ವಿಧಾನಸಭಾ ಚುನಾವಣೆ: ರಾಜಸ್ಥಾನ, ತೆಲಂಗಾಣದಲ್ಲಿ ಮುಸ್ಲಿಂ ಅಭ್ಯರ್ಥಿಗಳ ಉತ್ತಮ ಸಾಧನೆ

Update: 2018-12-12 16:50 GMT

ಜೈಪುರ, ಡಿ.12: ಇತ್ತೀಚೆಗೆ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಣಕ್ಕಿಳಿಸಿದ್ದ 15 ಮುಸ್ಲಿಂ ಅಭ್ಯರ್ಥಿಗಳ ಪೈಕಿ 7 ಮಂದಿ ಜಯ ಗಳಿಸಿದ್ದಾರೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಓರ್ವ ಮುಸ್ಲಿಂ ಅಭ್ಯರ್ಥಿಯೂ ಗೆಲುವು ಸಾಧಿಸಿರಲಿಲ್ಲ.

ಅಮೀನ್ ಕಗ್ಝಿ  ಎಂಬವರು ಕಿಶನ್ ಪೊಲ್ ಕ್ಷೇತ್ರದಿಂದ ಜಯಗಳಿಸಿದ್ದರೆ, ರಫೀಕ್ ಖಾನ್ ಆದರ್ಶ ನಗರದಿಂದ, ಝಹೀದಾ ಖಾನ್ ಕಮನ್‌ ನಿಂದ, ದಾನಿಶ್ ಅಬ್ರಾರ್ ಸವೈ ಮಾದೋಪುರ್ ನಿಂದ, ಸಾಲಿಹ್ ಮುಹಮ್ಮದ್ ಪೊಖ್ರಾನ್‌  ನಿಂದ, ಅಮೀನ್‌ ಖಾನ್ ಶಿಯೊದಿಂದ ಮತ್ತು ಹಕಮ್ ಅಲಿ ಖಾನ್ ಫತೆಹ್‌ಪುರದಿಂದ ಜಯ ಸಾಧಿಸಿದ್ದಾರೆ.

ಡಿಸೆಂಬರ್ 7ರಂದು ನಡೆದ ರಾಜಸ್ಥಾನ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮಿತ್ರಪಕ್ಷ ರಾಷ್ಟ್ರೀಯ ಜನತಾದಳ ಒಂದು ಸ್ಥಾನದಲ್ಲಿ ಜಯಗಳಿಸುವ ಮೂಲಕ ಸರಕಾರ ರಚಿಸಲು ಅಗತ್ಯವಿರುವ 100 ಸ್ಥಾನಗಳನ್ನು ಭರ್ತಿ ಮಾಡಿದೆ.

ಮತ್ತೊಂದೆಡೆ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಏಕೈಕ ಮುಸ್ಲಿಂ ಅಭ್ಯರ್ಥಿ ಯೂನುಸ್ ಖಾನ್ ಟೊಂಗ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಚಿನ್ ಪೈಲಟ್ ಎದುರು ಪರಾಭವಗೊಂಡಿದ್ದಾರೆ. ಈ ಬಾರಿ ಬಿಜೆಪಿ ಗೆದ್ದಿರುವ 73 ಸ್ಥಾನಗಳಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿ ಇಲ್ಲ. 2013ರಲ್ಲಿ ಬಿಜೆಪಿ ನಾಲ್ವರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ಹಬಿಬುರ್ ರಹ್ಮಾನ್‌ಗೆ ಈ ಬಾರಿ ಪಕ್ಷ ಟಿಕೆಟ್ ನಿರಾಕರಿಸಿದ ಕಾರಣಕ್ಕೆ ಕಾಂಗ್ರೆಸ್ ಸೇರ್ಪಡೆಗೊಂಡು ಸ್ಪರ್ಧಾಕಣಕ್ಕಿಳಿದಿದ್ದರು. ಆದರೆ ಅವರು ಈ ಬಾರಿಯೂ ಸೋಲನುಭವಿಸಿದ್ದಾರೆ.

ತೆಲಂಗಾಣ: ಇದೇ ರೀತಿ ತೆಲಂಗಾಣದಲ್ಲೂ ಮುಸ್ಲಿಂ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ತೆಲಂಗಾಣದಲ್ಲಿ ಒಟ್ಟು 8 ಮಂದಿ ಮುಸ್ಲಿಂ ಅಭ್ಯರ್ಥಿಗಳು ಜಯಿಸಿದ್ದಾರೆ. ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ ನ (ಎಐಎಂಐಎಂ)ನ 7 ಅಭ್ಯರ್ಥಿಗಳು ಹಾಗು ತೆಲಂಗಾಣ ರಾಷ್ಟ್ರ ಸಮಿತಿಯ ಓರ್ವ ಮುಸ್ಲಿಂ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.

ಗೆಲುವಿನ ನಗೆ ಬೀರಿದ ಎಐಎಂಐಎಂ ಅಭ್ಯರ್ಥಿಗಳು: ಮುಮ್ತಾಝ್ ಅಹ್ಮದ್ ಖಾನ್, ಅಹ್ಮದ್ ಪಾಷಾ ಖಾದ್ರಿ, ಜಾಫರ್ ಹುಸೈನ್, ಅಹ್ಮದ್ ಬಿನ್ ಅಬ್ದುಲ್ಲಾ ಬಲಾಲ, ಮುಅಝ್ಝಮ್ ಖಾನ್, ಕೌಸರ್ ಮೊಹಿದಿನ್, ಅಕ್ಬರುದ್ದೀನ್ ಉವೈಸಿ

ಟಿ ಆರ್ ಎಸ್ ನಿಂದ ಮುಹಮ್ಮದ್ ಶಕೀಲ್ ಅಮೀರ್ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ 7 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಯಾರೂ ಜಯ ಗಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News