‘ನಿಜದ ಭ್ರಮೆ’ ಹುಟ್ಟಿಸುವ ನೋಟು ನಿಷೇಧದ ರಾಜಕೀಯ

Update: 2018-12-11 18:31 GMT

ಬಿಜೆಪಿ ಸರಕಾರದ ಉತ್ಪ್ರೇಕ್ಷಿತ ವರದಿಗಳೇ ಅಧಿಕೃತವೆಂದು ಜನರು ಭಾವಿಸಿಬಿಡುವ ಮತ್ತು ಅದರಿಂದಾಗಿ ತಮ್ಮ ಚುನಾವಣಾ ಆಯ್ಕೆಗಳಲ್ಲಿ ಗೊಂದಲಕ್ಕೊಳಗಾಗುವ ತುರ್ತು ಅಪಾಯವಿದೆ. ಆದರೆ ಬಿಜೆಪಿಯ ಸುಳ್ಳುಗಳ ವಿರುದ್ಧ ನೈತಿಕ ಆಕ್ರೋಶವು ತದ್ವಿರುದ್ಧ ದಿಕ್ಕಿನಲ್ಲಿ ಕ್ರೋಡೀಕೃತಗೊಳ್ಳುತ್ತಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ರಾಜಕಾರಣಿಗಳು ತಮಗೆ ಅಗತ್ಯವಿದ್ದಾಗ ಸುಳ್ಳುಗಳನ್ನು ಹೇಳುತ್ತಾರೆಂಬುದು, ಸತ್ಯವನ್ನು ಹೇಳುವ ಅಂಕಿಅಂಶಗಳನ್ನು ಮರೆಮಚುತ್ತಾರೆಂಬುದು ಮತ್ತು ವಾಸ್ತವಾಂಶಗಳನ್ನು ತಿರುಚುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಈ ‘ಅಗತ್ಯ’ ಎಂದರೆ ಏನು? ಇದನ್ನು ತಾವು ಕೊಟ್ಟ ಭರವಸೆಗಳನ್ನು ಈಡೇರಿಸದ ಸತ್ಯವನ್ನು ತಮ್ಮ ಹಣೆ ಬರಹವನ್ನು ತೀರ್ಮಾನಿಸುವಂತಹ ಚುನಾವಣೆಗಳು ಹತ್ತಿರವಿರುವಾಗ ಮುಚ್ಚಿಹಾಕುವ ತುರ್ತುಗಳು ತೀರ್ಮಾನಿಸುತ್ತವೆ ಎಂದು ಹೇಳಬಹುದು. ಅಧಿಕಾರರೂಢ ಭಾರತೀಯ ಜನತಾ ಪಕ್ಷದೊಡನೆ ಕಳೆದ ಕೆಲವು ವರ್ಷಗಳ ನಮ್ಮ ಅನುಭವವನ್ನು ಆಧರಿಸಿ ಹೇಳುವುದಾದರೆ, ತಮ್ಮ ಸರಕಾರದ ಹಲವಾರು ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಬಗ್ಗೆ ಬಿಜೆಪಿ ಸರಕಾರವು ಕಿಂಚಿತ್ತೂ ಆತ್ಮಸಾಕ್ಷಿಯಿಲ್ಲದೆ ಒಂದು ಹವ್ಯಾಸದ ರೀತಿ ಹೇಳಿಕೊಂಡು ಬರುತ್ತಿರುವ ಸುಳ್ಳುಗಳಿಗೆ, 2014ರ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿ ಅಧಿಕಾರಕ್ಕೆ ಬಂದ ನಂತರ ಅದನ್ನು ಈಡೇರಿಸುವಲ್ಲಿ ನರೇಂದ್ರ ಮೋದಿಯವರು ವಿಫವಾಗಿರುವುದು ಅಥವಾ ಈಡೇರಿಸುವ ಕಾಳಜಿಯನ್ನೇ ತೋರದಿದ್ದುದೇ ಕಾರಣವೆಂದರೆ ಅದರಲ್ಲಿ ಅತಿಶಯೋಕ್ತಿಯೇನಲ್ಲ. ಆದರೆ ಈ ವಂಚನೆಯನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ. ಸರಕಾರದ ಈ ವೈಫಲ್ಯಗಳನ್ನು ಅವರು ಸುಳ್ಳು ಪ್ರಚಾರವೆಂದು ಹೇಳದೆ ಆ ವೈಫಲ್ಯವನ್ನೇ ‘ಉತ್ಪ್ರೇಕ್ಷಿತ ಸತ್ಯ’ವೆಂದು ಸಮರ್ಥಿಸಿಕೊಳ್ಳುತ್ತಾರೆ ಮತ್ತು ಈವರೆಗೆ ಈ ದೇಶದಲ್ಲಿ ರೂಢಿಗತವಾಗಿ ನಡೆಯುತ್ತಾ ಬಂದಿರುವ ಆರ್ಥಿಕ ಅಪರಾಧಗಳನ್ನು ತೊಳೆದುಹಾಕಬೇಕೆಂಬ ಕರೆಯನ್ನು ನೀಡುತ್ತಾರೆ ಮತ್ತು ಅದನ್ನು ತಮ್ಮ ಸರಕಾರ ಮಾತ್ರ ಮಾಡಬಲ್ಲದೆಂದೂ ಸಹ ಪ್ರತಿಪಾದಿಸುತ್ತಾರೆ. ಆದರೆ ತಮ್ಮ ಸಾಂಪ್ರದಾಯಿಕ ಸಮರ್ಥಕರ ಬೆಂಬಲ ಎಷ್ಟೇ ಇದ್ದರೂ ಬಿಜೆಪಿಯ ಇತ್ತೀಚಿನ ಕೆಲವು ಆರ್ಥಿಕ ವಂಚನೆಗಳನ್ನು ಯಾವ ಆರ್ಥಿಕ ತರ್ಕಗಳಿಂದಲೂ ಸಮರ್ಥಿಸಿಕೊಳ್ಳಲಾಗುವುದಿಲ್ಲ. ಅದರಲ್ಲೂ ತಮ್ಮ ಸರಕಾರದ ಒಂದು ಬಹು ದೊಡ್ಡ ನೈತಿಕ ಕ್ರಮವೆಂದು ಕೊಚ್ಚಿಕೊಳ್ಳುವ ಅವರ ನೋಟು ನಿಷೇಧದ ಕ್ರಮವು ಇಂತಹ ಅಪರಾಧದ ಬಹುದೊಡ್ಡ ಹೊರೆಯನ್ನು ಹೊತ್ತುಕೊಂಡಿದೆ.
    ತಮಗೆ ವ್ಯತಿರಿಕ್ತವಾದ ಪುರಾವೆಗಳನ್ನು ತಿರಸ್ಕರಿಸುವುದು ಅಥವಾ ತಿರುಚುವುದಕ್ಕಿಂತ ಹೆಚ್ಚಾಗಿ ತಮ್ಮ ಸರಕಾರದ ಅಪ್ರಾಮಾಣಿಕತೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ವಾಸ್ತವಾಂಶಗಳನ್ನು ಬುಡಮೇಲುಗೊಳಿಸಲು ಅವರು ಅನುಸರಿಸುತ್ತಿರುವ ಸರ್ವಾಧಿಕಾರಿ ಮತ್ತು ದುರಹಂಕಾರಿ ಧೋರಣೆಗಳು ಹೆಚ್ಚಿನ ಕಳವಳವನ್ನುಂಟುಮಾಡುತ್ತವೆ. ಇತ್ತೀಚೆಗೆ ಕೇಂದ್ರ ಸರಕಾರದ ಕೃಷಿ ಇಲಾಖೆಯು ನೋಟು ನಿಷೇಧದಿಂದ ಕೃಷಿ ಕ್ಷೇತ್ರದ ಮೇಲೆ ಆಗಿರುವ ಹಾನಿಕಾರಕ ಪರಿಣಾಮಗಳ ಬಗ್ಗೆ ಇಲಾಖಾ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಆದರೆ ಅದು ಬಿಡುಗಡೆಯಾದ ಮರುದಿನವೇ ಸರಕಾರವು ಆ ವರದಿಯನ್ನು ಹಿಂದೆಗೆದುಕೊಂಡು, ನೋಟು ನಿಷೇಧದಿಂದ ಕೃಷಿ ಕ್ಷೇತ್ರದ ಮೇಲೆ ಸತ್ಪರಿಣಾಮವೇ ಉಂಟಾಗಿದೆಯೆಂದು ಹೇಳುವ ವಿಭಿನ್ನ ವರದಿಯನ್ನು ಬಿಡುಗಡೆ ಮಾಡಿತಲ್ಲದೆ ಸೂಕ್ತ ಆಡಳಿತಾತ್ಮಕ ವಿಧಾನಗಳನ್ನು ಅನುಸರಿಸದೆ ವರದಿಯನ್ನು ಬಿಡುಗಡೆ ಮಾಡಿದ ಆರೋಪವನ್ನು ಹೊರಿಸಿ ಸಂಬಂಧಿಸಿದ ಅಧಿಕಾರಿಗೆ ನೋಟಿಸನ್ನು ನೀಡಿತು. ಇದು ಈ ಸರಕಾರದ ನಾಚಿಕೆಗೆಟ್ಟ ಮತ್ತು ಹೊಣೆಗೇಡಿತನದ ಧೋರಣೆಗಳನ್ನು ಬಯಲು ಮಾಡಿದೆ. ಒಂದು ರೀತಿಯಲ್ಲಿ ಸರಕಾರವು ಹೌದು, ಇದು ಸುಳ್ಳು. ಆದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವವರು ಯಾರು? ಎಂದು ಹೇಳುತ್ತಿರುವಂತಿದೆ. ಆದರೆ ಇದರ ಬಗ್ಗೆ ನಿಜವಾಗಿ ತಲೆ ಕೆಡಿಸಿಕೊಳ್ಳಬೇಕಿರುವವರು ಯಾರು ಎಂಬುದೇ ಇದೀಗ ಕೇಳಿಕೊಳ್ಳಬೇಕಿರುವ ಮುಖ್ಯ ಪ್ರಶ್ನೆಯೂ ಆಗಿದೆ. ಸರಕಾರವು ತನ್ನ ಉತ್ತರದಾಯಿತ್ವದ ಹೊಣೆಗಾರಿಕೆಯ ದೃಷ್ಟಿಯಿಂದ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಕೆಂದು ನಿರೀಕ್ಷಿಸಲಾಗುತ್ತದೆ. ಆದರೆ ಅಷ್ಟೇ ಮಟ್ಟಿಗೆ ತನ್ನ ವೈಫಲ್ಯಗಳ ಬಗ್ಗೆ ಸರಕಾರವನ್ನು ಉತ್ತರದಾಯಿಗಳನ್ನಾಗಿ ಮಾಡಬೇಕಾದ ಹೊಣೆಗಾರಿಕೆಯಿಂದ ವಿರೋಧ ಪಕ್ಷಗಳು ಹಾಗೂ ಮತದಾರರು ಕೂಡಾ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿರುವ ಆಯ್ಕೆಯಲ್ಲಿನ ಒತ್ತುಗಳು ಮತ್ತು ವಿರೋಧಿ ಭಾವನೆಗಳ ತತ್‌ಕ್ಷಣದ ಪ್ರಚಾರಗಳ ಸಹಾಯದಿಂದಾಗಿ ತಮ್ಮ ರಾಜಕೀಯ ವಿರೋಧಿಗಳ ಮೇಲೆ ಸುಳ್ಳುಗಳ ಪ್ರಚಾರದ ಆರೋಪವನ್ನು ವರ್ಗಾಯಿಸುತ್ತಿರುವುದರಿಂದ ಮತ್ತು ಪೂರ್ವಗ್ರಹ ಹಾಗೂ ಪ್ರತೀಕಾರ ಭಾವನೆಗಳ ಅಬ್ಬರದ ದ್ವೇಷಪೂರಿತ ಪ್ರಚಾರಗಳಿಂದಾಗಿ ಭಾರತೀಯ ಪ್ರಜಾತಂತ್ರದಲ್ಲಿ ಸಂವಾದಗಳಿಗಿರಲಿ, ಕನಿಷ್ಠ ಚರ್ಚೆಗಳಿದ್ದ ಅವಕಾಶವೂ ಸಹ ಕಿರಿದಾಗುತ್ತಿದೆ.
  ಹೀಗಾಗಿ ಪ್ರಸ್ತುತ ರಾಜಕೀಯ ಸಂಕಥನಗಳು ನೋಟು ನಿಷೇಧದ ಹಿಂದಿನ ಬೌದ್ಧಿಕ ಸಾರವೇನಿತ್ತೆಂಬ ಚರ್ಚೆಯನ್ನೇ ಮಾಡದಿರುವುದರಲ್ಲಿ ಆಶ್ಚರ್ಯವೇನಿಲ್ಲ. ಇತ್ತೀಚೆಗೆ, 2018ರ ನವೆಂಬರ್ 30ರಂದು ದಿಲ್ಲಿಯಲ್ಲಿ ನಡೆದ ರೈತಾಪಿಯ ಪ್ರತಿಭಟನೆಯನ್ನೂ ಒಳಗೊಂಡಂತೆ ದೇಶಾದ್ಯಂತ ಈ ವರ್ಷ ನಡೆದ ರೈತರ ಪ್ರತಿರೋಧಗಳಲ್ಲಿ, ಪ್ರತಿಪಕ್ಷಗಳು ಗ್ರಾಮೀಣ ಜನರ ಪ್ರತಿರೋಧವನ್ನು ಬೆಂಬಲ ಬೆಲೆ, ಸಾಲಮನ್ನಾದಂತಹ ಕೃಷಿ ಬಿಕ್ಕಟ್ಟಿನ ವಿಷಯಗಳ ಸುತ್ತವೇ ಬೆಸೆದು ಕಟ್ಟಿದರು. ಆದರೆ ಯಾರೂ ಸಹ ನೋಟು ನಿಷೇಧವು ಪರಿಹರಿಸಲಾಗದಂತಹ ಆರ್ಥಿಕ ಹಾನಿಯು ನಮ್ಮ ಸಂದರ್ಭದಲ್ಲಿ ತಂದಿರುವ ಬದಲಾವಣೆಯನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ರಸ್ತಾಪಿಸಲೇ ಇಲ್ಲ. ಉದಾಹರಣೆಗೆ ರೈತರು ಬೆಳೆಯನ್ನು ಸರಕಾರವೇ ಬೆಂಬಲ ಬೆಲೆಯನ್ನು ತೆತ್ತು ಕೊಂಡುಕೊಳ್ಳುವ ಪ್ರಬಲವಾದ ಕಾರ್ಯಕ್ರಮಗಳಿಲ್ಲದೆ ಕೇವಲ ಬೆಂಬಲ ಬೆಲೆಯನ್ನು ಹೆಚ್ಚಿಸುವ ಆಗ್ರಹಗಳು ರೈತರಿಗೆ ಸಹಾಯ ಮಾಡುವುದಿಲ್ಲ. ಹೀಗಾಗಿ ಅದರ ಬದಲಿಗೆ ರೈತರು ಬೆಳೆದ ಬೆಳೆಯನ್ನು ಸರಕಾರವೇ ಕೊಂಡುಕೊಳ್ಳುವ ಪರಿಣಾಮಕಾರಿ ಮತ್ತು ಬಲವಾದ ಕಾರ್ಯಕ್ರಮಗಳನ್ನು ರೂಪಿಸುವ ಸುತ್ತ ಈ ಚುನಾವಣಾ ಕಾಲದಲ್ಲಿ ಒಂದು ಸರ್ವಸಮ್ಮತಿಯನ್ನು ರೂಪಿಸುವ ಕಡೆಗೆ ಪ್ರತಿಭಟನಾಕಾರರು ಗಮನ ಹರಿಸಬಹುದಿತ್ತು. ನಗದು ಕೊರತೆಯಿಂದಾಗಿ ಗ್ರಾಮೀಣ ಉದ್ಯೋಗ ಮತ್ತು ಆದಾಯಗಳು ಇಳಿಕೆಗೊಂಡಿರುವ ಹಿನ್ನೆಲೆಯಲ್ಲಿ ಇದು ಇನ್ನಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ.
ಭಾರತದ ರಾಜಕೀಯ ಕ್ಷೇತ್ರದಲ್ಲಿ ಬಿಜೆಪಿ ಮಾಡುತ್ತಿರುವ ಸತ್ಯೋತ್ತರ ರಾಜಕೀಯವು ಒಂದು ಬಗೆಯ ಅನುಮೋದನಾ ಸತ್ಯಗಳನ್ನು ಸೃಷ್ಟಿಸುತ್ತಿದೆ. ಹೀಗಾಗಿ ಸಮರ್ಥಕರ ಮತ್ತು ವಿರೋಧಿಗಳಿಬ್ಬರ ಪ್ರತಿಕ್ರಿಯೆ ಮತ್ತು ಪ್ರತಿಸ್ಪಂದನೆಗಳೂ ಸಹ ತಮಗೆ ಸೂಕ್ತವಾಗುವ ದತ್ತಾಂಶಗಳ ಆಯ್ಕೆ ಯನ್ನು ಮಾತ್ರ ಆಧರಿಸುತ್ತಿದ್ದು ಅವೆರಡೂ ಸತ್ಯದ ಮೇಲೆ ಸಮಾನವಾದ ಪ್ರಭಾವವನ್ನು ಬೀರುತ್ತಿವೆ. ಉದಾಹರಣೆಗೆ ಬಿಜೆಪಿ ಸಂಸದ ವರುಣ್ ಗಾಂಧಿಯವರು 2018ರ ಡಿಸೆಂಬರ್ 3ರಂದು ‘ದಿ ಹಿಂದೂ’ ಪತ್ರಿಕೆಯಲ್ಲಿ ‘‘ಜಾಬ್ ಕ್ರಿಯೇಷನ್ ಅಟ್ ಫಾರ್ಮರ್ಸ್ ಡೋರ್‌ಸ್ಟೆಪ್’’ (ರೈತರ ಮನೆಬಾಗಿಲ ಬಳಿ ಉದ್ಯೋಗ ಸೃಷ್ಟಿ) ಎಂಬ ಶೀರ್ಷಿಕೆಯಡಿ ಬರೆದ ಲೇಖನ ಅಥವಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರು 2018ರ ಅಕ್ಟೋಬರ್ 10ರಂದು ರಾಜಸ್ಥಾನದ ಧೋಲ್ಪುರ್‌ನಲ್ಲಿ ಮಾಡಿದ ಚುನಾವಣಾ ಭಾಷಣದಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಹರಿಸಿದ ಭರವಸೆಗಳೆರಡೂ ಕೇವಲ ಮತಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳುವ ರಾಜಕೀಯ ಹಿತಾಸಕ್ತಿಯ ಹೇಳಿಕೆಗಳಾಗಿವೆ. ಹಾಗೂ ಯಾರೊಬ್ಬರೂ ಸಹ ಮೂಲಭೂತ ಪ್ರಶ್ನೆಯ ಬಗ್ಗೆ ಯಾವ ಸ್ಪಷ್ಟತೆಯನ್ನೂ ಒದಗಿಸುವುದಿಲ್ಲ. ಗ್ರಾಮೀಣ ಕೃಷಿಯೇತರ ಉದ್ಯೋಗವನ್ನು ಪ್ರಮುಖವಾಗಿ ಸೃಷ್ಟಿಸುತ್ತಿದ್ದ ಅನೌಪಚಾರಿಕ ಕ್ಷೇತ್ರವು ನೋಟು ನಿಷೇಧ ಮತ್ತು ಜಿಎಸ್‌ಟಿಗಳ ಹೊಡೆತ ದಿಂದ ತತ್ತರಿಸುತ್ತಿರುವಾಗ ಗ್ರಾಮೀಣ ಕ್ಷೇತ್ರದಲ್ಲಿ ರೈತಾಪಿಯು ಕೃಷಿಯೇತರ ವಲಯಗಳಿಗೆ ವಿಸ್ತರಿಸಿಕೊಳ್ಳುವುದು ಹೇಗೆ ಸಾಧ್ಯ? ಅಥವಾ ಅಸಂಘಟಿತ ಉತ್ಪಾದನಾ ಕ್ಷೇತ್ರ, ಕಟ್ಟಡ ನಿರ್ಮಾಣ, ವ್ಯಾಪಾರ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಉದ್ಯೋಗಗಳ ಸಮಗ್ರ ಕುಸಿತವಾಗಿರುವಾಗ ಹೊಸ ಉದ್ಯೋಗಗಳ ಸೃಷ್ಟಿಯ ಭರವಸೆಗಳನ್ನು ಹೇಗೆ ಸಾಕಾರಗೊಳಿಸಿಕೊಳ್ಳಲು ಸಾಧ್ಯ?
 ಆಳುವವರ್ಗಗಳ ಸುಳ್ಳು-ಪೊಳ್ಳುಗಳನ್ನು ಪ್ರತಿರೋಧಿಸುವಾಗ ಪ್ರತಿಭಟನಾಕಾರರು/ವಿರೋಧಿಗಳು ಮೂಲಭೂತ ಮತ್ತು ಕಠಿಣವಾದ ಅಂಶಗಳನ್ನು ಬಿಟ್ಟು ಮೇಲ್ಪದರದ ಮತ್ತು ಮೃದುವಾದ ಅಂಶಗಳ ವಿರುದ್ಧ ಮಾತ್ರ ತಮ್ಮ ಪ್ರತಿಭಟನೆಯನ್ನು ಕೇಂದ್ರೀಕರಿಸುತ್ತಿರುವುದು ಮಾತ್ರವಲ್ಲದೆ ಆರ್ಥಿಕ ತರ್ಕವನ್ನು ಆಧರಿಸಿದ ನಿರ್ಣಯವನ್ನು ಅಪ್ರಸ್ತುತಗೊಳಿಸುವ ನೈತಿಕ ಪರಿಭಾಷೆಯನ್ನೇ ಬಳಸುತ್ತಿರುವುದು ಕಳವಳಕಾರಿಯಾಗಿದೆ. ಆ ಪ್ರಕ್ರಿಯೆಯಲ್ಲಿ ಅವರು ಮತದಾರರು ತಮ್ಮ ನಾಯಕರನ್ನು/ಸರಕಾರವನ್ನು ವಿವೇಚನಾಪೂರ್ವಕವಾಗಿ ಆಯ್ಕೆ ಮಾಡುವಲ್ಲಿ ಸಹಕಾರಿಯಾಗುತ್ತಿದ್ದ ಕಠಿಣ ಸಂಗತಿಗಳನ್ನು ಜನರೆದುರು ಇಡುವಲ್ಲಿ ವಿಫಲವಾಗುತ್ತಿದ್ದಾರೆ. ಇದು ಕೂಡಾ ವಾಸ್ತವಾಂಶಗಳನ್ನು ನಿರಂತರವಾಗಿ ನಿರಾಕರಿಸುತ್ತಿರುವ ಸರಕಾರದ ಸುಳ್ಳುಗಳಿಗೆ ಸರಿಸಮವಾದ ಪರಿಣಾಮವನ್ನೇ ಉಂಟುಮಾಡುತ್ತದೆ. ಪ್ರತಿಭಟನಾಕಾರರು ಕೃಷಿಯ ವಿದ್ಯಮಾನಗಳನ್ನು ನೋಟುನಿಷೇಧವು ಉಂಟುಮಾಡಿರುವ ಮೂಲಭೂತ ಆರ್ಥಿಕ ಬದಲಾವಣೆಗಳ ಹಿನ್ನೆಲೆಯಲ್ಲಿ ಪರಿಶೀಲಿಸದೆ ಇರುವುದರಿಂದ ಬಿಜೆಪಿ ಸರಕಾರದ ಉತ್ಪ್ರೇಕ್ಷಿತ ವರದಿಗಳೇ ಅಧಿಕೃತವೆಂದು ಜನರು ಭಾವಿಸಿಬಿಡುವ ಮತ್ತು ಅದರಿಂದಾಗಿ ತಮ್ಮ ಚುನಾವಣಾ ಆಯ್ಕೆಗಳಲ್ಲಿ ಗೊಂದಲಕ್ಕೊಳಗಾಗುವ ತುರ್ತು ಅಪಾಯವಿದೆ. ಆದರೆ ಬಿಜೆಪಿಯ ಸುಳ್ಳುಗಳ ವಿರುದ್ಧ ನೈತಿಕ ಆಕ್ರೋಶವು ತದ್ವಿರುದ್ಧ ದಿಕ್ಕಿನಲ್ಲಿ ಕ್ರೋಡೀಕೃತಗೊಳ್ಳುತ್ತಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ನಾಗರಿಕ ಸಮಾಜದ ಒಂದು ವಿಭಾಗವು ಈ ಬದಲಾವಣೆಯ ಪ್ರತಿಪಾದನೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುತ್ತಿದೆ ಮತ್ತು ಅವರ ಮಟ್ಟಿಗೆ ಈ ನೋಟು ನಿಷೇಧದ ಕ್ರಮವು ಬದಲಾವಣೆಯ ಬಗ್ಗೆ ಬಿಜೆಪಿಯು ನೀಡುವ ನೈತಿಕ ಕರೆಯಲ್ಲಿ ಅಂತರ್ಗತವಾಗಿರುವ ಸಂಕುಚಿತ ರಾಜಕೀಯದ ಮತ್ತೊಂದು ಉತ್ಪ್ರೇಕ್ಷಿತ ಪ್ರತಿಸ್ಪಂದನೆಯಾಗಿದೆ. ವಾಸ್ತವವಾಗಿ 2019ರ ಚುನಾವಣೆಯು, ಈ ಸತ್ಯೋತ್ತರ ರಾಜಕೀಯವನ್ನು ಪ್ರತಿಭಟಿಸಲು ಬೇಕಾದ ಹೊಸಭಾಷೆಯನ್ನು ಕಂಡುಕೊಳ್ಳಲು ನಾಗರಿಕ ಸಮಾಜಕ್ಕೆ ಆಸ್ಪದಕೊಡುವಷ್ಟು ಭಾರತೀಯ ಪ್ರಜಾತಂತ್ರವು ಸಶಕ್ತವಾಗಿದೆಯೇ ಎಂಬುದರ ಪರೀಕ್ಷೆಯೇ ಆಗಿದೆ.
ಕೃಪೆ: Economic and Political Weekly

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News