ಫ್ರಾನ್ಸ್‌ನಲ್ಲಿ ಅಶಾಂತಿಯ ದಿನಗಳು

Update: 2018-12-10 18:30 GMT

 ಇಂದು ಫ್ರಾನ್ಸ್‌ನಲ್ಲಿ ಆಗುತ್ತಿರುವುದು ಜಾಗತಿಕ ಕಾರ್ಪೊರೇಟ್‌ಗಳ ದುರಾಸೆ ಹಾಗೂ ಹಗಲುದರೋಡೆಗಳ ಪರಿಣಾಮಗಳು. ಉತ್ಪಾದನೆಯಾಗುವ ಸಂಪತ್ತು ಕೆಲವೇ ಕಾರ್ಪೊರೇಟ್‌ಗಳು ಬಾಚಿಕೊಳ್ಳಲು ಆಳುವ ವ್ಯವಸ್ಥೆ ಅನುವು ಮಾಡಿ ರಕ್ಷಣೆ ಕೊಡುತ್ತಿರುವುದು, ಜನಸಾಮಾನ್ಯರನ್ನು ಪ್ರಶ್ನಿಸದಂತೆ ಮಾಡಲು, ದಮನಿಸಲು ದಮನ ಯಂತ್ರಾಂಗಗಳನ್ನು ಕ್ರೂರಾತಿಕ್ರೂರವಾಗಿ ಬಳಸುತ್ತಿರುವುದು ಅಲ್ಲಿನ ಸರಕಾರ ಮಾಡುತ್ತಿರುವ ಮಹಾನ್ ಆಡಳಿತವಾಗಿದೆ. ಪ್ರಜಾಪ್ರಭುತ್ವ ಇತ್ಯಾದಿಗಳು ಕೇವಲ ಘೋಷಣೆಯಾಗಿ ಮಾತ್ರ ಬಳಸಲ್ಪಡುತ್ತಿರುವುದು ಜಾಗತಿಕ ವಿದ್ಯಮಾನವಾಗಿದೆ. ಇಂದಿನ ಸ್ಥಿತಿ ಹೇಗಿದೆಯೆಂದರೆ ತೋರುಗಾಣಿಕೆಯ ಪ್ರಜಾಪ್ರಭುತ್ವವನ್ನು ಕೂಡ ಅನುಸರಿಸಲಾಗದ ಸ್ಥಿತಿ ಆಳುವ ಶಕ್ತಿಗಳದ್ದಾಗಿದೆ. ಹಾಗಾಗಿಯೇ ಅವರು ಇದ್ದ ಒಂದು ಮಟ್ಟದ ಎಲ್ಲಾ ಪ್ರಜಾತಾಂತ್ರಿಕ ಯಂತ್ರಾಂಗಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದಾರೆ. ಫ್ರಾನ್ಸ್‌ನಲ್ಲೂ ಅದೇ ನಡೆಯುತ್ತಿದೆ. ಭಾರತದಲ್ಲೂ ಇವೇ ತಾನೆ ನಡೆಯುತ್ತಿರುವುದು.

ಫ್ರಾನ್ಸ್ ಕೆಲವು ದಿನಗಳಿಂದ ಜಗತ್ತಿನ ಗಮನವನ್ನು ಸೆಳೆದಿದೆ. ಇದೇ ವರ್ಷದ ನವೆಂಬರ್ ತಿಂಗಳಲ್ಲಿ ಆರಂಭವಾದ ಜನರ ಪ್ರತಿಭಟನೆ ತೀವ್ರಗೊಂಡು ಯೂರೋಪಿನ ಪ್ರಮುಖ ರಾಷ್ಟ್ರ ಫ್ರಾನ್ಸ್ ಹೊತ್ತಿ ಉರಿಯಲು ಶುರುವಾಗಿದೆ. ‘ಯೆಲ್ಲೋ ವೆಸ್ಟ್ ಪ್ರತಿಭಟನೆ’ಯೆಂದು ಇದನ್ನು ಕರೆಯಲಾಗುತ್ತಿದೆ. ಅಂದರೆ ‘ಹಳದಿ ಬನಿಯನ್ ಪ್ರತಿಭಟನೆ’. ತುರ್ತು ಸಂದರ್ಭಗಳಲ್ಲಿ ಅಲ್ಲಿನ ಚಾಲಕರು ಮೈಮೇಲೆ ಬಿಳಿ ಪ್ರತಿಫಲನ ಪಟ್ಟಿಯಿರುವ ಹಳದಿ ಬನಿಯನ್ ತರಹದ ವಸ್ತ್ರವನ್ನು ಧರಿಸಿಕೊಂಡು ಕಾರ್ಯನಿರ್ವಹಿಸುತ್ತಾರೆ. ಈ ವಸ್ತ್ರವನ್ನು ಎಲ್ಲಾ ವಾಹನಗಳಲ್ಲೂ ಸದಾ ಇಟ್ಟುಕೊಂಡಿರಬೇಕೆಂಬ ನಿಯಮವಿದೆ ಅಲ್ಲಿ. ಅಂತಹ ಹಳದಿ ಬನಿಯನ್ ಧರಿಸಿಕೊಂಡೇ ಪ್ರತಿಭಟನೆ ಆರಂಭವಾಗಿತ್ತು. ಅಲ್ಲಿಂದ ಸಮಾಜದ ಇತರ ಜನವರ್ಗಗಳು ಪ್ರತಿಭಟನೆಗಳಿಗೆ ಇಳಿಯತೊಡಗಿದ್ದಾರೆ. ಹಲವಾರು ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಇತರ ಮಧ್ಯಮ ವರ್ಗದ ಜನರು ಭಾರೀ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ಎಡ ಪಂಥೀಯರು ಸೇರಿಕೊಂಡಿದ್ದಾರೆ. ಬಲಪಂಥೀಯ ನವನಾಜಿವಾದಿ ಗುಂಪುಗಳು ಸರಕಾರದ ಪರವಾಗಿ ನಿಂತಿವೆ. ಸರಕಾರ ಘೋಷಿಸಿರುವ ತೈಲದ ಮೇಲಿನ ತೆರಿಗೆಯನ್ನು ಸಮರ್ಥಿಸುತ್ತಿವೆ. ಆದರೆ ಹದಗೆಟ್ಟು ಹೋಗಿರುವ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ಎಲ್ಲಾ ಜನವರ್ಗಗಳನ್ನೂ ಬೀದಿಗಳಿದು ಸರಕಾರ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮಾಡಿದೆ. ಶೇ. 75ಕ್ಕೂ ಹೆಚ್ಚು ಜನರು ಈ ಪ್ರತಿಭಟನೆಗಳನ್ನು ಬೆಂಬಲಿಸುತ್ತಿದ್ದಾರೆಂಬ ವರದಿಗಳಿವೆ. ಜನರ ಮಧ್ಯೆ ವಿಶ್ವಾಸ ಕಳೆದುಕೊಂಡಿರುವ ವಿರೋಧ ಪಕ್ಷಗಳು ಇದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ವಿದ್ಯಾರ್ಥಿಗಳು ಕೂಡ ಭಾರೀ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಅದರಲ್ಲೂ ಹೈಸ್ಕೂಲು ವಿದ್ಯಾರ್ಥಿಗಳದು ದೊಡ್ಡ ಸಂಖ್ಯೆಯಿದೆ. ಸರಕಾರ ಈ ಪ್ರತಿರೋಧವನ್ನು ದಿಕ್ಕು ತಪ್ಪಿಸಿ, ಒಡಕು ಮೂಡಿಸಿ ಬಲಹೀನಗೊಳಿಸಲು ತನ್ನ ಯಂತ್ರಾಂಗಗಳನ್ನು ಆಕ್ರಮಣಕಾರಿಯಾಗಿ ಬಳಸಲು ಶುರುಮಾಡಿದೆ. ಬಲಪಂಥೀಯ ನವನಾಜಿ ಗುಂಪುಗಳು ಇದೇ ಸಂದರ್ಭದಲ್ಲಿ ದೊಂಬಿ ಹಾಗೂ ಲೂಟಿಗಳಲ್ಲಿ ತೊಡಗಿ ಜನಸಾಮಾನ್ಯರ ಪ್ರತಿಭಟನೆಯನ್ನು ಬಲಹೀನಗೊಳಿಸಲು ಪ್ರಯತ್ನಿಸುತ್ತಿರುವ ವರದಿಗಳಿವೆ.
 ಅಲ್ಲಿನ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರಾನ್ ತೈಲದ ಮೇಲೆ ಪಾರಿಸಾರಿಕ ತೆರಿಗೆ ಹೇರಲು ಹೊರಟಿದ್ದು ಫ್ರಾನ್ಸಿನಾದ್ಯಂತ ಜನರ ಪ್ರತಿಭಟನೆ ಭುಗಿಲೇಳಲು ನೆಪವಾಯಿತು. ಫ್ರಾನ್ಸ್ ಹೆಚ್ಚಾಗಿ ಖಾಸಗಿ ಸಾರಿಗೆಯನ್ನೇ ನೆಚ್ಚಿಕೊಂಡಿರುವ ರಾಷ್ಟ್ರ. ಬಹುತೇಕರು ತಮ್ಮ ಸ್ವಂತ ವಾಹನಗಳಲ್ಲೇ ಸಂಚರಿಸುತ್ತಾರೆ. ಪ್ರತಿಭಟನೆಯ ಬಿಸಿಯಿಂದ ತೈಲದ ಮೇಲಿನ ತೆರಿಗೆ ಹೇರುವುದನ್ನು ಆರು ತಿಂಗಳುಗಳ ಕಾಲ ಮುಂದೂಡಲಾಗಿದೆ ಎಂದು ಸರಕಾರ ಘೋಷಿಸಿದ್ದರೂ ಪ್ರತಿಭಟನೆಯ ಬಿಸಿ ಆರುತ್ತಿಲ್ಲ. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬೀದಿಗಳಿಗೆ ಇಳಿದು ಉಗ್ರ ಪ್ರತಿಭಟನೆಗಳಲ್ಲಿ ತೊಡಗಿದ್ದಾರೆ. ದೊಂಬಿ ಗಲಭೆಗಳಿಂದಾಗಿ ಇಡೀ ರಾಷ್ಟ್ರವೇ ಸ್ತಬ್ಧವಾದ ಸ್ಥಿತಿಯಲ್ಲಿದೆ. ಐಫೆಲ್ ಟವರ್ ಸೇರಿದಂತೆ ಬಹುತೇಕ ಪ್ರವಾಸಿ ತಾಣಗಳು ಮುಚ್ಚಲ್ಪಟ್ಟಿವೆ. ಫ್ರಾನ್ಸ್ ಜಾಗತಿಕವಾಗಿ ದೊಡ್ಡ ಪ್ರವಾಸೋದ್ಯಮವನ್ನು ಹೊಂದಿದೆ. ಅದರ ಆದಾಯಗಳಲ್ಲಿ ಪ್ರವಾಸೋದ್ಯಮದ ಕೊಡುಗೆ ದೊಡ್ಡದು. ಸರಕಾರ ಬಲಪ್ರಯೋಗದಿಂದ ಜನರ ಪ್ರತಿಭಟನೆಯನ್ನು ದಮನಿಸಲು ಹೊರಟಿದೆ. ನೂರಾರು ಜನರ ಬಂಧನಗಳು ನಡೆದಿವೆ. ಸರಕಾರ ವಾಯುದಾಳಿಯನ್ನು ಕೂಡ ನಡೆಸುವ ಹವಣಿಕೆ ನಡೆಸಿರುವ ವಾರ್ತೆಯಿದೆ. ಭದ್ರತಾ ಪಡೆಗಳ ಮೂಲಕ ಹೈಸ್ಕೂಲುಗಳ ಮೇಲೆ ದಾಳಿಮಾಡಿ ವಿದ್ಯಾರ್ಥಿಗಳನ್ನು ಒತ್ತಯಾಳುಗಳನ್ನಾಗಿ ಮಾಡಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಸರಕಾರ ಹೊರಟಿದ್ದು ರಾಷ್ಟ್ರಾದ್ಯಂತ ಜನರನ್ನು ಕೆರಳಿಸಿದೆ. ಪ್ರತಿಭಟನೆಗಳು ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಅಧ್ಯಕ್ಷ ಮ್ಯಾಕ್ರಾನ್ ತನ್ನ ಚುನಾವಣಾ ಭಾಷಣಗಳಲ್ಲಿ ಭಾರೀ ಭರವಸೆಗಳನ್ನು ನೀಡಿ ಜನರಲ್ಲಿ ಹುಸಿ ಭರವಸೆ ಮೂಡಿಸಿ ಚುನಾವಣಾ ಗೆಲುವು ತನ್ನದನ್ನಾಗಿ ಮಾಡಿಕೊಂಡಿದ್ದರು. ಆಗಲೇ ಹದಗೆಡುತ್ತಿದ್ದ ಆರ್ಥಿಕತೆ, ತೀವ್ರವಾಗುತ್ತಿದ್ದ ನಿರುದ್ಯೋಗ, ಬೃಹದಾಕಾರ ತಾಳಿದ್ದ ಅಸಮಾನತೆಗಳಿಂದಾಗಿ ಜನಸಾಮಾನ್ಯರಲ್ಲಿ ಅಸಮಾಧಾನ ಅತೃಪ್ತಿ ಹೆಪ್ಪುಗಟ್ಟಿದ್ದ ಸಂದರ್ಭವದು. ಮ್ಯಾಕ್ರಾನ್ ತಾನೂ ಎಡವೂ ಅಲ್ಲ ಬಲವೂ ಅಲ್ಲ ಮಧ್ಯಮ ಮಾರ್ಗಿ ಎಂದೆಲ್ಲಾ ಬಿಂಬಿಸಿ ಜನರನ್ನು ಯಾಮಾರಿಸುವಲ್ಲಿ ಸಫಲರಾಗಿದ್ದರು. ವಾಸ್ತವದಲ್ಲಿ ಮ್ಯಾಕ್ರಾನ್ ಗಟ್ಟಿ ರಾಜಕೀಯ ನೆಲೆಯಾಗಲೀ ತನ್ನದೇ ಜನ ಬೆಂಬಲವಾಗಲೀ ಇಲ್ಲದ ವ್ಯಕ್ತಿ. ಕಾರ್ಪೊರೇಟ್ ಬೆಂಬಲದಿಂದ ಅದು ಹೇಗೋ ಅಧಿಕಾರದಲ್ಲಿ ಕುಳ್ಳಿರಿಸಲ್ಪಟ್ಟದ್ದ ವ್ಯಕ್ತಿ. ಆದರೆ ಅಧಿಕಾರಕ್ಕೇರಿದ ನಂತರ ಸಹಜವಾಗಿ ಮಾಡಿದ ಕಾರ್ಯಗಳೆಲ್ಲವೂ ಅಲ್ಲಿನ ಹಾಗೂ ಅಮೆರಿಕದ ಕಾರ್ಪೊರೇಟ್‌ಗಳ ಪರವಾದ ಕೆಲಸಗಳು. ತೀವ್ರ ಹಣದುಬ್ಬರ ಹಾಗೂ ಆದಾಯ ಕುಸಿತಗಳಿಂದ ಜನರು ಕಂಗೆಟ್ಟುಹೋಗಿದ್ದರು. ಮ್ಯಾಕ್ರಾನ್ ಸರಕಾರ ಫ್ರಾನ್ಸಿನ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಏನನ್ನೂ ಪ್ರಯತ್ನಿಸದೇ ತೆರಿಗೆಯ ಮೇಲೆ ತೆರಿಗೆ ಹೇರಲು ಶುರು ಮಾಡಿದ್ದು ಜನರನ್ನು ಕೆರಳಿಸಿತ್ತು. ಕುಸಿತಕ್ಕೊಳಗಾಗಿರುವ ಆರ್ಥಿಕತೆಯ ಪುನಶ್ಚೇತನ ಕಾಣಿಸಲು ಹೊಸ ಸರಕಾರ ಏನನ್ನೂ ಮಾಡದೇ ಮತ್ತಷ್ಟು ಹದಗೆಡುವಂತೆ ಮಾಡಿತು. ಕಾರ್ಪೊರೇಟ್‌ಗಳಿಗೆ ರಿಯಾಯಿತಿಗಳು, ತೆರಿಗೆ ವಿನಾಯಿತಿಗಳನ್ನು ನೀಡುತ್ತಾ ಜನಸಾಮಾನ್ಯರ ಮೇಲೆ ಹೆಚ್ಚು ಹೆಚ್ಚು ತೆರಿಗೆಗಳನ್ನು ಹೇರುವ ಕೆಲಸಗಳನ್ನು ಮ್ಯಾಕ್ರಾನ್ ಸರಕಾರ ಮಾಡುತ್ತಾ ಬಂದಿತು. ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರತೊಡಗಿ ಜನಸಾಮಾನ್ಯರ ಆದಾಯ ಕುಸಿತಕ್ಕೊಳಗಾಗುತ್ತಾ ಹೋಯಿತು. ಮ್ಯಾಕ್ರಾನ್ ಪ್ರತಿಪಾದಿಸಿದ್ದ ಮಧ್ಯಮ ಮಾರ್ಗವೆಂದರೆ ಏನು ಎಂಬುದರ ಅರಿವು ಜನರಿಗಾಗಲು ಬಹಳ ತಡವಾಗಲಿಲ್ಲ. ಈಗಾಗಲೇ ಆಳಿರುವ ಪಕ್ಷಗಳು ಜನರ ಮುಂದೆ ಬಯಲಾಗಿ ನಿಂತಿರುವ ಸಂದರ್ಭ ಬೇರೆ. ಜನರು ಆಕ್ರೋಶಗೊಳ್ಳಲು ಬೇರೆ ಕಾರಣಗಳು ಬೇಕಿರಲಿಲ್ಲ.


  ಜಾಗತಿಕವಾಗಿ ಫ್ರಾನ್ಸ್ ಬಹಳ ಮುಖ್ಯ ಸ್ಥಾನಗಳಲ್ಲಿರುವ ರಾಷ್ಟ್ರಗಳಲ್ಲಿ ಒಂದು. ಇತ್ತೀಚಿನ ರಫೇಲ್ ಹಗರಣದಿಂದಾಗಿ ಭಾರತದಲ್ಲೂ ಸಾಕಷ್ಟು ಸುದ್ದಿಯಲ್ಲಿರುವ ರಾಷ್ಟ್ರ. ಇದೆಲ್ಲಕ್ಕಿಂತಲೂ ಹದಿನೆಂಟನೇ ಶತಮಾನದಲ್ಲಿ ಮೊತ್ತ ಮೊದಲು ಕೈಗಾರಿಕಾ ಕ್ರಾಂತಿ ಸಾಬೀತುಗೊಳಿಸಿದ ರಾಷ್ಟ್ರವದು. ಫ್ರೆಂಚ್ ಕ್ರಾಂತಿಯೆಂದೇ ಅದು ಹೆಸರುವಾಸಿ. ಜಗತ್ತಿನ ಮುಂದುವರಿದ ಆರ್ಥಿಕತೆ ಎಂದು ಕರೆಸಿಕೊಂಡಿರುವ ರಾಷ್ಟ್ರಗಳಲ್ಲಿ ಫ್ರಾನ್ಸ್ ಕೂಡ ಒಂದು. ಯೂರೋಪಿಯನ್ ಯೂನಿಯನ್‌ನ ಒಂದು ಮುಖ್ಯ ರಾಷ್ಟ್ರ ಫ್ರಾನ್ಸ್. ಸುಮಾರು ಆರೂವರೆ ಕೋಟಿ ಜನಸಂಖ್ಯೆಯಿರುವ ಈ ರಾಷ್ಟ್ರ ಜಗತ್ತಿನ ಅತೀ ದೊಡ್ಡ 500 ಕಾರ್ಪೊರೇಟ್‌ಕಂಪೆನಿಗಳಲ್ಲಿ 28 ಕಾರ್ಪೊರೇಟ್ ಕಂಪೆನಿಗಳನ್ನು ಹೊಂದಿದೆ. ಇದು ಜಗತ್ತಿನ ಹತ್ತನೇ ಹಾಗೂ ಯೂರೋಪಿನ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿದೆ. ಜಾಗತಿಕವಾಗಿ ಅಮೆರಿಕದ ಬಣವಾಗಿಯೇ ಫ್ರಾನ್ಸ್ ನಿಲ್ಲುತ್ತಾ ಬಂದಿದೆ. ಈಗಿನ ಅಧ್ಯಕ್ಷ ಮ್ಯಾಕ್ರಾನ್ ಅಮೆರಿಕ ಪರ ನೀತಿಗಳನ್ನು ಪಾಲಿಸುತ್ತಿರುವುದು ಕೂಡ ಜನರ ಪ್ರತಿಭಟನೆಗೆ ಒಂದು ಕಾರಣವೆನ್ನಲಾಗುತ್ತಿದೆ.
ಈ ರಾಷ್ಟ್ರದಲ್ಲಿ ಶೇ. 55ಕ್ಕೂ ಹೆಚ್ಚು ಜನರು ಕಾರ್ಮಿಕರಾಗಿದ್ದಾರೆ. ಒಟ್ಟು ಕಾರ್ಮಿಕರಲ್ಲಿ ಸೇವಾ ವಲಯ ಶೇ. 71ರಷ್ಟು ಕಾರ್ಮಿಕರನ್ನು ಹೊಂದಿದ್ದರೆ, ಕೈಗಾರಿಕಾ ವಲಯ ಶೇ. 24ರಷ್ಟು ಹಾಗೂ ಕೃಷಿ ಶೇ. 3.8ರಷ್ಟು ಕಾರ್ಮಿಕರನ್ನು ಹೊಂದಿದೆ. ಆದರೆ ಈ ದೇಶದ ನಿರುದ್ಯೋಗದ ಮಟ್ಟ ಶೇ. 9ನ್ನು ದಾಟಿ ಬಹಳ ಕಾಲವಾಗಿದೆ. 2017ರ ಅಂದಾಜಿನ ಪ್ರಕಾರ ಆದಾಯ 1.3 ಟ್ರಿಲಿಯನ್ ಡಾಲರುಗಳಷ್ಟಿದ್ದರೆ ಖರ್ಚು 1.5 ಟ್ರಿಲಿಯನ್ ಡಾಲರುಗಳಷ್ಟಿದೆ. ಬಡತನ ರೇಖೆಯ ಕೆಳಗಿರುವವರು ಒಟ್ಟು ಜನಸಂಖ್ಯೆಯ ಶೇ. 5.5ರಷ್ಟಿದ್ದಾರೆ ಎಂದು 2017ರ ಅಂಕಿ ಅಂಶ ಹೇಳುತ್ತದೆ. ಬಾಹ್ಯ ಸಾಲ ಹಾಗೂ ಆಂತರಿಕ ಸಾಲಗಳಿಂದಾಗಿ ಫ್ರಾನ್ಸ್‌ನ ಆರ್ಥಿಕತೆ ತತ್ತರಿಸಿದೆ. 2017ರ ಅಂದಾಜಿನ ಪ್ರಕಾರ ಆಂತರಿಕ ಸಾಲ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ. 96ಕ್ಕೂ ಹೆಚ್ಚಿದೆ. ಫ್ರಾನ್ಸ್ ಆರ್ಥಿಕ ಸ್ಥಗಿತತೆ ನಂತರ ಆರ್ಥಿಕ ಹಿಂಜರಿತದಿಂದ ಸುಧಾರಿಸಿಕೊಳ್ಳಲು ಈಗಲೂ ಸಾಧ್ಯವಾಗಿಲ್ಲ. 2000ದಿಂದ ಆರಂಭವಾದ ಇದರ ಆರ್ಥಿಕ ಹಿಂಜರಿತ ದೊಡ್ಡ ಸುಧಾರಣೆ ಕಾಣಲಿಲ್ಲ. ರಾಷ್ಟ್ರೀಯ ಉತ್ಪನ್ನದ ದರ ಈಗ ಶೇ. 2ರಷ್ಟು ಮಾತ್ರವಿದೆ. ತಲಾ ಆದಾಯ ಭಾರೀ ಕುಸಿತಕ್ಕೊಳಗಾಗಿ ಜನಸಾಮಾನ್ಯರು ತತ್ತರಿಸುವಂತೆ ಮಾಡಿದೆ.
ಈ ಎಲ್ಲಾ ಕಾರಣಗಳಿಂದ ಫ್ರಾನ್ಸ್ ಅಮೆರಿಕ ಬಣದೊಂದಿಗೆ ಸೇರಿಕೊಂಡು ಇರಾಕ್, ಲಿಬಿಯಾ ಸೇರಿದಂತೆ ಹಲವಾರು ಯುದ್ಧಗಳಲ್ಲಿ ಪಾಲ್ಗೊಂಡಿತ್ತು. ‘ಇಸ್ಲಾಮಿಕ್ ಭಯೋತ್ಪಾದನೆ’ ‘ಭಯೋತ್ಪಾದನೆ ವಿರುದ್ಧ ಸಮರ’ ಎಂಬ ಅಮೆರಿಕ ಪ್ರೇರಿತ ಭೂತಗಳ ಹೆಸರಿನಲ್ಲಿ ಭಯಾಂದೋಲನದ ಮೂಲಕ ಜನಸಾಮಾನ್ಯರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಾ ಬಂದಿತ್ತು. ಈ ಎಲ್ಲಾ ಯುದ್ಧಗಳಲ್ಲಿ ಅಮೆರಿಕದ ಮಿತ್ರನಾಗಿಯೇ ಅದು ಕಾರ್ಯ ನಿರ್ವಹಿಸಿತ್ತು. ಆದರೆ ಈ ಯುದ್ಧಗಳಾವುವೂ ಅಮೆರಿಕಕ್ಕಾಗಲೀ, ಫ್ರಾನ್ಸಿಗಾಗಲೀ ಆರ್ಥಿಕ ಲಾಭವನ್ನೇನೂ ತಂದುಕೊಡಲಿಲ್ಲ. ಬದಲಿಗೆ ಮತ್ತಷ್ಟು ಆರ್ಥಿಕ ಬಿಕ್ಕಟ್ಟುಗಳನ್ನು ಸೃಷ್ಟಿಸಿತ್ತು. ಅದರೊಂದಿಗೆ ಭಾರೀ ಸಾಮಾಜಿಕ ಬಿಕ್ಕಟ್ಟಿಗೂ ಕಾರಣವಾಯಿತು.
 ಇಂದು ಫ್ರಾನ್ಸ್‌ನಲ್ಲಿ ಆಗುತ್ತಿರುವುದು ಜಾಗತಿಕ ಕಾರ್ಪೊರೇಟ್‌ಗಳ ದುರಾಸೆ ಹಾಗೂ ಹಗಲುದರೋಡೆಗಳ ಪರಿಣಾಮಗಳು. ಉತ್ಪಾದನೆಯಾಗುವ ಸಂಪತ್ತು ಕೆಲವೇ ಕಾರ್ಪೊರೇಟ್‌ಗಳು ಬಾಚಿಕೊಳ್ಳಲು ಆಳುವ ವ್ಯವಸ್ಥೆ ಅನುವು ಮಾಡಿ ರಕ್ಷಣೆ ಕೊಡುತ್ತಿರುವುದು, ಜನಸಾಮಾನ್ಯರನ್ನು ಪ್ರಶ್ನಿಸದಂತೆ ಮಾಡಲು, ದಮನಿಸಲು ದಮನ ಯಂತ್ರಾಂಗಗಳನ್ನು ಕ್ರೂರಾತಿಕ್ರೂರವಾಗಿ ಬಳಸುತ್ತಿರುವುದು ಅಲ್ಲಿನ ಸರಕಾರ ಮಾಡುತ್ತಿರುವ ಮಹಾನ್ ಆಡಳಿತವಾಗಿದೆ. ಪ್ರಜಾಪ್ರಭುತ್ವ ಇತ್ಯಾದಿಗಳು ಕೇವಲ ಘೋಷಣೆಯಾಗಿ ಮಾತ್ರ ಬಳಸಲ್ಪಡುತ್ತಿರುವುದು ಜಾಗತಿಕ ವಿದ್ಯಮಾನವಾಗಿದೆ. ಇಂದಿನ ಸ್ಥಿತಿ ಹೇಗಿದೆಯೆಂದರೆ ತೋರುಗಾಣಿಕೆಯ ಪ್ರಜಾಪ್ರಭುತ್ವವನ್ನು ಕೂಡ ಅನುಸರಿಸಲಾಗದ ಸ್ಥಿತಿ ಆಳುವ ಶಕ್ತಿಗಳದ್ದಾಗಿದೆ. ಹಾಗಾಗಿಯೇ ಅವರು ಇದ್ದ ಒಂದು ಮಟ್ಟದ ಎಲ್ಲಾ ಪ್ರಜಾತಾಂತ್ರಿಕ ಯಂತ್ರಾಂಗಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದಾರೆ. ಫ್ರಾನ್ಸ್ ನಲ್ಲೂ ಅದೇ ನಡೆಯುತ್ತಿದೆ. ಭಾರತದಲ್ಲೂ ಇವೇ ತಾನೆ ನಡೆಯುತ್ತಿರುವುದು. ಬಂಡವಾಳಶಾಹಿ ಬಿಕ್ಕಟ್ಟುಗಳು ಜನಸಾಮಾನ್ಯರನ್ನು ಹಾಗೂ ಸಮಾಜವನ್ನು ಹೇಗೆಲ್ಲಾ ಕ್ರೂರಾತಿಕ್ರೂರವಾಗಿ ನಡೆಸಿಕೊಳುತ್ತಿದೆ, ಆಳುವವರ ನಿಜ ಬಣ್ಣಗಳೇನು ಎನ್ನುವುದಕ್ಕೆ ಫ್ರಾನ್ಸ್ ಇತ್ತೀಚಿನ ಒಂದು ಉದಾಹರಣೆಯಾಗಿದೆ. ಇವೆಲ್ಲದರಿಂದ ನಾವು ಕೂಡ ಪಾಠ ಕಲಿಯುವ ಅಗತ್ಯವಿದೆ.

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News

ಜಗದಗಲ
ಜಗ ದಗಲ