'ಕೇಂದ್ರ ಸರಕಾರ ಹದ್ದುಮೀರಿ ವರ್ತಿಸಿದ ಕಾರಣ ಊರ್ಜಿತ್ ಪಟೇಲ್ ರಾಜೀನಾಮೆ ನೀಡುವಂತಾಯಿತು'

Update: 2018-12-12 08:00 GMT

ಹೊಸದಿಲ್ಲಿ, ಡಿ. 12: ಊರ್ಜಿತ್ ಪಟೇಲ್ ಅವರ ದಿಢೀರ್ ರಾಜೀನಾಮೆ ಸರಕಾರ ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಯನ್ನು ಗೌರವಿಸಬೇಕೆಂಬ ಪ್ರಬಲ ಸಂದೇಶವನ್ನು ರವಾನಿಸಿದೆ ಎಂದು ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಡಿ ಸುಬ್ಬರಾವ್ ಹೇಳಿದ್ದಾರೆ.

''ಸರಕಾರ ಯಾವುದೇ ವಿಚಾರದ ಬಗ್ಗೆ ತನ್ನ ಅಭಿಪ್ರಾಯಗಳನ್ನು ಆರ್.ಬಿ.ಐಗೆ ತಿಳಿಸಬಹುದಾದರೂ ಅದು ಈ ನಿಟ್ಟಿನಲ್ಲಿ ಒತ್ತಡ ಹೇರುವುದಕ್ಕೆ ಒಂದು ಮಿತಿಯಿರುತ್ತದೆ. ಆದರೆ ಈಗಿನ ಸರಕಾರ ತನ್ನ  ಹದ್ದು ಮೀರಿದ ಕಾರಣ ಪಟೇಲ್ ಅವರು ರಾಜೀನಾಮೆ ನೀಡುವಂತಾಯಿತು. ಸರಕಾರ ಮತ್ತು ಆರ್.ಬಿ.ಐ ನಡುವಿನ ಗುದ್ದಾಟದ ಪರಿಣಾಮ ಇದಾಗಿದೆ'' ಎಂದು ಬ್ಲೂಂಬರ್ಗ್‍ಗೆ ನೀಡಿದ ಸಂದರ್ಶನದಲ್ಲಿ ಸುಬ್ಬರಾವ್ ವಿವರಿಸಿದ್ದಾರೆ.

''ಊರ್ಜಿತ್ ಪಟೇಲ್ ಅವರು ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದಾರೆಂಬುದನ್ನು ನಾನು ನಂಬುವುದಿಲ್ಲ. ಕಳೆದೆರಡು ತಿಂಗಳುಗಳಿಂದ ಸರಕಾರದ ಜತೆ ನಡೆಯುತ್ತಿದ್ದ ಸಂಘರ್ಷ ಕಾರಣ ಎಂದು ಹೇಳುವ ಬದಲು ವೈಯಕ್ತಿಕ ಕಾರಣಗಳು ಎಂದು ಅವರು ಹೇಳಿರುವುದು ಅವರೆಷ್ಟು ಜವಾಬ್ದಾರಿ ಯುತರಾಗಿದ್ದಾರೆಂಬುದು ತಿಳಿಯುತ್ತದೆ'' ಎಂದು ಸುಬ್ಬರಾವ್ ಹೇಳಿದರು.

''ಪಟೇಲ್ ಅವರ ಕ್ರಮ ಆರ್.ಬಿ.ಐ ಆತ್ಮಸ್ಥೈರ್ಯ ಹೆಚ್ಚಿಸಬಹುದು, ಸರಕಾರವು ಆರ್.ಬಿ.ಐ ಮೇಲೆ ಹೇರುವ ಒತ್ತಡಕ್ಕೂ ಒಂದು ಮಿತಿಯಿದೆ ಎಂಬ ಸಂದೇಶವನ್ನು ಈ ಮೂಲಕ ಸರಕಾರಕ್ಕೆ  ತಿಳಿಸಿದಂತಾಗುತ್ತದೆ ಎಂದು ಆರ್.ಬಿ.ಐ ಉದ್ಯೋಗಿಗಳು ತಿಳಿಯುತ್ತಾರೆ'' ಎಂದು ಅವರು ಅಭಿಪ್ರಾಯಪಟ್ಟರು.

''ಆರ್.ಬಿ.ಐ ಮಂಡಳಿಯು ನೀತಿ ನಿರೂಪಕನಾಗಲು ಸಾಧ್ಯವಿಲ್ಲ, ಹಾಗಾಗಬೇಕಾದರೆ ಆರ್.ಬಿ.ಐಯಲ್ಲಿ ಮಹತ್ತರ ಬದಲಾವಣೆಗಳನ್ನು ತರಬೇಕಾಗುತ್ತದೆ. ಆರ್.ಬಿ.ಐ ಮಂಡಳಿಯಲ್ಲಿ ಉದ್ಯಮಿಗಳು, ಕಾರ್ಪೊರೇಟ್ ನಾಯಕರು ಅಥವಾ ಅರೆಕಾಲಿಕ ನಿರ್ದೇಶಕರಿರಲು ಸಾಧ್ಯವಿಲ್ಲ'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News