯ, ಪರಂಪರೆಯ ಯಥಾವತ್ ಪುನರ್ ಸೃಷ್ಟಿಯೇ ಪರಮ ಕರ್ತವ್ಯವೆನ್ನುವುದು ತಿರೋಗಾಮಿಯಾಗುತ್ತದೆ. ಪರಂಪರೆಯ ಅಂತ:ಸತ್ತ್ವವಾದ ಒಳ್ಳೆಯ ಗುಣಗಳನ್ನು ಉಳಿಸಿಕೊಂಡು, ಇವತ್ತಿನ ನವ ಭಾರತ ಕಟ್ಟುವುದು ಪುರೋಗಾಮಿಯಾಗುತ್ತದೆ. ಪರಂಪರೆ ಅಂತಃಸತ್ತ್ವವಾಸ ‘ವಸುಧೈವ ಕುಟುಂಬಕಂ’ ಪರಿಕಲ್ಪನೆಯನ್ನುಳಿಸಿಕೊಂಡು ಸರ್ವರಿಗೆ ಸಮಪಾಲಿನ, ಸರ್ವಜನಾಂಗದ ಶಾಂತಿಯ ತೋಟ-ಇವತ್ತಿನ ನವ ಭಾರತವಾಗಬೇಕು. ಇದು ಇಂದಿನ ಅಗತ್ಯ. ಹೆಸರು ಬದಲಾಯಿಸುವುದರಿಂದ ಕೆಲವು ಸಮುದಾಯಗಳ, ಕೆಲವು ಬಣಗಳ ಅಹಂ-ಪ್ರತಿಷ್ಠೆಗಳನ್ನು ತಾತ್ಕಾಲಿಕವಾಗಿ ತೃಪ್ತಿಪಡಿಸುವುದು ಹೊರತು ಬೇರೇನೂ ಸಾಧನೆಯಾಗದು.


ನೀನ್ಯಾಕೋ ನಿನ್ನ ಹಂಗ್ಯಾಕೋ/
ನಿನ್ನ ನಾಮದ ಬಲವೊಂದಿದ್ದರೆ ಸಾಕೋ/

-ಎಂದು ದಾಸವರೇಣ್ಯರು ದೇವರ ನಾಮಬಲದ ಮೇಲೆ ಮುಕ್ತಿ ಮಾರ್ಗ ಕಂಡುಕೊಂಡರು. ಹೆಸರಲ್ಲೇನಿದೆನ್ನುತ್ತಲೇ ನಮ್ಮ ಜಾನಪದರು, ‘ಹೆಸರು ಕ್ಷೀರಸಾಗರ ಭಟ್ಟ, ಮಜ್ಜಿಗೆ ನೀರಿಗೆ ತತ್ವಾರ’ ಎಂದು ಲೇವಡಿ ಮಾಡಿರುವುದೂ ಉಂಟು. ಹೆಸರಲ್ಲೇನಿದೆ ಎಂದುಕೊಂಡೇ ಹೆಸರಿಗೆ ಅಂಟಿಕೊಂಡಿದೆ ನಮ್ಮ ಜಗತ್ತು. ಈ ತಲೆಮಾರಿನ ಹುಡುಗರಿಗೆ ತಂದೆತಾಯಿಯರು ಇಟ್ಟ ಹೆಸರನ್ನು ಬದಲಾಯಿಸಿಕೊಳ್ಳುವುದೂ ಒಂದು ಶೋಕಿಯಾಗಿದೆ. ಗತಕಾಲದವರು ಇಟ್ಟ ಹೆಸರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿ ನಾಮಬಲದ ಮೇಲೆ ರಾಜಕೀಯ ಮಾಡುವ ಒಂದು ಹೊಸ ಆಟ ಈಗ ಶುರುವಾಗಿದೆ. ಭಾರತೀಯ ಜನತಾ ಪಕ್ಷ ಪ್ರಣೀತವಾದ ಹೆಸರು ಬದಲಾಯಿಸುವ ಆಟದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮುಂದಿರುವಂತಿದೆ. ಅಲಹಾಬಾದ್, ಫೈಝಾಬಾದ್‌ಗಳು ಇತಿಹಾಸದ ಪುಟ ಸೇರಿ ಈ ನಗರಗಳು ಈಗ ಪ್ರಯಾಗ, ಅಯೋಧ್ಯೆ ಎಂದು ನಾಮಕರಣಗೊಂಡಿವೆ. ಯೋಗಿ ಆದಿತ್ಯನಾಥರು ತಮ್ಮ ತೌರು ರಾಜ್ಯವಾದ ಉತ್ತರ ಪ್ರದೇಶದ ನಗರಗಳಿಗೆ ಪುನರ್ ನಾಮಕರಣ ಮಾಡುವುದರ ಜೊತೆಗೆ ಭಾರತದ ಇತರ ನಗರಗಳಿಗೂ ಪುನರ್ ನಾಮಕರಣ ಮಾಡುವ ಉತ್ಸಾಹದಲ್ಲಿರುವಂತಿದೆ. ಹೈದರಾಬಾದ್ ನಗರವನ್ನು ‘ಭಾಗ್ಯ ನಗರ’ವೆಂದೂ ಕರೀಂ ನಗರವನ್ನು ‘ಕರಿಪುರ’ವೆಂದೂ ಬದಲಾಯಿಸುವಂತೆ ಅವರು ಸಲಹೆ ನೀಡಿದ್ದಾರೆ. ನೂರಾರು ವರ್ಷಗಳಷ್ಟು ಇತಿಹಾಸ ಪ್ರಸಿದ್ಧವಾದ ಪ್ರಾಚೀನ ನಗರಗಳ ಹೆಸರು ಬದಲಾಯಿಸುವುದರ ಹಿಂದಿನ ಮರ್ಮವೇನಿದ್ದೀತು?

ಹೆಸರು ಬದಲಾಯಿಸುವ ಭಾಜಪ ಹುನ್ನಾರದ ಹಿಂದೆ ಎರಡು ಉದ್ದೇಶಗಳಿರುವಂತಿದೆ. ಮೊದಲನೆಯದಾಗಿ ತಮ್ಮ ಅಪೇಕ್ಷೆಗನುಗುಣವಾಗಿ ಚರಿತ್ರೆಯನ್ನು ಪುನರ್ರಚಿಸಬೇಕೆನ್ನುವ ಹಿಂದುತ್ವವಾದಿಗಳ ವೇದಕಾಲೀನ ಭಾರತ ಬದ್ಧತೆ. ಎರಡನೆಯದು ಅಧಿಕಾರಾರೂಢ ಪಕ್ಷದಲ್ಲಿರುವ ಕೆಲವೊಂದು ಪ್ರಾಚೀನ ಪಟ್ಟಭದ್ರಹಿತಗಳ ಆಸಕ್ತಿಗಳನ್ನು ತಣಿಸುವ ಚುನಾವಣಾ ರಾಜಕೀಯ. ಸುಪ್ರೀಂ ಕೋರ್ಟಿನ ತೀರ್ಪು ಏನೇ ಬರಲಿ ಅಯೋಧ್ಯೆಯಲ್ಲಿ ರಾಮ ಮಂಂದಿರ ನಿರ್ಮಿಸಲೇಬೇಕೆಂಬುದೂ ಇಂಥದೇ ಚುನಾವಣಾ ತಂತ್ರವಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಿಂದುತ್ವಪ್ರೇಮಿ ಮತದಾರರನ್ನು ಓಲೈಸಲು ಭಾಜಪಕ್ಕೆ ಇದು ತುರ್ತಿನ ಅಗತ್ಯವಾಗಿದೆ. ನರೇಂದ್ರ ಮೋದಿಯವರ ಸರಕಾರದ ಸಾಧನೆಗಳು ಮತದಾನ ಯಂತ್ರಗಳಲ್ಲಿ ಫಲಕೊಡುವಷ್ಟು ವರ್ಣರಂಜಿತವಾಗಿಲ್ಲ. ಜೊತೆಗೆ ಮತದಾರರನ್ನು ಕಷ್ಟಕೋಟಲೆಗಳಿಗೆ ದೂಡಿರುವ ಅನಾಣ್ಯೀಕರಣ ಮತ್ತು ಜಿಎಸ್‌ಟಿ ಎಂಬೆರಡು ಗುಮ್ಮಗಳ ಮುಸುಕಿನೊಳಗಿನ ಪೆಟ್ಟು ಇನ್ನೂ ನಿಂತಿಲ್ಲ. ಹೀಗಾಗಿ ಹೆಸರುಗಳ ಹಿಂದಿನ ಭಾವುಕತೆಗಳನ್ನು ತಣಿಸಿ ಹಿಂದುತ್ವ ಪ್ರೇಮಿ ಮತದಾರರನ್ನು ತುಷ್ಟೀಕರಿಸುವ ಪ್ರಯತ್ನ ಭರದಿಂಲೇ ನಡೆದಿರುವಂತಿದೆ.

ಈ ಹುನ್ನಾರಕ್ಕೆ ವೇದಕಾಲೀನ ಪ್ರಾಚೀನ ಭಾರತದ ಕೀರ್ತಿ-ಹಿರಿಮೆ-ಮಹಿಮೆಗಳನ್ನು ಪುನರುಜ್ಜೀವಗೊಳಿಸುವ ಸಾಂಸ್ಕೃತಿಕ ಪುನರುತ್ಥಾನವೆಂಬ ಮಹತ್ವಾಕಾಂಕ್ಷೆಯ ಯೋಜನೆಯ ಆಕರ್ಷಣೆಯ ಬಣ್ಣ ಕೊಡಲಾಗಿದೆ. ಒಂದು ಕಾಲಕ್ಕೆ ಭಾರತ ಸುವರ್ಣ ಯುಗ ಎಂಬ ಅಭಿದಾನಕ್ಕೆ ಪಾತ್ರವಾಗಿತ್ತು. ಗುಪ್ತರ ಆಳ್ವಿಕೆಯ ಕಾಲ ಚರಿತ್ರೆಯಲ್ಲಿ ಸುವರ್ಣ ಯುಗ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಸುಮಾರು 1,200 ವರ್ಷಗಳ ಹಿಂದೆ ಅವೆಲ್ಲವೂ ಸೂರೆಹೋಯಿತು.ಮುಸ್ಲಿಮರ ಆಗಮನದೊಂದಿಗೆ ಸುವರ್ಣಯುಗ ಮುಗಿಯಿತು ಎಂಬುದು ಹಿಂದುತ್ವಪರ ಇತಿಹಾಸಕಾರರ ಕಲ್ಪನೆ. ಈ ಸುವರ್ಣ ಯುಗಕ್ಕೆ ಮತ್ತೆ ನಾವು ಹಿಂದಿರುಗಬೇಕು, ವೇದಕಾಲೀನ ಭವ್ಯ ಭಾರತ ಮತ್ತೆ ಕಂಗೊಳಿಸಬೇಕು, ಇದರಿಂದ ಮಾತ್ರ ಪ್ರಾಚೀನ ಭವ್ಯ ಭಾರತದ ಪುನರುತ್ಥಾನ ಸಾಧ್ಯ ಎಂಬುದು ಆಡಳಿತಾರೂಢ ಪಕ್ಷದ ಹಾಗೂ ಹಿಂದೂ ಸಂಘಟನೆಗಳ ಬಲವಾದ ನಂಬಿಕೆ. ಇಂಥ ಯೋಚನೆಯ ಹಿಂದೆ ಇರುವುದು, ಮುಸ್ಲಿಮ್ ಚಕ್ರವರ್ತಿಗಳ ಆಳ್ವಿಕೆಯ ಅವಧಿಯಲ್ಲಿ ಹೊಸತು ಏನೂ ಸೃಷ್ಟಿಯಾಗಲಿಲ್ಲ ಎಂದು ಸುಪ್ತಪ್ರಜ್ಞೆಯಲ್ಲಿ ಅಡಗಿರುವ ಕೋಪಹತಾಶೆಗಳು. ಮುಸ್ಲಿಮರು ಹೊಸದೇನನ್ನೂ ಕಟ್ಟಲಿಲ್ಲ. ಅವರು ಭಗ್ನಪ್ರಿಯರು. ಪ್ರಾಚೀನ ಭಾರತದ ನಿರ್ಮಾಣಗಳನ್ನು ಕೆಡವಿ ತಮ್ಮ ಸ್ಮಾರಕಗಳನ್ನು ನಿರ್ಮಿಕೊಂಡದ್ದಷ್ಟೇ ಅವರ ಸಾಧನೆ ಎಂದೇ ರಾಮ ಜನ್ಮ ಭೂಮಿಯಲ್ಲಿ ಬಾಬರಿ ಮಸೀದಿ, ಹಿಂದೂ ದೇವಾಲಯವಿದ್ದ ಜಾಗದಲ್ಲಿ ತಾಜ್ ಮಹಲ್‌ಗಳು ಎದ್ದವು. ಇದು ಹಿಂದುತ್ವವಾದಿಗಳ ಸುಪ್ತ ಪ್ರಜ್ಞೆಯಲ್ಲಿ ಅಡಗಿದ್ದು ಆಗಿಂದಾಗ್ಯೆ ಪ್ರಕಟಗೊಳ್ಳುವ ಸಂಗತಿ.

ಶತಮಾನಗಳ ಕಾಲದ ಮುಸ್ಲಿಮರ ಆಡಳಿತದ ನಂತರವೂ ಪ್ರಯಾಗ ಅಥವಾ ಅಯೋಧ್ಯೆ ಮಾಯವಾಗಲಿಲ್ಲ. ಫೈಝಾಬಾದಿನ ಜೊತೆಜೊತೆಗೇ ಅಯೋಧ್ಯೆ ಬದುಕುತ್ತಾ ಬಂದಿದೆ. ಅಲಹಾಬಾದಿನೊಟ್ಟಿಗೇ ಪ್ರಯಾಗ ಜೀವಂತವಾಗಿದೆ.ಎಂದೇ ಈ ಅನ್ಯನಾಮಗಳನ್ನು ಚರಿತ್ರೆಯಿಂದ ಅಳಿಸಿ ಹಾಕಿ ಪ್ರಾಚೀನ ಹಿಂದೂ ನಾಮಗಳನ್ನು ಮತ್ತೆ ಪ್ರತಿಷ್ಠಾಪಿಸಬೇಕು ಎಂಬುದು ಪುನುರುತ್ಥಾನ ವಾದಿಗಳ ಅಂಬೋಣ. ಆದರೆ, ಫೈಝಾಬಾದ್-ಅಯೋಧ್ಯೆ ಮತ್ತು ಅಲಹಾಬಾದ್-ಪ್ರಯಾಗಗಳು ಒಟ್ಟಿಗೆ ಬದುಕಿದಂತೆಯೇ ಈ ನಗರಗಳಲ್ಲಿ ಹಿಂದೂ-ಮುಸ್ಲಿಮರು ಮೊನ್ನೆಮೊನ್ನೆಯವರೆಗೆ ಸಾಮರಸ್ಯದಿಂದ ಬದುಕುತ್ತಿದ್ದರು ಎಂಬುದನ್ನು ಅನುಕೂಲಸಿಂಧುವಾಗಿ ಮರೆಯಲಾಗುತ್ತಿದೆ. ಹೆಸರು ಬದಲಾಯಿಸುವ ಪ್ರಕ್ರಿಯೆ ಈಗ ಭರಾಟೆಯಿಂದಿದ್ದು, ಅಹಮದಾಬಾದ್, ಔರಂಗಾಬಾದ್ ಮೊದಲಾದವು ಶೀಘ್ರದಲ್ಲೇ ಪುನರ್‌ನಾಮಕರಣಗೊಳ್ಳಲಿವೆ. ಬಿಹಾರ್‌ನ ಪಟ್ನಾ, ಪಾಟಲೀಪುತ್ರವಾಗುವುದೋ ಬಂಕೀಪುರವಾಗುವುದೋ ಕಾದು ನೋಡಬೇಕು. ಶೇಖ್‌ಪುರ ಎಂಬುದು ಒಂದು ಊರಿನ ಹೆಸರು.ಶೇಖ್ ಮುಸ್ಲಿಂ ಹೆಸರಾದರೆ ಪುರ ಸಂಸ್ಕೃತದ್ದು. ಈ ಸಂಕರ ಹೇಗಾಯಿತು? ಇನ್ನು ಪ್ರತೀ ಪಟ್ಟಣ ಮತ್ತು ನಗರಗಳಲ್ಲೂ ನಾವು ಮೊಹಲ್ಲಾಗಳನ್ನು ಕಾಣುತ್ತೇವೆ. ಇವುಗಳ ಗತಿ ಏನಾಗುವುದೋ? ಇನ್ನು ಪುನರ್ ನಾಮಕರಣ ಪ್ರಸಂಗಗಳಲ್ಲಿ ಧರ್ಮಾಂಧತೆ ಹಲವೊಮ್ಮೆ ಮುಜುಗರವನ್ನೂ ಉಂಟುಮಾಡಬಹುದು, ಉದಾಹರಣೆಗೆ ಹರ್ಯಾಣದ ಗೋರೆಗಾಂವ್ ನಗರವನ್ನೇ ನೋಡಿ. ಈ ನಗರಕ್ಕೆ ಗುರುಗಾಂವ್ ಎಂದು ಮರುನಾಮಕರಣ ಮಾಡಲಾಯಿತು.

ಮಹಾಭಾರತದ ಧನುರ್‌ವಿದ್ಯಾ ಗುರು ದ್ರೋಣಾಚಾರ್ಯರು ಇಲ್ಲಿ ನೆಲೆಸಿದ್ದರೆಂದು ಪುರಾಣ ಪ್ರತೀತಿ. ದಲಿತ ಏಕಲವ್ಯನಿಂದ ಹೆಬ್ಬರಳಿನ ಗುರುದಕ್ಷಿಣೆ ಪಡೆದ ಖ್ಯಾತಿಯವರು ದ್ರೋಣಾಚಾರ್ಯರು. ಜಾತಿಭೇದ ಮಾಡಿದ ಈ ಗುರುವಿನ ಹೆಸರು ಎಷ್ಟು ಘನತರವಾದುದು? ಅಲ್ಲಿನ ದಲಿತರು ಇದರ ವಿರುದ್ಧ ಪ್ರತಿಭಟನೆ ಮಾಡಿದರೋ ಇಲ್ಲವೋ ತಿಳಿಯದು. ಹರ್ಯಾಣದ ಕೆಲವು ಗ್ರಾಮಗಳಲ್ಲಿ ಮುಸ್ಲಿಮರು ಹಿಂದೂಗಳಂತೆ ತೋರುವ ಹೆಸರುಗಳನ್ನು ಇಟ್ಟುಕೊಳ್ಳುವ ಪರಿಪಾಠವಿದೆಯೆಂದು ಸಾಮಾಜಿಕ ಸಮೀಕ್ಷೆಗಳು ತಿಳಿಸಿವೆ. ಇದನ್ನು ಭಾರತೀಯ ಸಂಸ್ಕೃತಿಯೊಂದಿಗೆ ಸಮೀಕರಿಸಿಕೊಳ್ಳುವ ಮನೋಭಾವವೆಂದು ಅರ್ಥೈಸಲಾಗುತ್ತಿದೆ. ಹೆಸರು, ವೇಷಭೂಷಣಗಳು, ಆಹಾರ ಪದ್ಧತಿ-ಇವುಗಳೆಲ್ಲ ಸಂಸ್ಕೃತಿಯನ್ನು ಬಿಂಬಿಸುವ ಲಕ್ಷಣಗಳಾಗಿರುವುದರಿಂದ ಇಂಥ ಮನೋಭಾವ ಅಲ್ಪಸಂಖ್ಯಾತರಲ್ಲಿ ಮೂಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ತಮ್ಮ ಜೀವನದ ಎಲ್ಲ ರಂಗಗಳಲ್ಲೂ ಭಾರತೀಯ ರೀತಿನೀತಿಗಳನ್ನು ಅಳವಡಿಸಿಕೊಳ್ಳಬೇಕೆಂಬ ಆಗ್ರಹ ಇದ್ದೇ ಇದೆ. ಇಂಥ ಆಗ್ರಹದ ಜೊತೆಗೆ ಈಗ ಮಸೀದಿಗಳೂ ಅವರ ಧಾರ್ಮಿಕ ಅಸ್ಮಿತಗೆ ಅಗತ್ಯವಲ್ಲ ಎಂಬ ವಾದ ಕೇಳಿ ಬರುತ್ತಿದೆ. ಇವೆಲ್ಲದರ ಹಿಂದಿರುವುದು ಒಂದು ಸಂಸ್ಕೃತಿಯನ್ನು ಅಳಿಸಿಹಾಕುವ ಆಲೋಚನೆ.ಸ್ಥಳನಾಮ ಬದಲಾವಣೆ, ಸ್ಮಾರಕಗಳನ್ನು ಮರಳಿ ಪಡೆಯುವ ಪ್ರಯತ್ನಗಳು ಇಂಥ ಆಲೋಚನೆಗಳಿಗೆ ಜ್ವಲಂತ ನಿದರ್ಶನಗಳು.

ಸಂಸ್ಕೃತಿ ಎನ್ನುವುದು ಸ್ವರ್ಗದಿಂದ ಇಳಿದು ಬರುವುದಿಲ್ಲ. ಅದು ನಾವು ನಮ್ಮ ನಡಾವಳಿಯಿಂದ ಕಟ್ಟುವ ನಿರಂತರವಾದ ಒಂದು ಪ್ರಕ್ರಿಯೆ. ಒಂದು ರಾಷ್ಟ್ರ ಶೀಲ, ಗುಣಲಕ್ಷಣಗಳನ್ನು ಬಿಂಬಿಸುವ ಸಂಸ್ಕೃತಿಯಲ್ಲಿ ಆ ದೇಶದ ಎಲ್ಲ ಸಮುದಾಯಗಳ ಕೊಡುಗೆ ಇರುತ್ತದೆ. ಪ್ರಜೆಗಳ ನಡೆ-ನುಡಿ-ಸಂಪ್ರದಾಯಗಳ ಪ್ರಭಾವ ಇರುತ್ತದೆ. ಬಹು ಸಂಸ್ಕೃತಿಗಳ ಚಿಂತನೆ-ಆಚರಣೆ-ಶೀಲ-ಸಂಪ್ರದಾಯಗಳ ಕೊಡುಗೆ, ಪ್ರಭಾವಗಳ ಸಂಯೋಗದಿಂದಲೇ ರಾಷ್ಟ್ರೀಯ ಸಂಸ್ಕೃತಿ ಮತ್ತು ಚಾರಿತ್ರ್ಯಗಳು ರೂಪುಗೊಳ್ಳುತ್ತವೆ. ಇದು ವಿಶ್ವಮಟ್ಟದಲ್ಲಿ ಒಪ್ಪಿತವಾದ ವಿಚಾರ. ಭಾರತೀಯ ಸಂಸ್ಕೃತಿ ನಮ್ಮ ಹಲವಾರು ಧಾರ್ಮಿಕ ಮತ್ತು ಜಾನಪದ ಸಂಸ್ಕೃತಿಗಳ ಸಂಗಮಶಿಲ್ಪವೇ ಆಗಿದೆ. ಅದರ ಈ ಬಹುತ್ವ ಈಗಿನ ಆಡಳಿತಕ್ಕೆ ಪರಿಗ್ರಾಹ್ಯವಲ್ಲ. ಒಂದೇ ರಾಷ್ಟ್ರ -ಒಂದೇ ಭಾಷೆ-ಒಂದೇ ಸಂಸ್ಕೃತಿ ಪರಿಕಲ್ಪನೆ ಈಗಿನ ಆಡಳಿತದ್ದು. ಅದು ಹಿಂದೂ ರಾಷ್ಟ್ರ-ಹಿಂದೂ ಸಂಸ್ಕೃತಿ ಮತ್ತು ಹಿಂದಿ ಭಾಷೆ. ಭಾರತದ ಪುನರುತ್ಥಾನದ ಉದ್ದೇಶವೂ ಹಿಂದೂ ಸಂಸ್ಕೃತಿಯ (ವೇದ ಸಂಸ್ಕೃತಿ ಎಂದು ಓದಿಕೊಳ್ಳಿ) ಪುನರ್ ಸ್ಥಾಪನೆಯೇ ಆಗಿದೆ.

ಹೆಸರುಗಳನ್ನು ಬದಲಾಯಿಸುವ ಕ್ರಮ, ಮಂದಿರಗಳ ನಿರ್ಮಾಣ, ಪುರಾತನ ದೇವಾಲಯಗಳಿದ್ದವೆಂಬ ಜಾಗಗಳನ್ನು ವಶಪಡಿಸಿಕೊಳ್ಳುವ ಮಾತುಗಳು ಇವೆಲ್ಲವೂ ಹಿಂದೂ ರಾಷ್ಟ್ರ, ಹಿಂದೂ ಸಂಸ್ಕೃತಿಯ ಪುನರುತ್ಥಾನದ ಕಾರ್ಯಸೂಚಿಯ ಭಾಗವೇ ಆಗಿವೆ. ಇದರಿಂದ ಮುಸ್ಲಿಂ ಸಮುದಾಯಕ್ಕೆ ಒಂದು ಸ್ಪಷ್ಟ ಸಂದೇಶವನ್ನೂ ಸರಕಾರಗಳು ರವಾನಿಸುತ್ತಿವೆ. ಅದು, ಭಾರತೀಯ ಸಂಸ್ಕೃತಿಗೆ ಮುಸ್ಲಿಮರ ಕೊಡುಗೆ ಏನಿಲ್ಲ ಎಂಬುದೇ ಆಗಿದೆ. ಸ್ವಾತಂತ್ರ್ಯ ಬಂದ ಕೂಡಲೇ ನಮಗೆ ಜಾತ್ಯತೀತತೆ ಮತ್ತು ಬಹುತ್ವದ ಪರಿಕಲ್ಪನೆಗಳಿಗೆ ಬದ್ಧವಾದ ಸಂವಿಧಾನವನ್ನಿತ್ತ ನವ ಭಾರತದ ಶಿಲ್ಪಿಗಳ ಆಶಯಗಳಿಗೆ ತದ್ವಿರುದ್ಧವಾಗಿದೆ ಆರೆಸ್ಸೆಸ್ ಮತ್ತು ಭಾಜಪಗಳ ಈ ಪುನರುತ್ಥಾನದ, ಏಕಭಾರತ-ಏಕ ಸಂಸ್ಕೃತಿಯ ಪರಿಕಲ್ಪನೆ. ಸ್ವಾತಂತ್ರ್ಯೋತ್ತರ ಭಾರತದ ಮೊದಲ ತಲೆಮಾರಿನ ಆಡಳಿತಗಾರರಿಗೆ ಪ್ರಾಚೀನ ಭವ್ಯಪರಂಪರೆಯ ಗೌರವದೊಂದಿಗೆ ಭವ್ಯ ನವ ಭಾರತವನ್ನು ಜಾತ್ಯತೀತತೆ ಮತ್ತು ಬಹುತ್ವಗಳ ಬುನಾದಿಯ ಮೇಲೆ ನಿರ್ಮಿಸುವ ಕನಸುಗಳಿದ್ದವು. ಸುವರ್ಣಯುಗದ ಉತ್ಖನನ ಮಾಡುವಂಥ ಹ್ಯಾಂಗೋವರ್‌ಗಳಿಂದ ಮುಕ್ತರಾಗಿದ್ದ ಅವರು ಸರ್ವಧರ್ಮಸಮಾನತೆಯಿಂದ ಕೂಡಿದ ನವಭಾರತದ ಕನಸುಕಂಡರು. ಸರ್ವರ ಸರ್ವಾಂಗೀಣ ಅಭಿವೃದ್ಧಿ ಅವರ ಮಂತ್ರವಾಗಿತ್ತು. ನೆಹರೂ ಅವರು ನೀರಾವರಿ ಅಣೆಕಟ್ಟುಗಳನ್ನು, ಉಕ್ಕಿನ ಕಾರ್ಖಾನೆಗಳನ್ನು, ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳನ್ನು ‘ಆಧುನಿಕ ದೇವಾಲಯ’ಗಳೆಂದು ಬಣ್ಣಿಸಿದರು. ಪ್ರಗತಿಶೀಲರಾಗಿದ್ದ ಅಂದಿನ ನಾಯಕರು ಭಾರತದ ಸುವರ್ಣ ಯುಗ ಭವಿಷ್ಯದಲ್ಲಿದೆ ಎಂದು ನಂಬಿದ್ದರು.

 ಪರಂಪರೆಯನ್ನು ಯಾರೂ ಅಲ್ಲಗಳೆಯಲಾಗದು. ಆದರೆ ಪರಂಪರೆಯಲ್ಲಿರುವುದೆಲ್ಲವೂ ಪರಮ ಪೂಜ್ಯ, ಪರಂಪರೆಯ ಯಥಾವತ್ ಪುನರ್ ಸೃಷ್ಟಿಯೇ ಪರಮ ಕರ್ತವ್ಯವೆನ್ನುವುದು ತಿರೋಗಾಮಿಯಾಗುತ್ತದೆ. ಪರಂಪರೆಯ ಅಂತ:ಸತ್ತ್ವವಾದ ಒಳ್ಳೆಯ ಗುಣಗಳನ್ನು ಉಳಿಸಿಕೊಂಡು, ಇವತ್ತಿನ ನವ ಭಾರತ ಕಟ್ಟುವುದು ಪುರೋಗಾಮಿಯಾಗುತ್ತದೆ. ಪರಂಪರೆ ಅಂತಃಸತ್ತ್ವವಾಸ ‘ವಸುಧೈವ ಕುಟುಂಬಕಂ’ ಪರಿಕಲ್ಪನೆಯನ್ನುಳಿಸಿಕೊಂಡು ಸರ್ವರಿಗೆ ಸಮಪಾಲಿನ, ಸರ್ವಜನಾಂಗದ ಶಾಂತಿಯ ತೋಟ-ಇವತ್ತಿನ ನವ ಭಾರತವಾಗಬೇಕು. ಇದು ಇಂದಿನ ಅಗತ್ಯ. ಹೆಸರು ಬದಲಾಯಿಸುವುದರಿಂದ ಕೆಲವು ಸಮುದಾಯಗಳ,ಕೆಲವು ಬಣಗಳ ಅಹಂ-ಪ್ರತಿಷ್ಠೆಗಳನ್ನು ತಾತ್ಕಾಲಿಕವಾಗಿ ತೃಪ್ತಿಪಡಿಸುವುದು ಹೊರತು ಬೇರೇನೂ ಸಾಧನೆಯಾಗದು. ಶಾಂತಿ, ಅಭಿವೃದ್ಧಿ, ಸಮೃದ್ಧಿಗಳನ್ನು ಸಾಧಿಸಿದೇ ‘ಭಾಗ್ಯ ನಗರ’ ಎಂದು ಹೆಸರು ಬದಲಾಯಿಸುವುದರಿಂದ ಶುರುವಿನಲ್ಲಿ ಹೇಳಿರುನ ಜಾನಪದ ಗಾದೆ ಯಂತಾಗಬಹುದಷ್ಟೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News