ಬಂಧಿತ ಹುವಾವೆ ಅಧಿಕಾರಿಯನ್ನು ಬಿಟ್ಟು ಬಿಡಿ: ಅಮೆರಿಕದ ರಾಯಭಾರಿಯನ್ನು ಕರೆಸಿಕೊಂಡ ಚೀನಾ

Update: 2018-12-10 17:40 GMT

ಬೀಜಿಂಗ್, ಡಿ. 10: ಚೀನಾದ ಇಲೆಕ್ಟ್ರಾನಿಕ್ ದೈತ್ಯ ಹುವಾವೆಯ ಮುಖ್ಯ ಹಣಕಾಸು ಅಧಿಕಾರಿ ಮೆಂಗ್ ವಾನ್‌ಝೂರನ್ನು ಅಮೆರಿಕದ ಸೂಚನೆಯಂತೆ ಕೆನಡದಲ್ಲಿ ಬಂಧಿಸಿರುವುದನ್ನು ಪ್ರತಿಭಟಿಸಲು ಹಾಗೂ ಅವರ ಬಂಧನಕ್ಕೆ ನೀಡಿದ ಆದೇಶವನ್ನು ಅಮೆರಿಕ ರದ್ದುಪಡಿಸಬೇಕೆಂದು ಒತ್ತಾಯಿಸಲು ಚೀನಾ ರವಿವಾರ ಅಮೆರಿಕ ರಾಯಭಾರಿಯನ್ನು ಕರೆಸಿಕೊಂಡಿತು.

 ಹುವಾವೆ ಕಂಪೆನಿಯ ಹಿರಿಯ ಅಧಿಕಾರಿಯ ಬಂಧನದ ವಿರುದ್ಧ ಚೀನಾದ ಉಪ ವಿದೇಶ ಸಚಿವ ಲಿ ಯುಚೆಂಗ್ ಅಮೆರಿಕದ ರಾಯಭಾರಿ ಟೆರಿ ಬ್ರಾನ್‌ಸ್ಟಡ್‌ರೊಂದಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದರು ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ಹೇಳಿದೆ.

ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ವ್ಯಾಪಾರ ದಿಗ್ಬಂಧನವನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿದ್ದ ಆರೋಪದಲ್ಲಿ ಮೆಂಗ್‌ರನ್ನು ಡಿಸೆಂಬರ್ 1ರಂದು ಕೆನಡದ ವ್ಯಾಂಕೂವರ್‌ನಲ್ಲಿ ಬಂಧಿಸಲಾಗಿತ್ತು. ವ್ಯಾಂಕೂವರ್‌ನಲ್ಲಿ ಒಂದು ವಿಮಾನದಿಂದ ಇಳಿದು ಇನ್ನೊಂದು ವಿಮಾನವನ್ನು ಹತ್ತಲು ಹೋಗುತ್ತಿದ್ದಾಗ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಮೆಂಗ್ ಬಂಧನವು ‘ಅತ್ಯಂತ ಆಕ್ಷೇಪಾರ್ಹ’ ಎಂದು ಹೇಳಿದ ಲೀ, ಆಕೆಯ ಬಂಧನಕ್ಕಾಗಿ ಹೊರಡಿಸಿರುವ ಆದೇಶವನ್ನು ಅಮೆರಿಕ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು ಎಂದು ಕ್ಸಿನುವಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News