×
Ad

ಮ್ಯಾನ್ಮಾರ್ ಒಳ್ಳೆಯ ಪ್ರವಾಸಿ ತಾಣ ಎಂದ ಟ್ವಿಟರ್ ಮುಖ್ಯಸ್ಥನ ವಿರುದ್ಧ ಆಕ್ರೋಶ

Update: 2018-12-10 22:48 IST

ಸಾನ್‌ಫ್ರಾನ್ಸಿಸ್ಕೊ, ಡಿ. 10: ಮ್ಯಾನ್ಮಾರ್‌ನಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರ ಮೇಲೆ ಅಲ್ಲಿನ ಸೇನೆ ನಡೆಸಿರುವ ಅಮಾನುಷ ದಮನ ಕಾರ್ಯಾಚರಣೆಯ ಹೊರತಾಗಿಯೂ, ಆ ದೇಶವನ್ನು ಪ್ರವಾಸಿ ತಾಣ ಎಂಬುದಾಗಿ ‘ಟ್ವಿಟರ್’ ಮುಖ್ಯಸ್ಥ ಜಾಕ್ ಡಾರ್ಸಿ ಬಣ್ಣಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಧ್ಯಾನ ಶಿಬಿರಕ್ಕಾಗಿ ನಾನು ನವೆಂಬರ್‌ನಲ್ಲಿ ಮ್ಯಾನ್ಮಾರ್‌ಗೆ ಹೋಗಿದ್ದೆ ಎಂಬುದಾಗಿ ಸರಣಿ ಟ್ವೀಟ್‌ಗಳಲ್ಲಿ ಡಾರ್ಸಿ ಹೇಳಿದ್ದಾರೆ.

‘‘ಅಲ್ಲಿನ ಜನರು ತುಂಬಾ ಖುಷಿಯಿಂದಿದ್ದಾರೆ ಹಾಗೂ ಅಲ್ಲಿನ ಆಹಾರ ಅಮೋಘ’’ ಎಂದು ಅವರು ಹೇಳಿದ್ದಾರೆ ಹಾಗೂ ಅಲ್ಲಿಗೆ ಭೇಟಿ ನೀಡುವಂತೆ ತನ್ನ 40 ಲಕ್ಷ ‘ಫಾಲೋವರ್’ಗಳಿಗೆ ಉತ್ತೇಜನ ನೀಡಿದ್ದಾರೆ.

ಈ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ. ಅವರು ಮುಸ್ಲಿಮ್ ರೊಹಿಂಗ್ಯಾರ ಯಾತನೆಯನ್ನು ನಿರ್ಲಕ್ಷಿಸಿದ್ದಾರೆ ಎಂಬುದಾಗಿ ಹಲವರು ಆರೋಪಿಸಿದ್ದಾರೆ.

ಕಳೆದ ವರ್ಷದ ಆಗಸ್ಟ್ ತಿಂಗಳ ಕೊನೆಯಲ್ಲಿ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಹಿಂಸಾಚಾರ ಆರಂಭಗೊಂಡಿತು. ಬಳಿಕ ಅಲ್ಲಿನ ಸೇನೆಯು ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಭೀಕರ ದಮನ ಕಾರ್ಯಾಚರಣೆ ನಡೆಸಿತು. ಸೇನೆಯ ಕಾರ್ಯಾಚರಣೆಯಲ್ಲಿ ಸಾವಿರಾರು ಮಂದಿ ಮೃತಪಟ್ಟರು ಹಾಗೂ ಸುಮಾರು 8 ಲಕ್ಷ ಮಂದಿ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದರು.

ನಿರಾಶ್ರಿತ ರೊಹಿಂಗ್ಯಾ ಮುಸ್ಲಿಮರು ಈಗ ಬಾಂಗ್ಲಾದೇಶದ ನೂರಾರು ನಿರಾಶ್ರಿತ ಶಿಬಿರಗಳಲ್ಲಿ ಕನಿಷ್ಠ ಮೂಲಸೌಕರ್ಯದೊಂದಿಗೆ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News