'ಎಮಿರೇಟ್ಸ್ ಅಬ್ದುಲ್ ಖಾದರ್': ಅಗಲಿದ ಅನನ್ಯ ಸಮಾಜ ಸೇವಕ

Update: 2018-12-10 09:04 GMT

ನಾನು ರಿಯಾದ್‌ನಲ್ಲಿ ಬಂದಿಳಿದ 1985ರ ಮೇ ತಿಂಗಳ ಆ ದಿನ ಸೌದಿ ಅರೇಬಿಯಾದ ಬಿರುಬೇಸಿಗೆ; ನೆತ್ತಿ ಸುಡುವ ಬಿಸಿಲು. ಮೊಟ್ಟಮೊದಲ ಬಾರಿಗೆ ಕುಟುಂಬದಿಂದ ದೂರವಾಗಿ ದೂರದ, ಅಪರಿಚಿತ ಪ್ರದೇಶಕ್ಕೆ ಬರುವುದು ನಿಜಕ್ಕೂ ಆತಂಕದ ಸಂಗತಿ. ಮರುದಿನ ಅಪರಿಚಿತ ಮಂಗಳೂರು ಮೂಲದ ಗುಂಪೊಂದು ರಿಯಾದ್‌ನಿಂದ ಅನತಿ ದೂರದಲ್ಲಿದ್ದ ನಮ್ಮ ಶಿಬಿರಕ್ಕೆ ಭೇಟಿ ನೀಡಿತು. ಆ ಪೈಕಿ ಆಕರ್ಷಕ ವ್ಯಕ್ತಿತ್ವದ ಯುವಕನೊಬ್ಬ ತೀರಾ ಪರಿಚಿತ ಎಂಬಂತೆ ಆತ್ಮೀಯತೆಯಿಂದ ಎಲ್ಲರ ಜತೆಗೂ ಮಾತನಾಡುತ್ತಿದ್ದ. ಆ ವ್ಯಕ್ತಿ ಅಬ್ದುಲ್ ಖಾದರ್. ಅವರ ವಿಶ್ವಾಸದ ನಗೆ, ನಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳುವ ಮಂದಿ ಕೆಲವರಾದರೂ ಇಲ್ಲಿ ಇದ್ದಾರೆ ಎಂಬ ಭಾವನೆ ಮೂಡಿಸಿತು. ತಂಡದಲ್ಲಿದ್ದ ಇತರರೆಂದರೆ ಫರ್ವೇರ್ ಅಲಿ, ಮುಹಮ್ಮದ್ ಬೆಲ್ಚರ್, ಶಂಸುದ್ದೀನ್ ಮುಲ್ಕಿ, ಅಹ್ಮದ್ ಪಡುಬಿದ್ರೆ ಮತ್ತಿತರರು. ಈ ಭಾಗಕ್ಕೆ ಯಾರೇ ಬಂದಿಳಿದರೂ, ಈ ತಂಡದ ಸದಸ್ಯರು ಅವರನ್ನು ಭೇಟಿ ಮಾಡಿ, ಅವರ ಯೋಗಕ್ಷೇಮ ವಿಚಾರಿಸುತ್ತಾರೆ. ಅವರ  ಜತೆಗೆ ಯಾವುದೇ ಸಂಕಷ್ಟಗಳು ಇವೆಯೇ, ಯಾವುದೇ ಅಗತ್ಯವಿದೆಯೇ ಎಂಬ ಬಗ್ಗೆ ಆತ್ಮೀಯತೆಯಿಂದ ಮಾತನಾಡಿಸುತ್ತಾರೆ. ಸೌದಿ ಅರೇಬಿಯಾದಲ್ಲಿ ಆ ದಿನಗಳಲ್ಲಿ, ಮಂಗಳೂರಿನವರನ್ನು ಕಾಣುವುದು, ಅದರಲ್ಲೂ ಮುಖ್ಯವಾಗಿ ಸಹಾಯ ಅಥವಾ ನೆರವು ಯಾಚಿಸುವುದು ಕಷ್ಟಸಾಧ್ಯವಾಗಿತ್ತು. ಆದರೆ "ಅವರು ಸ್ವಂತ ನಮ್ಮವರು ಎಂಬಂತೆ ನಾವು ಕಾಳಜಿ ವಹಿಸುತ್ತೇವೆ" ಎಂಬ ಅಬ್ದುಲ್ ಖಾದರ್ ಅವರ ವಿಶಾಲ ಮನೋಭಾವ ಪ್ರತಿಯೊಬ್ಬರ ಜತೆಗೂ ಅವರ ಸಂಬಂಧ ಬೆಳೆಯಲು ಕಾರಣವಾಗಿತ್ತು.

ಮೊದಲ ಬಾರಿಗೆ ಖಾದರ್ ಅವರನ್ನು ಭೇಟಿಯಾದ ದಿನದಿಂದಲೂ, ಬಹುತೇಕ ಪ್ರತಿದಿನ ಎಂಬಂತೆ ನಾನು ನಿರಂತರವಾಗಿ ಅವರ ಸಂಪರ್ಕದಲ್ಲಿದೆ. ಅವರ ಕಿಂಗ್ ಫೈಸಲ್ ಫೌಂಡೇಶನ್ ಕಚೇರಿಗೆ ನಾನು ಭೇಟಿ ನೀಡುತ್ತಿದ್ದೆ. ಆ ದಿನಗಳಲ್ಲಿ ಅದು ಅಹವಾಲು ಸಲ್ಲಿಕೆಯ ಕೇಂದ್ರವಾಗಿತ್ತು. ಸಾಮಾಜಿಕ ಸಂಘಟನೆಗಳು ತೀರಾ ಅಪರೂಪವಾಗಿದ್ದ ಆ ಕಾಲದಲ್ಲಿ ಅವರದ್ದು ಏಕವ್ಯಕ್ತಿ ಸಾಮಾಜಿಕ ಸಂಸ್ಥೆ. ವಾರಾಂತ್ಯದಲ್ಲಿ ನಾವು ಸಾಮಾನ್ಯವಾಗಿ ಯುರೋಮರ್ಚ್‌ನಲ್ಲಿ ಒಟ್ಟು ಸೇರುತ್ತಿದ್ದೆವು. ಅಲ್‌ಖರ್ಝ್ ಗಾರ್ಡನ್‌ಗೆ ಭೇಟಿ ನೀಡುತ್ತಿದ್ದೆವು; ಜತೆಯಾಗಿ ಉಮ್ರಾಗೆ ತೆರಳುತ್ತಿದ್ದೆವು. ಇದರಿಂದಾಗಿ ನಾವು ಒಂದೇ ಕುಟುಂಬ ಎಂಬ ಭಾವನೆ ನಮ್ಮಲ್ಲಿ ಮೂಡಿತ್ತು. ದಮ್ಮಾಮ್‌ನ ಆರ್‌ಎಕೆಎ ಶಿಬಿರಕ್ಕೆ ನಾವು ಭೇಟಿ ನೀಡುತ್ತಿದ್ದೆವು ಹಾಗೂ ಜುಲೈಲ್, ಜಿದ್ದಾದ ಕೆಲ ಶಿಬಿರಗಳಿಗೂ ಹೋಗುತ್ತಿದ್ದೆವು. ಆ ಸಮಯದಲ್ಲಿ ಕೇವಲ ಸ್ಥಿರ ದೂರವಾಣಿ ಮೂಲಕ ಇಂದಿನ ಮೊಬೈಲ್ ಫೋನ್, ಸಾಮಾಜಿಕ ಜಾಲತಾಣಗಳಿಗಿಂತ ಹೆಚ್ಚಾಗಿ ಒಳ್ಳೆಯ ಸಂಪರ್ಕ ಹೊಂದಿದ್ದೆವು ಎಂಬ ಭಾವನೆ ನನ್ನದು.

ನಮ್ಮ ಕಂಪೆನಿ ನನಗೆ ವಸತಿ ವ್ಯವಸ್ಥೆ ಮಾಡಿದ್ದರೂ, ಕೆಲ ವರ್ಷಗಳ ಬಳಿಕ ಹರಾದಲ್ಲಿ ನಾವು ಜತೆಗೆ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸ್ತವ್ಯ ಹೂಡಿದೆವು. ಈ ಅಪಾರ್ಟ್‌ಮೆಂಟ್ ಹಲವರಿಗೆ ಸೂರು ಒದಗಿಸಿತ್ತು. ಅಬ್ದುಲ್ ಖಾದರ್, 'ಎಮಿರೇಟ್ಸ್ ಖಾದರ್' ಎಂದೇ ಪರಿಚಿತರು. ದಮ್ಮಾಮ್‌ನಲ್ಲಿ ಮೊದಲು ಸೇವೆ ಸಲ್ಲಿಸುವ ವೇಳೆ ಖಾದರ್ ಈ ಹೆಸರು ಪಡೆದಿದ್ದರು.

ಹಲವು ಮಂದಿ ವಿವಿಧ ಕಾರಣಗಳಿಗೆ ಖಾದರ್ ಅವರನ್ನು ಭೇಟಿ ಮಾಡುತ್ತಿದ್ದರು. ಇವರ ಬಳಿಗೆ ಬರುತ್ತಿದ್ದ ಬಹುತೇಕ ಸಮಸ್ಯೆಗಳು ಪ್ರಾಯೋಜಕರ ಜತೆಗಿನ ಮಾತುಕತೆ, ಇಕಾಮಾ ಸಮಸ್ಯೆ, ವೇತನ ಸಮಸ್ಯೆ, ಒಳ್ಳೆಯ ಆಹಾರದ ಕೊರತೆ, ಕನಿಷ್ಠ ಸೌಲಭ್ಯಗಳ ಕೊರತೆ, ಪ್ರಾಯೋಜಕತ್ವದ ವರ್ಗಾವಣೆ, ಮನೆಯಿಂದ ಪತ್ರಗಳನ್ನು ಸ್ವೀಕರಿಸಲು ಅಂಚೆ ವಿಳಾಸ, ಮನೆಗೆ ದೂರವಾಣಿ ಬೂತ್‌ಗಳಿಂದ ಕರೆ ಮಾಡಲು ನಾಣ್ಯ ಸಂಗ್ರಹ, ಉಮ್ರಾ ಪ್ರವಾಸಕ್ಕೆ ಪತ್ರ ಪಡೆಯುವುದು, ಸೌದಿ ಅರೇಬಿಯಾದ ಇತರ ನಗರಗಳಲ್ಲಿರುವ ಸಂಬಂಧಿಕರನ್ನು ಭೇಟಿ ಮಾಡಲು ಪತ್ರ ಪಡೆಯುವುದು, ಚೇಂಬರ್ ಆಫ್ ಕಾಮರ್ಸ್‌ನ ದೃಢೀಕರಣ, ಮನೆಗೆ ಹಣ ವರ್ಗಾವಣೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು (ಆ ಕಾಲದಲ್ಲಿ ಕಡಿಮೆ ಬಜೆಟ್‌ನ ಭಾರತೀಯ ಕ್ಲಿನಿಕ್‌ಗಳು ಇರಲಿಲ್ಲ), ನಾಪತ್ತೆಯಾದ ಪ್ರಾಯೋಜಕರನ್ನು ಪತ್ತೆ ಮಾಡುವುದು (ಸಮರ್ಪಕವಾದ ಸಂಪರ್ಕ ಸಂಖ್ಯೆಗಳು ಇಲ್ಲದಿದ್ದುದರಿಂದ ಸುತ್ತಮುತ್ತಲ ಗ್ರಾಮಗಳಿಗೆ ತೆರಳಿ ಅವರನ್ನು ಪತ್ತೆ ಮಾಡಬೇಕಾದರೆ ಅಕ್ಷರಶಃ ಈ ನೆರವು ಅಗತ್ಯವಿತ್ತು) ಮತ್ತಿತರ ವಿಷಯಗಳಿಗೆ ಸಂಬಂಧಿಸಿದ್ದವು. ಅರೇಬಿಕ್ ಭಾಷೆಯಲ್ಲಿ ಮಾತನಾಡುವ ಅವರ ಪ್ರಭುತ್ವ ಸಾವಿರಾರು ಮಂದಿಗೆ ಹಲವು ಸಂದರ್ಭಗಳಲ್ಲಿ ಸಂವಹನಕ್ಕೆ ನೆರವಾಗಿದೆ. ಅವರ ಅದಮ್ಯ ವಿಶ್ವಾಸ, ಪ್ರಬಲ ಸಂವಹನ ಕೌಶಲ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಇತರರ ನೆರವಿಗಾಗಿ ಸಮಯ ವಿನಿಯೋಗಿಸುವ ಅವರ ಗುಣ ಅಪರೂಪದ್ದು. ಎಲ್ಲೇ ಆಗಲೀ, ಯಾವಾಗಲೂ, ಎಷ್ಟು ದೊಡ್ಡ ನೆರವನ್ನಾದರೂ ಜನರಿಗೆ ನೀಡಲು ಅವರು ಮುಂದಾಗುತ್ತಿದ್ದರು. ಈ ಆಕರ್ಷಕ ವ್ಯಕ್ತಿತ್ವವೇ ಅಪರಿಚಿತ ನಾಡಿನಲ್ಲಿ ಅವರಿಗೆ 'ಬ್ರದರ್' (ಸಹೋದರ) ಎಂಬ ಬಿರುದು ತಂದುಕೊಟ್ಟಿತ್ತು. ಆರ್ಥಿಕವಾಗಿ ಅವರು ಅಷ್ಟೊಂದು ಶ್ರೀಮಂತರಲ್ಲದಿರಬಹುದು; ಆದರೆ ನೆರವು ಅಗತ್ಯವಿದ್ದವರ ಬಳಿ ಅವರು ಸದಾ ಧಾವಿಸುತ್ತಿದ್ದರು. ತಮ್ಮ ಜೀವನದ ಆರಂಭಿಕ ದಿನಗಳಲ್ಲಿ ಹಲವು ಸಂಕಷ್ಟ ಹಾಗೂ ಅಡೆತಡೆಗಳನ್ನು ಅವರು ಎದುರಿಸಿದ್ದರು.

ಗಲ್ಫ್, ನಮ್ಮ ಭಾಗದ ಲಕ್ಷಾಂತರ ಯುವಕರು ತಮ್ಮ ಯೌವನವನ್ನು ತ್ಯಾಗ ಮಾಡಿದ ಪ್ರದೇಶ. ತಮ್ಮ ಕುಟುಂಬಗಳಿಗೆ ಆಧಾರ ಒದಗಿಸಲು, ತಮ್ಮ ಸಹೋದರಿಯರ ವಿವಾಹಕ್ಕಾಗಿ ಅಥವಾ ಊರಲ್ಲೇ ಉಳಿದ ತಮ್ಮ ಕುಟುಂಬದ ಹೊಟ್ಟೆ ಹೊರೆಯುವ ಸಲುವಾಗಿ 30ರಿಂದ 40 ವರ್ಷ ಕಾಲ ಅಸಂಖ್ಯಾತ ಮಂದಿ ಇಲ್ಲೇ ಬೀಡುಬಿಡುತ್ತಾರೆ. ರಜೆಯ ಅವಧಿಯಲ್ಲಿ ಅವರು ಆರಾಮವಾಗಿದ್ದೇವೆ ಎಂದುಕೊಳ್ಳಬಹುದು; ಆದರೆ ಈ ಮರುಭೂಮಿಯಲ್ಲಿ ಅವರು ಸೂಕ್ತ ಆಹಾರ ಅಥವಾ ಇತರ ಕನಿಷ್ಠ ಸೌಲಭ್ಯಗಳೂ ಇಲ್ಲದೇ ಆ ದಿನಗಳಲ್ಲಿ ಬೆವರು ಸುರಿಸಿದ್ದಂತೂ ನಿಜ. ಜೀವಮಾನವಿಡೀ ಕಠಿಣ ಪರಿಶ್ರಮದಿಂದ ದುಡಿದರೂ, ಬ್ಯಾಂಕ್ ಬ್ಯಾಲೆನ್ಸ್ ಶೂನ್ಯವಾಗಿಯೇ ಇತ್ತೀಚಿನ ದಿನಗಳಲ್ಲಿ ಉದ್ಯೋಗ ಕಳೆದುಕೊಂಡ ಹಲವು ಮಂದಿ ತಮ್ಮ ಹುಟ್ಟೂರಿಗೆ ಮರಳಿರಬಹುದು. ಆದರೆ ಸಮಾಧಾನದ ಅಂಶವೆಂದರೆ, ಇವರ ಕೆಲ ಸುಶಿಕ್ಷಿತ ಮಕ್ಕಳು ಗಲ್ಫ್‌ನಲ್ಲಿ ಉದ್ಯೋಗ ಪಡೆದಿರುವುದು.

ಇಂದಿನ ತಲೆಮಾರಿನ ಬಹುತೇಕ ಮಂದಿಗೆ ಎಮಿರೇಟ್ಸ್ ಖಾದರ್ ಬಗ್ಗೆ ತಿಳಿದಿರಲಿಕ್ಕಿಲ್ಲ; ಆದರೆ 1980 ಹಾಗೂ 90ರ ದಶಕದಲ್ಲಿ ಸೌದಿ ಅರೇಬಿಯಾದಲ್ಲಿ ವಾಸವಿದ್ದವರಿಗೆ ಅವರು ಅಗತ್ಯವಿದ್ದವರ ಬಳಿಗೆ ಧಾವಿಸಿ ನೆರವು ನೀಡುವ ಸೇವಾ ಕಾರ್ಯದಿಂದಾಗಿ ಚಿರಪರಿಚಿತ. 1979ರಲ್ಲಿ ಗವರ್ನರ್ ಕಚೇರಿಯಲ್ಲಿ ಉದ್ಯೋಗ ಆರಂಭಿಸಿದಾಗಲೇ ಅವರು ಈ ಸೇವಾ ಕೈಂಕರ್ಯ ಆರಂಭಿಸಿದ್ದರು. ಬಳಿಕ 1983ರಲ್ಲಿ ರಿಯಾದ್‌ಗೆ ಹಾಗೂ 2005ರಲ್ಲಿ ಪೂರ್ವ ಪ್ರಾಂತ್ಯಕ್ಕೆ ವರ್ಗವಾದಾಗಲೂ ಇದನ್ನು ಅವರು ಮುಂದುವರಿಸಿದರು. ಅರ್ಹರಿಗೆ ಸುಮಾರು 40 ವರ್ಷಗಳ ಕಾಲ ಅವಿರತವಾಗಿ ಸೇವೆ ಒದಗಿಸಿದ ಕೀರ್ತಿ ಅವರದ್ದು. ಅವರಿಗೆ ಬಿಡುವಿದ್ದಾಗಲೆಲ್ಲ ನಾನು ಅವರ ಕೆಎಫ್‌ಎಫ್ ಕಚೇರಿಯಲ್ಲಿ ಇಡೀ ಸಮುದಾಯದ ಒಟ್ಟಾರೆ ಅಭಿವೃದ್ಧಿ ಬಗ್ಗೆ ಹಲವು ಬಾರಿ ಚರ್ಚಿಸಿದ್ದಿದೆ. ನಮ್ಮದು ಗೌರವಾರ್ಹ ಸಮುದಾಯವಾಗಬೇಕಾದರೆ, ಸಮುದಾಯವನ್ನು ಸಶಕ್ತಗೊಳಿಸಬೇಕಾದರೆ ಏನು ಮಾಡಬೇಕು ಎಂಬ ಬಗ್ಗೆ ಗಹನವಾಗಿ ಚಿಂತಿಸಿದ್ದೇವೆ. ಆ ದಿನಗಳಲ್ಲಿ ನಮ್ಮ ಸಮುದಾಯದ ಶ್ರೀಮಂತ ವ್ಯಕ್ತಿಗಳು ಇದ್ದುದು ವಿರಳವಾದರೂ, ಆಗ ಯಾವುದೇ ಅಸೂಯೆ ಇರಲಿಲ್ಲ; ಪರಸ್ಪರ ಅನಾರೋಗ್ಯಕರ ಪೈಪೋಟಿಯೂ ಇರಲಿಲ್ಲ. ಬದಲಾಗಿ ತೀರಾ ಕಡಿಮೆ ವೇತನ ಪಡೆಯುತ್ತಿದ್ದ ಸಹೋದರರೂ ಸೇರಿದಂತೆ ಬೇರೆಬೇರೆ ಮಟ್ಟದ ಆದಾಯ ಹೊಂದಿದ್ದರೂ, ನಾವು ಪರಸ್ಪರರಿಗೆ ನೆರವಾಗುವಲ್ಲಿ ಖುಷಿ ಕಾಣುತ್ತಿದ್ದೆವು.

ಇಂದು ನಮಗೆ ಹಲವು ಸಾಮಾಜಿಕ ಸಂಘ ಸಂಸ್ಥೆಗಳಿವೆ ಹಾಗೂ ನೂರಾರು ಮಂದಿ ಶ್ರೀಮಂತರಿದ್ದಾರೆ. ಸಾಕಷ್ಟು ನಿಧಿಯನ್ನು ಕ್ರೋಡೀಕರಿಸಲಾಗುತ್ತದೆ. ಆದರೆ ನಮ್ಮಲ್ಲಿ ಪ್ರಬಲವಾದ ಸಹಕಾರ ಹಾಗೂ ನೆರವಿನ ಕೊರತೆ ಇದೆ.

Writer - -ಖಾಸಿಂ ಅಹ್ಮದ್ ಎಚ್.ಕೆ.

contributor

Editor - -ಖಾಸಿಂ ಅಹ್ಮದ್ ಎಚ್.ಕೆ.

contributor

Similar News