ರಾಜಕೀಯ ಸೇರ್ಪಡೆ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ಗಂಭೀರ್ ಹೇಳಿದ್ದೇನು?

Update: 2018-12-09 17:29 GMT

 ಹೊಸದಿಲ್ಲಿ, ಡಿ.9: ರಾಜಕೀಯಕ್ಕೆ ಸೇರುತ್ತೇನೆಂಬ ವದಂತಿಯನ್ನು ಸಾರಸಗಟಾಗಿ ತಳ್ಳಿಹಾಕಿದ ಗೌತಮ್ ಗಂಭೀರ್ ಉನ್ನತಮಟ್ಟದಲ್ಲಿ ಕೋಚಿಂಗ್ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

37ರ ಹರೆಯದ ಗಂಭೀರ್ ರವಿವಾರ ತವರು ಮೈದಾನ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಆಂಧ್ರ ವಿರುದ್ಧ ರಣಜಿ ಟ್ರೋಫಿ ಪಂದ್ಯವನ್ನಾಡುವ ಮೂಲಕ 15 ವರ್ಷಗಳ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಅಧಿಕೃತವಾಗಿ ತೆರೆ ಎಳೆದರು. ತನ್ನ ವಿದಾಯದ ಪಂದ್ಯದಲ್ಲಿ ಶತಕ(112) ಸಿಡಿಸಿ ಸಂಭ್ರಮಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್,‘‘ಹಾಗೇನೂ ಇಲ್ಲ. ನಾನು ಕೂಡ ಇಂತಹ ವದಂತಿಯನ್ನು ಕೇಳಿದ್ದೇನೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಸದಾ ಕಾಲ ಸ್ಪಂದಿಸುತ್ತಿರುವ ಕಾರಣ ಇಂತಹ ಊಹಾಪೋಹ ಹಬ್ಬಿರಬಹುದು. ನನಗೆ ಟ್ವಿಟರ್ ಒಂದು ವೇದಿಕೆ. ನಾನು ಈತನಕ ರಾಜಕೀಯದ ಬಗ್ಗೆ ಯೋಚಿಸಿಯೇ ಇಲ್ಲ. ಅದೊಂದು ಸಂಪೂರ್ಣ ಭಿನ್ನವಾದುದು. 25 ವರ್ಷಗಳ ಕಾಲ ನಾನು ಏನೂ ಮಾಡಿಲ್ಲ. ಇನ್ನಷ್ಟೇ ಏನಾದರೂ ಮಾಡಬೇಕಾಗಿದೆ’’ ಎಂದರು.

ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕೋಚಿಂಗ್ ಹುದ್ದೆ ವಹಿಸಿಕೊಳ್ಳುವಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್,‘‘ನನಗೆ ಚಟುವಟಿಕೆಯಿಂದಿರುವುದೇ ತುಂಬಾ ಇಷ್ಟ. ಎಸಿ ರೂಮ್‌ಗಳಲ್ಲಿ ಕುಳಿತು ವೀಕ್ಷಕ ವಿವರಣೆಯಿಂದ ಇದು ಸಾಧ್ಯವಿಲ್ಲ. ನಾನು ಆಟಗಾರನಾಗಿದ್ದೆ. ಆದರೆ ಉತ್ತಮ ಕೋಚ್ ಆಗುತ್ತೇನೆಯೇ ಎಂದು ಗೊತ್ತಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News