ಕೌಲ್, ಅನ್ಮೋಲ್ ಮಿಂಚು: ಭಾರತ ‘ಎ’ ಸರಣಿ ಕ್ಲೀನ್‌ಸ್ವೀಪ್

Update: 2018-12-11 18:49 GMT

ಬೇ ಓವಲ್(ನ್ಯೂಝಿಲೆಂಡ್), ಡಿ.11: ಸಿದ್ಧಾರ್ಥ್ ಕೌಲ್‌ರ ನಾಲ್ಕು ವಿಕೆಟ್ ಗಳಿಕೆ ಹಾಗೂ ಅನ್ಮೋಲ್‌ಪ್ರೀತ್ ಸಿಂಗ್ ಅರ್ಧಶತಕದ ನೆರವಿನಿಂದ ನ್ಯೂಝಿಲೆಂಡ್ ‘ಎ’ ವಿರುದ್ಧದ ಅನಧಿಕೃತ ಏಕದಿನ ಸರಣಿಯ ಮೂರನೇ ಪಂದ್ಯವನ್ನು ಭಾರತ ‘ಎ’ 75 ರನ್‌ಗಳಿಂದ ಜಯಿಸಿದೆ. ಈ ಮೂಲಕ ಸರಣಿಯನ್ನು ತನ್ನ ವಶಕ್ಕೆ ಪಡೆದಿದೆ.

ಇಂದಿಲ್ಲಿ ನಡೆದ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ, ತನ್ನ ಪಾಲಿನ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 275 ರನ್ ಗಳಿಸಿತು. ತಂಡದ ಪರ ಅನ್ಮೋಲ್‌ಪ್ರೀತ್‌ಸಿಂಗ್(71) ಅರ್ಧಶತಕದ ಕಾಣಿಕೆ ನೀಡಿದರೆ, ಅಂಕಿತ್ ಭಾವ್ನೆ(48),ವಿಜಯಶಂಕರ್(42) ಹಾಗೂ ವಿಕೆಟ್ ಕೀಪರ್ ಇಶಾನ್ ಕಿಶನ್(39)ಅಮೂಲ್ಯ ಕೊಡುಗೆ ನೀಡಿದರು. ಕೊನೆಯಲ್ಲಿ ಅಕ್ಷರ್ ಪಟೇಲ್(31) ಮಿಂಚಿದರು. ಆದರೆ ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ನಾಯಕ ಮನೀಷ್ ಪಾಂಡೆ ಈ ಪಂದ್ಯದಲ್ಲಿ ವಿಫಲರಾದರು. ಕೇವಲ 5 ರನ್ ಗಳಿಸಿ ಲಾಕಿ ಫರ್ಗ್ಯುಸನ್‌ಗೆ ವಿಕೆಟ್ ಒಪ್ಪಿಸಿದರು.

ನ್ಯೂಝಿಲೆಂಡ್ ಪರ ಸೇಥ್ ರ್ಯಾನ್ಸ್ (49ಕ್ಕೆ 3) ಹಾಗೂ ಲಾಕಿ ಫರ್ಗ್ಯುಸನ್ (20ಕ್ಕೆ 2) ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರು. ನ್ಯೂಝಿಲೆಂಡ್ ತಂಡದ 8 ಮಂದಿ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.

ಗೆಲುವಿಗೆ 276 ರನ್‌ಗಳ ಸವಾಲು ಪಡೆದ ನ್ಯೂಝಿಲೆಂಡ್ 44.2 ಓವರ್‌ಗಳಲ್ಲಿ 200 ರನ್‌ಗೆ ಸರ್ವಪತನ ಕಂಡು ನಿರಾಶೆ ಅನುಭವಿಸಿತು. ತಂಡದ ಪರ ವಿಕೆಟ್ ಕೀಪರ್ ಟಿಮ್ ಸೆಫರ್ಟ್ ಅರ್ಧಶತಕದ(55)ಕಾಣಿಕೆ ನೀಡಿದರೆ, ಡೆರಿಲ್ ಮಿಚೆಲ್(30) ಅಲ್ಪ ಕಾಣಿಕೆ ನೀಡಿದರು. ಭಾರತದ ಪರ ಸಿದ್ಧ್ದಾರ್ಥ್ ಕೌಲ್ 37ಕ್ಕೆ 4 ವಿಕೆಟ್ ಪಡೆದು ಅತ್ಯುತ್ತಮ ಬೌಲರ್ ಎನಿಸಿದರೆ, ಕೆ.ಗೌತಮ್ 40ಕ್ಕೆ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

►ಭಾರತ ‘ಎ’: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 275ರನ್(ಅನ್ಮೋಲ್‌ಪ್ರೀತ್‌ಸಿಂಗ್ 71,ಅಂಕಿತ್ ಬಾವ್ನೆ 48 ,ವಿಜಯಶಂಕರ್ 42, ಸೇಥ್ ರ್ಯಾನ್ಸ್ 49ಕ್ಕೆ 3 , ಲಾಕಿ ಫರ್ಗ್ಯುಸನ್ 20ಕ್ಕೆ 2)

 ►ನ್ಯೂಝಿಲೆಂಡ್ ‘ಎ’: 44.2 ಓವರ್‌ಗಳಲ್ಲಿ 200ಕ್ಕೆ ಆಲೌಟ್(ಟಿಮ್ ಸೆಫರ್ಟ್ 55, ಡೆರಿಲ್ ಮಿಚೆಲ್ 30, ಸಿದ್ಧ್ದಾರ್ಥ್ ಕೌಲ್ 37ಕ್ಕೆ 4, ಕೆ.ಗೌತಮ್ 40ಕ್ಕೆ 2)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News