ಎದೆನೋವು, ಎದೆಯುರಿ, ಹೃದಯಾಘಾತ: ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಅಗತ್ಯ ಮಾಹಿತಿಗಳು...

Update: 2018-12-09 11:32 GMT

ಕೆಲವೊಮ್ಮೆ ಎದೆನೋವನ್ನು ಎದೆಯುರಿ ಅಥವಾ ಹೃದಯಾಘಾತವೆಂದು ತಪ್ಪಾಗಿ ಭಾವಿಸಲಾಗುತ್ತದೆ. ಆದರೆ ಈ ಎಲ್ಲ ಮೂರೂ ಸಮಸ್ಯೆಗಳು ಭಿನ್ನವಾಗಿವೆ. ಹೃದಯಾಘಾತವುಂಟಾದವರು ಅಥವಾ ಎದೆಯುರಿಯನ್ನು ಅನುಭವಿಸುತ್ತಿರುವವರು ಎದೆಯಲ್ಲಿ ನೋವು ಅಥವಾ ತೊಂದರೆಯ ಬಗ್ಗೆ ದೂರಿಕೊಳ್ಳುತ್ತಾರೆ. ಪ್ರತಿ ಎದೆನೋವೂ ಹೃದಯಾಘಾತದ ಸಂಕೇತವೇ?, ಎದೆಯುರಿ ಮತ್ತು ಹೃದಯಾಘಾತವನ್ನು ಗುರುತಿಸುವುದು ಹೇಗೆ? ನಿಮಗೆ ಎದೆ ನೋಯುತ್ತಿದ್ದರೆ ಯಾವಾಗ ನೀವು ವೈದ್ಯರ ಬಳಿಗೆ ತೆರಳಬೇಕು?, ಆ್ಯಂಜಿನಾ ಅಥವಾ ಎದೆನೋವು ಎಂದರೇನು?, ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳಿವೆ. ಅ್ಯಂಜಿನಾ,ಎದೆಯುರಿ ಮತ್ತು ಹೃದಯಾಘಾತದ ನಡುವಿನ ಪ್ರಮುಖ ವ್ಯತ್ಯಾಸಗಳ ಅರಿವು ನಿಮಗಿರಲಿ........

ಆ್ಯಂಜಿನಾ

ಆ್ಯಂಜಿನಾ ಎದೆಯಲ್ಲಿ ಕಾಣಿಸಿಕೊಳದಳ್ಳುವ ನೋವು ಅಥವಾ ತೊಂದರೆಯಾಗಿದ್ದು, ಸಾಮಾನ್ಯವಾಗಿ ಹೃದ್ರೋಗ ಇದಕ್ಕೆ ಕಾರಣವಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಯಾವ ರಕ್ತನಾಳ ಹಾನಿಗೀಡಾಗಿದೆ ಎನ್ನುವುದನ್ನು ಅವಲಂಬಿಸಿ ಹೃದಯದ ಕೆಲವು ಭಾಗಗಳಿಗೆ ಅಥವಾ ಸಂಪೂರ್ಣವಾಗಿ ರಕ್ತ ಪೂರೈಕೆಯ ತಡೆಯನ್ನುಂಟು ಮಾಡುವ ರಕ್ತನಾಳದಲ್ಲಿಯ ಕೊಬ್ಬಿನ ಸಂಗ್ರಹವು ಈ ನೋವಿಗೆ ಕಾರಣವಾಗುತ್ತದೆ. ಇದು ಎದೆಯಲ್ಲಿ ಒತ್ತಡ ಅಥವಾ ಹಿಂಡಿದಂತಹ ಅನುಭವವನ್ನುಟು ಮಾಡಬಹುದು. ಇದು ಹೃದಯಾಘಾತವೆಂಬಂತೆ ಭಾಸವಾಗಬಹುದು,ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ಹೃದಯಾಘಾತದ ಮುನ್ಸೂಚನೆಯ ಲಕ್ಷಣವಾಗಿರುತ್ತದೆ. ಆ್ಯಂಜಿನಾದಲ್ಲಿ ವಿವಿಧ ಬಗೆಗಳಿವೆ....

ಸ್ಥಿರ ಆ್ಯಂಜಿನಾ: ಇದು ದೈಹಿಕ ಚಟುವಟಿಕೆ ಅಥವಾ ಒತ್ತಡದಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಕೆಲವು ನಿಮಿಷಗಳ ಕಾಲವಿದ್ದು,ಬಳಿಕ ನೋವು ಶಮನಗೊಳ್ಳುತ್ತದೆ. ಇದು ಹೃದಯಾಘಾತವಲ್ಲದಿರಬಹುದು,ಆದರೆ ಭವಿಷ್ಯದಲ್ಲಿ ಹೃದಯಾಘಾತ ಸಂಭವಿಸುವ ಅಪಾಯವನ್ನು ಸೂಚಿಸಬಹುದು.

ಅಸ್ಥಿರ ಆ್ಯಂಜಿನಾ: ಇದು ನೀವು ವಿಶ್ರಾಂತಿಯಲ್ಲಿರುವಾಗ ಅಥವಾ ಯಾವುದೇ ದೈಹಿಕ ಚಟುವಟಿಕೆಗಳಲ್ಲಿ ನಿರತರಾಗಿಲ್ಲದಾಗಲೂ ಉಂಟಾಗುತ್ತದೆ. ಎದೆನೋವು ತೀವ್ರವಾಗಿದ್ದು,ಸುದೀರ್ಘ ಕಾಲವಿರುತ್ತದೆ ಮತ್ತು ಪದೇಪದೇ ಉಂಟಾಗುತ್ತಿರುತ್ತದೆ. ಇದು ನೀವು ಸದ್ಯವೇ ಹೃದಯಾಘಾತಕ್ಕೆ ಗುರಿಯಾಗಲಿದ್ದೀರಿ ಎನ್ನುವುದನ್ನು ಸೂಚಿಸಬಹುದು. ಹೀಗಾಗಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

ರೂಪಾಂತರಿತ ಆ್ಯಂಜಿನಾ: ಇದು ಅಪರೂಪದ ಲಕ್ಷಣವಾಗಿದ್ದು,ನೀವು ಗಾಢನಿದ್ರೆಯಲ್ಲಿದ್ದಾಗ ಕಾಣಿಸಿಕೊಳ್ಳುತ್ತದೆ. ಅಪಧಮನಿಗಳು ದಿಢೀರ್ ಆಗಿ ಸಂಕುಚಿತಗೊಂಡು ತೀವ್ರ ನೋವನ್ನುಂಟು ಮಾಡುತ್ತವೆ. ಇದಕ್ಕೆ ತಕ್ಷಣ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಹೃದಯಾಘಾತ

ಹೃದಯಕ್ಕೆ ರಕ್ತವನ್ನು ಪೂರೈಸುವ ಅಪಧಮನಿಯಲ್ಲಿ ಭಾಗಶಃ ಅಥವಾ ಸಂಪೂರ್ಣವಾಗಿ ತಡೆಯುಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಪರಿಧಮನಿ ರೋಗವು ಹೃದಯಾಘಾತಕ್ಕೆ ಕಾರಣವಾಗಿರುತ್ತದೆ. ತಡೆಯನ್ನು ನಿವಾರಿಸಲು ಚಿಕಿತ್ಸೆ ವಿಳಂಬಗೊಂಡಷ್ಟೂ ಹೃದಯದ ಸ್ನಾಯುಗಳಿಗೆ ಹಾನಿ ಹೆಚ್ಚುತ್ತಲೇ ಹೋಗುತ್ತದೆ. ರಕ್ತ ಪೂರೈಕೆಯನ್ನು ಸಕಾಲದಲ್ಲಿ ಮರುಸ್ಥಾಪಿಸದಿದ್ದರೆ ಹೃದಯದ ಸ್ನಾಯು ಶಾಶ್ವತವಾಗಿ ಹಾನಿಗೀಡಾಗಬಹುದು. ಹೆಚ್ಚಿನ ಜನರಿಗೆ ಎದೆನೋವು ಕಾಣಿಸಿಕೊಳ್ಳುವವರೆಗೆ ಅಥವಾ ಹೃದಯಾಘಾತ ವುಂಟಾಗುವವರೆಗೆ ತಮಗೆ ಹೃದ್ರೋಗವಿದೆ ಎನ್ನುವುದು ಗೊತ್ತೇ ಇರುವುದಿಲ್ಲ.

ಎದೆನೋವು ಗಂಟೆಗಳು,ದಿನಗಳು ಮತ್ತು ವಾರಗಳ ನಂತರ ಸಂಭವಿಸಬಹುದಾದ ಹೃದಯಾಘಾತದ ಮುನ್ಸೂಚನೆಯಾಗಿದೆ ಮತ್ತು ಇದನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಆದರೆ ನಾವು ಕೇಳಿರಬಹುದಾದಂತೆ ಎಲ್ಲ ಹೃದಯಾಘಾತಗಳೂ ದಿಢೀರ್,ಹಿಂಡಿದಂತಹ ಎದೆನೋವಿನೊಂದಿಗೆ ಆರಂಭಗೊಳ್ಳುವುದಿಲ್ಲ. ವಾಸ್ತವದಲ್ಲಿ ಹೃದಯಾಘಾತದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತವೆ.

ಭುಜಗಳು,ತೋಳುಗಳು,ಕುತ್ತಿಗೆ,ದವಡೆ,ಅಥವಾ ಬೆನ್ನಿನಲ್ಲಿ ನೋವು,ಉಸಿರಾಟದ ತೊಂದರೆ,ಅತಿಯಾಗಿ ಬೆವರುವಿಕೆ,ವಾಕರಿಕೆ,ತಲೆ ಹಗುರವಾಗುವುದು ಇವೂ ಹೃದಯಾಘಾತದ ಇತರ ಸಾಮಾನ್ಯ ಲಕ್ಷಣಗಳಲ್ಲಿ ಸೇರಿವೆ.

ನೀವು ಎದೆನೋವು ಅಥವಾ ಇತರ ಯಾವುದೇ ಹೃದಯಾಘಾತದ ಲಕ್ಷಣಗಳನ್ನು ಅನುಭವಿಸಿದ್ದರೆ ತಕ್ಷಣವೇ ಆಸ್ಪತ್ರೆಗೆ ಧಾವಿಸುವುದು ಅಗತ್ಯವಾಗುತ್ತದೆ. ಎದೆಯಲ್ಲಿ ಸೌಮ್ಯ ನೋವು ಕಾಣಿಸಿಕೊಂಡರೂ ಅದು ಹೃದಯವು ತೊಂದರೆಯಲ್ಲಿದೆ ಮತ್ತು ನೆರವಿನ ಅಗತ್ಯವಿದೆ ಎಂದು ಸೂಚಿಸುವುದರಿಂದ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.

ಎದೆಯುರಿ

ಎದೆಯುರಿ ಮತ್ತು ಎದೆನೋವು ಎದೆಯಲ್ಲಿ ನೋವು ಮತ್ತು ತೊಂದರೆಯನ್ನುಂಟು ಮಾಡುವುದರಿಂದ ಹೆಚ್ಚಿನವರು ಇವೆರಡರ ನಡುವೆ ಗೊಂದಲವನ್ನು ಮಾಡಿಕೊಳ್ಳುತ್ತಾರೆ. ಎದೆಯುರಿಯು ಆಮ್ಲೀಯತೆಯ ಸಾಮಾನ್ಯ ಲಕ್ಷಣವಾಗಿದೆ. ಈ ಸ್ಥಿತಿಯಿದ್ದಾಗ ಆಮ್ಲವು ಅನ್ನನಾಳದಲ್ಲಿ ಹಿಮ್ಮುಖವಾಗಿ ಹರಿಯುತ್ತದೆ ಮತ್ತು ಎದೆಯಲ್ಲಿ ನೋವು ಹಾಗೂ ಉರಿಯನ್ನುಂಟು ಮಾಡುತ್ತದೆ.

ಪುಷ್ಕಳ ಅಥವಾ ಮಸಾಲೆಭರಿತ ಊಟದ ಬಳಿಕ ಎದೆಯಲ್ಲಿ ತೊಂದರೆ ಕಾಣಿಸಿಕೊಂಡರೆ,ನೋವು ಗಂಟಲವರೆಗೆ ಸಾಗಿ ಆದರೆ ಭುಜಗಳು,ಕುತ್ತಿಗೆ ಮತ್ತು ಭುಜಗಳಿಗೆ ಹರಡದಿದ್ದರೆ,ಬಾಯಿಯಲ್ಲಿ ಕಹಿರುಚಿಯುಂಟಾದರೆ ಅಥವಾ ಮಲಗಿದಾಗ ನೋವು ತೀವ್ರಗೊಂಡರೆ ಎದೆಯುರಿಯನ್ನು ಸೂಚಿಸಬಹುದು

ಹೆಚ್ಚಿನ ಸಂದರ್ಭಗಳಲ್ಲಿ ಜನರು ಎದೆಯಲ್ಲಿನ ಯಾವುದೇ ನೋವನ್ನು ಆಮ್ಲೀಯತೆ ಅಥವಾ ಎದೆಯುರಿಯೆಂದು ಪರಿಗಣಿಸಿ ಅದನ್ನು ಕಡೆಗಣಿಸುತ್ತಾರೆ, ಆದರೆ ಅದು ಹೃದಯಾಘಾತದ ಸೂಕ್ಷ್ಮ ಸಂಕೇತವಾಗಿರಬಹುದು. ನಿಮ್ಮ ಎಡತೋಳು ಅಥವಾ ದವಡೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರೆ ಮತ್ತು ಅತಿಯಾಗಿ ಬೆವರುತ್ತಿದ್ದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು. ಇಂತಹ ಸಂದರ್ಭಗಳಲ್ಲಿ ತಕ್ಷಣವೇ ಆಸ್ಪತ್ರೆಗೆ ಧಾವಿಸಿ.

ಇನ್ನೊಂದೆಡೆ ಆ್ಯಂಜಿನಾದ ನೋವು ಸಾಮಾನ್ಯವಾಗಿ ಶೀಘ್ರವೇ ಮಾಯವಾಗುತ್ತದೆ, ಆದರೆ ಅದು ಹೃದಯದ ಯಾವುದೋ ಸಮಸ್ಯೆಯ ಪ್ರಮುಖ ಲಕ್ಷಣವಾಗಿರಬಹುದು. ಕಾರ್ಡಿಯೊಮಯೊಪತಿ ಅಥವಾ ಹೃದಯ ದೊಡ್ಡದಾಗುವ ಸ್ಥಿತಿ,ಹೃದಯದ ಪ್ರಮುಖ ರಕ್ತನಾಳದ ಭಾಗವಾಗಿರುವ ಎವೊರ್ಟಿಕ್ ವಾಲ್ವ್ ಕಿರಿದಾದಾಗ ಉಂಟಾಗುವ ಎವೊರ್ಟಿಕ್ ಸ್ಟೆನೊಸಿಸ್, ಹೃದಯವನ್ನು ಆವರಿಸಿರುವ ಎರಡು ಪದರಗಳ ವಪೆ ‘ಪೆರಿಕಾರ್ಡಿಯಂ’ನ ಉರಿಯೂತವನ್ನುಂಟು ಮಾಡುವ ಪೆರಿಕಾರ್ಡಿಟಿಸ್,ಮಹಾಪಧಮನಿಯ ಭಿತ್ತಿಯು ಛೇದಗೊಡು ಹೃದಯದ ಮೇಲೆ ಒತ್ತಡವನ್ನುಂಟು ಮಾಡುವ ಎವೊರ್ಟಿಕ್ ಡಿಸೆಕ್ಷನ್ ಮತ್ತು ಶ್ವಾಸಕೋಶಗಳ ಅಪಧಮನಿಗಳಲ್ಲಿ ತಡೆಯನ್ನುಂಟು ಮಾಡುವ ಪಲ್ಮನರಿ ಎಂಬಾಲಿಸಂ ಇವುಗಳಿಂದಲೂ ಎದೆನೋವು ಅಥವಾ ಆ್ಯಂಜಿನಾ ಕಾಣಿಸಿಕೊಳ್ಳುತ್ತದೆ.

ಎದೆಯುರಿ,ಎದೆನೋವು ಮತ್ತು ಹೃದಯಾಘಾತದ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಸಾಮಾನ್ಯ ವ್ಯಕ್ತಿಗೆ ಕಷ್ಟವಾಗುತ್ತದೆ. ಹೀಗಾಗಿ ಎದೆಯಲ್ಲಿ ಯಾವುದೇ ನೋವು ಕಾಣಿಸಿಕೊಂಡರೂ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳುವುದು ಬುದ್ಧಿವಂತಿಕೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News