ಜನೌಷಧಿ ಕುರಿತ ಕೆಲವು ಮಾಹಿತಿಗಳು

Update: 2018-12-10 18:30 GMT

♦ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಎಂದರೇನು?
ಪ್ರಧಾನಮಂತ್ರಿ ಜನೌಷಧಿ ಕೇಂದ್ರವು ಭಾರತ ಸರಕಾರದ ಔಷಧ ಇಲಾಖೆಯಿಂದ ಪ್ರಾಯೋಜಿಸಲ್ಪಟ್ಟಿರುವ ಜೆನರಿಕ್ ಔಷಧಿಗಳ ಮೆಡಿಕಲ್ ಸ್ಟೋರ್ ಆಗಿರುತ್ತದೆ. ಇದರಲ್ಲಿ ಅತ್ಯುತ್ತಮ ಗುಣಮಟ್ಟದ ಜೆನರಿಕ್ ಔಷಧಿಗಳು ಖಾಸಗಿ ಔಷಧಿಗಳ ಬೆಲೆಗಿಂತ ಶೇ. 30ರಿಂದ ಶೇ. 80ರ ತನಕ ರಿಯಾಯಿತಿ ದರದಲ್ಲಿ ದೊರೆಯುತ್ತದೆ.
♦ ಜೆನರಿಕ್ ಔಷಧಿ ಎಂದರೇನು?
ಜೆನರಿಕ್ ಔಷಧಿಯು ಭಾರತ ಸರಕಾರದ ಔಷಧ ಇಲಾಖೆಯಿಂದ ತಯಾರಿಸಲ್ಪಡುವ ಔಷಧಿಯಾಗಿದ್ದು, ಇದಕ್ಕೆ ಬ್ರಾಂಡ್‌ನ ಹೆಸರು ಇರುವುದಿಲ್ಲ. ಈ ಔಷಧ ಯಾವುದೇ ಬ್ರಾಂಡ್‌ನ ಔಷಧಿಗೆ ಹೋಲಿಸಿದರೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರುತ್ತದೆ ಹಾಗೂ ಬೆಲೆಯಲ್ಲಿ ಬ್ರಾಂಡೆಡ್ ಔಷಧಿಗಿಂತ ಕಡಿಮೆಯಿರುತ್ತದೆ.
♦  ಜೆನರಿಕ್ ಔಷಧಿಗಳು ಕಡಿಮೆ ಬೆಲೆಯಲ್ಲಿ ದೊರೆಯುವುದು ಹೇಗೆ?
ಜೆನರಿಕ್ ಔಷಧಿಯು ಭಾರತ ಸರಕಾರದ ಪ್ರಯೋಗಶಾಲೆಯಲ್ಲಿ ತಯಾರಾಗಿ ನೇರವಾಗಿ ಔಷಧಿ ಮಳಿಗೆಗೆ ಬರುತ್ತದೆ. ಇದರಿಂದ ಖಾಸಗಿ ಔಷಧಿಗಳಂತೆ ಅಧಿಕ ತಯಾರಿಕ ವೆಚ್ಚ, ಜಾಹೀರಾತು ವೆಚ್ಚ, ಮಾರುಕಟ್ಟೆ ವೆಚ್ಚ, ಹೋಲ್‌ಸೇಲ್, ರಿಟೇಲರ್ ಇತರ ಕಮಿಶನ್‌ಗಳು, ತೆರಿಗೆ ಯಾವುದೂ ಇರುವುದಿಲ್ಲ. ಆದುದರಿಂದ ಕಡಿಮೆ ಬೆಲೆಗೆ ದೊರೆಯುತ್ತದೆ.


♦ ಜೆನರಿಕ್ ಔಷಧಿಗಳು ಸುರಕ್ಷಿತ ಹಾಗೂ ಪರಿಣಾಮಕಾರಿಯೇ?
ಜನೌಷಧಿ ಮೆಡಿಕಲ್ ಸ್ಟೋರ್‌ನಲ್ಲಿ ದೊರೆಯುವ ಜೆನರಿಕ್ ಔಷಧಿಯು ಭಾರತದ ಪ್ರತಿಷ್ಠಿತ ಎನ್.ಎ.ಬಿ.ಎಲ್. ಪ್ರಯೋಗಶಾಲೆಯಲ್ಲಿ ಪ್ರತಿಯೊಂದು ಬ್ಯಾಚ್‌ನ ಔಷಧೀಯ ಗುಣಮಟ್ಟ ಪರೀಕ್ಷೆಗೆ ಒಳಪಟ್ಟು, ನಂತರ ಮಾರುಕಟ್ಟೆಗೆ ಬರುತ್ತದೆ. (ಖಾಸಗಿ ಔಷಧಿಗಳು ಸಹ ಇದೇ ಪ್ರಯೋಗಾಲಯದಲ್ಲಿ ಪರೀಕ್ಷಿಸಲ್ಪಡುತ್ತದೆ.) ಆದುದರಿಂದ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ.
♦ ಜೆನರಿಕ್ ಔಷಧಿಯನ್ನು ಹೇಗೆ ತಿಳಿದುಕೊಳ್ಳುವುದು?

 ನೀವು ಈಗಾಗಲೇ ತೆಗೆದುಕೊಳ್ಳುತ್ತಿರುವ ವೈದ್ಯರಿಂದ ನೀಡಲ್ಪಟ್ಟಿರುವ ಯಾವುದೇ ಔಷಧಿಯ ಚೀಟಿಯನ್ನು ಜನೌಷಧಿ ಕೇಂದ್ರಕ್ಕೆ ತಂದರೆ, ಔಷಧಿ ಕೇಂದ್ರದಲ್ಲಿರುವ ಅರ್ಹ ವ್ಯಕ್ತಿಯು ನೀವು ತಂದಿರುವ ಚೀಟಿಯಲ್ಲಿರುವ ಔಷಧಿಗೆ ಸಮಾನವಾದ ಜೆನರಿಕ್ ಔಷಧಿಯನ್ನು ಬದಲಾಯಿಸಿಕೊಡುತ್ತಾರೆ. (ಭಾರತ ಸರಕಾರ ಹಾಗೂ ಮೆಡಿಕಲ್‌ಕ್ವಾನಿಲ್ ಆಫ್ ಇಂಡಿಯಾ (ಎಂ.ಸಿ.ಐ.) ಸಹ ವೈದ್ಯರಿಗೆ ನೇರವಾಗಿ ಜೆನರಿಕ್ ಔಷಧಿಯನ್ನೇ ರೋಗಿಗಳಿಗೆ ಶಿಫಾರಸು ಮಾಡಲು ಆದೇಶಿಸಿದೆ.)
♦  ಜೆನರಿಕ್ ಔಷಧಿಯಲ್ಲಿ ಎಲ್ಲಾ ಕಾಂಬಿನೇಶನ್‌ಗಳು ದೊರೆಯುತ್ತದೆಯೇ?
ಜನೌಷಧಿ ಕೇಂದ್ರದಲ್ಲಿ ಒಂದು ಅಥವಾ ಎರಡು ಸಾಮಾನ್ಯ ಕಾಂಬಿನೇಶನ್‌ಗಳ ಎಲ್ಲಾ ಔಷಧಿಗಳು ದೊರೆಯುತ್ತದೆ. ಆದರೆ ಕೆಲವೊಮ್ಮೆ ಎರಡು ಅಥವಾ ಮೂರು ಕಾಂಬಿನೇಶನ್‌ಗಳ ಔಷಧಿಗಳು ಇಲ್ಲದ ಸಂದರ್ಭದಲ್ಲಿ ಕೇಂದ್ರದಲ್ಲಿರು ವವರು ಆ ಕಾಂಬಿನೇಶನ್‌ಗೆ ಸಮನಾದ 2 ಬೇರೆ ಬೇರೆ ಔಷಧಿಯನ್ನು ನೀಡುತ್ತಾರೆ. ಅದನ್ನು ಒಟ್ಟಿಗೆ ತೆಗೆದುಕೊಳ್ಳುವುದರಿಂದ 3 ಕಾಂಬಿನೇಶನ್‌ನಷ್ಟೇ ಪರಿಣಾಮಕಾರಿಯಾಗುತ್ತದೆ ಹಾಗೂ ಯಾವುದೇ ಅಡ್ಡ ಪರಿಣಾಮವಿಲ್ಲ.
♦ ಜನೌಷಧಿ ಕೇಂದ್ರದಲ್ಲಿ ಯಾವ ಯಾವ ಔಷಧಿಗಳು ದೊರೆಯುತ್ತದೆ?
ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಕಾಯಿಲೆ, ಗ್ಯಾಸ್‌ಟ್ರಬಲ್ ಹಾಗೂ ಇತರ ಹಲವು ರೀತಿಯ 800ಕ್ಕೂ ಹೆಚ್ಚು ಔಷಧಿಗಳು ರಿಯಾಯಿತಿ ದರದಲ್ಲಿ ಜನೌಷಧಿ ಕೇಂದ್ರದಲ್ಲಿ ಮಾತ್ರ ದೊರೆಯುತ್ತವೆ.

Writer - ಸಂಗಮೇಶ ಜವಾದಿ

contributor

Editor - ಸಂಗಮೇಶ ಜವಾದಿ

contributor

Similar News