ಪಂಚ ರಾಜ್ಯಗಳ ಪಂಚ್

Update: 2018-12-12 04:33 GMT

ಪಂಚ ರಾಜ್ಯಗಳ ಫಲಿತಾಂಶ ಹಲವು ಕಾರಣಗಳಿಗಾಗಿ ಆಶಾದಾಯಕವಾಗಿದೆ. ಮೋದಿಯನ್ನು ಮುಂದಿಟ್ಟು ಮಾಧ್ಯಮಗಳ ಮೂಲಕ ಭ್ರಮೆ, ಸುಳ್ಳುಗಳನ್ನು ಹರಡುವ ರಾಜಕೀಯಕ್ಕೆ ದೊರೆತ ಮೊದಲ ಹಿನ್ನಡೆ. ಮೋದಿಯೆನ್ನುವ ಗಾಳಿ ತುಂಬಿದ ಬೃಹತ್ ಬಲೂನಿಗೆ ಚುಚ್ಚಿದ ಮೊದಲ ಸೂಜಿ ಇದು. ಹತ್ತು ಹಲವು ಜನವಿರೋಧಿ ನೀತಿಗಳ ಮೂಲಕ ದೇಶದ ಅರ್ಥವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿದ ಪ್ರಧಾನಿಗೆ ಜನಸಾಮಾನ್ಯರು ನೀಡಿದ ಉತ್ತರವೆಂದು ಇದನ್ನು ಭಾವಿಸಬೇಕಾಗಿದೆ. ಮೋದಿ ಎನ್ನುವ ನೀಲಿ ನರಿಯ ಬಣ್ಣ, ಪಂಚರಾಜ್ಯಗಳ ಚುನಾವಣೆಯ ಮಳೆಯಲ್ಲಿ ಕರಗಿದೆ. ದೇಶ ಮೊದಲ ಬಾರಿ ಕವಿದ ವಿಸ್ಮತಿಯಿಂದ ಎಚ್ಚೆತ್ತು ಎದ್ದು ನಿಲ್ಲುವಂತಹ ಫಲಿತಾಂಶ ಇದು.
ಕಳೆದ ನಾಲ್ಕೂವರೆ ವರ್ಷಗಳ ಕಾಲಾವಧಿಯಲ್ಲಿ ಈ ದೇಶದ ಜನತೆ ನೆಮ್ಮದಿಯಿಂದ ಇರಲಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಒತ್ತಟ್ಟಿಗಿರಲಿ, ವಿದೇಶಿ ಕಪ್ಪುಹಣವನ್ನು ತಂದು ಎಲ್ಲರ ಬ್ಯಾಂಕ್ ಖಾತೆಗೆ ಹಾಕುವ ಭರವಸೆ ಹಾಳಾಗಿ ಹೋಗಲಿ, ಜನರು ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿರಲು ಈ ಸರಕಾರ ಬಿಡಲಿಲ್ಲ. ಜನರ ಊಟದ ತಟ್ಟೆಗೆ ಕೈ ಹಾಕಿ ಇಂತಹ ಊಟವನ್ನೇ ಮಾಡಬೇಕೆಂಬ ಆದೇಶಗಳು ಬರತೊಡಗಿದವು. ದನದ ಮಾಂಸದ ನೆಪ ಮುಂದೆ ಮಾಡಿ ಇವರು ಕೊಂದ ಅಮಾಯಕರ ಸಂಸಾರಗಳು ಬೀದಿಪಾಲಾಗಿವೆ. ಯಾರಿಗೂ ಹೇಳದೆ ಕೇಳದೆ ದಿಢೀರ್ ನೋಟು ಅಮಾನ್ಯ ಮಾಡಿದ ಕ್ರಮದಿಂದ ಜನ ಸಾಮಾನ್ಯರು, ಮಧ್ಯಮ ವರ್ಗದ ಜನರು ಬಳಲಿ ಬೆಂಡಾದರೆ, ಜಿಎಸ್‌ಟಿಯಿಂದ ಸಣ್ಣಪುಟ್ಟ ವ್ಯಾಪಾರಸ್ಥರು ನಲುಗಿ ಹೋದರು. ಕಾನೂನು ಸುವ್ಯವಸ್ಥೆ ದಿನದಿನಕ್ಕೂ ಹದಗೆಡುತ್ತ ಬಂತು. ಸ್ವಾಮಿ ಅಗ್ನಿವೇಶ್‌ರಂಥ ಸಾತ್ವಿಕ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತು. ಇದನ್ನು ಪ್ರಧಾನಿ ಖಂಡಿಸಲಿಲ್ಲ. ಪ್ರಜಾಪ್ರಭುತ್ವ ವೇ ನಾಶವಾಗಿ ಹೋಗುತ್ತದೆ ಎಂಬ ಭೀತಿ ಆವರಿಸಿತ್ತು. ಈ ಭೀತಿಯನ್ನು ಜನತೆ ತಮ್ಮ ತೀರ್ಪಿನಿಂದ ನಿವಾರಿಸಿದ್ದಾರೆ.
 ಗುಜರಾತ್ ಜನರ ನೆಮ್ಮದಿಯನ್ನು ಹಾಳು ಮಾಡಿದ ವ್ಯಕ್ತಿ ಮತ್ತು ಆತನ ಪಕ್ಷ ಹಾಗೂ ಆ ಪಕ್ಷವನ್ನು ನಿಯಂತ್ರಿಸುವ ಸಂಘಪರಿವಾರ ಈ ದೇಶಕ್ಕೆ ಒಳ್ಳೆಯದನ್ನು ಮಾಡಲಿಲ್ಲ. ಸ್ವಯಂಘೋಷಿತ ಗೋರಕ್ಷಕರು ಅನೇಕ ಅಮಾಯಕರನ್ನು ಹಾಡ ಹಗಲೇ ಕೊಂದು ಹಾಕಿದರು. ಮೊನ್ನೆ ಮೊನ್ನೆ ಪೊಲೀಸಧಿಕಾರಿಯೊಬ್ಬರನ್ನೂ ಹತ್ಯೆಗೈದರು. ಈ ಬಗ್ಗೆ ಕನಿಷ್ಠ ವಿಷಾದವನ್ನು ವ್ಯಕ್ತಪಡಿಸದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘‘ಇದೊಂದು ಆಕಸ್ಮಿಕ ಘಟನೆ’’ ಎಂದು ತಿಪ್ಪೆಸಾರಿಸಿದರು. ನಾಗಪುರದ ಆರೆಸ್ಸೆಸ್ ಎಂಬ ಸಂವಿಧಾನೇತರ ಅಧಿಕಾರ ಕೇಂದ್ರದ ಸೂತ್ರದ ಗೊಂಬೆಯಾದ ಮೋದಿ ಇನ್ನೊಂದೆಡೆ ಕಾರ್ಪೊರೇಟ್ ಬಂಡವಾಳಶಾಹಿಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಸಂಘ ಪರಿವಾರದ ಹಿಂದೂರಾಷ್ಟ್ರ ನಿರ್ಮಾಣದ ಅಜೆಂಡಾ ಜಾರಿಗೆ ತರಲು ಸಿಬಿಐ, ಆರ್‌ಬಿಐ, ಯುಜಿಸಿ, ಐಸಿಎಚ್‌ಆರ್‌ಗಳಂಥ ಸಂವಿಧಾನಾತ್ಮಕ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಾ ಬಂದರು. ಸುಪ್ರೀಂ ಕೋರ್ಟ್‌ನಲ್ಲಿ ಬಾಹ್ಯ ಹಸ್ತಕ್ಷೇಪ ನಡೆಯುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಾಧೀಶರು ಪತ್ರಿಕಾ ಗೋಷ್ಠಿಕರೆದು ಆರೋಪಿಸಿದರು. ಸೋಮವಾರ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದರು. ಈಗ ಬಿಜೆಪಿ ಅಧಿಕಾರ ಕಳೆದುಕೊಂಡ ರಾಜ್ಯಗಳಲ್ಲಿ ನಡೆದ ವ್ಯಾಪಂ ಹಗರಣ, ರಾಜಸ್ಥಾನದಲ್ಲಿ ವಸುಂಧರಾ ರಾಜೇ ಆಡಳಿತದ ವಿರುದ್ಧ ಜನಾಕ್ರೋಶ ಛತ್ತೀಸ್‌ಗಡದಲ್ಲಿ ರಮಣಸಿಂಗ್ ದುರಾಡಳಿತದ ಬಗ್ಗೆ ಜನ ರೋಸಿ ಹೋಗಿದ್ದರು. ಈಗ ಮತದಾನದ ಮೂಲಕ ತಕ್ಕ ಪಾಠ ಕಲಿಸಿದ್ದಾರೆ.
  ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತದ ಚರಿತ್ರೆಯನ್ನೇ ತಿರುಚಿ ಹೊಸ ಚರಿತ್ರೆಯನ್ನೇ ಬರೆಯುವ ಮಸಲತ್ತು ನಡೆಯುತ್ತಲೇ ಬಂದಿದೆ. ದೇಶವನ್ನು ಕಾರ್ಪೊರೇಟ್‌ಕಂಪೆನಿಗಳಿಗೆ ಅಡವಿಡಲು ಹೊರಟ ಈ ಸರಕಾರ ಸಾರ್ವಜನಿಕ ರಂಗದ ಉದ್ಯಮಗಳನ್ನೆಲ್ಲ ಹಾಳು ಮಾಡಿತು. ಎಚ್‌ಎಎಲ್‌ನಂಥ ಹೆಮ್ಮೆಯ ಸಂಸ್ಥೆಯನ್ನು ಕಡೆಗಣಿಸಿ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ನಡೆದ ಭ್ರಷ್ಟಾಚಾರದ ದುರ್ವಾಸನೆ ಎಲ್ಲೆಡೆ ಹರಡಿದೆ. ಸರಕಾರದ ಈ ವೈಫಲ್ಯ ಮುಚ್ಚಿಕೊಳ್ಳಲು ಆರೆಸ್ಸೆಸ್ ಶ್ರೀರಾಮ ಭಜನಾ ಮಂಡಳಿಯ ಪ್ರಹಸನವನ್ನು ಮತ್ತೆ ಆರಂಭಿಸಿದೆ. ಜನರನ್ನು ರಾಮೋನ್ಮಾದದಲ್ಲಿ ಮುಳುಗಿಸಿ ನೈಜ ಸಮಸ್ಯೆಗಳನ್ನು ಮರೆ ಮಾಚಲು ಯತ್ನಿಸುತ್ತಿದೆ. ದಕ್ಷಿಣ ಭಾರತದಲ್ಲಿ ಓಟಿಗಾಗಿ ಕೇರಳದಲ್ಲಿ ಶಬರಿಮಲೆ ಅಯ್ಯಪ್ಪನ ಮಾಲೆ ಧರಿಸಿದ ಬಿಜೆಪಿ ಮತ್ತು ಪರಿವಾರದ ನಿಜ ಸ್ವರೂಪ ಬಯಲಿಗೆ ಬಂದಿದೆ. ಆರೆಸ್ಸೆಸ್ ನಾಯಕರು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಜನರನ್ನು ಪ್ರತಿಭಟನೆಗಿಳಿಸುವ ದುಸ್ಸಾಹಸ ನಡೆಸಿದರು. ಲವ್‌ಜಿಹಾದ್, ಮತಾಂತರ, ಗೋಹತ್ಯೆಯಂಥ ಶಬ್ದಗಳನ್ನು ಸೃಷ್ಟಿ ಮಾಡಿ ಭಾರತಿಯರನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಪೇಜಾವರ ಸ್ವಾಮಿಗಳು ಕೂಡ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮಾತಾಡತೊಡಗಿದ್ದಾರೆ. ಅವರೇನಾದರೂ ಮಾಡಲಿ, ಆದರೆ ಸಂವಿಧಾನಕ್ಕೆ ನಿಷ್ಠೆ ಹೊಂದಿರುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿಯವರೇ ಮನ ಬಂದಂತೆ ಮಾತನಾಡತೊಡಗಿದ್ದಾರೆ. ಸೋನಿಯಾ ಗಾಂಧಿಯನ್ನು ‘ವಿಧವೆ’ ಎಂದು ಹೀಯಾಳಿಸಿದರು. ವಿಧವಾ ವೇತನದ ಹಣವನ್ನು ಕಾಂಗ್ರೆಸ್ ವಿಧವೆಯರೇ ತಿನ್ನುತ್ತಾರೆಂದು ಅವಮಾನಿಸಿದರು. ಮೋದಿ ಸರಕಾರ ಬ್ಯಾಂಕಿಂಗ್‌ವ್ಯವಸ್ಥೆಯನ್ನೇ ನಾಶ ಮಾಡಿತು. ಜಾರಿ ನಿರ್ದೇಶನಾಲಯವನ್ನು ತನ್ನ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಂಡಿತು. ಬಿಹಾರದಲ್ಲಿ ತಮಗೆ ಎದುರಾಗಿ ನಿಂತ ಲಾಲುಪ್ರಸಾದ್‌ಯಾದವ್‌ರನ್ನು ಜೈಲಿಗೆ ತಳ್ಳಿತು. ಐಟಿ ದಾಳಿ ಭಯ ಹುಟ್ಟಿಸಿ ನಿತೀಶ್‌ಕುಮಾರ್‌ರನ್ನು ಬುಟ್ಟಿಗೆ ಹಾಕಿಕೊಂಡಿತು. ಎಲ್ಲಕ್ಕಿಂತ ಅಪಾಯಕಾರಿಯೆಂದರೆ ಭಾರತೀಯರನ್ನು ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸಿ ದ್ವೇಷದ ಅಡ್ಡಗೋಡೆ ನಿರ್ಮಿಸಿತು. ಸ್ವತಂತ್ರಭಾರತದ ಅಪರೂಪದ ಸಾಧನೆಗಳನ್ನು ಹಾಳು ಮಾಡಿ ದೇಶದ ಸಂಪತ್ತನ್ನು ಕಾರ್ಪೊರೇಟ್ ಬಂಡವಾಳಶಾಹಿ ಮಡಿಲಿಗೆ ಹಾಕಲು ಮಸಲತ್ತು ನಡೆಸಿತು. ಆದರೆ ಭಾರತದ ಜನ ಪ್ರಜ್ಞಾವಂತರು. ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮುಟ್ಟಿ ನೋಡಿಕೊಳ್ಳುವಂಥ ಏಟು ಕೊಟ್ಟಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಂದುಗೂಡಿದರೆ ಬಿಜೆಪಿ ಗೆಲ್ಲುವುದು ಸುಲಭವಲ್ಲ.
   ಹಾಗೆಂದು ಈ ಚುನಾವಣೆಯ ಫಲಿತಾಂಶ ಬಿಜೆಪಿಗೆ ಸಂಪೂರ್ಣ ವಿರುದ್ಧವಾಗಿದೆ, ದೇಶದಲ್ಲಿ ಕಾಂಗ್ರೆಸ್ ಅಲೆಯೆದ್ದಿದೆ ಎಂದೂ ಅರ್ಥವಲ್ಲ. ಬಿಜೆಪಿಯನ್ನು ವಿರೋಧಿಸಿ ಜನರು ತೀರ್ಪು ನೀಡಿದ್ದಾರೆ ನಿಜ. ಆದರೆ ಚಲಾವಣೆಯಾದ ಮತಗಳನ್ನು ಗಮನಿಸಿದಾಗ ಬಿಜೆಪಿಗೆ ಬಿದ್ದ ಮತಗಳಲ್ಲಿ ಗಮನೀಯ ಇಳಿಕೆಯೇನೂ ಆಗಿಲ್ಲ. ಜೊತೆಗೆ ರಾಜಸ್ತಾನದಲ್ಲಿ ಬಿಜೆಪಿ-ಕಾಂಗ್ರೆಸ್‌ನ ನಡುವೆ ತೆಳುವಾದ ಅಂತರವಿದೆ. ರಾಜಸ್ತಾನದ ಮೇಲ್‌ಜಾತಿ ಶೂದ್ರವರ್ಗ ಬಿಜೆಪಿಯನ್ನು ಕೈಬಿಟ್ಟಿದೆ. ಜಾಟ್‌ನಂತಹ ಪ್ರಬಲ ಸಮುದಾಯದ ಮೀಸಲಾತಿಯ ಬೇಡಿಕೆಯೂ ಚುನಾವಣೆಯ ಮೇಲೆ ಪರಿಣಾಮ ಬೀರಿದೆ. ರಾಜಸ್ತಾನದಲ್ಲಿ ಕಾಂಗ್ರೆಸ್‌ನ್ನು ನಿಯಂತ್ರಿಸುತ್ತಿರುವುದು ಮೇಲ್‌ಜಾತಿಯೇ ಆಗಿರುವುದರಿಂದ ಇದು ದುರ್ಬಲವರ್ಗದ ಜಯ ಎಂದು ಘಂಟಾಘೋಷವಾಗಿ ಹೇಳುವಂತಿಲ್ಲ. ಮಧ್ಯ ಪ್ರದೇಶದಲ್ಲಿಯೂ ಬಿಜೆಪಿಯ ಸ್ವಯಂಕೃತಾಪರಾಧ, ಆಡಳಿತ ವಿರೋಧಿ ಅಲೆಗಳೇ ಕೆಲಸ ಮಾಡಿರುವುದು. ತೆಲಂಗಾಣದಲ್ಲಿ ಟಿಆರ್‌ಎಸ್, ಬಿಜೆಪಿಯ ಜೊತೆಗೆ ಮೃದು ನಿಲುವನ್ನು ಹೊಂದಿದೆ ಎನ್ನುವುದನ್ನು ಮರೆಯಬಾರದು. ಪಂಚ ರಾಜ್ಯಗಳ ಸೋಲು, ಬಿಜೆಪಿ ಮತ್ತು ಸಂಘಪರಿವಾರಕ್ಕೆ ಹಿಂಸಾಚಾರ ಮತ್ತು ಕೋಮುಗಲಭೆಗಳನ್ನು ಇನ್ನಷ್ಟು ಅನಿವಾರ್ಯವಾಗಿಸಿದೆ. ಮೋದಿಯ ಹೆಸರಿನಲ್ಲಂತೂ ಮತಯಾಚಿಸುವಂತಿಲ್ಲ. ಕಳೆದ ನಾಲ್ಕು ವರ್ಷಗಳ ಮೋದಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಹೀಗಿರುವಾಗ, ಕೋಮುಗಲಭೆ, ಹಿಂಸೆ, ರಾಮಮಂದಿರ ಇತ್ಯಾದಿಗಳ ಮೂಲಕ ಜನರನ್ನು ಒಡೆಯುವುದೊಂದೇ ಅಧಿಕಾರ ಹಿಡಿಯಲು ಉಳಿದಿರುವ ಮಾರ್ಗ ಎಂದು ಆರೆಸ್ಸೆಸ್ ಭಾವಿಸಿ ಯೋಜನೆಗಳನ್ನು ರೂಪಿಸಿದರೆ, 2019ರ ಚುನಾವಣೆ ಭಾರತದ ಮಟ್ಟಿಗೆ ಭಾರೀ ದುಬಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ದೇಶದ ಹಿತಾಸಕ್ತಿಯ ದೃಷ್ಟಿಯಿಂದಲಾದರೂ ಜಾತ್ಯತೀತ ಶಕ್ತಿ ಒಂದಾಗಲೇ ಬೇಕು. ಹಾಗೆ ಒಂದಾಗಲು ವಿಫಲವಾದರೆ, ಕೋಮುವಾದ ಮತ್ತು ಆರೆಸ್ಸೆಸ್‌ನ್ನು ಟೀಕಿಸುವ ಎಲ್ಲ ಹಕ್ಕುಗಳನ್ನು ಕಳೆದುಕೊಳ್ಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News